ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ... ಮೊಬೈಲ್‌ ದೃಶ್ಯಮಂ!

ಲಬೋ ಲಬೋ
Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಚಳಿ ಚಳಿ ತಾಳೆನು ಈ ಚಳಿಯಾ
ಅಹಾ..ಓಹೊ..
‘ಏನಯ್ಯಾ ಯಂಕ್ಟೇಸ... ರೆಬೆಲ್‌ ಸ್ಟಾರ್‌ ಅಂಬಿಯ ಹಳೇ ಸಿನಿಮಾ ಹಾಡನ್ನು ಇಷ್ಟೊಂದು ಜೋರಾಗಿ ಹಾಡ್ತಿದೀಯ..’

ಬೆಳಗಾವಿಯಲ್ಲಿ ಚಳಿ-ಗಾಲದ ಅಧಿವೇಶನ ದಿಂದ ಬಿಸಿ ಬಿಸಿ ಸುದ್ದಿ ಬರ್ತಿದೆ ಸ್ಸಾ! ಚಳಿ ತಡೆಯಲಾಗದೆ ಎಮ್ಮೆಲ್ಲೇಗಳು ಮೊಬೈಲ್‌ ನಲ್ಲಿ ನೋಡಬಾರದ್ದನ್ನೆಲ್ಲ ನೋಡ್ತಿದಾರಂತೆ. ಟೀವಿ ತುಂಬ ಬ್ರೇಕಿಂಗ್‌ ನ್ಯೂಸು!

‘ನಾನೂ ಪೇಪರ್‌ನಲ್ಲಿ ನೋಡ್ದೆ ಕಣಯ್ಯ. ಬೀಜೇಪಿ ಶಾಸಕ ಪ್ರಭು ಚವಾಣ ಸದನದಲ್ಲಿ ಕುಳಿತು ಮೊಬೈಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಫೋಟೊ ಝೂಮ್‌ ಮಾಡ್ಕೊಂಡು ನೋಡ್ತಿದ್ದರಂತೆ...’

ಸ್ಸಾ..! ಅದು ಪ್ರಿಯಾಂಕಾ ಚೋಪ್ರಾ ಅಲ್ಲ, ಪ್ರಿಯಾಂಕಾ ಗಾಂಧಿ ಫೋಟೊ!
‘ಹೌದಾ! ಹಾಗಿದ್ರೆ ಖಂಡಿತಾ ತಪ್ಪು ಕಣಯ್ಯ. ಚಳಿಗಾಲದ ಅಧಿವೇಶನ ಎಂದು ಸರ್ಕಾರವೇ ನಿಗದಿ ಮಾಡಿರೋದರಿಂದ ಏನೋ ಬೆಚ್ಚಗಿರಲು ಚಿತ್ರನಟಿಯನ್ನು ನೋಡ್ತಿದ್ದಾರಪ್ಪ ಅಂತ ನಾನು ಅನ್ಕೊಂಡಿದ್ದೆ. ಆದ್ರೆ ಬೀಜೇಪಿ ಶಾಸಕರಾಗಿದ್ದುಕೊಂಡು ಕಾಂಗ್ರೆಸ್‌ ನಾಯಕಿಯ ಫೋಟೊ ನೋಡಿದ್ದು ಖಂಡಿತಾ ಸರಿಯಲ್ಲ. ಬೇಕಿದ್ರೆ ಬೀಜೇಪಿ ನಾಯಕಿ ಹೇಮಾಮಾಲಿನಿ ಫೋಟೊ ನೋಡ್ಬಹುದಿತ್ತಲ್ಲ...’

ಸ್ಸಾ.. ಹೋಲ್ಡಾನ್‌! ಏನ್ಸಾ ನೀವು.. ಸದನದ ಒಳಗೆ ಜನರ ಸಮಸ್ಯೆಗಳನ್ನು ಚರ್ಚಿಸೋದಕ್ಕೆ ಇವರನ್ನು ಆಯ್ಕೆ ಮಾಡಿ ಕಳುಹಿಸಿದ್ರೆ ಅಲ್ಲಿ ಕುಳಿತು ಹೆಣ್ಣುಮಕ್ಕಳ ಫೋಟೊ ನೋಡೋದಾ? ಯಾವ ಪಾರ್ಟಿ ಹೆಣ್ಮಕ್ಕಳ ಫೋಟೊ ನೋಡಿದ್ರೂ ತಪ್ಪೇ ಅಲ್ವಾ ಸ್ಸಾ?

‘ಹಂಗಂತೀಯ. ಅದೂ ಸರಿ ಅನ್ನು. ಆದ್ರೆ ಆ ಚವಾಣ ಸೀದಾ ಹೋಗಿ ತಿರುಪತಿ ತಿಮ್ಮಪ್ಪನ ಪಾದ ಹಿಡಿದು ತಪ್ಪಾಯ್ತು ಕ್ಷಮಿಸು ಅಂತ ಕೇಳ್ಕೊಂಡ್ರಂತಲ್ಲ..’
ಸ್ಸಾ.. ಬೆಳಿಗ್ಗೆ ಎದ್ದು ಕನ್ನಡಕ ಹಾಕ್ಕೊಳ್ದೇ ಪೇಪರ್‌ ಓದಿದ್ರೇ ಹಿಂಗೇ ಆಗೋದು. ಅದು ತಿರುಪತಿ ತಿಮ್ಮಪ್ಪ ಅಲ್ಲ ಸ್ಸಾ, ಕಾಗೋಡು ತಿಮ್ಮಪ್ಪ! ಪ್ರಭು ಚವಾಣರು ಹೋಗಿ ಸ್ಪೀಕರ್‌ ಕಾಗೋಡು ತಿಮ್ಮಪ್ಪಾವ್ರ ಪಾದ ಹಿಡ್ಕೊಂಡ್ರಂತೆ. ಅವ್ರು ಮರುದಿನ ಸದನದಲ್ಲಿ- ಏನೋ ಹೋಗ್ಲಿ ಬಿಡ್ರಿ... ತಪ್ಪಾಗಿದೆ ಎಂದು ಕ್ಷಮಿಸಲು ನೋಡಿದರೆ, ಕಾಂಗ್ರೆಸ್‌ ಶಾಸಕ್ರು ಹಠಾ ಮಾಡಿ, ಕೊನೆಗೆ ಪ್ರಭು ಚವಾಣರನ್ನು ಸದನದಿಂದ ಒಂದು ದಿನಕ್ಕೆ ಸಸ್ಪೆಂಡ್‌ ಮಾಡಿದ್ರಂತೆ..

‘ಏನೋಪ್ಪ, ಈ ಬೀಜೇಪಿಯವ್ರು ಸುಧಾರಿಸೋ ಹಂಗೆ ಕಾಣ್ತಿಲ್ಲ. ಬೆಂಗಳೂರಿನ ಅಧಿವೇಶನದಲ್ಲಿ ಮೊಬೈಲ್‌ನಲ್ಲಿ ಬ್ಲೂಫಿಲಂ ನೋಡಿದ್ರು ಅಂತ ದೂರದ ಬೆಳಗಾವಿಯಲ್ಲಿ ಅಧಿವೇಶನ ಮಾಡಿದ್ರೆ ಅಲ್ಲೂ ಇದೇ ಕೆಲ್ಸ ಮಾಡ್ತಾ ಇದಾರಲ್ಲಪ್ಪ! ಇನ್ನು ಮುಂದೆ ಧರ್ಮಸ್ಥಳದಲ್ಲಿ ಅಧಿವೇಶನ ಮಾಡಿದ್ರೆ ಹೇಗೆ...?’
ಎಲ್ಲಿ ಮಾಡಿದ್ರೂ ಅಷ್ಟೇಯ ಸ್ಸಾ. ರಾಜ್ಯ ಸರ್ಕಾರಾನೇ ಜನರಿಗೆ ಎಲ್ಲ ಮೊಬೈಲ್‌ನಲ್ಲೇ ಕೊಡಬೇಕು ಅಂತ ಮೊಬೈಲ್‌ ಒನ್‌ ಸೇವೆ ಶುರು ಮಾಡಿದೆ. ಶಾಸಕರೂ ತಮ್ಮದೇ ಲೆವೆಲ್‌ನಲ್ಲಿ ಮೊಬೈಲ್‌ ಸೇವೆ ಮಾಡ್ತಿದಾರೆ..

‘ಅದಿರ್ಲಿ, ಈ ಅಂಬರೀಷಿದ್ದು ಏನ್‌ ಸುದ್ದಿ? ಅವ್ರಿಗೂ ವಾರ್ನಿಂಗ್‌ ಕೊಟ್ಟರಂತಲ್ಲ?’
ಅವ್ರೂ ಸದನದಲ್ಲಿ ಕುಳಿತು ಎಸ್ಸೆಸ್‌್ ಮಲ್ಲಿಕ್‌ ಜತೆ ಮೊಬೈಲ್‌ ನೋಡಿದ್ರಂತೆ. ಅದಕ್ಕೇ ಸ್ಪೀಕರ್‌ ಅವ್ರಿಗೂ
ವಾರ್ನಿಂಗ್‌ ಕೊಟ್ಟವ್ರೆ...

‘ಮತ್ತೆ ಪೇಪರ್‌ನಲ್ಲಿ ಅಂಬರೀಷು ಬಾರ್‌ನಲ್ಲಿ ಡ್ಯಾನ್ಸ್‌ ಮಾಡಿದ್ರು ಅಂತ ಬೇರೆ ಸುದ್ದಿ ಬಂದಿದೆ..?’
ಯಾವುದೋ ಬಾರ್‌ನಲ್ಲಿ ಅಂಬ್ರೀಷು ತಮ್ಮ ಬೆಂಬಲಿಗರ ಜತೆ ಸೇರಿ ಗುಂಡ್ಹಾಕ್ಕೊಂಡು ಕುಣಿದರಂತೆ ಸ್ಸಾ. ಅದನ್ನು ಮೊಬೈಲ್‌ನಲ್ಲಿ ವೀಡಿಯೊ ಮಾಡಿ ಮಂಡ್ಯದ ಹೈಕ್ಳು ಹೈಕಮಾಂಡಿಗೆ ಕಳಿಸಿದ್ದಾರಂತೆ. ಅದ್ರ ಬಗ್ಗೆ ಪತ್ರಕರ್ತರು ಕೇಳಿದರೆ, ಅಂಬ್ರೀಷು,- ಅಯ್ಯೋ, ಅದೆಲ್ಲ ಹಳೇ ಕಥೆ ಬಿಡ್ರೀ. ಹೌದಪ್ಪ, ನಾನ್‌ ಸ್ಟೇಜಲ್ಲೂ ಕುಣಿದಿದ್ದೀನಿ, 350 ಮಡಿಕ್ಕೊಂಡಿದ್ದೀನಿ ಏನ್ಮಾಡೋಕಾಗುತ್ತೆ..- ಅಂದ್ರಂತೆ!

‘ಅಲ್ಲಯ್ಯಾ ಯಂಕ್ಟೇಸ, ಹಿಂದೆ ಇವ್ರಿಗೆ ಸಖತ್‌ ಹುಷಾರಿಲ್ಲ, ಸೀರಿಯಸ್ಸು ಅಂತ ಸಿಂಗಾಪುರದ ಎಲಿಜಬೆತ್‌ ಆಸ್ಪತ್ರೆಗೆ ಕರ್ಕೊಂಡೋಗಿ, ಚಿಕಿತ್ಸೆ ಕೊಡಿಸಿದಾಗ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ 1.16 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಇವ್ರು ಈಗ ಇನ್ನೂ 350 ಮಡಿಕ್ಕೊಂಡಿದ್ದೀನಿ ಅಂತೆಲ್ಲ ಹೇಳಿದ್ರೆ, ರಾಜ್ಯದ ಬೊಕ್ಕಸಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಎಷ್ಟು ಖರ್ಚು ಬರಬಹುದೂಂತ ಗಾಬರಿ ಆಗ್ತಿದೆ ಕಣಯ್ಯ...’

ಸ್ಸಾ.. ಅವ್ರು ಅಂಗೇಯ. ನಮ್‌ ಅಂಬಿ ಮಾತು ಗುಂಡು ಹೊಡೆದಂಗೇ. ‘ಚಕ್ರವ್ಯೂಹ’ ಸಿನಿಮಾದಲ್ಲಿ ಅಸೆಂಬ್ಲೀಗೆ ನುಗ್ಗಿ ಡಿಶುಂ ಡಿಶುಂ ಅಂತ ಗುಂಡು ಹಾರಿಸಿ ಅವ್ರು ಎಷ್ಟೊಂದು ಮಂತ್ರಿಗಳನ್ನು ಕೊಂದ್ಹಾಕಿದ್ರು ಗೊತ್ತಾ?

‘ಅದು ಸಿನಿಮಾ ಕಣಯ್ಯ. ಇಲ್ಲಿ ಬೆಳಗಾವಿ ಅಸೆಂಬ್ಲಿ ಮೊಗಸಾಲೆಯಲ್ಲಿ ಹಿಂಗೆಲ್ಲ ಬೇಜವಾಬ್ದಾರಿಯಿಂದ ಮಾತನಾಡಿ ಸರ್ಕಾರಕ್ಕೇ ಗುಂಡು ಹೊಡೀತಿದ್ದಾರಲ್ಲಯ್ಯ!’

ಅಯ್ಯೋ ಬಿಡಿ ಸ್ಸಾ..! ಅಂಬ್ರೀಸು ಮಾತುಗಳನ್ನು ಯಾರೂ ಸೀರಿಯಸ್ಸಾಗಿ ತಗೊಳ್ಳೋದಿಲ್ಲ. ಅವರು ವಸತಿ ಸಚಿವರಾದಾಗ ಒಂದು ವರ್ಷದಲ್ಲಿ ಬಡವರಿಗೆ ಐದು ಲಕ್ಷ ಮನೆ ಕಟ್ಟಿಸಿಕೊಡ್ತೀನಿ ಅಂದ್ರು. ಯಾರಾದ್ರೂ ಅಧಿಕಾರಿಗಳು ಅದನ್ನು ಈವರೆಗೆ ಸೀರಿಯಸ್ಸಾಗಿ ತಗೊಂಡಿದ್ದಾರಾ? ಬೆಂಗಳೂರಿನಲ್ಲಿ ಅಷ್ಟು ದುಡ್ಡು ಖರ್ಚು ಮಾಡಿ ಇಂಟರ್‌ನ್ಯಾಷನಲ್‌ ಚಲನಚಿತ್ರೋತ್ಸವ ಮಾಡಿದ್ರು. ಸಿನಿಮಾ ಕೋಟಾದಲ್ಲಿ ಸಚಿವರಾದ ಅಂಬ್ರೀಷು ಒಂದು ಗಳಿಗೇನಾದ್ರೂ ಆ ಕಡೆ ತಲೆ ಹಾಕಿದ್ರಾ...? ನಮ್‌ ಅಂಬಿಯಣ್ಣ ಎಲ್ಲದಕ್ಕೂ ಡೋಂಟ್‌ ಕೇರ್‌ ಸ್ಸಾ..!

‘ಅದ್ಸರಿ, ಬೆಂಗಳೂರಿನಲ್ಲಿ ನಡೆದ ಚಿತ್ರೋತ್ಸವದಲ್ಲಿ ನಮ್ಮ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಿಂಗ್‌ ಬಾಬು ಅವರು ಕನ್ನಡ ಚಿತ್ರೋದ್ಯಮ ಐಸಿಯು ನಲ್ಲಿದೆ, ತುಂಬಾ ಸೀರಿಯಸ್ಸು ಅಂದ್ರಂತೆ..’

ಅದಕ್ಕೇ ಮಿನಿಷ್ಟ್ರು ಬೇಗ್‌ ಸಾಹೇಬ್ರು ಅರ್ಜೆಂಟಾಗಿ ಚಿತ್ರರಂಗಕ್ಕೆ ಕೇಳಿದ್ದೆಲ್ಲ ಕೊಡ್ತಿದಾರೆ. ಇವ್ರು 50 ಸಿನಿಮಾಕ್ಕೆ ಸಬ್ಸಿಡಿ ಕೊಡಿ ಅಂತ ಕೇಳಿದ್ರು. ಬೇಗ್‌ ಸಾಹೇಬ್ರು ನೂರು ಸಿನಿಮಾಕ್ಕೆ ಸಬ್ಸಿಡಿ ತಗೊಳ್ಳಿ ಅಂತ ಕೊಟ್ರು. ಇವ್ರು ಚಿತ್ರೋತ್ಸವಕ್ಕೆ ಒಂದು ಕಾಂಪ್ಲೆಕ್ಸ್‌ ಬೇಕು ಅಂದ್ರು, ಅವ್ರು ಏರ್‌ಪೋರ್ಟ್‌ ಪಕ್ಕದಲ್ಲೇ ಎರಡು ಕಾಂಪ್ಲೆಕ್ಸ್‌ ಕಟ್ಟಿಸ್ತೀವಿ ಅಂದಿದಾರೆ. ಇವರು ಚಲನಚಿತ್ರಕ್ಕೆ ಒಂದು ನೀತಿ ಬೇಕು ಅಂದ್ರು- ಅವ್ರು ಒಂದೇಕೆ ಎರಡು ನೀತಿ ತಗೊಳ್ಳಿ ಅಂದಿದ್ದಾರೆ!
‘ಒಂದು ನೀತಿಯೇನೋ ಸರಿ, ಆದರೆ ಎರಡು ನೀತಿ ಯಾಕಪ್ಪಾ?’
ಒಂದು ಚಿತ್ರರಂಗಕ್ಕೆ, ಇನ್ನೊಂದು ಅಂಬ್ರೀಸುಗೆ!  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT