ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸೇವೆ ಉತ್ತಮ, ಪೌಷ್ಟಿಕಾಂಶ ನಾಸ್ತಿ

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಡೆಸಿದ ನಾಲ್ಕನೇ ಸುತ್ತಿನ ಜಿಲ್ಲಾ ಮಟ್ಟದ ಮನೆ–ಮನೆ ಸಮೀಕ್ಷೆಯ  ವರದಿಯಲ್ಲಿ (2012–13) ಕರ್ನಾ­ಟಕ ರಾಜ್ಯಕ್ಕೆ ಸಿಹಿ ಮತ್ತು ಕಹಿ ಸುದ್ದಿಗಳೆರಡೂ ಇವೆ.  ಮೊದಲಿಗೆ ಸಿಹಿ ಸುದ್ದಿ:  2007–08ರಲ್ಲಿ ನಡೆದ ಸಮೀಕ್ಷೆಯ ನಂತರದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಪ್ರಜನನ ಆರೋಗ್ಯ ಸೂಚ್ಯಂಕ ಪ್ರಗತಿ­ದಾಯಕವಾಗಿದೆ. ಎರಡು ಅಥವಾ ಮೂರು ಬಾರಿ ಪ್ರಸವಪೂರ್ವ ಚಿಕಿತ್ಸೆ ಪಡೆಯುತ್ತಿರುವ ಗರ್ಭಿಣಿಯರ ಸಂಖ್ಯೆ ಹಿಂದಿಗಿಂತ ಶೇಕಡ ಐದ­ರಷ್ಟು ಹೆಚ್ಚಿದ್ದು, ಶೇ 86ಕ್ಕೆ ತಲುಪಿದೆ. ಆಸ್ಪತ್ರೆ­ಯಲ್ಲಿ ಹೆರಿಗೆ ಹಾಗೂ ಪ್ರಸವದ 48 ಗಂಟೆಗಳ ಅವಧಿಯಲ್ಲಿ ಚಿಕಿತ್ಸೆ ಪಡೆದ ತಾಯಂದಿರ ಸಂಖ್ಯೆಯೂ ಶೇ 40ಕ್ಕೆ ಏರಿದೆ. ಪೂರ್ಣ ಪ್ರಮಾ­ಣದಲ್ಲಿ ಲಸಿಕೆಗಳನ್ನು ಪಡೆದ 12ರಿಂದ 23 ತಿಂಗಳ ಮಕ್ಕಳ ಸಂಖ್ಯೆ ಹಿಂದಿನಂತೆ ಶೇ 78ರಲ್ಲೇ ನಿಂತಿದೆ. ಆದರೂ ಈ ವಿಷಯದಲ್ಲಿ ತಮಿಳು­ನಾಡು (ಶೇ 56) ಹಾಗೂ ಮಹಾರಾಷ್ಟ್ರಕ್ಕಿಂತ  (ಶೇ 66) ಕರ್ನಾಟಕ ಮುಂದಿದೆ.

ಈಗ ಕಹಿ ಸುದ್ದಿ: ಮಕ್ಕಳು, ಯುವಜನ ಹಾಗೂ ವಯಸ್ಕರ ಪೌಷ್ಟಿಕಾಂಶ ಮಟ್ಟದ ಅಂಕಿ­ಸಂಖ್ಯೆಗಳು ನಿರಾಶಾದಾಯಕ ಚಿತ್ರವೊಂದನ್ನು ಅನಾವರಣಗೊಳಿಸುತ್ತಿವೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ 40ರಷ್ಟು ಮಕ್ಕಳು ತಮ್ಮ ಎತ್ತರಕ್ಕಿಂತ ಕಡಿಮೆ ತೂಕ ಹೊಂದಿದ್ದು, ಅರ್ಧ­ದಷ್ಟು ಮಕ್ಕಳು ತಮ್ಮ ವಯಸ್ಸಿಗಿಂತ ಕಡಿಮೆ ಎತ್ತ­ರ­ದವರಾಗಿದ್ದಾರೆ. ಶೇ 40ರಷ್ಟು ಮಕ್ಕಳು ತಮ್ಮ ವಯಸ್ಸಿಗಿಂತ ಕಡಿಮೆ ತೂಕ ಹೊಂದಿದ್ದಾರೆ. ಇದಿಷ್ಟೇ ಅಲ್ಲ, 6 ರಿಂದ 59 ತಿಂಗಳ ಅವಧಿಯ ನಾಲ್ವರಲ್ಲಿ ಮೂವರು ಮಕ್ಕಳು ಹಾಗೂ ಮೂವ­ರಲ್ಲಿ ಇಬ್ಬರು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಗರ್ಭಿಣಿಯಾಗಿರುವಾಗ ರಕ್ತ­ಹೀನತೆ­ಯಿದ್ದರೆ ಮಗುವಿನ ಮೇಲೆ ಎಂಥ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಇದು ಸ್ಥೂಲ ಚಿತ್ರಣವಾಯಿತು. ಜಿಲ್ಲಾ ಮಟ್ಟಕ್ಕೆ ಹೋದರೆ ಸ್ಥಿತಿ ಇನ್ನಷ್ಟು ಸಂಕೀರ್ಣ­ವಾಗುತ್ತದೆ. 6ರಿಂದ 59 ತಿಂಗಳಿನ ಅವಧಿಯ ಮಕ್ಕಳಲ್ಲಿ ಗಂಭೀರ ರಕ್ತಹೀನತೆ ವಿಷಯ­ವೊಂದನ್ನು ತೆಗೆದುಕೊಂಡು ಪರಿಶೀಲಿಸಿದರೆ ನಮಗೆ ಕಾಣುವುದೇನು? ರಾಜ್ಯದ ಶೇ 30ರಷ್ಟು ಜಿಲ್ಲೆಗಳಲ್ಲಿ ಮಾತ್ರ ಮಕ್ಕಳ  ರಕ್ತಹೀನತೆಯ ಪ್ರಮಾಣ ಶೇ 10ಕ್ಕಿಂತ ಕಡಿಮೆ ಇದೆ. ಉಳಿದ ಜಿಲ್ಲೆಗಳಲ್ಲಿ, ಶೇ 10ಕ್ಕಿಂತಲೂ ಹೆಚ್ಚು ಮಕ್ಕಳು ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಉದಾ­ಹರಣೆಗೆ, ಯಾದಗಿರಿಯಲ್ಲಿ, ಐದು ವರ್ಷದ ಒಳಗಿನ ಪ್ರತಿ ಮೂರನೇ ಮಗು ರಕ್ತಹೀನತೆ­ಯಿಂದ ಬಳಲುತ್ತಿದೆ. ಐದು ವರ್ಷದ ಒಳಗಿನ ಮಕ್ಕಳ ಸಾವಿನ ಪ್ರಮಾಣದಲ್ಲಿ ಅರ್ಧದಷ್ಟು ಮಕ್ಕಳು ಸಾವಿಗೀಡಾಗಿರುವುದಕ್ಕೆ ಅಪೌಷ್ಟಿಕ­ತೆಯೇ ಕಾರಣ ಎಂಬುದನ್ನು ಜಾಗತಿಕ ಅಂಕಿ ಅಂಶಗಳು ತೋರಿಸಿಕೊಟ್ಟಿವೆ.

ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿರುವ ಹಲವು ಜಿಲ್ಲೆ­ಗಳಲ್ಲಿ ಇತರ ಆರೋಗ್ಯ ಸೇವಾ ಸೂಚ್ಯಂಕಗಳು ಧನಾತ್ಮಕವಾಗಿರುವ ವಿಪರ್ಯಾಸವನ್ನೂ ಕಾಣ­ಬಹುದು. ಉದಾಹರಣೆಗೆ, ಬೆಂಗಳೂರು ನಗರ, ತುಮಕೂರು ಹಾಗೂ ಕೋಲಾರದಲ್ಲಿ ಬಾಲ್ಯಾ­ವಸ್ಥೆ­ಯಲ್ಲಿನ ರಕ್ತಹೀನತೆ ಗರಿಷ್ಠ ಮಟ್ಟದಲ್ಲಿದೆ. ಅಂದರೆ ಬೆಂಗಳೂರಿನಲ್ಲಿ ಶೇ 31, ತುಮಕೂರಿ­ನಲ್ಲಿ ಶೇ 26 ಹಾಗೂ ಕೋಲಾರದಲ್ಲಿ ಶೇ 25­ರಷ್ಟು ಮಕ್ಕಳನ್ನು ಈ ಸಮಸ್ಯೆ ಆವರಿಸಿಕೊಂಡಿದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಜಿಲ್ಲೆಗಳಲ್ಲಿನ ಪ್ರತಿ ಮೂರನೇ ಅಥವಾ ನಾಲ್ಕನೇ ಮಗು ತೀವ್ರ ರಕ್ತಹೀನತೆಯಿಂದ ಬಳಲು­ತ್ತಿದೆ. ಪ್ರಸವಪೂರ್ವ ಆರೈಕೆ, ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಪೂರ್ಣ ಲಸಿಕಾ ಪ್ರಮಾಣ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಜಿಲ್ಲೆಗಳೂ ಇವಾಗಿರುವುದು ಆಶ್ಚರ್ಯಕರ ಸಂಗತಿ. ಈ ವಿಪರ್ಯಾಸವನ್ನು ಹೇಗೆ  ಅರ್ಥ ಮಾಡಿಕೊಳ್ಳುವುದು? ಹಲವು ವರ್ಷ­ಗಳಿಂದ ಗರ್ಭಿಣಿಯರು ಹಾಗೂ ಮಕ್ಕಳ ಆರೋಗ್ಯ ಸೇವೆಗೆ ವಹಿಸಿದ ಕಾಳಜಿಯನ್ನು ಅವರಿಗೆ ಅಗತ್ಯವಿರುವ ಪೌಷ್ಟಿಕಾಂಶಕ್ಕೆ ವಿಸ್ತರಿಸದೇ ಇರುವುದೇ ಇದಕ್ಕೆ ಮುಖ್ಯ ಕಾರಣ.

ರಾಜ್ಯದ ಆರೋಗ್ಯ ಕ್ಷೇತ್ರ ಹಲವು ಬಗೆಯ ಟೀಕೆಗಳಿಗೆ ಗುರಿಯಾಗತೊಡಗಿ ವರ್ಷಗಳುರು­ಳಿ­ದವು. ರಾಜ್ಯ ಗಮನಾರ್ಹ ಪ್ರಮಾಣದಲ್ಲಿ ಆರ್ಥಿಕ ಪ್ರಗತಿ ಸಾಧಿಸಿದ್ದರೂ ಆರೋಗ್ಯ ಕ್ಷೇತ್ರ­ದಲ್ಲಿ ಹಿಂದುಳಿದಿದೆ. ಆರೋಗ್ಯ ವ್ಯವಸ್ಥೆಗೆ ಅಗತ್ಯ­ವಿರುವ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ಮತ್ತು ಬಂಡವಾಳ ತೊಡಗಿಸಿಲ್ಲ. ಈ ಎಲ್ಲಾ ಕಾರ­ಣಗಳಿಂದ ಇನ್ನಿತರ ದಕ್ಷಿಣ ರಾಜ್ಯಗಳಿಗೆ ಹೋಲಿಸಿ­ದರೆ ಆರೋಗ್ಯ ಕ್ಷೇತ್ರ ಕಳಪೆ ಮಟ್ಟ­ದಲ್ಲಿದೆ ಎಂಬುದು ಈ ಟೀಕೆಗಳ ಸಾರ. ಇದರ ಫಲ ಎಂಬಂತೆ ಎಲ್ಲರ ಕಣ್ಣೂ ಆರೋಗ್ಯ ಕ್ಷೇತ್ರದ ಮೇಲೇ ನೆಟ್ಟಿದೆ. ಕೇಂದ್ರ ಸರ್ಕಾರ ಆರ್ಥಿಕ ಹಾಗೂ ತಾಂತ್ರಿಕ ಸಂಪನ್ಮೂಲಗಳನ್ನೂ ಒದಗಿಸು­ತ್ತಿದೆ. ಆರೋಗ್ಯ ಸಂಬಂಧಿ ಯೋಜನೆಗಳನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರಲು ವಿಶ್ವ ಬ್ಯಾಂಕ್ ಹಾಗೂ ಇನ್ನಿತರ ಸಂಸ್ಥೆಗಳು ಸಹಾಯ ಮಾಡುತ್ತಿವೆ.  ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಧನಸಹಾಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನೆರವು ನೀಡುವ ಮೂಲಕ ಗರ್ಭಿಣಿ­ಯರು ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನು ಪ್ರಬಲಗೊಳಿಸುವ ಕೆಲಸವನ್ನೂ ಮಾಡುತ್ತಿದೆ. ವಿಶ್ವ ಬ್ಯಾಂಕ್ ಸಹಾಯದಲ್ಲಿ ಕಾರ್ಯರೂಪಕ್ಕೆ ಬರುತ್ತಿರುವ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿ­ವೃದ್ಧಿ ಹಾಗೂ ಸುಧಾರಣಾ ಯೋಜನೆ ಆರೋಗ್ಯ ಸೇವೆಗಳನ್ನು ಪ್ರಾಥಮಿಕ ಮತ್ತು ಅದಕ್ಕೂ ಮೇಲಿನ ಮಟ್ಟಗಳಲ್ಲಿಯೂ ಸುಧಾರಿಸುವಂತೆ ಮಾಡಿದೆ.

ರಾಜ್ಯ ಸರ್ಕಾರ ಕೂಡಾ ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿ ಖರೀದಿ ಮತ್ತು ವರ್ಗಾ­ವಣೆ ನೀತಿಗಳನ್ನು ಬದಲಾಯಿಸಿ ಆಡಳಿತವನ್ನು ಪರಿಣಾಮಕಾರಿಯಾಗಿಸುವ ಉತ್ತರದಾಯಿತ್ವ ವನ್ನು ಖಚಿತಪಡಿಸಿಕೊಳ್ಳುವ ಕ್ರಮಗಳನ್ನು ಕೈಗೊಂಡಿದೆ. ಈ ಎಲ್ಲಾ ಪ್ರಯತ್ನಗಳು ಇಂದು ಶಿಶು ಮರಣ ಸಂಖ್ಯೆ ಮತ್ತು ಗರ್ಭಿಣಿಯರ ಮರಣ ಸಂಖ್ಯೆ ಕಡಿಮೆಯಾಗಲು ಕೆಲ ಮಟ್ಟಿಗೆ ಕಾರಣ. ಸದ್ಯ ಕರ್ನಾಟಕ ಸಹಸ್ರಮಾನದ ಅಭಿ­ವೃದ್ಧಿ ಗುರಿಯನ್ನು ತಲುಪುವ ಹಾದಿಯಲ್ಲಿದೆ. ಶಿಶು ಮರಣದ ಪ್ರಮಾಣ ಸಾವಿರ ಹೆರಿಗೆಗಳಿಗೆ 32ರಷ್ಟಿದ್ದರೆ ಹೆರಿಗೆಯ ವೇಳೆ ಸಂಭವಿಸುವ ಸಾವುಗಳ ಸಂಖ್ಯೆ ಒಂದು ಲಕ್ಷ ಹೆರಿಗೆಗಳಲ್ಲಿ 144ರಷ್ಟಿದೆ.

ಆರೋಗ್ಯ ಸೇವೆಗಳಿಗೆ ಒತ್ತು ನೀಡಿದ್ದರಿಂದ ಇದು ಸಾಧ್ಯವಾಗಿದೆ. ಪೌಷ್ಟಿಕತೆಯ ಕ್ಷೇತ್ರಕ್ಕೂ ಇದೇ ಬಗೆಯ ಒತ್ತು ಸಿಗಬೇಕಿರುವುದು ಈಗಿನ ಅಗತ್ಯ. ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆ, ಮಧ್ಯಾಹ್ನದ ಬಿಸಿಯೂಟ, ಶಾಲಾ ಆರೋಗ್ಯ ಕಾರ್ಯಕ್ರಮ ಮುಂತಾದವುಗಳನ್ನು ರಾಜ್ಯ ವ್ಯಾಪಿ­ಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಆದರೆ ಇವು ನಿರೀಕ್ಷಿತ ಫಲಿತಾಂಶವನ್ನು ನೀಡಿಲ್ಲ. ಅಂದರೆ  ಪೌಷ್ಟಿ­ಕಾಂಶ ಪೂರೈಕೆಯ ಎಲ್ಲಾ ಆಯಾಮ­ಗಳನ್ನು ಮೊದಲಿಗೆ ಸರಿಯಾಗಿ ಅರ್ಥ ಮಾಡಿ­ಕೊಳ್ಳಬೇಕಿದೆ. ಯಾವುದು ಪರಿಣಾಮಕಾರಿ, ಯಾವುದು ಪರಿಣಾಮಕಾರಿಯಲ್ಲ. ಎಲ್ಲಿ ಬದ­ಲಾವಣೆ ಬೇಕು, ಯಾವುದಕ್ಕೆ ಹೆಚ್ಚಿನ ಒತ್ತು ಬೇಕು ಎಂಬ ವಿಚಾರದಲ್ಲಿ ಇನ್ನೂ ಹೆಚ್ಚಿನ ಸ್ಪಷ್ಟತೆ ಬೇಕು.  ಸರಿಯಾದ ನಡೆ ಹಾಗೂ ಸಾಕಷ್ಟು ಸಂಪ­ನ್ಮೂಲವಿದ್ದರೆ, ಅತಿ ಕಡಿಮೆ ಸಮಯದಲ್ಲೇ ಬದ­ಲಾವಣೆ ತರಲು ಸಾಧ್ಯ ಎಂಬುದನ್ನು ಕರ್ನಾಟಕ ಪೌಷ್ಟಿಕಾಂಶ ಮಿಷನ್ ತೋರಿಸಿಕೊಟ್ಟಿದೆ. ಇಂಥ ಪ್ರಯತ್ನಗಳ ವಿಸ್ತರಣೆ ಮತ್ತು ಹೆಚ್ಚಳ ಈಗಿನ ಅಗತ್ಯ.

ಮನೆ–ಮನೆ ಸಮೀಕ್ಷೆಯ ವರದಿಯು ಪೌಷ್ಟಿ­ಕತೆಯ ಅಗತ್ಯದ ಕಡೆಗೆ ಗಮನಕೊಡದ ಸರ್ಕಾ­ರದ ನೀತಿಗೆ ಪುಟ್ಟ ಮಕ್ಕಳು ಬೆಲೆ ತೆರುತ್ತಿದ್ದಾರೆ ಎಂಬ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದೆ. ಈ ಧ್ವನಿಯನ್ನು ಸರ್ಕಾರ ಕೇಳಿಸಿಕೊಳ್ಳಬೇಕು. ಮಕ್ಕಳಿಗೆ ಅಗತ್ಯವಿರುವ ಪೌಷ್ಟಿಕಾಂಶಕ್ಕೆ ಸರ್ಕಾರ ಸಂಪನ್ಮೂಲ ಒದಗಿಸಬೇಕು. ಇದಕ್ಕೆ ಬೇಕಿರುವುದು ಹಣಕಾಸು ಸಂಪನ್ಮೂಲವಷ್ಟೇ ಅಲ್ಲ. ಅತ್ಯುತ್ತಮ ಮೂಲ ಸೌಕರ್ಯ, ಅಗತ್ಯವಿರುವಷ್ಟು ಸಂಖ್ಯೆಯ ತರಬೇತಿ ಹೊಂದಿದ ಸಿಬ್ಬಂದಿ ಎಲ್ಲದಕ್ಕಿಂತ ಮುಖ್ಯ­ವಾಗಿ ಪೌಷ್ಟಿಕಾಂಶಯುಕ್ತ ಆಹಾರ ಬೇಕಾಗಿದೆ. ಇದು ಕರ್ನಾಟಕ ಈ ಸಂದರ್ಭದಲ್ಲಿ ಮಾಡ­ಬಹುದಾದ ಅತ್ಯುತ್ತಮ ಹೂಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT