ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ವರ್ಷದೊಳಗಿನ ಮಕ್ಕಳತ್ತ ನಿರ್ಲಕ್ಷ

ಸಿಬಿಪಿಎಸ್‌ ವರದಿ: ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಶಾಂತಾ ಕಳವಳ
Last Updated 4 ಡಿಸೆಂಬರ್ 2014, 19:40 IST
ಅಕ್ಷರ ಗಾತ್ರ

ಬೆಂಗಳೂರು: ‘ಮಕ್ಕಳ ಭವಿಷ್ಯ ರೂಪಿ­ಸಲು ಕ್ರಮಕೈಗೊಳ್ಳಬೇಕಾದ ಸರ್ಕಾರ ಆರು ವರ್ಷದೊಳಗಿನ ಮಕ್ಕಳನ್ನು ನಿರ್ಲಕ್ಷಿಸುತ್ತಿದೆ. ಮಕ್ಕಳ ಬೆಳವಣಿಗೆಗೆ ಹೆಚ್ಚು ಹಣ ಮೀಸಲಿಡುತ್ತಿಲ್ಲ. ಇದು ನಾಚಿಕೆಗೇಡಿನ ವಿಷಯ’ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರ­ಕ್ಷಣಾ ಆಯೋಗದ (ಎನ್‌ಸಿಪಿಸಿಆರ್‌) ಸಂಸ್ಥಾಪಕ ಅಧ್ಯಕ್ಷೆ ಶಾಂತಾ ಸಿನ್ಹಾ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಸೆಂಟರ್‌ ಫಾರ್‌ ಬಜೆಟ್‌ ಅಂಡ್‌ ಪಾಲಿಸಿ ಸ್ಟಡೀಸ್‌ (ಸಿಬಿ­ಪಿಎಸ್‌) ಗುರುವಾರ ಆಯೋಜಿಸಿದ್ದ ‘ಸಾರ್ವ­ಜನಿಕ ನೀತಿ ಮತ್ತು ವೆಚ್ಚ: ಇತ್ತೀಚಿನ ಅಧ್ಯಯನಗಳು’ ಕುರಿತ ವಾರ್ಷಿಕ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಈ ವಯೋವರ್ಗದ ಮಕ್ಕಳು ಅಪೌ­ಷ್ಟಿಕತೆಯಿಂದ ನರಳುತ್ತಿರುವ ವಿಷಯ ಮಾಧ್ಯಮಗಳಲ್ಲಿ ವರದಿಯಾ­ಗುತ್ತಿದೆ. ಈ ಮಕ್ಕಳಿಗೆ ಆರೋಗ್ಯ, ಶಿಕ್ಷಣದ ವಿಷಯಗಳಲ್ಲಿ ಭದ್ರ ಬುನಾದಿ ಲಭಿಸಿದರೆ ಸುಗಮ ಮಾರ್ಗ ಕಲ್ಪಿಸ­ಬಹುದು ಎಂದು ಹೇಳಿದರು.

ಯುನಿಸೆಫ್‌ ಸಹಯೋಗದೊಂದಿಗೆ ಸಿಬಿಪಿಎಸ್‌ ಹೊರತಂದಿರುವ ಅಧ್ಯ­ಯನ ವರದಿ ಉಲ್ಲೇಖಿಸಿ ಮಾತನಾ­ಡಿದ ಅವರು, ‘ವರದಿ ಪ್ರಕಾರ 6 ವರ್ಷ­ದೊಳಗಿನ ಮಕ್ಕಳ ಮೇಲೆ ಸರ್ಕಾರ ಮಾಡುತ್ತಿರುವ ವೆಚ್ಚದ ಪ್ರಮಾಣ ಶೇ 9. ಇದನ್ನು ಗಮ­ನಿಸಿದರೆ ನಿರ್ಲಕ್ಷಿತ ವಯೋವರ್ಗವಿದು’ ಎಂದರು.

‘ಸರ್ಕಾರದ ನೀತಿ ನಿರೂಪಣೆ, ಅನುಷ್ಠಾನ, ನಿಧಿ ಬಳಕೆ ಕಾರ್ಯಕ್ರಮ­ಗಳು ಕೇಂದ್ರೀಕೃತವಾಗಿವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗ್ರಾಮ ಪಂಚಾಯಿತಿ ಮೇಲೆ ನಂಬಿಕೆ ಇಟ್ಟು ಹೆಚ್ಚು ಅಧಿಕಾರ ಕೊಡಬೇಕು. ಆಗ ಪ್ರತಿ ಮಗುವಿನತ್ತ ಗಮನ ಹರಿಸಿ ಯೋಜನೆಗಳನ್ನು ಅನುಷ್ಠಾ­ನಗೊಳಿಸಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

ನಂತರ ನಡೆದ ಸಂವಾದದಲ್ಲಿ ‘ದಿ ಕನ್ಸರ್ನ್ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌’ ನಿರ್ದೇಶಕಿ ನಂದನಾ ರೆಡ್ಡಿ, ‘ನನ್ನ ಪ್ರಕಾರ ಮಕ್ಕಳಿಗೆ ಏನು ಬೇಕು ಎಂಬು­ದನ್ನು ಗ್ರಾಮ ಪಂಚಾಯಿತಿಗಳೇ  ನಿರ್ಧ­ರಿ­­ಸುವಂತಾ­ಗಬೇಕು. ಈ ಪ್ರಕ್ರಿಯೆ­ಯಲ್ಲಿ ಮಕ್ಕಳೂ ಪಾಲ್ಗೊಳ್ಳಬೇಕು ಎಂದರು.
ಅಂಬೇಡ್ಕರ್‌ ವಿ.ವಿ ಕುಲಪತಿ ಶ್ಯಾಮ್‌ ಮೆನನ್‌, ‘ಮಕ್ಕಳ ಮೇಲೆ ಮಾಡ­­ಲಾಗುತ್ತಿರುವ ಖರ್ಚಿನ ಹೆಚ್ಚು ಭಾಗ ಶಿಕ್ಷಕರ ವೇತನ, ಬಿಸಿಯೂಟ ಯೋಜನೆಗೆ ಹೋಗುತ್ತಿದೆ’ ಎಂದರು.


‘ಮೊದಲು ಆದ್ಯತೆ ಪಟ್ಟಿಮಾಡಿ...’
‘ಯಾವ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದರ ಬಗ್ಗೆ ಸಮಾಜದಲ್ಲೇ ಸ್ಪಷ್ಟತೆ ಇಲ್ಲ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ಕಲ್ಪಿಸಬೇಕೇ? ಶಿಕ್ಷಣಕ್ಕೆ ಆದ್ಯತೆ ನೀಡಬೇಕೇ? ಉದ್ಯೋಗ ಸೃಷ್ಟಿಸಲು ಮುಂದಾಗಬೇಕೇ? ಕೃಷಿ ವಲಯಕ್ಕೆ ಆದ್ಯತೆ ನೀಡಬೇಕೇ ನೀವೇ ಹೇಳಿ’ ಎಂದಿದ್ದು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT