ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾ ಆಹಾರ ಇಲ್ಲಿನ ಹದದಲ್ಲಿ...

ರಸಾಸ್ವಾದ
Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಒಂದೇ ರೀತಿಯ ಆಹಾರ ಸೇವಿಸಿ ಬೇಸರಗೊಂಡಿರುವ ಆಹಾರ ಪ್ರಿಯರಿಗಾಗಿ ವಿವಿಧ ಹಾಗೂ ವಿಭಿನ್ನ ಸ್ವಾದದ ವಿದೇಶಿ ಖಾದ್ಯಗಳನ್ನು ಪರಿಚಯಿಸುವ ಟ್ರೆಂಡ್‌ ಈಗ ನಗರದಲ್ಲಿ ಹೆಚ್ಚಾಗುತ್ತಿದೆ. ಅದಕ್ಕಾಗಿ ಬೇರೆ ಬೇರೆ ದೇಶಗಳ ಆಹಾರ ಸಂಸ್ಕೃತಿಯನ್ನು ಅಧ್ಯಯನ ನಡೆಸಿ ನಗರದಲ್ಲಿ ವಿದೇಶೀ ಖಾದ್ಯಗಳ ಆಹಾರ ಮೇಳಗಳನ್ನು ಆಯೋಜಿಸಲಾಗುತ್ತಿದೆ.

ಹೀಗೆ ಸೀಜನ್‌ಗೆ ತಕ್ಕಂತೆ ಒಂದೊಂದು ದೇಶದ ಖಾದ್ಯಗಳ ರುಚಿಯನ್ನು ಉಣಬಡಿಸುವ ಬಾರ್ಬಿಕ್ಯೂ ನೇಷನ್‌ ರೆಸ್ಟೊರೆಂಟ್‌ ಈ ಬಾರಿ ಆಫ್ರಿಕನ್‌ ಖಾದ್ಯಗಳನ್ನು ಸವಿಯುವ ಅವಕಾಶವನ್ನು ಬೆಂಗಳೂರಿಗರಿಗೆ ಮಾಡಿಕೊಟ್ಟಿದೆ.

ನಗರದಲ್ಲಿರುವ ಬಾರ್ಬಿಕ್ಯೂ ನೇಷನ್‌ನ  ಏಳು ರೆಸ್ಟೊರೆಂಟ್‌ಗಳಲ್ಲಿ  ಆಫ್ರಿಕಾದ ವಿಶೇಷ ಖಾದ್ಯಗಳನ್ನು ಉಣಬಡಿಸುವ ‘ಆಫ್ರಿಕಾ ಮ್ಯಾಜಿಕಾ’ ಫೆಸ್ಟ್‌ ಪ್ರಾರಂಭವಾಗಿದ್ದು, ಇದೇ 26ರವರೆಗೆ  ನಡೆಯಲಿದೆ. ಜೆ.ಪಿ. ನಗರ, ಎಂ.ಜಿ. ರಸ್ತೆಯಲ್ಲಿರುವ ಲಿಡೋ ಮಾಲ್‌, ಇಂದಿರಾನಗರ, ವೈಟ್‌ಫೀಲ್ಡ್‌, ಕೋರಮಂಗಲ, ಕಮ್ಮನಹಳ್ಳಿ ಹಾಗೂ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಬಾರ್ಬಿಕ್ಯೂ ನೇಷನ್‌ನ ಶಾಖೆಗಳಿವೆ.

ಆಫ್ರಿಕಾ ಎಂದೊಡನೆ ನಮಗೆ ನೆನಪಾಗುವುದು ಸೂರ್ಯನ ಕಿರಣಗಳು ಭೂಮಿಯನ್ನು ಮುಟ್ಟದ ಅಮೆಜಾನ್‌ನ ದಟ್ಟ ಅರಣ್ಯ ಪ್ರದೇಶಗಳು  ಹಾಗೂ ಅಲ್ಲಿನ ಕಾಡು ಪ್ರಾಣಿಗಳು. ಅದನ್ನು ಕಣ್ಮುಂದೆ ತರುವ ರೀತಿಯಲ್ಲಿ ಬಾರ್ಬಿಕ್ಯೂ  ತನ್ನ ರೆಸ್ಟೊರೆಂಟ್‌ ಅನ್ನು ಅಲಂಕರಿಸಿದೆ.

ಕಾರ್ಟೂನ್‌ ಸಿನಿಮಾಗಳಲ್ಲಿ ಖ್ಯಾತವಾಗಿರುವ ಪಾತ್ರಗಳ  ನ್ನು ಹೋಲುವ ಗೊಂಬೆಗಳನ್ನು ಪ್ರತಿ ಟೇಬಲ್‌ ಬಳಿ ಇಡಲಾಗಿದೆ. ಮಂದ ಬೆಳಕಿನ ಜತೆ ಆಫ್ರಿಕಾ ಬುಡಕಟ್ಟು ಸಂಗೀತದ ಹಿನ್ನೆಲೆ, ಸರ್ವರ್‌ಗಳ ಉಡುಪು, ಒಂದೊಂದು ಟೇಬಲ್‌ ಮೇಲೆಯೂ ಪೇಪರ್‌ನಿಂದ ಮಾಡಿದ ಪೇಪರ್‌ ಪುಕ್ಕದ ಕಿರೀಟಗಳು... ಎಲ್ಲವೂ ವಿಭಿನ್ನ ವಾತಾವರಣದ ಅನುಭವವನ್ನು ನೀಡುವುದರ ಜತೆಗೆ ಊಟ ಸವಿಯಲು ಬಂದವರಲ್ಲಿ ಹುರುಪು ಮೂಡಿಸುತ್ತದೆ.

ಸಸ್ಯಹಾರಿ ಹಾಗೂ ಮಾಂಸಾಹಾರಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಉದ್ದೇಶದಿಂದ ಎರಡೂ ಬಗೆಯ ಆಫ್ರಿಕನ್‌ ಖಾದ್ಯಗಳನ್ನು ಈ ಆಹಾರೋತ್ಸವದಲ್ಲಿ ತಯಾರಿಸಲಾಗಿದೆ.

ಮೆನುವಿನಲ್ಲಿ ಏನೇನಿದೆ?
ಸಸ್ಯಹಾರಿ ಗ್ರಾಹಕರಿಗೆಂದೇ ತಯಾರಿಸಲಾಗಿರುವ ಖಾದ್ಯಗಳು– ಕೌಸ್‌ಕೌಸ್‌ ಸ್ಟಫ್ಡ್‌ ಟೊಮ್ಯಾಟೋಸ್‌, ಫಲಾಫೆಲ್‌ , ಬಟರ್‌ನಟ್‌ ಅಂಡ್‌ ಷಾಲೆಟ್‌ ಸೂಪ್‌ (ಕುಂಬಳಕಾಯಿಯಿಂದ ತಯಾರಿಸುವ ಜನಪ್ರಿಯ ಆಫ್ರಿಕನ್‌ ಸೂಪ್‌) ಹಾಗೂ ಮಿಕ್ಸ್ಡ್‌ ವೆಜಿಟೆಬಲ್ಸ್‌ ಇನ್‌ ಅಡೊಬೊ ಸಾಸ್‌.

ಈ ಆಹಾರೋತ್ಸವದ ಮಾಂಸಹಾರಿ ವಿಶೇಷಗಳೆಂದರೆ ಕುಕುಪಾಕ(ಕುಕು ಎಂದರೆ ಆಫ್ರಿಕನ್‌ ಭಾಷೆಯಲ್ಲಿ ಕೋಳಿ ಎಂದರ್ಥ. ಪಾಶ್ಚಿಮಾತ್ಯ ಆಫ್ರಿಕಾದ ಖಾದ್ಯ ಇದು. ಮೊದಲೇ ತಯಾರಿಸಿದ ಸ್ಪೈಸಿ ಚಿಕನ್‌ ಗ್ರೇವಿಯನ್ನು ತೆಂಗಿನ ಕಾಯಿಯ ಹಾಲಿನ ಜತೆ ಬೇಯಿಸಿ ಇದನ್ನು ತಯಾರಿಸಲಾಗುತ್ತದೆ), ಜೊಲಾಫ್‌ ರೈಸ್‌ (ಟೊಮ್ಯಾಟೊ, ಈರುಳ್ಳಿ, ಉಪ್ಪು ಹಾಗೂ ಹಾಟ್‌ ರೆಡ್‌ ಪೆಪ್ಪರ್‌ ಬಳಸಿ ತಯಾರಿಸಿದ ಆಫ್ರಿಕಾದ ಅನ್ನದ ಉಂಡೆ), ಮೊರೊಕ್ಕಾನ್‌ ಚಿಕನ್‌ ಸಾನ್‌ (ಜೇನುತುಪ್ಪ, ಸೋಯಾ ಸಾಸ್‌, ನಿಂಬೆಹಣ್ಣಿನ ರಸವನ್ನು ಹಾಕಿ ತಯಾರಿಸಲಾಗುವ ಸ್ವೀಟ್‌ ಚಿಕನ್‌), ಟಾಂಜೇನಿಯನ್‌ ಶಬಿತ್‌ ಫಿಶ್‌ (ಜೆವಿಶ್‌ ಫೆಸ್ಟಿವಲ್‌ನಲ್ಲಿ ಆಫ್ರಿಕಾದಲ್ಲಿ ತಯಾರಿಸುವ ವಿಶೇಷ ಮೀನಿನ ಖಾದ್ಯ) ಹಾಗೂ ಪಿರಿ ಪಿರಿ ತಂಗ್ಡಿ (ಆಫ್ರಿಕಾದ ಮೊಝಂಬಿಕ್ಯೂ ಪ್ರದೇಶದ ಖಾದ್ಯ).

ಬಗೆ ಬಗೆಯ ಕುಲ್ಫಿಗಳು
ಇಲ್ಲಿ ಗ್ರಾಹಕರ ಬೇಡಿಕೆ ಮೇರೆಗೆ ಅವರ ರುಚಿಗೆ ತಕ್ಕಂತೆ ಕುಲ್ಫಿಗಳನ್ನು ತಯಾರಿಸಿ ಕೊಡುತ್ತಾರೆ ಬಾಣಸಿಗರು. ಇದರ ಜತೆ ಬೇರೆ ಬೇರೆ ಫ್ಲೇವರ್‌ಗಳ ಡೆಸರ್ಟ್‌ಗಳನ್ನೂ ಸವಿಯಬಹುದು. ಮಲ್ವಾ ಫುಡ್ಡಿಂಗ್‌ (ಏಪ್ರಿಕಾಟ್‌ ಜಾಂನಿಂದ ತಯಾರಿಸಿದ ಒಂದು ಬಗೆಯ ಸಿಹಿ. ಇದನ್ನು ಐಸ್‌ಕ್ರೀಂ ಅಥವಾ ಕಸ್ಟರ್ಡ್‌ನ ಜತೆ ಸರ್ವ್‌ ಮಾಡಲಾಗುತ್ತದೆ) ಎಂಬ ಆಫ್ರಿಕನ್‌ ಸ್ಪೆಷಲ್‌ ಸ್ವೀಟ್‌ ಕಮ್‌ ಡೆಸರ್ಟ್‌ ಸವಿಯಲು ಇಲ್ಲಿಗೆ ಬರುವ ಗ್ರಾಹಕರು ಹೆಚ್ಚು ಬೇಡಿಕೆ ನೀಡುತ್ತಾರಂತೆ.

ಪಕ್ಕಾ ಆಫ್ರಿಕನ್‌ ಖಾದ್ಯ ಅಲ್ಲ
ಬೆಂಗಳೂರಿನಂತಹ ನಗರದಲ್ಲಿ ಎಲ್ಲಾ ರೀತಿಯ ಜನರೂ ಬರುತ್ತಾರೆ. ವೆಜ್‌, ನಾನ್‌ ವೆಜ್‌ ಎರಡೂ ಗ್ರಾಹಕರನ್ನು ಪರಿಗಣಿಸಿ ಹಾಗೂ ನಗರಿಗರ ರಸಗ್ರಂಥಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಶೈಲಿಯನ್ನು ಬಳಸಿ ಆಫ್ರಿಕಾ ಖಾದ್ಯಗಳನ್ನು ತಯಾರಿಸಿದ್ದೇವೆ. ಇಲ್ಲಿ ಪಕ್ಕಾ ಆಫ್ರಿಕಾ ಖಾದ್ಯಗಳನ್ನು ತಿನ್ನಲು ಯಾರಿಂದಲೂ ಸಾಧ್ಯವಿಲ್ಲ. ಆಫ್ರಿಕಾದ ಜನ ಹೆಚ್ಚು ಸ್ಪೈಸಿ ಖಾದ್ಯಗಳನ್ನು ಸೇವಿಸುತ್ತಾರೆ ಹಾಗೂ ಇಲ್ಲಿ ತಿನ್ನದ ಜಿರಾಫೆ, ಝೀಬ್ರಾ ಇನ್ನಿತರ ಪ್ರಾಣಿಗಳನ್ನೆಲ್ಲಾ ತಿನ್ನುತ್ತಾರೆ. ಆಫ್ರಿಕಾ ಬುಡಕಟ್ಟು ಜನಾಂಗದವರ ಊಟದ ಶೈಲಿಯಂತೂ ಬಹಳ ವಿಭಿನ್ನವಾಗಿರುತ್ತದೆ.

ಈ ಎಲ್ಲವನ್ನೂ ಅಧ್ಯಯನ ಮಾಡಿ ಆಫ್ರಿಕಾದ ಬೇರೆ ಬೇರೆ ಪ್ರದೇಶಗಳ ಪ್ರಮುಖ ಖಾದ್ಯಗಳನ್ನು ಆರಿಸಿ ಅದಕ್ಕೆ ಕೊಂಚ ಇಂಡಿಯನ್‌ ಮಸಾಲಾ ಟಚ್‌ ಕೊಟ್ಟು, ಖಾದ್ಯಗಳನ್ನು ತಯಾರಿಸಿದ್ದೇವೆ‌’ ಎಂದು ಇಲ್ಲಿ ಮುಖ್ಯ ಬಾಣಸಿಗ ಹಾಗೂ ತರಬೇತುದಾರ ವಿಜಯಾನಂದ ಬಕ್ಷಿ.
*
ಫೆಸ್ಟಿವಲ್‌ ಆರಂಭವಾದಾಗಿನಿಂದ ನಮಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಪ್ರತಿದಿನವೂ ಎಲ್ಲ ಟೇಬಲ್‌ಗಳು ಭರ್ತಿಯಾಗಿರುತ್ತವೆ. ಕುಟುಂಬ ಸಮೇತರಾಗಿ, ಗೆಳೆಯರ ಜತೆ ಬರುವ ಗ್ರಾಹಕರು ತುಂಬಾ ಎಂಜಾಯ್‌ ಮಾಡಿ ಹೋಗುತ್ತಾರೆ. ನಮ್ಮ ರೆಸ್ಟೊರೆಂಟ್‌ಗೆ ಬರುವುದಕ್ಕೂ ಮುಂಚೆ ಕರೆ ಮಾಡಿ ಟೇಬಲ್‌ ನೋಂದಾಯಿಸುವುದು ಒಳ್ಳೆಯದು.
– ವಿಜಯಾನಂದ ಬಕ್ಷಿ
*
ರೆಸ್ಟೊರೆಂಟ್‌– ಬಾರ್ಬಿಕ್ಯು ನೇಷನ್‌ನ ಎಲ್ಲಾ ಶಾಖೆಗಳಲ್ಲಿಯೂ ಲಭ್ಯ.

ಬೆಲೆ (ಇಬ್ಬರಿಗೆ)– ₹1600 (ತೆರಿಗೆ ಹೊರತುಪಡಿಸಿ)
ದಿನಾಂಕ– ಏ.26ರವರೆಗೆ
ಸಮಯ– ಮಧ್ಯಾಹ್ನ 12.30ರಿಂದ 2ರವರೆಗೆ ಮತ್ತು ರಾತ್ರಿ ಊಟ 6.30ರಿಂದ 9.30ರವರೆಗೆ.
ಟೇಬಲ್‌ ಕಾಯ್ದಿರಿಸಲು–080 6060 0000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT