ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಎಸ್ಎಸ್, ಬಿಜೆಪಿ ನಡೆ ಪ್ರಜಾಪ್ರಭುತ್ವಕ್ಕೆ ಕುತ್ತು

ದೆಹಲಿಯಲ್ಲಿ ಸಿಪಿಎಂ ಪಕ್ಷದ ಕೇಂದ್ರ ಕಚೇರಿ ಮೇಲೆ ದಾಳಿಗೆ ಸಿಪಿಎಂ ಖಂಡನೆ
Last Updated 25 ಮೇ 2016, 8:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದೇಶದಲ್ಲಿ ಶಾಂತಿಯನ್ನು ಕದಡಿ ಪ್ರಜಾಪ್ರಭುತ್ವ ನಾಶ ಪಡಿಸುವ ಉಗ್ರವಾದಿ ಚಟುವಟಿಕೆಗಳನ್ನು ಆರ್ಎಸ್ಎಸ್ ಮತ್ತು ಬಿಜೆಪಿಗಳು  ಯೋಜತವಾಗಿ ನಡೆಸುತ್ತಿವೆ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ ಮುನಿವೆಂಕಟಪ್ಪ ಆರೋಪಿಸಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಸಿಪಿಎಂ ಕಚೇರಿಗಳ ಮೇಲಿನ ದಾಳಿ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ದೆಹಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು ಸಿಪಿಎಂ ಕಚೇರಿಗಳ ಮೇಲೆ ದಾಳಿ ಮಾಡಿವೆ. ಕಾರ್ಮಿಕರು, ದಲಿತ, ಅಸ್ಪೃಶ್ಯರ ಮತ್ತು ಜನ ಸಾಮಾನ್ಯರ ಸಂಕಷ್ಟಗಳ ವಿರುದ್ಧ  ನಿರಂತರ ಹೋರಾಟ ಮಾಡುತ್ತಿರುವ  ಎಡ ಪಕ್ಷಗಳನ್ನು ಹತ್ತಿಕ್ಕುವ ಹುನ್ನಾರ ಎಸಗಿದ್ದಾರೆ ಎಂದು ತಿಳಿಸಿದರು.

ಸ್ವತಂತ್ರ ಭಾರತವು ಮತ್ತೆ ದಿವಾಳಿತನಕ್ಕೆ ಒಳಗಾಗುತ್ತಿದೆ. ಕಾನೂನು ವ್ಯವಸ್ಥೆಗಳು ಕಣ್ಣಿದ್ದು ಕುರುಡ ಜಾಣ್ಮೆ ತೋರುವ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ. ಕೇಂದ್ರ ಸರ್ಕಾರವು ಕೋಮುಗಲಭೆಗಳನ್ನು ಸೃಷ್ಟಿಸಿ ಪ್ರಶ್ನಿಸುವ ಶಕ್ತಿಗಳನ್ನು ದಮನ ಮಾಡುತ್ತಿದೆ. ವಿಶ್ವವಿದ್ಯಾನಿಲಯಗಳಿಗೆ ಲಗ್ಗೆ ಇಟ್ಟಿರುವ ಈ ದುಷ್ಟ ಶಕ್ತಿಗಳು ಹತ್ತಾರು ವರ್ಷಗಳ ಶಾಂತಿ ಕದಡಿ ವಿದ್ಯಾರ್ಥಿಗಳಲ್ಲಿ ವೈಷಮ್ಯ ಸೃಷ್ಟಿಸಿವೆ. ಉತ್ತರ ಪ್ರದೇಶದಲ್ಲಿ  ತರಬೇತಿ ನೀಡಿ ಉಗ್ರವಾದಿ ಆರ್ಎಸ್ಎಸ್ ಕಾರ್ಯಕರ್ತರನ್ನು ಸಿದ್ಧಗೊಳಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದಲ್ಲಿ ಸುಮಾರು 500ಕ್ಕೂ ಹೆಚ್ಚು ಸಿಪಿಎಂ ಕಚೇರಿಗಳ ಮೇಲೆ ದಾಳಿ ಮಾಡಿ ನೂರಾರು ಬಡ ಕುಟುಂಬ ನಿರಾಶ್ರಿತರಾಗುವಂತೆ ಮಾಡಿದ ಆರ್ಎಸ್ಎಸ್, ಬಿಜೆಪಿ ಕಾರ್ಯಕರ್ತರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಕೇರಳದಲ್ಲಿ ಚುನಾವಣಾ ಗೆಲುವಿನ ವಿಜಯೋತ್ಸವ ಸಂದರ್ಭದಲ್ಲಿ ಬಾಂಬ್ ಎಸೆದು ಕಾರ್ಯಕರ್ತನ ಸಾವಿಗೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಒತ್ತಾಯಿಸಿದರು.

