ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾ ದೇಶಗಳಿಗೆ ಚೀನಾ ಹೊಡೆತ

ಚೀನಾದ ಅರ್ಥ ವ್ಯವಸ್ಥೆಯ ಪತನದಿಂದ ಆಫ್ರಿಕಾ ದೇಶಗಳ ಚಿತ್ರಣವೇ ಬದಲಾಗುತ್ತಿದೆ
ಅಕ್ಷರ ಗಾತ್ರ

ವಿಶ್ವದ ಅತ್ಯಂತ ಬಡ ಭೂಖಂಡ ಎಂಬ ಕುಖ್ಯಾತಿಗೆ ಒಳಗಾಗಿದ್ದ ದಕ್ಷಿಣ ಆಫ್ರಿಕಾದ ದೇಶಗಳು ಇತ್ತೀಚಿನ ಕೆಲ ವರ್ಷಗಳಲ್ಲಿ ವ್ಯಾಪಕ ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಗಿ ಸಮೃದ್ಧತೆಯ ಹೊಸ ಶಕೆ ಆರಂಭದ ನಿರೀಕ್ಷೆ ಮೂಡಿಸಿದ್ದವು. ಆದರೆ, ಚೀನಾದ ಅರ್ಥ ವ್ಯವಸ್ಥೆಯು ಪತನದ ಹಾದಿಯಲ್ಲಿ ಸಾಗುತ್ತಿರುವುದು ಈ ದೇಶಗಳ ಆರ್ಥಿಕ ಭವಿಷ್ಯವನ್ನೂ ಮಂಕಾಗಿಸಿದೆ.

ಹೊಸ ವರ್ಷದ ಆರಂಭದಿಂದಲೇ ಆಫ್ರಿಕಾ ಖಂಡದ ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿಯ ಮುನ್ನೋಟವು ತುಂಬ ನಿರಾಶಾದಾಯಕವಾಗಿದೆ. ಅದರಲ್ಲೂ  ಅತಿದೊಡ್ಡ ಆರ್ಥಿಕತೆಯ ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ಪರಿಸ್ಥಿತಿ  ಕಳವಳಕಾರಿಯಾಗಿದೆ. ಈ ಎರಡೂ ದೇಶಗಳ ಕರೆನ್ಸಿಗಳ ವಿನಿಮಯ ದರವು ದಾಖಲೆ ಮಟ್ಟಕ್ಕೆ ಕುಸಿದಿದೆ. ಆಫ್ರಿಕಾದ ದೇಶಗಳ ಅತಿ ದೊಡ್ಡ ವಾಣಿಜ್ಯ ಪಾಲುದಾರ ದೇಶವಾಗಿರುವ ಚೀನಾದ ಮಂದಗತಿಯ ಆರ್ಥಿಕ ಬೆಳವಣಿಗೆಯು ಈ ದೇಶಗಳ ಅರ್ಥ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಒಂದು ವರ್ಷದ ಹಿಂದಿನವರೆಗೆ ಜಾಗತಿಕ ಹೂಡಿಕೆದಾರರ ಅಚ್ಚುಮೆಚ್ಚಿನ  ತಾಣಗಳಾಗಿದ್ದ ಅಂಗೋಲಾ, ಘಾನಾ, ಮೊಜಾಂಬಿಕ್‌ ಮತ್ತು ಜಾಂಬಿಯಾಗಳ  ಆರ್ಥಿಕ ಮುನ್ನೋಟವನ್ನು ಕ್ರೆಡಿಟ್‌ ರೇಟಿಂಗ್‌ ಸಂಸ್ಥೆಗಳು ತಗ್ಗಿಸಿವೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಆರ್ಥಿಕ ಮುನ್ನೋಟ ಕೂಡ ನಿರಾಶಾದಾಯಕವಾಗಿದೆ.

ಈ ಭೂಖಂಡದ ಅತ್ಯಂತ ಮುಂದುವರಿದ ಮತ್ತು ವೈವಿಧ್ಯಮಯ ಆರ್ಥಿಕತೆಯಾಗಿರುವ ದಕ್ಷಿಣ ಆಫ್ರಿಕಾ ಈ ವರ್ಷ ಆರ್ಥಿಕ ಹಿಂಜರಿಕೆಗೆ ಗುರಿಯಾಗಲಿದೆ ಎಂದು ಅನೇಕ ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ. ಇಂತಹ ವಾದವನ್ನು ಅಲ್ಲಿಯ ಸರ್ಕಾರ ತಳ್ಳಿಹಾಕಿದ್ದರೂ, ಚೀನಾಕ್ಕೆ ಗರಿಷ್ಠ ಪ್ರಮಾಣದಲ್ಲಿ ಕಬ್ಬಿಣದ ಅದಿರು ರಫ್ತು ಮಾಡುವ ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆ, ತಯಾರಿಕೆ ಮತ್ತು ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ನಡೆದಿರುವುದು ಆರ್ಥಿಕ ತಜ್ಞರ ಎಚ್ಚರಿಕೆ ನಿಜವಾಗುವ ಸಾಧ್ಯತೆ ಹೆಚ್ಚಿಸಿದೆ.

ಸರಕುಗಳನ್ನು ರಫ್ತು ಮಾಡುವ ದೇಶಗಳ ಕರೆನ್ಸಿಗಳಂತೆ ದಕ್ಷಿಣ ಆಫ್ರಿಕಾದ ಕರೆನ್ಸಿ ರ್‍್ಯಾಂಡ್‌ನ ಮೌಲ್ಯವು ಇತ್ತೀಚಿನ ತಿಂಗಳಲ್ಲಿ ತೀವ್ರವಾಗಿ ಅಪಮೌಲ್ಯಗೊಂಡಿದೆ. ವಿಶ್ವದಾದ್ಯಂತ ಕಚ್ಚಾ ಸರಕುಗಳ ಬೆಲೆ ಕುಸಿದಿರುವುದು ಮತ್ತು ಸರ್ಕಾರದ ದೂರದೃಷ್ಟಿ ಇಲ್ಲದ ಆರ್ಥಿಕ ನೀತಿಗಳಿಂದ ಇಂತಹ ಪರಿಸ್ಥಿತಿ ಉದ್ಭವಗೊಂಡಿದೆ. ತೀವ್ರ ಸ್ವರೂಪದ ಬರಗಾಲದಿಂದಾಗಿ ಆಹಾರ ಧಾನ್ಯಗಳು ದುಬಾರಿಯಾಗಿದ್ದು, ಜಾಕೋಬ್‌ ಜುಮಾ ನೇತೃತ್ವದ ಸರ್ಕಾರಕ್ಕೆ ಭಾರಿ ಸವಾಲೊಡ್ಡಿದೆ. ಸಂಪತ್ತಿನ ಅಸಮಾನತೆ ಹೆಚ್ಚುತ್ತಿರುವುದರಿಂದ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶವೂ ಹೆಚ್ಚುತ್ತಿದೆ.

ಕಚ್ಚಾ ತೈಲ ಉತ್ಪಾದನೆಯನ್ನೇ ಅತಿಯಾಗಿ ನೆಚ್ಚಿಕೊಂಡಿರುವ ಆಫ್ರಿಕಾದ ಅತಿದೊಡ್ಡ ಆರ್ಥಿಕತೆಯಾಗಿರುವ ನೈಜೀರಿಯಾ ತೈಲ ಬೆಲೆ ಕುಸಿತದಿಂದ ತತ್ತರಿಸಿದೆ. ಸರ್ಕಾರದ ವರಮಾನಕ್ಕೆ ಶೇ 80ರಷ್ಟು ಕೊಡುಗೆ ನೀಡುವ ತೈಲ ಉತ್ಪಾದನೆಯು ಸರ್ಕಾರದ ಬೊಕ್ಕಸ ತುಂಬಿಸುತ್ತಿಲ್ಲ. ಇಸ್ಲಾಂ ಮೂಲಭೂತವಾದಿ ಉಗ್ರಗಾಮಿ ಸಂಘಟನೆ ಬೊಕೊ ಹರಮ್‌ ಉಪಟಳವು ಅಧ್ಯಕ್ಷ ಮುಹಮ್ಮದು ಬುಹಾರಿ ಅವರ ನೆಮ್ಮದಿ ಹಾಳು ಮಾಡಿದೆ.

ಕರೆನ್ಸಿ ಅಪಮೌಲ್ಯಗೊಳ್ಳುತ್ತಿರುವುದರಿಂದ ನೈಜೀರಿಯಾ ಸೇರಿದಂತೆ ಆಫ್ರಿಕಾದ ಅನೇಕ ದೇಶಗಳಿಗೆ ಚೀನಾದಿಂದ ಪಡೆದ ಸಾಲವನ್ನು ಮರು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಬೃಹತ್‌ ಮೂಲ ಸೌಕರ್ಯ ಯೋಜನೆಗಳ ನಿರ್ಮಾಣಕ್ಕೆ ಈ ದೇಶಗಳು ಚೀನಾದಿಂದ ಅಪಾರ ಪ್ರಮಾಣದಲ್ಲಿ ಸಾಲ ಪಡೆದುಕೊಂಡಿವೆ. ಕರೆನ್ಸಿಗಳ ಅಪಮೌಲ್ಯ ಮತ್ತು ಚೀನಾದ ಕುಂಠಿತ ಆರ್ಥಿಕತೆಯು ಸಣ್ಣ ಮತ್ತು ಬೃಹತ್‌ ಪ್ರಮಾಣದ ಖಾಸಗಿ ವಹಿವಾಟಿನ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.

ಪೂರ್ವ ಆಫ್ರಿಕಾದ ದೇಶಗಳಾದ ಕೀನ್ಯಾ ಮತ್ತು ಇಥಿಯೋಪಿಯಾಗಳ ಪರಿಸ್ಥಿತಿ ಮಾತ್ರ ಇದಕ್ಕಿಂತ ಕೊಂಚ  ಭಿನ್ನವಾಗಿದೆ. ಈ ದೇಶಗಳು ತಮ್ಮ ಆರ್ಥಿಕತೆಯಲ್ಲಿ ವೈವಿಧ್ಯತೆ ಅಳವಡಿಸಿಕೊಂಡಿರುವುದರಿಂದ ಗರಿಷ್ಠ  ಪ್ರಮಾಣದ ಬೆಳವಣಿಗೆ ದಾಖಲಿಸುತ್ತಿವೆ. ನೈಜೀರಿಯಾ ಹಿಂದಿನ ದಶಕದಲ್ಲಿ ಕಚ್ಚಾ ತೈಲಕ್ಕೆ ಹೊರತಾದ ಇತರ ವಲಯಗಳಲ್ಲಿ ಬೆಳವಣಿಗೆ ದಾಖಲಿಸಿತ್ತು. ಮಧ್ಯಮ ವರ್ಗದ ಜನಸಂಖ್ಯೆ ಹೆಚ್ಚಳದಿಂದ ಪಾಶ್ಚಿಮಾತ್ಯ ಮಾದರಿಯ ಶಾಪಿಂಗ್‌ ಮಾಲ್‌ಗಳು ತಲೆಎತ್ತಿದ್ದವು.

ಭರಾಟೆಯ ಮನರಂಜನಾ ಉದ್ಯಮವೂ 2014ರಲ್ಲಿ ಆಫ್ರಿಕಾ ಖಂಡದ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಬೆಳೆಯಲು ನೈಜೀರಿಯಾಕ್ಕೆ  ನೆರವಾಗಿತ್ತು. ತಮ್ಮ ಅರ್ಥ ವ್ಯವಸ್ಥೆಯಲ್ಲಿ ದೀರ್ಘಾವಧಿ ಬದಲಾವಣೆ ತರಲು, ಆರ್ಥಿಕ ಉತ್ಕರ್ಷದ ಪ್ರಯೋಜನಗಳನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಆಫ್ರಿಕಾದ ಬಹುತೇಕ ದೇಶಗಳು ವಿಫಲಗೊಂಡಿವೆ ಎಂದು ಪರಿಣತರು ಅಭಿಪ್ರಾಯಪಡುತ್ತಾರೆ.

ವಿದ್ಯುತ್‌ ಅಭಾವದ ಸಮಸ್ಯೆ ಬಗೆಹರಿಸಿಕೊಂಡು, ಕೈಗಾರಿಕೀಕರಣ ಪ್ರಕ್ರಿಯೆ ಚುರುಕುಗೊಳಿಸಲು ಈ ದೇಶಗಳು ಶ್ರಮ ವಹಿಸಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ  ವಿದ್ಯುತ್‌ ಕೊರತೆಯು ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಿ, ನಿರುದ್ಯೋಗ ಪ್ರಮಾಣ ಹೆಚ್ಚಿಸಿದೆ. ತಾಮ್ರದ ರಫ್ತು ವಹಿವಾಟನ್ನು ನೆಚ್ಚಿಕೊಂಡಿರುವ ಜಾಂಬಿಯಾ, ಚೀನಾದ ಬೇಡಿಕೆ ಕಡಿಮೆಯಾಗಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಗಣಿಗಳು ಬಾಗಿಲು ಹಾಕಿದ್ದರಿಂದ ಇತ್ತೀಚಿನ ದಿನಗಳಲ್ಲಿ ಸಾವಿರಾರು ಜನ ಉದ್ಯೋಗ ಅವಕಾಶಗಳಿಂದ ವಂಚಿತರಾಗಿದ್ದಾರೆ.

ಆರ್ಥಿಕ ಉತ್ಕರ್ಷದ ದಿನಗಳಲ್ಲಿ ಜಾಂಬಿಯಾ, ತಂತ್ರಜ್ಞಾನ ವರ್ಗಾವಣೆ ಅಥವಾ ಮೂಲ ಸೌಕರ್ಯ ಯೋಜನೆಗಳಲ್ಲಿ ಉದ್ಯೋಗ ಅವಕಾಶಗಳಿಗಾಗಿ ಚೀನಾದ ಉದ್ದಿಮೆ ಸಂಸ್ಥೆಗಳ ಜತೆ ಚೌಕಾಸಿ ನಡೆಸಲಿಲ್ಲ ಎಂದು ಆರ್ಥಿಕ ತಜ್ಞರು ಟೀಕಿಸುತ್ತಾರೆ. ತಾಮ್ರದ ರಫ್ತಿನಿಂದ ಬಂದ ಹಣವನ್ನು ಸರ್ಕಾರವು ತನ್ನ ನೌಕರರ ವೇತನ ಹೆಚ್ಚಿಸಲು ಬಳಸಿಕೊಂಡಿತೇ ಹೊರತು, ಹಲವಾರು ಆರ್ಥಿಕ ಲಾಭ ತಂದುಕೊಡುತ್ತಿದ್ದ ಪ್ರವಾಸೋದ್ಯಮ ಮತ್ತು ಕೃಷಿ ರಂಗದಲ್ಲಿ ಬಂಡವಾಳ ತೊಡಗಿಸಲು ಮುಂದಾಗಲಿಲ್ಲ.

ಕಳೆದ ತಿಂಗಳು ನಡೆದ ಆಫ್ರಿಕಾ ಮುಖಂಡರ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌, ಆಫ್ರಿಕಾ ದೇಶಗಳ ಸರ್ವತೋಮುಖ ಅಭಿವೃದ್ಧಿಗೆ 6,000 ಕೋಟಿ ಡಾಲರ್‌ಗಳಷ್ಟು (ಅಂದಾಜು ₹ 4 ಲಕ್ಷ ಕೋಟಿ) ನೆರವು ನೀಡುವ ವಾಗ್ದಾನ ನೀಡಿದ್ದಾರೆ. ಚೀನಾದ ಈ ನಿರ್ಧಾರವನ್ನು  ಆಫ್ರಿಕಾ  ಒಕ್ಕೂಟದ ಅಧ್ಯಕ್ಷರೂ ಆಗಿರುವ ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್‌ ಮುಗಾಬೆ ಶ್ಲಾಘಿಸಿದ್ದಾರೆ.

ಚೀನಾ ಆರ್ಥಿಕತೆಯ ಕುಸಿತದ ಪರಿಣಾಮ ಮತ್ತು ಆಫ್ರಿಕಾ ದೇಶಗಳ ಜತೆಗಿನ ವಾಣಿಜ್ಯ ವಹಿವಾಟಿನ ಅಸಮತೋಲನವು ಬೇರೆಯೇ ಆದ ಚಿತ್ರಣ ನೀಡುತ್ತಿದೆ.  ಚೀನಾ 102 ಶತಕೋಟಿ ಡಾಲರ್‌ಗಳಷ್ಟು (₹ 6.83 ಲಕ್ಷ ಕೋಟಿ) ಮೊತ್ತದ ಸರಕು ರಫ್ತು ಮಾಡಿದ್ದರೆ, ಕೇವಲ 67 ಶತಕೋಟಿ ಡಾಲರ್‌ (₹ 4.48 ಲಕ್ಷ ಕೋಟಿ) ಮೊತ್ತದ ಸರಕನ್ನು ಆಮದು ಮಾಡಿಕೊಂಡಿದೆ.

‘ಚೀನೀಯರು ಆಫ್ರಿಕಾ ದೇಶಗಳ ಜತೆಗೆ ಉತ್ಕಟ ಪ್ರೇಮದ ಸಂಬಂಧವನ್ನೇನೂ ಹೊಂದಿಲ್ಲ. ಅವರ  ಪಾಲಿಗೆ ಅದೊಂದು ಶುದ್ಧ ವ್ಯಾವಹಾರಿಕ ವಿಷಯವಾಗಿದೆ’ ಎಂದು ಜಿಂಬಾಬ್ವೆಯ ಉದ್ಯಮಿ ಮತ್ತು ರಾಜಕೀಯ ವಿಶ್ಲೇಷಕರೂ  ಆಗಿರುವ ಇಬ್ಬೂ ಮಂಡಾಜಾ ಬಣ್ಣಿಸಿರುವುದು ವಾಸ್ತವಕ್ಕೆ ಕನ್ನಡಿ ಹಿಡಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT