ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ ಆರೋಗ್ಯ ಮೇಳ

Last Updated 30 ನವೆಂಬರ್ 2015, 11:10 IST
ಅಕ್ಷರ ಗಾತ್ರ

ರಾಮನಗರ:  ‘ರೋಗ ಮುಕ್ತ ಸಮಾಜ ನಿರ್ಮಾಣ ಮಾಡುವುದು ಅವಶ್ಯಕ’ ಎಂದು ಮೈಸೂರಿನ ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಪಿ. ಸತ್ಯನಾರಾಯಣ್ ಭಟ್ ಹೇಳಿದರು.

ತಾಲ್ಲೂಕಿನ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಕೆ.ಎಸ್.ಮುದ್ದಪ್ಪ ಸ್ಮಾರಕ ಶನಿವಾರ ಹಮ್ಮಿಕೊಂಡಿದ್ದ ಆಯುಷ್ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಶೇ 90ರಷ್ಟು ಜನ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೋಗ ನಿರೋಧಕ ಸಮಾಜವನ್ನು ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಬೇಕು’ ಎಂದರು.

‘ರಾಮನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದೆ. ಇದರಿಂದ ಜನರಿಗೆ ಕೆಲವು ರೋಗಗಳು ಬರುತ್ತಿವೆ. ಶುದ್ದ ಕುಡಿಯುವ ನೀರನ್ನು ಬಳಸುವುದರಿಂದ ಹಲವು ರೋಗಗಳನ್ನು ತಡೆಗಟ್ಟಬಹುದು’ ಎಂದರು.

‘ನಮ್ಮ ಮನೆಯ ಸುತ್ತಮುತ್ತಲಿನ ಸ್ಥಳದಲ್ಲಿಯೇ ಔಷಧಿ ಗಿಡಗಳನ್ನು ಬೆಳೆಸಬಹುದು. ಆಡುಸೋಗೆ, ನೆಲಬೇರು, ದೊಡ್ಡಪತ್ರೆ, ತುಳಸಿ, ಶುಂಠಿ, ಅಗಳುಶುಂಠಿ, ನುಗ್ಗೆ, ವಿಷಮಧಾರಿ, ಅಮೃತಬಳ್ಳಿ, ಚಿತ್ರಮೂಲ ಹೀಗೆ ನಮ್ಮ ಸುತ್ತಮುತ್ತ ದೊರೆಯುವ ಗಿಡಗಳಲ್ಲಿಯೇ ಔಷಧಿ ಗುಣಗಳಿವೆ. ಆದರೆ ನಾವು ಇವುಗಳನ್ನು ಬಳಸದೇ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

ಬೆಂಗಳೂರಿನ ಶ್ರೀ ಶ್ರೀ ಆಯುರ್ವೇದ ಮಹಾವಿದ್ಯಾಲಯದ ಡಾ.ಜೆ. ವಿವೇಕ್ ಮಾತನಾಡಿ, ‘ರೈತರು ಹೆಚ್ಚು ಫಸಲು ಬರಲಿ ಎಂದು ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಇಂತಹ ಆಹಾರ ಪದಾರ್ಥಗಳನ್ನು ಬಳಸುವುದರಿಂದ 10 ಜನರಲ್ಲಿ 5 ಜನಕ್ಕೆ ರೋಗ ಬರುತ್ತಿದೆ. ರೈತ ಹಣದ ಆಸೆಗಾಗಿ ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಭೂಮಿ ಬರಡಾಗುತ್ತಿದೆ’ ಎಂದರು.

ಕೆಎಂಎಫ್‌ ಉಪನಿರ್ದೇಶಕ ಕೆ.ಎಸ್. ರಂಗೇಗೌಡ ಮಾತನಾಡಿ, ‘ಜನರು ಸಂಘಸಂಸ್ಥೆಗಳು ಆಯೋಜಿಸುವ ಉಚಿತ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು.  ಇದರಿಂದ ದೇಶದ ಅಭಿವೃದ್ಧಿಗೆ ಗಮನ ಕೊಡಲು ಸಾಧ್ಯ’ ಎಂದರು.

ಆಯುರ್ವೇದಿಯ ಸಸಿ ವಿತರಿಸಲಾಯಿತು. ಮೈಸೂರಿನ ಆಯುರ್ವೇದ ಮೆಡಿಕಲ್ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾಥಿಗಳು ಆಯುಷ್ ಆರೋಗ್ಯ ಮೇಳದಲ್ಲಿ ಪಾಲ್ಗೊಂಡಿದ್ದರು. ಡಾ.ನರಸಿಂಹ, ಡಾ. ಅಜಯ್, ಡಾ.ಆಶಾ, ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟಿನ ಕಾರ್ಯದರ್ಶಿ ಡಾ.ಎಂ.ಬೈರೇಗೌಡ ಇದ್ದರು. ಕಲಾವಿದೆ ತೇಜಸ್ವಿನಿ ಪ್ರಾರ್ಥಿಸಿದರು. ಕಥೆಗಾರ್ತಿ ರತ್ನಾ ನಿರೂಪಿಸಿದರು. ಕಲಾವಿದ ಸತೀಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT