ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಘನ್‌: ಆತ್ಮಹತ್ಯಾ ದಾಳಿಗೆ 80 ಸಾವು

Last Updated 23 ಜುಲೈ 2016, 23:30 IST
ಅಕ್ಷರ ಗಾತ್ರ

ಕಾಬೂಲ್, ಆಫ್ಘಾನಿಸ್ತಾನ (ರಾಯಿಟರ್ಸ್): ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಗರದಲ್ಲಿ ಶಿಯಾ ಹಝಾರಾ ಸಮುದಾಯದವರು ನಡೆಸುತ್ತಿದ್ದ ಧರಣಿ ಸ್ಥಳದಲ್ಲಿ ಆತ್ಮಹತ್ಯಾ ದಾಳಿ ನಡೆಸಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್‌) ಉಗ್ರಗಾಮಿ ಸಂಘಟನೆ 80 ಜನರನ್ನು ಬಲಿ ಪಡೆದಿದೆ.

ದಾಳಿ ನಡೆದ ಪ್ರದೇಶದ ರಸ್ತೆಗಳು ರಕ್ತಸಿಕ್ತಗೊಂಡಿದ್ದವು. ಆಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಶಿಯಾ ಹಜಾರಾ ಸಮುದಾಯದವರು ಬಹುಕೋಟಿ ಮೌಲ್ಯದ ವಿದ್ಯುತ್ ಮಾರ್ಗವೊಂದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದರು.

ದಾಳಿಯ ವೇಳೆ ಎಷ್ಟು ಬಾಂಬ್‌ಗಳನ್ನು ಬಳಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ದಾಳಿಯ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ ತುರ್ತು ಸೇವಾ ವಾಹನಗಳು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದವು.

ಹಜಾರಾ ಸಮುದಾಯದ ಪ್ರತಿಭಟನೆಯ ಕಾರಣಕ್ಕೆ ನಗರದ ಬಹುತೇಕ ಕಡೆ ರಸ್ತೆಗೆ ತಡೆಬೇಲಿ ಅಳವಡಿಸಲಾಗಿತ್ತು. ನಗರದ ಮೇಲೆ ಭದ್ರತಾ ಪಡೆಗಳ ಹೆಲಿಕಾಪ್ಟರ್‌ಗಳು ಹಾರಾಟ ನಡೆಸುತ್ತಿದ್ದವು.

‘ಪ್ರತಿಭಟನೆ ನಡೆಸುತ್ತಿದ್ದವರ ನಡುವೆ ನುಗ್ಗಿದ ಭಯೋತ್ಪಾದಕರು ಬಾಂಬ್‌ ಸ್ಫೋಟಿಸಿದ್ದಾರೆ. ಇದರಲ್ಲಿ ರಕ್ಷಣಾ ಪಡೆಗಳ ಸಿಬ್ಬಂದಿ ಸೇರಿದಂತೆ ನಮ್ಮ ದೇಶದ ನಾಗರಿಕರು’ ಮೃತಪಟ್ಟಿದ್ದಾರೆ ಎಂದು ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಗಿಲಾನಿ ಹೇಳಿದ್ದಾರೆ.

ಹಜಾರಾ ಸಮುದಾಯದವರು ಮಾತನಾಡುವುದು ಪರ್ಷಿಯಾ ಭಾಷೆಯನ್ನು. ಇವರು ಶಿಯಾ ಪಂಗಡಕ್ಕೆ ಸೇರಿದವರು. ಆಫ್ಘಾನಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಇವರ ಪಾಲು ಶೇಕಡ 9ರಷ್ಟು. ಅಲ್ಲಿ ತಾಲಿಬಾನ್‌ ಆಡಳಿತ ಇದ್ದಾಗ, ಈ ಸಮುದಾಯದ ಸಾವಿರಾರು ಜನರ ಹತ್ಯೆಯಾಗಿದೆ.

ದಾಳಿ ಮಾಡಿದ್ದು ನಾವು: ಐಎಸ್‌
ಕೈರೊ, ಈಜಿಪ್ಟ್‌ (ರಾಯಿಟರ್ಸ್): ಆಫ್ಘಾನಿಸ್ತಾನದಲ್ಲಿ ನಡೆದ ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಿದ್ದು ತಾನು ಎಂದು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರಗಾಮಿ ಸಂಘಟನೆ ಹೇಳಿಕೊಂಡಿದೆ. ‘ಆಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಶಿಯಾ ಸಮುದಾಯದವರು ಒಟ್ಟಾಗಿ ಸೇರಿದ್ದ ಸ್ಥಳದಲ್ಲಿ ನಮ್ಮ ಇಬ್ಬರು ಹೋರಾಟಗಾರರು ಸ್ಫೋಟಕ ಸಿಡಿಸಿದ್ದಾರೆ’ ಎಂದು ಐಎಸ್‌ ಸಂಘಟನೆಯ ಸುದ್ದಿಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT