ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಮೇಲ್ವಿಚಾರಕ ‘ಇ–ಟ್ಯಾಟೂ’

Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಜನಪದ ಕಲೆಯಾದ ಹಚ್ಚೆ ಹೊಯ್ಯುವುದು ಸಂಪ್ರದಾಯವಾ­ಗಿಯೂ ಕೆಲವೆಡೆ ಆಚರಣೆಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಅದೊಂದು ಫ್ಯಾಷನ್. ನಗರಗಳಲ್ಲಂತೂ ಯುವಜನತೆಗೆ ಹಚ್ಚೆ ಹುಚ್ಚು ಹಿಡಿದಿದೆ. ಎಲ್ಲಿ ಬೇಕೆಂದರಲ್ಲಿ ನಾನಾ ರೀತಿಯ ಹಚ್ಚೆ ಹಾಕಿಸಿಕೊಂಡು ಪ್ರದರ್ಶಿಸುತ್ತಿದ್ದಾರೆ. ಯುವತಿಯರಿಗಂತೂ ಹಚ್ಚೆ ಸಾಕಷ್ಟು ಅಚ್ಚುಮೆಚ್ಚು. ಈ ಕಾರಣಕ್ಕಾಗಿಯೇ ಇದೊಂದು ಪ್ರಭಾವಿ ಉದ್ಯಮವಾಗಿಯೂ ಬೆಳೆಯುತ್ತಿದೆ.

ಹಚ್ಚೆಯೆಡೆಗಿನ ಜನರ ಅತಿಯಾದ ಆಕರ್ಷಣೆ ಹೊಸ ಆವಿಷ್ಕಾರಕ್ಕೆ ಸ್ಪೂರ್ತಿಯಾಗಿದೆ. ಕೊರಿಯಾದ ನ್ಯಾನೋಪಾರ್ಟಿಕಲ್ ರಿಸರ್ಚ್ ಸೆಂಟರ್ ‘ಇ–ಟ್ಯಾಟೊ’ ಅಭಿವೃದ್ಧಿಪಡಿಸಿದೆ. ಇದು ನಮ್ಮ ಆರೋಗ್ಯದ ಮೇಲ್ವಿಚಾರಕನಾಗಿ ಕೆಲಸ ಮಾಡಲಿದೆಯಂತೆ.

ಚರ್ಮಕ್ಕೆ ಅಂಟಿಕೊಂಡು ಹೃದಯ ಬಡಿತ, ದೇಹದ ಉಷ್ಣತೆ, ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಮೊಬೈಲಿಗೆ ರವಾನಿಸಬಲ್ಲದು. ಗೂಗಲ್ ಒಡೆತನದ ಮೊಟರೊಲಾ ಇ–ಟ್ಯಾಟೂ ಪರವಾನಗಿ ಪಡೆದಿದೆ. ಇದರ ಬೆಲೆ ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಹಚ್ಚೆ ಹುಟ್ಟಿದ ಮೂಲದ ಜಾಡು ಹಿಡಿದು ಹೊರಟರೆ ಮಾತ್ರ ಕೆಲವು ಅಚ್ಚರಿ ಸಂಗತಿಗಳು ಗಮನಕ್ಕೆ ಬರುತ್ತವೆ.

ಇದೊಂದು ಜನಪದ ಕಲೆ. ಕ್ರಿ.ಪೂ. ೨೦೦೦ ವರ್ಷಗಳ ಹಿಂದೆಯೇ ಈಜಿಪ್ಟಿನಲ್ಲಿ ಈ ಕಲೆ ಬಳಕೆಯಲ್ಲಿದ್ದುದು ಕಂಡು ಬರುತ್ತದೆ. ಗ್ರೀಕರು, ರೋಮನ್ನರು, ಪೂರ್ವ ಜರ್ಮನ್‌ರಲ್ಲಿ ಇದು ಪ್ರಚಲಿತವಿತ್ತೆಂಬುದು ದಾಖಲೆಗಳಿಂದ ತಿಳಿಯುತ್ತದೆ. ಪಾಲಿನೇಷಿಯನ್ ಮೂಲದ ಈ ವಿಶಿಷ್ಟ ಕಲೆ ವಿಶ್ವ ವ್ಯಾಪ್ತಿಯಾಗಿ ಎಲ್ಲ ದೇಶಗಳ ಜನಾಂಗಗಳಲ್ಲಿ ವಿವಿಧ ರೀತಿಯಾಗಿ ಬೆಳೆದು ಬಂದಿದೆ.

ಧಾರ್ಮಿಕ ಸಂಕೇತವಾಗಿ, ಪ್ರೀತಿಯ ಕುರುಹಾಗಿ, ಸೌಂದರ್ಯ ಮಾಧ್ಯಮವಾಗಿ ಜನಮನವನ್ನಾಳಿದ ಹಚ್ಚೆ ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಯಾವಾಗ ಕಾಣಿಸಿಕೊಂಡಿತೆಂಬುದರ ಬಗ್ಗೆ ನಿಖರವಾಗಿ ಹೇಳಲು ಯಾವುದೇ ಆಧಾರಗಳಿಲ್ಲ. ಆದರೆ 12ನೇ ಶತಮಾನದಲ್ಲಿ ಹಚ್ಚೆ ಸಾಕಷ್ಟು ಪ್ರಚಾರ ಪಡೆದಿತ್ತು ಎಂಬುದಕ್ಕೆ  ಬಸವಣ್ಣ, ಚೆನ್ನಬಸವಣ್ಣ ಅವರ ವಚನಗಳಲ್ಲಿ ಉಲ್ಲೇಖವಿದೆ.

ಹಚ್ಚೆ ಪದವು ಅಣಚೆ, ಅಜ್ಜೆ, ಅಚ್ಚೆ ಎಂತಲೂ ಬಳಕೆಯಲ್ಲಿದೆ. ಗಿಂಡಿ ಇದ್ದೋಳು ಗಂಡನಿಗೆ ನೀರ ಕೊಡಬಾರ್ದು, ರಾಶಿಕಣಕ್ಕೆ ಹಚ್ಚೆ ಇಲ್ದೋಳು ಹೋಗಬಾರ್ದು ಎಂಬಂತ ಮಾತುಗಳೂ ಇವೆ.

ಕರ್ನಾಟಕದಲ್ಲಿ ಮಾತ್ರ ಅನೇಕ ಜಾತಿಯ ಜನ ಹಚ್ಚೆ ಹೊಯ್ಯುವ ಕಲೆ ರೂಢಿಸಿಕೊಂಡಿದ್ದಾರೆ. ಅವರಲ್ಲಿ ಕೊರವಂಜಿಯರು ಕಣಿ ಹೇಳಿ ಭಿಕ್ಷೆ ಎತ್ತುತ್ತಾ ಊರೂರು ತಿರುಗುತ್ತಾರೆ. ಕಪ್ಪು, ಕೆಂಪು, ಹಸಿರು ಮೊದಲಾದ ಬಣ್ಣವನ್ನು ಸೂಜಿಯಲ್ಲಿ ಅದ್ದಿಕೊಂಡು ಹಚ್ಚೆ ಹುಯ್ಸಿಕೊಳ್ಳುವವರ ಚರ್ಮಕ್ಕೆ ಚುಚ್ಚಿ ಬೇಕಾದ ಆಕಾರವನ್ನು ನಿರ್ಮಿಸುತ್ತಾರೆ.

ಏನಿದು ಇ–ಟ್ಯಾಟೂ?
ಟ್ಯಾಟು ಎಂದಾಕ್ಷಣ ನಮ್ಮ ಕಣ್ಮುಂದೆ ಬರುವುದು ಸೂಜಿ, ಕಪ್ಪು, ಕೆಂಪು, ಹಸಿರು ಮೊದಲಾದ ಬಣ್ಣ ಮತ್ತು ಚರ್ಮಕ್ಕೆ ಸೂಜಿಯಿಂದ ಚುಚ್ಚುವುದು. ಆದರೆ ಇ–ಟ್ಯಾಟು ಹಾಗಿಲ್ಲ. ತಕ್ಷಣಕ್ಕೆ ಮಕ್ಕಳು ಬಳಸುವ ಆಟದ ಟ್ಯಾಟು ರೀತಿ  ಕಾಣಿಸುತ್ತದೆ. ಮಾತ್ರವಲ್ಲ ಇದನ್ನು ಬಳಸುವ ವಿಧಾನವೂ ಅದೇ ರೀತಿಯಲ್ಲಿದೆ.

ಹೃದಯ ಬಡಿತ, ದೇಹದ ಉಷ್ಣತೆ, ಒತ್ತಡ ಪತ್ತೆಮಾಡಲು ವಿಶೇಷ ಸಂವೇದಕಗಳು, ನಿಸ್ತಂತು ಪವರ್ ಕಾಯಿಲ್, ಸಂವಹನ ಆಂದೋಲಕ, ಫೋಟೊ ಡಿಟೆಕ್ಟರ್ ಸಾಧನಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಪ್ಲಾಸ್ಟಿಕ್ ಶೀಟ್ ನಲ್ಲಿ ಇರುವ ಟ್ಯಾಟೊ ಅನ್ನು ಬೇಕಾದ ಜಾಗಕ್ಕೆ ಅಂಟಿಸಿದ ಬಳಿಕ ಮೆಲ್ಭಾಗವನ್ನು ಉಜ್ಜದರೆ ಚರ್ಮದಿಂದ ಪ್ಲಾಸ್ಟಿಕ್ ಬೇರ್ಪಡಿಸಬಹುದು.

ನಂತರ ಉಳಿಯುವುದು ಮೃದುವಾದ  ಸಿಲಿಕಾನ್ ವೈರ್ ಗಳುಳ್ಳ ಬಹಳ ತೆಳುವಾದ ರಬ್ಬರ್ ಪಟ್ಟಿ. ಇದು ಪೇಪರ್ ಗಿಂತಲೂ ತೆಳುವಾಗಿರುತ್ತದೆ. ಅಲ್ಲದೆ ಬ್ಯಾಂಡ್ ಎಡ್ (ಗಾಯವಾದಾಗ ಬಳಸುವ ಪ್ಲಾಸ್ಟರ್) ನಂತೆ ಚರ್ಮಕ್ಕೆ ಅಂಟಿಕೊಳ್ಳುವಷ್ಟು ಮೃದುವಾಗಿರುತ್ತದೆ. ಹೀಗಾಗಿ ಇದರ ಇರುವಿಕೆ ನಮ್ಮ ಗಮನಕ್ಕೆ ಬರುವುದಿಲ್ಲ. ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ನಿಂದ ಇದನ್ನು ನಿಯಂತ್ರಿಸಬಹುದು.

ಒಟ್ಟಾರೆ ಸದ್ಯ ನಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಇರುವ  ಆರ್ಮ್ ಬ್ಯಾಂಡ್, ಹೆಡ್ ಬ್ಯಾಂಡ್, ಚೆಸ್ಟ್ ಬ್ಯಾಂಡ್ ರೀತಿಯ ಸಾಧನಗಳಿಗಿಂತಲೂ ಇದು ಹೆಚ್ಚು ಸರಳ ಮತ್ತು ಅತ್ಯಂತ ಉಪಯುಕ್ತ ಸಾಧನವಾಗಿದೆ ಎಂಬುದು ತಜ್ಞರ ಅಭಿಮತ.
ತಜ್ಞ ವೈದ್ಯರೇ ಕೆಲವೊಮ್ಮೆ ಎಡವಟ್ಟು ಮಾಡುವಾಗ, ಈ ಸಾಧನ ನಂಬಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬ ಅನುಮಾನವೂ ಕಾಡದಿರದು.

ಇನ್ನೊಂದು ವಾದ
ಸಿಲಿಕಾನ್ ವೈರ್ ಬಹಳ ಮೃದು. ಹೀಗಾಗಿ ಅದಕ್ಕೆ ವಿದ್ಯುತ್ ಹರಿಸುವುದು ಕಷ್ಟ. ಅಲ್ಲದೆ ಅದು ತುಂಡಾಗುವ ಸಾಧ್ಯತೆ ಹೆಚ್ಚಿರುವುದರಿಂದ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಮಾತ್ರವಲ್ಲ ಸೂಕ್ಷ್ಮ ತಂತ್ರಾಂಶ ಬಳಸಿರುವುದರಿಂದ ಇ–ಟ್ಯಾಟೂ ಸಹಜವಾಗಿ ದುಬಾರಿ ಆಗಿರಲಿದೆ ಎನ್ನುವುದು ಇಲಿನೋಯಿಸ್ ಅರ್ಬಾನಾ- ಚಾಂಪೈನ್ ವಿಶ್ವವಿದ್ಯಾಲಯದ (University of Illinois Urbana-Champaign )ತಜ್ಞ ಜಾನ್ ರೋಜರ್ಸ್ ವಾದ

ಇ–ಟ್ಯಾಟೂ ನ್ಯೂನ್ಯತೆ ತಿಳಿಸುವ ಜಾನ್ ಅಷ್ಟಕ್ಕೇ ಸುಮ್ಮನಾಗಿಲ್ಲ. ಮೊಟರೊಲಾದ ಇ–ಟ್ಯಾಟೂಗಿಂತ ಕಡಿಮೆ ವೆಚ್ಚದದಲ್ಲಿ ಉತ್ತಮ ಟ್ಯಾಟೂ ರೂಪಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಮೊಬೈಲ್ ನಲ್ಲಿ ಇರುವಂತೆ ಮೈಕ್ರೋ ಚಿಪ್ ಬಳಸಿ ಇ–ಟ್ಯಾಟೂ ನಿರ್ಮಿಸಿದ್ದು, ದೀರ್ಘ ಬಾಳಿಕೆ  ಬರುತ್ತದೆ ಎಂದಿದ್ದಾರೆ.

ಗುರುತು ಪತ್ತೆಗೆ
ಹಚ್ಚೆ ಹಾಕಿಸಿಕೊಳ್ಳುವ ಉದ್ದೇಶ ಏನೇ ಇದ್ದರೂ ವ್ಯಕ್ತಿ ನಾಪತ್ತೆ ಆದಾಗ ಅಥವಾ ದುರ್ಮರಣಕ್ಕೆ ತುತ್ತಾದ ಸಂದರ್ಭದಲ್ಲಿ ಗುರುತು ಪತ್ತೆ ಮಾಡಲು ಹಚ್ಚೆ ಸಹ ಪ್ರಯೋಜನಕ್ಕೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT