ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯದಲ್ಲಿ ಚೇತರಿಕೆ: ಕಮಿಷನರ್‌ಗೆ ವರದಿ

ಮಹಿಳಾ ಸಬ್‌ ಇನ್ಸ್‌ಪೆಕ್ಟರ್ ರೂಪಾ ತಂಬದ ಆತ್ಮಹತ್ಯೆ ಯತ್ನ ಪ್ರಕರಣ
Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಎಸ್‌ಐ ರೂಪಾ ತಂಬದ (34) ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಮತ್ತೊಂದೆಡೆ, ಡಿಸಿಪಿ ಸಂದೀಪ್ ಪಾಟೀಲ್ ಅವರು ಪ್ರಕರಣ ಸಂಬಂಧ ನಗರ ಪೊಲೀಸ್ ಕಮಿಷನರ್‌ ಅವರಿಗೆ ನಾಲ್ಕು ಪುಟಗಳ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.

‘ರೂಪಾ ಅವರ ರಕ್ತದೊತ್ತಡ ಹಾಗೂ ದೇಹದಲ್ಲಿನ ಸಕ್ಕರೆ ಪ್ರಮಾಣ ಸಹಜ ಸ್ಥಿತಿಯಲ್ಲಿದೆ. ಆದರೆ, ಹೆಚ್ಚು ಮಾತ್ರೆಗಳನ್ನು ನುಂಗಿರುವ ಕಾರಣ ಕರುಳಿಗೆ ಹಾನಿಯಾಗಬಹುದು. ಹೀಗಾಗಿ 36 ಗಂಟೆ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುವುದು’ ಎಂದು ಸುಗುಣ ಆಸ್ಪತ್ರೆ ಮುಖ್ಯಸ್ಥ ಡಾ.ಶಶಿಕುಮಾರ್ ತಿಳಿಸಿದ್ದಾರೆ.

ವರದಿಯ ಸಾರಾಂಶ:  ‘ಜೂನ್ 16ರಂದು ವಿಜಯನಗರ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಯನ್ನು ಬಂಧಿಸಿ, ಆತನಿಂದ ಮೊಬೈಲ್ ಜಪ್ತಿ ಮಾಡಲಾಗಿತ್ತು. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಆರೋಪಿ, ತನ್ನ ಮೊಬೈಲ್ ಕೊಡುವಂತೆ ರೂಪಾ ಅವರನ್ನು ಕೇಳಿದ್ದ’ ಎಂದು ಡಿಸಿಪಿ ಸಲ್ಲಿಸಿದ ವರದಿಯಲ್ಲಿದೆ.

‘ಜಪ್ತಿ ಮಾಡಿದ ಮೊಬೈಲ್ ತನ್ನ ಬಳಿ ಇಲ್ಲವೆಂದು ಹೇಳಿದ್ದ ರೂಪಾ, ಇನ್‌ಸ್ಪೆಕ್ಟರ್ ಸಂಜೀವ್‌ಗೌಡ ಅಥವಾ ಎಸಿಪಿ ಎಸ್‌.ಕೆ.ಉಮೇಶ್ ಬಳಿ ಇರ ಬಹುದೆಂದು ಹೇಳಿದ್ದರು. ಹೀಗಾಗಿ  ಆರೋಪಿ, ಸಂಜೀವ್‌ಗೌಡ ಅವರ ಬಳಿ ಹೋಗಿದ್ದ’.

‘ಆರೋಪಿಯನ್ನು ತನ್ನ ಬಳಿ ಕಳುಹಿಸಿದ್ದಕ್ಕೆ ಸಿಟ್ಟಿಗೆದ್ದ ಇನ್‌ಸ್ಪೆಕ್ಟರ್, ರೂಪಾ ಅವರನ್ನು ಕರೆಸಿ ಮೊಬೈಲ್ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೆ, ಇನ್‌ಸ್ಪೆಕ್ಟರ್ ಬಳಿ ಇರಬಹುದೆಂದು ಹೇಳಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ರೂಪಾ, ‘ಮೊಬೈಲ್ ನೀವು ಇಟ್ಟುಕೊಂಡಿದ್ದೀರಿ ಎಂದು ಹೇಳಲಿಲ್ಲ. ಎಸಿಪಿ ಅವರಿಗೆ ಕೊಟ್ಟಿರುವುದಾಗಿ ಹೇಳಿದೆ’ ಎಂದಿದ್ದಾರೆ.

‘ಈ ವಿಚಾರವಾಗಿ ಸೋಮವಾರ ಸಂಜೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಹಿರಿಯ ಅಧಿಕಾರಿಗಳಿಗೆ ದೂರು ಕೊಡುವುದಾಗಿ ರಾತ್ರಿ 8.45ರ ಸುಮಾರಿಗೆ ಇನ್‌ಸ್ಪೆಕ್ಟರ್  ಠಾಣೆಯ ಡೈರಿಯಲ್ಲಿ ಬರೆದಿದ್ದಾರೆ. ಮುಕ್ಕಾಲು ಗಂಟೆ ನಂತರ ಅದನ್ನು ನೋಡಿದ ರೂಪಾ, ತಾನು ಸಹ ಡಿಸಿಪಿ ಹಾಗೂ ಕಮಿಷನರ್‌ಗೆ ವಿಷಯ ತಿಳಿಸುವುದಾಗಿ ಅದರಲ್ಲಿ ಬರೆದಿದ್ದಾರೆ’ ಎಂದು ವರದಿಯಲ್ಲಿದೆ.

ಪ್ರಕರಣ ದಾಖಲು: ಮಹಿಳಾ ಎಸ್‌ಐ ಆತ್ಮಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗವು ಬುಧವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆ ಕುರಿತು ವರದಿ ಕೊಡುವಂತೆ ಡಿಸಿಪಿ ಸಂದೀಪ್ ಪಾಟೀಲ್ ಅವರನ್ನು ಕೋರಿದೆ.

‘ಆಸ್ಪತ್ರೆಗೆ ಭೇಟಿ ನೀಡಿ ರೂಪಾ ಅವರ ಯೋಗಕ್ಷೇಮ ವಿಚಾರಿಸಿದ್ದೇನೆ. ಅವರು ನನ್ನನ್ನು ಗುರುತಿಸಿದರಾದರೂ, ಹೇಳಿಕೆ ನೀಡುವ ಸ್ಥಿತಿಯಲ್ಲಿರಲಿಲ್ಲ. ಗುರುವಾರ ಸಂಜೆ ಅವರ ಹೇಳಿಕೆ ಪಡೆಯಲಾಗುವುದು’ ಎಂದು ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದರು.

‘ಕ್ರಮ ತೆಗೆದುಕೊಳ್ಳಬೇಕು’
‘ವಕೀಲಿ ವೃತ್ತಿ ಮಾಡುವಂತೆ ಹೇಳಿದರೂ, ಮಗಳು ಇಷ್ಟ ಪಟ್ಟು ಪೊಲೀಸ್ ಹುದ್ದೆಯನ್ನು ಆಯ್ದುಕೊಂಡಿದ್ದಾಳೆ. ಆಕೆ ಹಲವು ಒತ್ತಡಗಳ ನಡುವೆ ಕೆಲಸ ಮಾಡುತ್ತಿದ್ದಾಳೆ. ಮಗಳ ಈ ಸ್ಥಿತಿಗೆ ಕಾರಣರಾದ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ರೂಪಾ ತಂದೆ ಕರಿಬಸಪ್ಪ ಹಾಗೂ ತಾಯಿ ಶಾಂತಮ್ಮ ಆಗ್ರಹಿಸಿದರು.

ಡೈರಿಯಲ್ಲಿ ಆರೋಪ–ಪ್ರತ್ಯಾರೋಪ
ಸಂಜೀವ್‌ಗೌಡ: ‘ಎಸ್‌ಐ ರೂಪಾ ಅವರು ಕರ್ತವ್ಯ ಲೋಪ ಎಸಗಿದ್ದಾರೆ. ಠಾಣೆಯಲ್ಲಿದ್ದ ಮೊಬೈಲ್ ನಾಪತ್ತೆಯಾದ ಬಗ್ಗೆ ವಿಚಾರಿಸಲು ನಾಲ್ಕೈದು ಬಾರಿ ಕರೆದರೂ ಅವರು ಬರಲಿಲ್ಲ. ನಂತರ ನಾನೇ ಅವರ ಕೊಠಡಿಗೆ ಹೋಗಿ ಕರೆಯಬೇಕಾಯಿತು. ಮೊಬೈಲ್ ಬಗ್ಗೆ ಕೇಳಿದ್ದಕ್ಕೆ ಎದುರು ಮಾತನಾಡಿ ಅಸಮರ್ಪಕ ಉತ್ತರ ನೀಡಿರುತ್ತಾರೆ. ಅವರು ಠಾಣಾಧಿಕಾರಿಯ ಆದೇಶ ಪಾಲನೆ ಮಾಡಿಲ್ಲ’.

ರೂಪಾ: ‘ನನ್ನ ತಪ್ಪಿಲ್ಲದಿದ್ದರೂ ವಿನಾ ಕಾರಣ ತೊಂದರೆ ಕೊಟ್ಟಿದ್ದಾರೆ. ದೂರುದಾರರು, ಆರೋಪಿಗಳು ಹಾಗೂ ಸಿಬ್ಬಂದಿಯ ಎದುರು ಏರುಧ್ವನಿಯಲ್ಲಿ ಬೈಯ್ದಿದ್ದಾರೆ. ಇದರಿಂದ ಮನಸ್ಸಿಗೆ ನೋವಾಗಿದೆ. ಈ ಬಗ್ಗೆ ಡಿಸಿಪಿ ಅಜಯ್ ಹಿಲೋರಿ ಹಾಗೂ ಕಮಿಷನರ್ ಎನ್‌.ಎಸ್.ಮೇಘರಿಕ್ ಅವರ ಬಳಿ ಅಳಲು ತೋಡಿಕೊಳ್ಳುತ್ತೇನೆ’.

ಸಂಜೀವ್‌ಗೌಡ: ‘ನಾನು ಕಾನೂನಿನ ಪ್ರಕಾರವೇ ನಡೆದುಕೊಂಡಿದ್ದೇನೆ. ಯಾರಿಗೂ ಮಾನಸಿಕವಾಗಿ ಕಿರುಕುಳ ನೀಡಿಲ್ಲ’.
ರೂಪಾ: ‘ನಾನು ದೂರು ನೀಡಲು ಕಮಿಷನರ್ ಕಚೇರಿಗೆ ಹೋಗುತ್ತಿದ್ದೇನೆ’.

ಹೀಗೆ, ಇಬ್ಬರೂ ಪೊಲೀಸ್ ಡೈರಿಯಲ್ಲಿ ಪರಸ್ಪರ ಕಿತ್ತಾಡಿದ್ದಾರೆ. ನಂತರ ಮನೆಗೆ ತೆರಳಿದ ರೂಪಾ, 15 ‘ಡೋಲೊ 650’ ಹಾಗೂ 10 ‘ಚೆಸ್ಟನ್ ಕೋಲ್ಡ್’ ಮಾತ್ರೆಗಳನ್ನು ನುಂಗಿದ್ದಾರೆ ಎಂದು ವರದಿಯಲ್ಲಿದೆ.

ಮೊಬೈಲ್ ಎಲ್ಲಿ?
‘ವಿವಾದಕ್ಕೆ ಕಾರಣವಾಗಿರುವ ಮೊಬೈಲ್ ಯಾರ ಬಳಿ ಇದೆ ಎಂಬುದು ಇನ್ನೂ ಗೊತ್ತಾಗಿಲ್ಲ. ರೂಪಾ ಅವರು ಚೇತರಿಸಿಕೊಂಡ ಬಳಿಕ ಅದರ ಬಗ್ಗೆ ವಿಚಾರಿಸಲಾಗುವುದು’ ಎಂದು ನಗರ ಕಮಿಷನರ್  ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಸಿಪಿ ಉಮೇಶ್ ಹಾಗೂ ಇನ್‌ಸ್ಪೆಕ್ಟರ್ ಸಂಜೀವ್‌ಗೌಡ ಅವರನ್ನು ವಿಚಾರಿಸಿದರೆ ತಮಗೆ ಮೊಬೈಲ್ ಬಗ್ಗೆ ಗೊತ್ತಿಲ್ಲವೆಂದು ಹೇಳಿದ್ದಾರೆ. ಸಿಬ್ಬಂದಿ ಅದನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT