ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿ ಜೈಶಂಕರ್‌ ಪೊಲೀಸ್‌ ಕಸ್ಟಡಿಗೆ

ಕೇಂಬ್ರಿಡ್ಜ್‌ ಶಾಲಾ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ
Last Updated 31 ಅಕ್ಟೋಬರ್ 2014, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ದಿ ಇಂದಿರಾನಗರ್ ಕೇಂಬ್ರಿಡ್ಜ್‌ ಇಂಗ್ಲಿಷ್‌ ಶಾಲೆ’ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಬಂಧಿಸಲಾಗಿರುವ ಆರೋಪಿ ಜೈಶಂಕರ್‌ನನ್ನು ಹೆಚ್ಚಿನ ತನಿಖೆಗಾಗಿ ನ.7ರವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ನಗರ ಸಿವಿಲ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

ಜೈಶಂಕರ್‌ನನ್ನು ಶುಕ್ರವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು­ಪಡಿಸಿದ ಪ್ರಕರಣದ ತನಿಖಾಧಿಕಾರಿ­ಗಳು, ಆತನನ್ನು ಪೊಲೀಸ್‌ ಕಸ್ಟಡಿಗೆ ನೀಡುವಂತೆ ಮನವಿ ಸಲ್ಲಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯನ್ನು ಏಳು ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು.

ಕಮಿಷನರ್‌ ಭೇಟಿ: ನಗರ ಪೊಲೀಸ್ ಕಮಿಷನರ್‌ ಎಂ.ಎನ್‌.ರೆಡ್ಡಿ ಅವರು ತಿಪ್ಪಸಂದ್ರದಲ್ಲಿನ ದಿ ಇಂದಿರಾನಗರ್ ಕೇಂಬ್ರಿಡ್ಜ್‌ ಇಂಗ್ಲಿಷ್‌ ಶಾಲೆಗೆ ಶುಕ್ರವಾರ ಭೇಟಿ ನೀಡಿ ಇತರೆ ವಿದ್ಯಾರ್ಥಿಗಳ ಪೋಷ­ಕರೊಂದಿಗೆ ಮಾತುಕತೆ ನಡೆಸಿದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಶಾಲೆಗೆ ಬಂದ ರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಪೋಷಕರ ಜತೆ ಎರಡು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿ, ಅವರ ಅಹವಾಲು ಆಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ‘ಆರೋಪಿ ಜೈಶಂಕರ್‌ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾಗಿ ತಪ್ಪೊ­ಪ್ಪಿಗೆ ಹೇಳಿಕೆ ನೀಡಿದ್ದಾನೆ. ಸಿಬ್ಬಂದಿಯು ಸಾಧ್ಯವಾದಷ್ಟು ಬೇಗನೆ ಪ್ರಕರಣದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುತ್ತಾರೆ’ ಎಂದರು.

‘ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿ ಯಿಂದ ಹೊರಡಿಸಿರುವ ಮಾರ್ಗಸೂಚಿ ಯನ್ನು ಶಾಲಾ ಆಡಳಿತ ಮಂಡಳಿಯು ಅಳವಡಿಸಿಕೊಂಡಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಾಲೆ ಯಲ್ಲಿ ಹೆಚ್ಚಿನ ಸಿ.ಸಿ ಕ್ಯಾಮೆರಾಗಳನ್ನು ಹಾಕಿಲ್ಲ ಮತ್ತು ವಿದ್ಯಾರ್ಥಿಗಳನ್ನು ಕರೆ­ದೊ­ಯ್ಯುವ ವಾಹನಗಳಲ್ಲಿ ಜಿಪಿಎಸ್‌ ವ್ಯವಸ್ಥೆ ಅಳವಡಿಸಿಲ್ಲ’ ಎಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಮತ್ತೊಂದು ಪ್ರಕರಣ ದಾಖಲಿಸಲು ನಿರ್ಧರಿಸ­ಲಾಗಿದೆ ಎಂದು ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT