ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ರಪಾಲಿಯ ನೋವಿನ ಕಥೆ

Last Updated 25 ಜುಲೈ 2016, 19:30 IST
ಅಕ್ಷರ ಗಾತ್ರ

ವೈಭವದ ತುತ್ತತುದಿಯಿಂದ, ಬದುಕಿನ ನಶ್ವರತೆ ಮನಗಂಡು  ವೈರಾಗ್ಯದತ್ತ ವಾಲಿದ  ಅಪೂರ್ವ ಸುಂದರಿ ವೈಶಾಲಿಯ ನಗರ ವಧು ‘ಆಮ್ರಪಾಲಿ’ಯ ಬದುಕಿನ ಬಗ್ಗೆ ಈಗಾಗಲೇ ಅನೇಕರು ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ. ಆಮ್ರಪಾಲಿಯ ಕಥೆ ಚಲನಚಿತ್ರವಾಗಿಯೂ  ಪ್ರಸಿದ್ಧವಾಗಿದೆ. ಇಂಥ ಆಕರ್ಷಕ ವಸ್ತುವನ್ನು ಆರಿಸಿಕೊಂಡು ‘ಮಹಾ ಪೌರ್ಣಿಮೆ’ ನಾಟಕ ರಚಿಸಿದವರು ಜೆ.ಎಂ.ಪ್ರಹ್ಲಾದ್. 

ಗೋತಮಿ ಫೌಂಡೇಷನ್‌ನ ಕಲಾವಿದರು ಅಭಿನಯಿಸಿದ ಸಂಗೀತ-ನೃತ್ಯ ಪ್ರಧಾನ ಇತಿಹಾಸಿಕ ನಾಟಕದ ನಿರ್ದೇಶನದ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸಿದವರು ಎನ್.ಶಿವಲಿಂಗಯ್ಯ.

ಅನಾಥವಾಗಿ ಆಮ್ರವನದಲ್ಲಿ ದೊರೆತ ಮಗು ‘ಆಮ್ರಪಾಲಿ’ಯನ್ನು ಸಲಹಿದ ವಣಿಕ, ಅವಳ ನೃತ್ಯ ಪ್ರದರ್ಶನವನ್ನು ರಾಜರ ಆಸ್ಥಾನದಲ್ಲಿ ಏರ್ಪಡಿಸಿದ್ದೇ ಅವಳ ಬಾಳಿನ ವಿಪತ್ತುಗಳಿಗೆ ಮೂಲವಾಯಿತು.

ಅವಳ ಅಪೂರ್ವ ಸೌಂದರ್ಯ ಎಲ್ಲ ಗಂಡಸರನ್ನೂ ಆಕರ್ಷಿಸಿದಾಗ, ಅವಳು ತನ್ನ ಪ್ರಿಯಕರನ ರಕ್ಷಣೆ ಪಡೆಯುವ ಆಸೆಯಿಂದ ಮನೆ ತೊರೆಯುತ್ತಾಳೆ. ಆದರೆ, ದಾರಿಯುದ್ದಕ್ಕೂ ಕಾಮಪಿಪಾಸು ಗಂಡಸರ ವರ್ತನೆ ಅವಳನ್ನು ಹಿಂಸಿಸುತ್ತದೆ.

ಅವರಿಂದ ತಪ್ಪಿಸಿಕೊಂಡರೂ ಮತ್ತೆ ರಾಜನ ಕೈಸೆರೆಯಾಗಿ, ಒಲ್ಲದ ‘ನಗರವಧು’ ಪಟ್ಟ ಪಡೆದು, ರಾಜ ನರ್ತಕಿಯಾಗಿ ಗಂಡಸರನ್ನು ತೃಪ್ತಿಪಡಿಸುವ ಕೆಲಸದಿಂದ ಘಾಸಿಗೊಳ್ಳುತ್ತಾಳೆ. ಕಡೆಗೆ  ರೋಸಿಹೋಗುತ್ತಾಳೆ. ಅನೂಹ್ಯ ಸಂಪತ್ತು, ವೈಭೋಗ ಕಾಲಡಿ ಬಂದು ಬಿದ್ದರೂ ಮನದೊಳಗೆ ಕಾಡುವ ಅಶಾಂತಿ. ಕಡೆಗೊಮ್ಮೆ  ದೊರಕಿದ ಆತ್ಮಸಖ ಮಗಧ ರಾಜ್ಯದ ಬಿಂಬಸಾರನ ಸಖ್ಯವೂ ಅಲ್ಪಕಾಲಿಕ. ಮುಂದೆ ನಡೆಯುವ ಅನಿರೀಕ್ಷಿತ ಘಟನೆಗಳಿಂದ ಹತಾಶಳಾದ ಆಮ್ರಪಾಲಿ, ಎಲ್ಲವನ್ನು ತೊರೆದು ‘ಬೌದ್ಧ ದೀಕ್ಷೆ’ ಸ್ವೀಕರಿಸುವುದು ನಾಟಕದ ಕಥಾ ಹಂದರ.

ತನ್ನ ನೃತ್ಯ ಪ್ರತಿಭೆಯ ಅಸ್ಮಿತೆ, ಆತ್ಮಾಭಿಮಾನಗಳಿಂದ ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಹೆಣೆದಿದ್ದ ಆಮ್ರಪಾಲಿಯ ಪಾಲಿಗೆ ಜೀವನ ಎನ್ನುವುದು ಆಕಸ್ಮಿಕಗಳ ಕಂತೆಯಾಗುತ್ತದೆ. ತನ್ನ ಜೀವನ ಹಿಡಿದ ಪತನದ ಹಾದಿ ಅವಳಿಗೆ ತಂದ ವೇದನೆ ಅಷ್ಟಿಷ್ಟಲ್ಲ.

ತಾನು ಬಿಕರಿಯ ವಸ್ತುವಾದುದಕ್ಕೆ ಅತೀವ ಸಂತಾಪ ಅವಳ ಹೃದಯದಲ್ಲಿರುತ್ತದೆ. ಅವಳ ಸ್ತ್ರೀ ಸಹಜ  ಸಂವೇದನೆಗಳು ತಾರಕಕ್ಕೇರಿ, ಪುರುಷ ಸಮಾಜದ ಹೇಯ ನಡವಳಿಕೆಗಳಿಂದ ರೋಸಿ ಹೋಗುತ್ತಾಳೆ. ಅವರ ಶೋಷಣೆಯ ಬಲೆಯಿಂದ ಪಾರಾಗಲು ಯತ್ನಿಸುತ್ತಿದ್ದ ಅವಳ ಮನ ಎಲ್ಲವನ್ನೂ ಧಿಕ್ಕರಿಸುತ್ತದೆ. ಕಡೆಗೆ ಬೌದ್ಧ ಸನ್ಯಾಸಿನಿಯಾಗಿ ಜೀವನ ಕಳೆಯುವ ಅವಳ ಬದುಕು ನೀಡುವ ಸಂದೇಶ ಬಹು ಗಾಢವಾದುದು.

ಆಮ್ರಪಾಲಿಯ ಬದುಕಿನಲ್ಲಿ ಬರುವ ಘಟನಾವಳಿಗಳನ್ನೆಲ್ಲ ನಾಟಕದಲ್ಲಿ ಬಹು ದೀರ್ಘವಾಗಿ (ಸುಮಾರು 3 ಗಂಟೆಗಳು) ಚಿತ್ರಿಸಿರುವುದು ಪ್ರೇಕ್ಷಕರ ಸಹನೆಯ ಪರೀಕ್ಷೆಯೇ ಸರಿ. ಅವಶ್ಯಕತೆಯಿದ್ದ ಕಡೆಗಳಲ್ಲಿ ಹಾಡು, ಸಂಗೀತ ಅಪೇಕ್ಷಣೀಯ. ಆಕರ್ಷಕ ವೇಷ-ಭೂಷಣಗಳು, ಅಲಂಕಾರದ ವರ್ಣರಂಜಿತ ಮನಮೋಹಕ ನೃತ್ಯಗಳನ್ನು ನೋಡುವುದು ಖುಷಿಯೇ. ಆದರೂ ನಾಟಕೀಯ ಸನ್ನಿವೇಶಗಳಿಗೆ ಹೆಚ್ಚಿನ ಒತ್ತುಕೊಡುವ ಅಗತ್ಯ ಇತ್ತು.

ಸುಂದರ ರಂಗ ಸಜ್ಜಿಕೆ, ಮಧುರ ಹಾಡುಗಳು ಆಮ್ರಪಾಲಿಯ ಕಥೆಗೆ ಹೊನ್ನ ಚೌಕಟ್ಟು ನೀಡಿದ್ದು, ಪ್ರತಿ ದೃಶ್ಯದ ಕಲಾ ವಿನ್ಯಾಸ ಅಚ್ಚುಕಟ್ಟಾಗಿತ್ತು. ಅದರಲ್ಲೂ ರೈತನೊಬ್ಬ ಅವಳನ್ನು ಕಾಣಲು ತನ್ನ ಹೊಲ-ಮನೆಗಳನ್ನು ಮಾರಿ, ಬಂಗಾರದ ಗಂಟಿನೊಂದಿಗೆ ಬರುವ ಪ್ರಕರಣ ಹಾಸ್ಯಪೂರ್ಣವಾಗಿದ್ದರೂ ಆ ಸಂದರ್ಭದಲ್ಲಿ ಆಮ್ರಪಾಲಿ ಬುದ್ಧಿ ಹೇಳಿ ಅವನ ಕಣ್ಣು ತೆರೆಸುವ ಸಂದೇಶ ಪ್ರಸ್ತುತ ಸಂದರ್ಭಕ್ಕೂ ಅನ್ವಯವಾಗುವಂತಿತ್ತು.

ಅಂದಿನ ಪುರುಷ ಸಮಾಜದ ಧೋರಣೆ, ಶೋಷಣೆಯ ತಂತ್ರಗಳು ಪರಿಣಾಮಕಾರಿಯಾಗಿ ನಾಟಕದಲ್ಲಿ ಧ್ವನಿ ಪಡೆದಿದ್ದವು. ವೈಭೋಗದ ತುತ್ತ ತುದಿಯಲ್ಲಿದ್ದರೂ ಅದರಿಂದ ವಿಮುಖಳಾಗಿ ಎಲ್ಲವನ್ನೂ ತುಚ್ಛೀಕರಿಸಿ ಹೊರ ಬಂದ ಅವಳ ವ್ಯಕ್ತಿತ್ವ ಘನತೆ ಪಡೆಯುವ ಸಂದರ್ಭ ಹೃದಯಸ್ಪರ್ಶಿಯಾಗಿದೆ.

ನಾಟಕದ ಮೊದಲ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಆಶ್ರಮದ ವೃದ್ಧೆಯೊಬ್ಬಳು, ಮನೆಯಿಂದ ಪ್ರಿಯಕರನಿಗಾಗಿ ಓಡಿಬಂದ ತರುಣಿಗೆ, ಆಮ್ರಪಾಲಿಯ ಕಥೆ ನಿರೂಪಿಸುತ್ತ ಹೋಗುತ್ತಾಳೆ.

ಹಿಂದಿನ ಘಟನೆಗಳೆಲ್ಲ ಒಂದೊಂದಾಗಿ  ರಂಗದಮೇಲೆ ಬಿಚ್ಚಿಕೊಳ್ಳುತ್ತ ಹೋಗುವ ನಾಟಕದ ತಂತ್ರ  ಚಂದವೆನಿಸಿದರೂ, ಬರುಬರುತ್ತಾ ಅದು ಯಾಂತ್ರಿಕವೆನಿಸುತ್ತದೆ. ಕಥೆಯ ಓಟಕ್ಕೆ, ರಸಾನುಭವಕ್ಕೆ  ತಡೆಯುಂಟು ಮಾಡುತ್ತದೆ. ನಾಟಕದ ಅಂತ್ಯದಲ್ಲಿ  ಸ್ಫೋಟಗೊಳ್ಳುವ ರಹಸ್ಯ, ಆ ಮುದುಕಿಯೇ ಆಮ್ರಪಾಲಿ ಎಂಬ ಸತ್ಯಾಂಶ ಕೌತುಕವನ್ನು ಗರಿಗಟ್ಟಿಸುತ್ತದೆ.

ಹರಿತ ಸಂಭಾಷಣೆ, ನಾಟಕೀಯ ಸನ್ನಿವೇಶಗಳನ್ನು ಅಳವಡಿಸಿಕೊಂಡು, ವಿಲಂಬಿತ ಅನಗತ್ಯ ಹಾಡು, ಘಟನೆಗಳನ್ನು ಬಿಟ್ಟು, ನಾಟಕಾವಧಿಯನ್ನು ಕಡಿಮೆಗೊಳಿಸಿದರೆ ಒಳಿತು.

ನಾಟಕದ ಕೇಂದ್ರಬಿಂದು ಆಮ್ರಪಾಲಿಯಾಗಿ ಸುಕೃತಿ ಪ್ರಭಾಕರ್ ನಟನೆಗೂ ಸೈ , ನೃತ್ಯಕ್ಕೂ ಸೈ ಅನ್ನುವಂತೆ ಆಕರ್ಷಕವಾಗಿ ನೃತ್ಯ ಮಾಡಿ, ಅಸ್ಖಲಿತ ಸಂಭಾಷಣೆಗಳಿಂದ ಸೊಗಸಾಗಿ ಅಭಿನಯಿಸಿದರು. ಪುಷ್ಪಾವತಿಯಾಗಿ  ಪುಷ್ಪಲತಾ ಬಹು ಲವಲವಿಕೆಯಿಂದ ನಟಿಸಿದರೆ, ರಾಜಮಾತೆಯಾಗಿ ಶೋಭಾದೇವಿ  ಗಮನಸೆಳೆದರು. ವೃದ್ಧೆಯಾಗಿ ಲಾವಣ್ಯ ಆಂಗಿಕಾಭಿನಯದ ಸಹಜತೆಯಿಂದ ಭರವಸೆ ಮೂಡಿಸಿದರು. ಪರಿಣಾಮಕಾರಿ ಬೆಳಕಿನ ವಿನ್ಯಾಸ ನಾಟಕದ ದೃಶ್ಯಗಳನ್ನು ಸುಂದರವಾಗಿ ಅಭಿವ್ಯಕ್ತಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT