ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಘನ್‌ ನಾಡಿಗೆ ಕ್ರಿಕಟ್‌ ಸಿಹಿ ಸಿಂಚನ

Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಮೀವುಲ್ಲಾ ಶೆನ್ವಾರಿ, ಶಾಪೂರ್ ಜದ್ರಾನ್, ಹಮೀದ್ ಹಸನ್, ಜಾವೇದ್ ಅಹ್ಮದಿ...
ಕಳೆದ ಗುರುವಾರದವರೆಗೂ ಈ ಹೆಸರುಗಳು ಯಾರಿಗೂ ಆಸಕ್ತಿ ಕೆರಳಿಸಿರಲಿಲ್ಲ. ಆದರೆ, ಈಗ ಜಗತ್ತಿನ ಕ್ರಿಕೆಟ್‌ಪ್ರಿಯರ ನಾಲಿಗೆ ಮೇಲೆ ನಲಿದಾಡುತ್ತಿವೆ. ಆಫ್ಘಾನಿಸ್ತಾನ ಎಂದಾಕ್ಷಣ  ಬಂದೂಕು, ಬಾಂಬು, ಹಿಂಸೆಯ ಚಿತ್ರಣಗಳೇ ಕಣ್ಣ ಮುಂದೆ ಬರುವ ಕಾಲ ಹೋಯಿತು. ಇನ್ನೇನಿದ್ದರೂ  ಸಾಧನೆಯ ಹೆಜ್ಜೆಗುರುತುಗಳನ್ನು ಮೂಡಿಸುವ ಕಾಲ ಎಂದು ಸಾರಿದ ಹೆಸರುಗಳು ಇವು. ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಫೆ.26ರಂದು ಸ್ಕಾಟ್ಲೆಂಡ್ ತಂಡವನ್ನು  ಒಂದು ವಿಕೆಟ್ ಅಂತರದಲ್ಲಿ ಸೋಲಿಸಿದ ಆಫ್ಘಾನಿಸ್ತಾನದ ಹೆಮ್ಮೆಯ ಆಟಗಾರರು ಇವರು.

ಇಂಗ್ಲೆಂಡ್ ದೇಶದ ಪಕ್ಕದಲ್ಲಿಯೇ ಇರುವ ಸ್ಕಾಟ್ಲೆಂಡ್ ತಂಡದ ಮುಂದೆ ಆಫ್ಘನ್ನರ ಅನುಭವ ಏನೇನೂ ಅಲ್ಲ. ಆದರೆ, ಅವರ ಛಲ, ಗಟ್ಟಿತನ ಮತ್ತು ಹುಮ್ಮಸ್ಸುಗಳ ಮುಂದೆ ಸ್ಕಾಟ್ಲೆಂಡ್‌ ಮಂಕಾಯಿತು. ಸ್ಕಾಟ್ಲೆಂಡಿನ 210 ರನ್ನುಗಳ ಗುರಿಯನ್ನು ಮುಟ್ಟಲು ಆರಂಭಿಕ ಬ್ಯಾಟ್ಸ್‌ಮನ್ ಜಾವೇದ್ ಅಹ್ಮದಿ (51 ರನ್) ಮತ್ತು ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್ ಸಮೀವುಲ್ಲಾ ಶೆನ್ವಾರಿ (96 ರನ್) ಅವರ ಬ್ಯಾಟಿಂಗ್ ಅಡಿಪಾಯವಾಯಿತು. ಆದರೆ, ಉಳಿದ ಆಟಗಾರರು ಹೆಚ್ಚಿನ ಕಾಣಿಕೆ ನೀಡಲಿಲ್ಲ. ಇದರಿಂದ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯುವ ಸ್ಕಾಟ್ಲೆಂಡ್ ಕನಸು ಗರಿಗೆದರಿತ್ತು.  ಕೊನೆಯ ವಿಕೆಟ್‌ ಜೊತೆಯಾಟದಲ್ಲಿ ಛಲಗಾರಿಕೆ ಮೆರೆದ ಹಮೀದ್ ಹುಸೇನ್ ಮತ್ತು ಶಾಪೂರ್ ಜದ್ರಾನ್ ಅವರ ಅಜೇಯ ಆಟಕ್ಕೆ ಜಯ ಒಲಿಯಿತು. ಪಂದ್ಯದ ಕೊನೆಯ ಮೂರು ಎಸೆತಗಳು ಇನ್ನೂ ಬಾಕಿಯಿದ್ದವು. ಮೈದಾನದಲ್ಲಿ ಸೇರಿದ್ದ ಆಫ್ಘನ್ ಅಭಿಮಾನಿಗಳ ಸಣ್ಣ ಗುಂಪು ದೊಡ್ಡ ಸಂಭ್ರಮದಲ್ಲಿ ಮುಳುಗಿತು.

ಈ ಬಾರಿಯ ವಿಶ್ವಕಪ್ ಅನ್ನು ಯಾರು ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ‘ಆಟಕ್ಕುಂಟು ಲೆಕ್ಕಕ್ಕೆ ಇಲ್ಲ’ ಎಂಬಂತಹ ತಂಡಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಿವೆ. ಅದರಲ್ಲಿ ಆಫ್ಘಾನಿಸ್ತಾನವೂ ಒಂದು. ಟೂರ್ನಿಯಲ್ಲಿ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿದೆ. ಆದರೆ, ಅಂಕಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿಯೇ ಈ ಸ್ಥಾನಕ್ಕೆ ಏರಿರುವುದು ಸಣ್ಣ ಮಾತಲ್ಲ.

ಇನ್ನು ‘ಬಿ’ ಗುಂಪಿನ ಅಂಕಪಟ್ಟಿ ಇನ್ನೂ ಆಸಕ್ತಿದಾಯಕ. ಏಕೆಂದರೆ, ಐರ್ಲೆಂಡ್ ತಂಡವು ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಅದರಲ್ಲೂ ವೆಸ್ಟ್ ಇಂಡೀಸ್ ದೈತ್ಯರನ್ನು ಸದೆಬಡೆದು ಬೀಗಿದೆ. ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಘಟಾನುಘಟಿ  ತಂಡಗಳಾದ ವೆಸ್ಟ್ಇಂಡೀಸ್, ಜಿಂಬಾಬ್ವೆ ತಂಡಗಳು ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಯುಎಇ ಆರನೇ ಸ್ಥಾನದಲ್ಲಿದೆ. ಆದರೆ, ಬಲಾಢ್ಯ ತಂಡಗಳ ಸಾಲಿನಲ್ಲಿದ್ದ ಪಾಕಿಸ್ತಾನ ಮಾತ್ರ ಶೂನ್ಯ ಅಂಕಗಳ ಸಾಧನೆಯೊಂದಿಗೆ ಕೊನೆಯ ಸ್ಥಾನದಲ್ಲಿದೆ. ಭಾರತ ಮೊದಲ ಮತ್ತು ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿವೆ. (ಇದು ಫೆ. 27ರವರೆಗಿನ ಸ್ಥಿತಿ)

ಕ್ರಿಕೆಟ್‌ನಲ್ಲಿ ಯಾವ ತಂಡವನ್ನು ಚಿಕ್ಕದು, ಅನನುಭವಿ ಎಂದು ಪರಿಗಣಿಸುವಂತೆಯೇ ಇಲ್ಲ ಎಂಬ ಮಾತಿಗೆ ಇವು ಉದಾಹರಣೆಗಳು. ಇಂತಹ ಅಚ್ಚರಿಯ ಫಲಿತಾಂಶಗಳನ್ನು ಪ್ರತಿಯೊಂದು ವಿಶ್ವಕಪ್‌ನಲ್ಲಿ ನೋಡುತ್ತಲೇ ಇದ್ದೇವೆ. 1983ರಲ್ಲಿ ವಿಶ್ವಕಪ್ ಗೆದ್ದ ಭಾರತ, 1992ರಲ್ಲಿ ಗೆದ್ದ ಪಾಕ್, 1996ರಲ್ಲಿ ಗೆದ್ದ ಶ್ರೀಲಂಕಾ ಕೂಡ ಒಂದೊಮ್ಮೆ ದುರ್ಬಲ ತಂಡಗಳೆಂದೇ ಹಣೆಪಟ್ಟಿ ಹಚ್ಚಿಕೊಂಡಿದ್ದವು.

ಐರ್ಲೆಂಡ್, ಬಾಂಗ್ಲಾ, ಕೆನ್ಯಾ ತಂಡಗಳೂ ತಮ್ಮ ಆರಂಭದ ವಿಶ್ವಕಪ್ ಟೂರ್ನಿಗಳಲ್ಲಿ ಬಲಾಢ್ಯ ತಂಡಗಳಿಗೆ ಆಘಾತ ನೀಡಿದ್ದು ಇತಿಹಾಸದ ಪುಟಗಳಲ್ಲಿ ಅಚ್ಚಾಗಿವೆ. ಆದರೆ, ಇವೆಲ್ಲಕ್ಕಿಂತಲೂ ಆಫ್ಘನ್ ವಿಜಯವು ವಿಶೇಷವಾಗಿದೆ. ಅದಕ್ಕೆ ಹಲವು ಕಾರಣಗಳಿವೆ.

ನಿರಾಶ್ರಿತರ ಶಿಬಿರದಲ್ಲಿ ಅರಳಿತು
ವಿಶ್ವದಲ್ಲಿ ಹಲವಾರು ದೇಶಗಳಿಗೆ ಕ್ರಿಕೆಟ್‌ ಆಡುವುದನ್ನು ಕಲಿಸಿದವರು ಬ್ರಿಟಿಷರು. ಆದರೆ, ಆಫ್ಘಾನಿಸ್ತಾನದಲ್ಲಿ ಬ್ರಿಟಿಷರು ತಮ್ಮ ಛಾಪನ್ನು ಸಂಪೂರ್ಣವಾಗಿ ಮೂಡಿಸಲು ಸಾಧ್ಯವಾಗಲಿಲ್ಲ. 1839ರಲ್ಲಿ ಬ್ರಿಟಿಷರು ಕಾಬೂಲ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ಕುರಿತು ದಾಖಲೆಗಳಿವೆ. ಆದರೆ 1990ರ ನಂತರವಷ್ಟೇ ಆಫ್ಘನ್ನರಲ್ಲಿ ಕ್ರಿಕೆಟ್ ಬೆಳೆಯತೊಡಗಿತು.

ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದ್ದ ಆಫ್ಘಾನಿಸ್ತಾನದಿಂದ ಓಡಿ ಹೋದವರು ಆಶ್ರಯ ಪಡೆದಿದ್ದ ಪಾಕಿಸ್ತಾನದ ನಿರಾಶ್ರಿತರ ಶಿಬಿರದಲ್ಲಿ ಕ್ರಿಕೆಟ್ ಅರಳಿತು. ಅದೂ 1992ರಲ್ಲಿ ಪಾಕಿಸ್ತಾನ ವಿಶ್ವಕಪ್ ಗೆದ್ದಾಗ ಶಿಬಿರದ ಯುವಕರು ಕ್ರಿಕೆಟ್‌ಗೆ ಸಂಪೂರ್ಣವಾಗಿ ಮನಸೋತರು. 1995ರಲ್ಲಿ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ರಚನೆಯಾಯಿತು. ಆದರೆ, ತಾಲಿಬಾನಿಗಳು ಎಲ್ಲ  ಕ್ರೀಡೆಗಳಿಗೆ ವಿಧಿಸಿದಂತೆ, ಕ್ರಿಕೆಟ್ ಆಟಕ್ಕೂ ನಿಷೇಧ ಹೇರಿದರು.

ಆದರೆ, ನಿರಂತರ ಹೋರಾಟದಿಂದಾಗಿ 2001ರಲ್ಲಿ ಕ್ರಿಕೆಟ್‌ಗೆ ತಾಲಿಬಾನ್‌ ಅನುಮತಿ ನೀಡಿತು. ಆಫ್ಘನ್ ಕ್ರಿಕೆಟ್ ಸಂಸ್ಥೆ ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಮಾನ್ಯತೆ ಪಡೆಯಿತು. ಆಫ್ಘಾನಿಸ್ತಾನದಲ್ಲಿ ಮೈದಾನಗಳು, ಸೌಲಭ್ಯಗಳು ಇರಲಿಲ್ಲ. ಅಲ್ಲದೇ ಭದ್ರತೆಯ ಕೊರತೆಯೂ ಇತ್ತು. ಎಕೆ–47 ಬಂದೂಕುಗಳ ಮೊರೆತ, ಬಾಂಬುಗಳ ಸದ್ದಿನ ನಡುವೆಯೂ ಕ್ರಿಕೆಟ್ ಪ್ರೀತಿ ಮಣ್ಣಾಗಲಿಲ್ಲ. ಪಾಕಿಸ್ತಾನದ ಪೇಶಾವರವೇ ಆಫ್ಘನ್ ಕ್ರಿಕೆಟ್‌ಗೆ ನೆಲೆಯಾಯಿತು.

‘ಕಚ್ಚಾಕಾರಾ ಶಿಬಿರದಲ್ಲಿ ನಾವು ಇದ್ದಾಗ, ನನ್ನ ಮೂವರು ಸಹೋದರರೊಂದಿಗೆ ಆಫ್ಘನ್ ತಂಡವನ್ನು ಕಟ್ಟಿಕೊಂಡಿದ್ದೆ. ಆಗೆಲ್ಲ ನನ್ನ ತಲೆಯಲ್ಲಿ ಒಂದು ವಿಚಾರ ಕೊರೆಯುತ್ತಿತ್ತು. ನಾವು ಇದೇ ರೀತಿ ಆಡುವುದನ್ನು ಮುಂದುವರಿಸಿದರೆ ಮುಂದೊಂದು ದಿನ ನಮ್ಮ ರಾಷ್ಟ್ರಕ್ಕೆ ಹೋಗಿ ತಂಡವನ್ನು ಕಟ್ಟಬಹುದು. ನಾವು ದೊಡ್ಡ ಆಟಗಾರರಾಗಬಹುದು ಎಂದು ಚಿಂತಿಸುತ್ತಿದ್ದೆ.  ನಾನು ಆಫ್ಘನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಬಗ್ಗೆ ಯೋಚಿಸಲು ಆರಂಭಿಸಿದಾಗ, ಪ್ರತಿಯೊಬ್ಬ ಆಟಗಾರನನ್ನು ಹೋಗಿ ಭೇಟಿಯಾದೆ. ಅವರು ಕಾಬೂಲ್‌ಗೆ ಬಂದು ಆಡುವಂತೆ ಧೈರ್ಯ ತುಂಬಿದರು. ಆದರೆ, ಆಟಗಾರರ ಅಪ್ಪಂದಿರು ನನ್ನ ಮನೆಗೆ ಬಂದು ತಮ್ಮ ಮಕ್ಕಳನ್ನು ಕಾಬೂಲಿಗೆ ಕರೆದುಕೊಂಡು ಹೋಗದಂತೆ ಬೆದರಿಕೆ ಹಾಕಿದ್ದರು’ ಎಂದು ಆಫ್ಘಾನಿಸ್ತಾನ ಕ್ರಿಕೆಟ್‌ನ ಪಿತಾಮಹ ತಾಜ್ ಮಲೂಕ್ ಇಂಗ್ಲಿಷ್ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.   

‘ನಾವು ಕ್ರಿಕೆಟ್ ಆಡುವಾಗ ನಮ್ಮ ಬಳಿ ಊಟಕ್ಕೂ ದುಡ್ಡಿರಲಿಲ್ಲ. ರಾತ್ರಿಯಿಡೀ ಬೆಂಕಿಕಡ್ಡಿ ತಯಾರಿಕೆ ಕಾರ್ಖಾನೆಯಲ್ಲಿ ದುಡಿದು, ಬೆಳಗಿನಲ್ಲಿ ಆಡುತ್ತಿದ್ದೆವು’ ಎಂದು ಆಗಿನ ಆಫ್ಘನ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕರೀಮ್ ಸಾಧಿಕ್ ನೆನಪಿಸಿಕೊಳ್ಳುತ್ತಾರೆ.

2009ರಲ್ಲಿ ಆಫ್ಘಾನಿಸ್ತಾನದ ನೆಲದಲ್ಲಿ ಕ್ರಿಕೆಟ್ ಆಡಲು ಆರಂಭಿಸಿದಾಗ ಮೈದಾನಗಳೇ ಇರಲಿಲ್ಲ.  ಬಾಂಬ್ ದಾಳಿಗೆ ಸಿಲುಕಿ ಛಿದ್ರವಾಗಿದ್ದ ಕಟ್ಟಡಗಳ ಮುಂದಿನ ಬಯಲು, ಬೆಂಕಿಗೆ ಆಹುತಿಯಾದ ಹೆಲಿಕಾಪ್ಟರ್‌ ಅವಶೇಷಗಳು ಬಿದ್ದ ಮೈದಾನಗಳೇ ಕ್ರೀಡಾಂಗಣಗಳಾದವು. ಆರ್ಥಿಕ ಮುಗ್ಗಟ್ಟು, ಸೌಲಭ್ಯಗಳ ಕೊರತೆಯ ನಡುವೆಯೂ ಕ್ರಿಕೆಟ್ ಬೆಳೆಯಿತು. 2014ರಲ್ಲಿ ತಂಡಕ್ಕೆ ತರಬೇತುದಾರರಾಗಿ ಬಂದ ಇಂಗ್ಲೆಂಡ್ ಮೂಲದ ಆ್ಯಂಡಿ ಮೋಲ್ ಆಟಗಾರರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದರು. ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಿದ ತಂಡವು ಈಗ ‘ಎ’ ಗುಂಪಿನಲ್ಲಿ ಆಡುತ್ತಿದೆ. ಈ ಗುಂಪಿನಲ್ಲಿ ಆತಿಥೇಯ ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲೆಂಡ್, ಇಂಗ್ಲೆಂಡ್, ಸ್ಕಾಟ್ಲೆಂಡ್, ಬಾಂಗ್ಲಾ ತಂಡಗಳಿವೆ. ತಾನಾಡುತ್ತಿರುವ ಮೊದಲ ವಿಶ್ವಕಪ್‌ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಆದರೆ, ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ತನ್ನ ಹೆಜ್ಜೆಗುರುತು ಮೂಡಿಸಿದೆ. ಆಫ್ಘನ್‌ ನೆಲದಲ್ಲಿ ಬೀಸುತ್ತಿರುವ ಹೊಸ ಹುಮ್ಮಸ್ಸಿನ ಗಾಳಿಯಲ್ಲಿ ರಾಷ್ಟ್ರಧ್ವಜವು ಹೆಮ್ಮೆಯಿಂದ ಹಾರಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT