ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯದ ಕಾಳಜಿ ಮುಖ್ಯ

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸಿಗರೇಟುಗಳನ್ನು ಬಿಡಿಯಾಗಿ ಮಾರಾಟ ಮಾಡುವುದಕ್ಕೆ ನಿಷೇಧ ಹಾಗೂ ತಂಬಾಕು ಉತ್ಪನ್ನಗಳ ಖರೀದಿಗೆ ವಯಸ್ಸಿನ ಕನಿಷ್ಠ ಮಿತಿ ಏರಿಸುವ ತಜ್ಞರ ವರದಿಯನ್ನು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಅಂಗೀಕರಿಸಿದೆ. ರಾಜ್ಯಸಭೆಯಲ್ಲಿ ಈ ವಿಷಯ ತಿಳಿಸಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಸಂಸತ್ತಿನ ಒಪ್ಪಿಗೆ ಪಡೆದ ನಂತರ ಇದು ಕಾನೂನಾಗಿ ಜಾರಿಯಾಗಲಿದೆ ಎಂದಿದ್ದಾರೆ. ತಂಬಾಕು ಬಳಕೆಯ ನಿಯಂತ್ರಣಕ್ಕೆ ಸಂಬಂಧ­ಪಟ್ಟಂತೆ, ವಿಶ್ವ ಆರೋಗ್ಯ ಸಂಸ್ಥೆಯ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಆರೋಗ್ಯ ಸಚಿವಾಲಯವು ತಜ್ಞರ ವರದಿಯನ್ನು ಅಂಗೀಕರಿಸಿರುವುದು ಇದಕ್ಕೆ ಅನುಗುಣವಾಗಿಯೇ ಇದೆ.

ದೇಶದಲ್ಲಿ ಮಾರಾಟವಾಗುವ ಸಿಗ­ರೇಟುಗ  ಪೈಕಿ ಶೇಕಡ 70ರಷ್ಟು ಬಿಡಿ ಬಿಡಿಯಾಗಿಯೇ ಮಾರಾಟವಾಗು­ತ್ತವೆ ಎಂಬುದು ಒಂದು ಅಂದಾಜು. ಹೀಗಾಗಿ ಆರೋಗ್ಯ ಸಚಿವಾಲಯದ ಈ ಶಿಫಾರಸು ಮುಖ್ಯವಾದದ್ದು. ಇದರಿಂದ ಸಿಗರೇಟು ಮಾರಾಟ ಪ್ರಮಾಣ­ದಲ್ಲಿ ಶೇಕಡ 10ರಿಂದ 20ರಷ್ಟು ಇಳಿಕೆ ಸಾಧ್ಯವಾಗಬಹುದು. ಸಿಗರೇಟು ಹಾಗೂ ತಂಬಾಕು ಉತ್ಪನ್ನಗಳ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಸದ್ಯಕ್ಕೆ ₨ 25 ಸಾವಿರ ಕೋಟಿ ಬರುತ್ತಿದೆ. ಪ್ರಸಕ್ತ ಶಿಫಾರಸು ಜಾರಿಯಾದಲ್ಲಿ ಬೊಕ್ಕಸಕ್ಕೆ ಬರುತ್ತಿರುವ ಈ  ಭಾರಿ ಮೊತ್ತದ ತೆರಿಗೆ ಹಣಕ್ಕೆ ಕುತ್ತು ಬರಲಿದೆ.

ತಂಬಾಕಿನಿಂದ ಬರುವ ಆದಾಯ ಹಾಗೂ ಸಾರ್ವಜನಿಕ ಆರೋಗ್ಯದ ನಡುವೆ ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಸರ್ಕಾರದ ಎದುರಿಗಿದೆ. ಅನಾರೋಗ್ಯದಿಂದ ಬಳಲುವ ವಯಸ್ಕ ನಾಗರಿಕರು ಸಮಾಜಕ್ಕೆ ಹೊರೆ­ಯಾ­ಗಿ­ರುತ್ತಾರೆ. ನಿಜ ಹೇಳಬೇಕೆಂದರೆ, ತಂಬಾಕಿನಿಂದ ಬರುವ ಕಾಯಿಲೆಗಳಿಂದ ಭಾರತಕ್ಕೆ ಆದ ನಷ್ಟ ₨ 1.04 ಲಕ್ಷ ಕೋಟಿ. ಪಬ್ಲಿಕ್‌ ಹೆಲ್ತ್‌ ಫೌಂಡೇಷನ್‌ ಆಫ್‌ ಇಂಡಿಯಾ ನೀಡಿರುವ ಈ ಅಂಕಿಸಂಖ್ಯೆ ಕೇವಲ 2011ಕ್ಕೆ ಮಾತ್ರ ಸೀಮಿತವಾದದ್ದು ಎಂಬುದನ್ನು ನೋಡಿದಾಗ, ಭಾರತದಲ್ಲಿ ಸಿಗರೇಟ್‌ ಚಟ ಆರೋಗ್ಯ ಕ್ಷೇತ್ರಕ್ಕೆ ಎಷ್ಟು ದೊಡ್ಡ ಹೊರೆಯಾಗಿದೆ ಎನ್ನುವುದರ ಅಂದಾ­ಜಾಗುತ್ತದೆ.

ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಸಾರ್ವಜನಿಕ ಸ್ಥಳ­ಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸುವ ಕಾನೂನು ಜಾರಿಗೆ ತಂದಿತ್ತು. ಆದರೆ ಈ ಕಾನೂನನ್ನು ಅನುಷ್ಠಾನಗೊಳಿಸುವಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತದೆ. ಹೀಗಾಗಿ, ಸಾರ್ವಜನಿಕ ಆರೋಗ್ಯವನ್ನು ಉತ್ತಮಪಡಿಸುವ, ಆ ಮೂಲಕ ದೇಶದ ನಿವ್ವಳ ಉತ್ಪನ್ನವನ್ನು ಹೆಚ್ಚಿಸಬಲ್ಲ ಕಾನೂನುಗಳ ಅನುಷ್ಠಾನದಲ್ಲಿ ಬದ್ಧತೆ ಅಗತ್ಯ. ಇದರಿಂದ, ದೇಶದ ಮೇಲಿನ ಅನಗತ್ಯ ಆರ್ಥಿಕ ಹೊರೆ ತಪ್ಪುವುದಲ್ಲದೆ, ಆರೋಗ್ಯವಂತ ಮಾನವ ಸಂಪನ್ಮೂಲದ ವೃದ್ಧಿಗೂ ಸಹಾಯಕವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT