ನವದೆಹಲಿ (ಪಿಟಿಐ): ಹೊಸ ಸೇನಾ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿರುವಂತೆಯೇ, ಈ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದ್ದು ಆಯೋಗದ ಒಪ್ಪಿಗೆ ದೊರೆತ ನಂತರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.
ಮುಂದಿನ ಸೇನಾ ಮುಖ್ಯಸ್ಥರ ನೇಮಕದ ಸ್ಥಿತಿಗತಿ ಹೇಗಿದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ಎ.ಕೆ. ಆಂಟನಿ, ‘ಈ ವಿಚಾರವು ಚುನಾವಣಾ ಆಯೋಗದ ಮುಂದಿದೆ. ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಎಲ್ಲಾ ನಿಯಮಗಳನ್ನು ಪಾಲಿಸುವುದನ್ನು ನಾವು ಬಯಸುತ್ತೇವೆ’ ಎಂದು ಹೇಳಿದರು.
ಈಗ ನಡೆಯುತ್ತಿರುವ ಚುನಾವಣೆ ಸಂದರ್ಭದಲ್ಲಿ ಹಾಗೂ ಭವಿಷ್ಯದಲ್ಲಿ ಕೂಡ ನೇಮಕಗಳು, ಬಡ್ತಿ, ಖರೀದಿ ಸೇರಿದಂತೆ ಸರ್ಕಾರ ಕೈಗೊಳ್ಳುವ ನಿರ್ಧಾರಗಳು ಚುನಾವಣಾ ನೀತಿ–ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಆಯೋಗ ಈಗಾಗಲೇ ಹೇಳಿದ್ದರೂ, ಸೇನಾ ಮುಖ್ಯಸ್ಥರ ನೇಮಕ ವಿಚಾರವನ್ನು ರಕ್ಷಣಾ ಸಚಿವಾಲಯ ಈ ವಾರದ ಆರಂಭದಲ್ಲಿ ಆಯೋಗಕ್ಕೆ ಕಳುಹಿಸಿತ್ತು.
ಆಡಳಿತ ಕೊನೆಗೊಳ್ಳಲು ಇನ್ನೇನು ಕೆಲವೇ ದಿನಗಳು ಇರುವಾಗ ಈಗಿನ ಸರ್ಕಾರ ನೂತನ ಸೇನಾ ಮುಖ್ಯಸ್ಥರನ್ನು ನೇಮಿಸಲು ಮುಂದಾಗಿರುವುದನ್ನು ಬಿಜೆಪಿ ವಿರೋಧಿಸುತ್ತಿದೆ.
ನೇಮಕಕ್ಕೆ ಆತುರ ತೋರುವ ಅಗತ್ಯವಿಲ್ಲ. ಈ ವಿಚಾರವನ್ನು ಹೊಸ ಸರ್ಕಾರಕ್ಕೆ ಬಿಡಬೇಕು ಎಂದು ಬಿಜೆಪಿ ವಾದಿಸುತ್ತಿದೆ. ಸೇನಾ ಮುಖ್ಯಸ್ಥ ಜನರಲ್ ಬಿಕ್ರಮ್ ಸಿಂಗ್ ಅವರ ಅಧಿಕಾರಾವಧಿ ಜುಲೈ 31ರಂದು ಕೊನೆಗೊಳ್ಳಲಿದ್ದು, ನೂತನ ಮುಖ್ಯಸ್ಥರ ಹುದ್ದೆಗೆ ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರ ಹೆಸರು ಮುಂಚೂಣಿಯಲ್ಲಿದೆ.