ದೇಶದ ಬಡವರಿಗೆ ಅಭದ್ರತೆ ಕಾಡುತ್ತಿದೆ. ರೈತರು ಬದುಕು ವ್ಯವಸಾಯ ಮಾಡುವುದನ್ನು ತೊರೆದು ವಿನಾಶದತ್ತ ಸಾಗುತ್ತಿದೆ ಎಂದರು.
ಕೈಗಾರಿಕೆಗಳ ಪರವಿರುವ ಸರ್ಕಾರ ಅದರಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ನಿರ್ಲಕ್ಷಿಸುತ್ತದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ದೇಶದಲ್ಲಿ ಸಮಸ್ಯೆಗಳ ವಿರುದ್ಧದ ಹೋರಾಟಗಳಿಗಿಂತ ಕೋಮು ಗಲಭೆಗಳೇ ಹೆಚ್ಚು ನಡೆಯುತ್ತಿವೆ. ಇದರಿಂದ ದೇಶದ ಪ್ರಗತಿಗೆ ಹಿನ್ನಡೆಯಾಗಿ ಜಾಹೀರಾತಿನಲ್ಲಿ ಮುನ್ನಡೆ ಸಾಧಿಸಬಹುದು ಎಂದು ಹೇಳಿದರು.
ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗದ ಜಾಗದಲ್ಲಿ ಒಳಜಗಳ ಸೃಷ್ಟಿಸಿ ಒಡೆದು ಆಳುವ ನೀತಿಗೆ ಕೈಹಾಕಿದೆ. ಜನರಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತಿ ತಾರತಮ್ಯ ಮಾಡುತ್ತಿದೆ. ಇಂತಹ ಚಟುವಟಿಗಳ ವಿರುದ್ಧ ಸಿಪಿಎಂ ನಿರಂತರ ಖಂಡಿಸುತ್ತದೆ. ಹೀಗೆ ಪ್ರಜಾಪ್ರಭುತ್ವ ಕದಡುವ ಕೆಲಸ ಮುಂದುವರೆದರೆ ದೇಶಾದ್ಯಂತ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮುಖಂಡರಾದ ಗೋಪಿನಾಥ್, ಸಿದ್ದಗಂಗಪ್ಪ, ನಾಯನಹಳ್ಳಿ ಮುನಿಕೃಷ್ಣಪ್ಪ, ಸುಬ್ಬರಾಮ್, ಮುನಿಚಂದ್ರ, ಜಿ.ಸಿ ಮುನೀಂದ್ರ, ನಾರಾಯಣಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ದಾಳಿ ಖಂಡಿಸಿ ಗುಡಿಬಂಡೆಯಲ್ಲಿ ಪ್ರತಿಭಟನೆ
ಗುಡಿಬಂಡೆ: ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ದೆಹಲಿಯಲ್ಲಿ ಸಿಪಿಎಂ ಪಕ್ಷದ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿರುವುದನ್ನು ಖಂಡಿಸಿ ತಾಲ್ಲೂಕು ಸಿಪಿಎಂ ಪಕ್ಷದ ಕಾರ್ಯಕರ್ತರು ಮಂಗಳವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಮುಖ್ಯರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.

ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಹಳೇಗುಡಿಬಂಡೆ ಲಕ್ಷ್ಮಿನಾರಾಯಣ ಮಾತನಾಡಿ, ವಿನಾ ಕಾರಣ ಸಿಪಿಎಂ ಪಕ್ಷದವರು ದೌರ್ಜನ್ಯ ನಡೆಸುತ್ತಿದ್ದಾರೆಂದು ದೇಶಾದ್ಯಂತ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ದೆಹಲಿಯ ಸಿಪಿಎಂ ಕಚೇರಿಯ ಮೇಲೆ ನೂರಾರು ಜನರು ದಾಳಿ ಮಾಡಿ ಬೆದರಿಕೆ ಹಾಕಿರುವುದು ಕೋಮುವಾದಿ ನಿರಂಕುಶತ್ವದ ಪರಮಾವಧಿಯಾಗಿದೆ ಎಂದರು.

ಹಂಪಸಂದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಲಕೃಷ್ಣಾರೆಡ್ಡಿ ಮಾತನಾಡಿ,  ಇದೇ ರೀತಿ ಬಿಜೆಪಿ ಮತ್ತು ಸಂಘ ಪರಿವಾರದವರು ದೌರ್ಜನ್ಯಗಳನ್ನು ಮುಂದುವರಿಸಿದರೆ ಪ್ರತ್ಯುತ್ತರವನ್ನು ನೀಡುವುದಕ್ಕೆ ಮಾರ್ಕ್ ವಾದಿ ಕಮ್ಯುನಿಸ್ಟರು ದೇಶಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜಯರಾಮರೆಡ್ಡಿ, ಪೋಲಂಪಲ್ಲಿ ಮಂಜು ಮುಖಂಡರಾದ ಶಿವಪ್ಪ, ವೆಂಕಟರಾಜು, ರಮಣ, ನಂಜರೆಡ್ಡಿ, ಶ್ರೀನಿವಾಸ್, ನಾಗರಾಜು, ರಹ್ಮಮತ್ ಉಲ್ಲಾ, ದೇವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT