ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯವರ್ಧಕ ಕೊತ್ತಂಬರಿ

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೊತ್ತಂಬರಿ ಕೇವಲ ಅಡುಗೆಗೆ ರುಚಿಗೆ ಮತ್ತು ಅಲಂಕಾರಕ್ಕಾಗಿ ಮಾತ್ರ ಹಾಕುವುದಿಲ್ಲ. ಇದು ಆರೋಗ್ಯಕ್ಕೂ ಸಹಕಾರಿ. ಆದರೆ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆಯದಿದ್ದರೆ ಮಾತ್ರ ಅನಾರೋಗ್ಯಕ್ಕೂ ದಾರಿಯಾಗುತ್ತದೆ. ಅಡುಗೆಗೆ ಬಳಸುವ ಮುನ್ನ, ಉಗುರು ಬಿಸಿ ನೀರಿಗೆ ಉಪ್ಪು ಬೆರೆಸಿ, ಅದರಲ್ಲಿ ಕೊತ್ತಂಬರಿಯನ್ನು ತೊಳೆಯಬೇಕು. ನಂತರವೇ ಅಡುಗೆಗೆ ಬಳಸಬೇಕು. 

ಆಯುರ್ವೇದದಲ್ಲಿ ಕೊತ್ತಂಬರಿಯ ಪ್ರಯೋಜನ ಹೀಗಿದೆ:
*ಹುಳು ಕಚ್ಚಿ ತುರಿಕೆಯಾಗಿದ್ದರೆ ಅಥವಾ ಅದರಿಂದ ಕಜ್ಜಿ ಆಗಿದ್ದರೆ ಕೊತ್ತಂಬರಿ ಸೊಪ್ಪಿನ ರಸಕ್ಕೆ ಜೇನು ತುಪ್ಪ ಸೇರಿಸಿ ಹಚ್ಚಿ. 15 -20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

*ಆಗ್ಗಾಗ್ಗೆ ಮೂಗಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಸುಮಾರು 20-25 ಗ್ರಾಂನಷ್ಟು ತಾಜಾ ಕೊತ್ತಂಬರಿ ಸೊಪ್ಪನ್ನು ಸ್ವಲ್ಪ ಕರ್ಪೂರದ ಜೊತೆಗೆ ಬೆರೆಸಿ ಜಜ್ಜಿಕೊಳ್ಳಿ. ಅದರ ರಸವನ್ನು ಮೂಗಿನ ಹೊಳ್ಳೆಗಳಿಗೆ ಹಿಂಡಿದರೆ ಸ್ರಾವವು ನಿಲ್ಲುತ್ತದೆ.

*ಈ ಮಿಶ್ರಣವನ್ನು  ಹಣೆಗೆ ಹಚ್ಚಿದರೂ ರಕ್ತಸ್ರಾವ ನಿಲ್ಲುತ್ತದೆ. ಜೊತೆಗೆ ತಾಜಾ ಕೊತ್ತಂಬರಿ ವಾಸನೆಯನ್ನು ನೋಡಿದರೂ ಈ ಸಮಸ್ಯೆ ಹೋಗಲಾಡಿಸಬಹುದು.

*ಬಾಯಿ ಹುಣ್ಣು: ತಾಜಾ ಕೊತ್ತಂಬರಿ ಸೊಪ್ಪಿನ ಎಣ್ಣೆಯಲ್ಲಿ ಸಿಟ್ರೊನೆಲೊಲ್ ಗುಣ ಇದ್ದು, ಇದು ನಂಜುನಿರೋಧಕವಾಗಿದೆ. ಇದರ ಜೊತೆಗೆ ಆ್ಯಂಟಿ ಮೈಕ್ರೊಬಿಯಲ್ ಮತ್ತು ಬಾಯಿಯ ಹುಣ್ಣಿನಿಂದಾಗುವ ನೋವು ಮತ್ತು ಹುಣ್ಣು ಎರಡನ್ನೂ ನಿವಾರಿಸುತ್ತದೆ. ಬಾಯಿಯ ದುರ್ವಾಸನೆಯನ್ನು ತೊಲಗಿಸುತ್ತದೆ. ಚರ್ಮರೋಗಕ್ಕೂ ಇದು ರಾಮಬಾಣ.

*ಕಣ್ಣಿನ ಸಮಸ್ಯೆಗೆ: ಕಣ್ಣಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೂ ಇದು ದಿವ್ಯೌಷಧ. ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆ್ಯಂಟಿಯಾಕ್ಸಿಡೆಂಟ್‌ಗಳು ಮತ್ತು ರಂಜಕದಂತಹ ಖನಿಜಾಂಶ ಇವೆ. ಇದರಿಂದ ನಿಮ್ಮ ಕಣ್ಣಿನ ನೋವು ಮತ್ತು ತುರಿಕೆಗಳು ಹಾಗೂ ಕಣ್ಣೀರು ಬರುವ ಸಮಸ್ಯೆಗಳು ನಿವಾರಣೆಯಾಗುತ್ತವೆ.

*ಕೊಲೆಸ್ಟ್ರಾಲ್: ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಲಿನೊಲಿಕ್ ಆಮ್ಲ, ಸ್ಟಿಯರಿಕ್ ಆಮ್ಲ, ಪಲ್ಮಿಟಿಕ್ ಆಮ್ಲ ಮತ್ತು ಆಸ್ಕೊರ್ಬಿಕ್ ಆಮ್ಲ ( ವಿಟಮಿನ್ ಸಿ)ಗಳು ಸಮೃದ್ಧವಾಗಿರುತ್ತವೆ. ಇವು ರಕ್ತದಲ್ಲಿರುವ ಕೊಲೆಸ್ಟ್ರಾಲ್‌ ನಿಯಂತ್ರಿಸಲು ಸಹಕಾರಿ. ಅಷ್ಟೇ ಅಲ್ಲದೆ, ಹೃದಯದಲ್ಲಿರುವ ಅಭಿಧಮನಿ ಮತ್ತು ಅಪಧಮನಿಗಳ ನಾಳದಲ್ಲಿ ಅಡಗಿರುವ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತವೆ.

*ಗರ್ಭಿಣಿಯರಿಗೆ: ಗರ್ಭಿಣಿಯರಿಗೆ ಮೊದಲ ಕೆಲವು ತಿಂಗಳುಗಳಲ್ಲಿ ವಾಂತಿ ಸಮಸ್ಯೆ ಬಂದಾಗ ಒಂದು ಕಪ್ ಕೊತ್ತಂಬರಿ ಸೊಪ್ಪು, ಒಂದು ಕಪ್ ಸಕ್ಕರೆ ಹಾಗೂ ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇದು ಆರಿದ ನಂತರ ಸೇವಿಸಲು ನೀಡಬೇಕು.

*ಜೀರ್ಣ ಶಕ್ತಿ: ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಅಗತ್ಯವಾದ ಎಣ್ಣೆ ಅಂಶ ಮತ್ತು ಸಮೃದ್ಧ ಸುವಾಸನೆ ಇದೆ. ಇವು ಜಠರದಲ್ಲಿರುವ ಕಿಣ್ವಗಳನ್ನು ಮತ್ತು ಜೀರ್ಣಕಾರಿ ರಸಗಳನ್ನು ಉದ್ದೀಪನಗೊಳಿಸಿ ಜೀರ್ಣಕ್ರಿಯೆಯು ಸರಾಗವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT