ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆಗೆ ಬಲ

Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ದೇಶದಾದ್ಯಂತ ಸರಕುಗಳು ಮತ್ತು ಸೇವೆ­ಗಳ  ಏಕರೂಪದ ತೆರಿಗೆ ವ್ಯವಸ್ಥೆ (ಜಿಎಸ್‌ಟಿ) ಜಾರಿಗೆ ಅಡ್ಡಿಯಾಗಿದ್ದ ವಿವಾದಾತ್ಮಕ ವಿಷಯ­ಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಗೆಹರಿಸಿ­ಕೊಂಡಿರು­ವುದು ಮಹತ್ವದ ಬೆಳವಣಿ­ಗೆಯಾಗಿದೆ. ತಮ್ಮ ಆರ್ಥಿಕ ಸ್ವಾಯತ್ತ­ತೆಗೆ ಧಕ್ಕೆ  ಒದಗುವ ಅನುಮಾನದಿಂದ ಮತ್ತು ರಾಜಕೀಯ ಕಾರಣಕ್ಕೆ ಹೊಸ ವ್ಯವಸ್ಥೆಗೆ ವಿರೋಧ ದಾಖಲಿಸುತ್ತ ಬಂದಿದ್ದ ರಾಜ್ಯ ಸರ್ಕಾರಗಳು ಕೊನೆಗೂ ನಿಲುವು ಬದಲಿಸಿವೆ. ಸ್ವಾತಂತ್ರ್ಯಾ ನಂತರದ ಅತಿದೊಡ್ಡ ತೆರಿಗೆ ಸುಧಾರಣಾ ಕ್ರಮ ಇದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಹಕಾರದ ಹೊಸ ಭಾಷ್ಯ ಬರೆಯುವಂತಹದ್ದು ಇದು. ಈ ಹೊಸ ತೆರಿಗೆ ವ್ಯವಸ್ಥೆಯನ್ನು 2016ರ ಏಪ್ರಿಲ್ 1ರಿಂದ ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದಕ್ಕಾಗಿ  ಸಂವಿಧಾನದ 122ನೇ  ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಕೇಂದ್ರ ಸರ್ಕಾರ ದೃಢ ಹೆಜ್ಜೆ ಇರಿಸಿದೆ. ಸದ್ಯಕ್ಕೆ ಜಾರಿಯಲ್ಲಿರುವ ಎಲ್ಲ ಪರೋಕ್ಷ ತೆರಿಗೆಗಳಿಗೆ ಜಿಎಸ್‌ಟಿ ಪರ್ಯಾಯವಾಗಲಿದೆ. ಒಂದಾದ ಮೇಲೊಂದು ತೆರಿಗೆ ವಿಧಿಸುವ ಸದ್ಯದ ಸಂಕೀರ್ಣಮಯ ತೆರಿಗೆ ವ್ಯವಸ್ಥೆ­ಯನ್ನು ಜಿಎಸ್‌ಟಿ ಆಮೂ­ಲಾಗ್ರ­ವಾಗಿ ಬದಲಿಸಲಿದೆ. 

ಜಿಎಸ್‌ಟಿ ಜಾರಿಗೆ ಬರುವುದರಿಂದ ದೇಶದಾದ್ಯಂತ ಕಾರು, ಟೆಲಿವಿಷನ್ ಮತ್ತಿತರ ಗ್ರಾಹಕ ಸರಕು ಮತ್ತು ಸೇವೆಗಳಿಗೆ ಸಮಾನ ಮಾರುಕಟ್ಟೆ ಸೃಷ್ಟಿಯಾಗುವುದರ ಜತೆಗೆ, ಮಾರಾಟ ದರವೂ ಒಂದೇ ಮಟ್ಟದಲ್ಲಿ ಇರಲಿದೆ. ಇದರಿಂದ ವಾಣಿಜ್ಯ
ವಹಿ­ವಾಟಿಗೆ ಉತ್ತೇಜನ ದೊರೆತು ತೆರಿಗೆ ತಪ್ಪಿಸುವ ಚಾಳಿ ದೂರವಾಗಿ ತೆರಿಗೆ ಪಾವ­ತಿಯೂ ಹೆಚ್ಚಲಿದೆ. ಸರಕುಗಳ ತಯಾ­ರಕರು, ಮಾರಾಟಗಾರರು, ಗ್ರಾಹ­­ಕರು ಮತ್ತು ಸರ್ಕಾರಕ್ಕೂ ಈ ವ್ಯವಸ್ಥೆ ಲಾಭದಾ­ಯಕ­ವಾಗಲಿದೆ. ಆದರೆ  ಹೊಸ ತೆರಿಗೆ ವ್ಯವಸ್ಥೆಯಿಂದ ವರಮಾನ ನಷ್ಟವಾಗುತ್ತದೆ ಎಂಬುದು ರಾಜ್ಯಗಳ ವಾದ.  ವರಮಾನ ನಷ್ಟವನ್ನು ತುಂಬಿ ಕೊಡುವ ಭರವಸೆ­ಯನ್ನು  ಕೇಂದ್ರ ಸರ್ಕಾರವು  ಸಂವಿಧಾನ ತಿದ್ದುಪ­ಡಿ ಮಸೂದೆಯಲ್ಲಿಯೇ  ಸೇರಿ­ಸುವ ಮೂಲಕ ರಾಜ್ಯಗಳ ಶಂಕೆ ದೂರ  ಮಾಡಿದೆ.

ಹೊಸ ತೆರಿಗೆ ವ್ಯವಸ್ಥೆಯಡಿ ಎಲ್ಲ ಬಗೆಯ ಸರಕು ಮತ್ತು ಸೇವೆಗಳು ಬರ­ಲಿದ್ದರೂ, ತೈಲೋತ್ಪನ್ನಗಳು, ತಂಬಾಕು ಮತ್ತು ಮದ್ಯದ ಉತ್ಪನ್ನಗಳಿಗೆ ವಿನಾಯ್ತಿ ನೀಡಬೇಕು ಎಂಬುದು ರಾಜ್ಯಗಳ ಒತ್ತಾಯವಾಗಿದೆ. ಈ ಸರಕು­ಗಳನ್ನು ಕೈಬಿಡುವುದರಿಂದ ಜಿಎಸ್‌ಟಿ ವ್ಯವಸ್ಥೆ   ಪರಿ­ಪೂರ್ಣವಾಗ­ಲಾರದು.  ಅಂತರ­ರಾಜ್ಯ ವಹಿವಾಟಿನ ಮೇಲೆ ಮೂಲ ತೆರಿಗೆ ವಿಧಿಸಲು ರಾಜ್ಯಗಳಿಗೆ ಅವಕಾಶ ಮಾಡಿಕೊಡದಂತೆಯೂ ಎಚ್ಚರ ವಹಿ­ಸ­ಬೇಕಾಗಿದೆ.  ಮೊದಲ 5 ವರ್ಷಗಳಿಗೆ ರಾಜ್ಯಗಳಿಗೆ ಪರಿಹಾರ ನೀಡುವ ಭರವಸೆಯು ರಾಜ್ಯ­ಗಳ ಆತಂಕ ನಿವಾರಣೆ ಮಾಡಲಿದೆ. ಈ ತೆರಿಗೆ ವ್ಯವಸ್ಥೆಯು  ಯಶಸ್ವಿ­ಯಾಗಿ ಜಾರಿಗೆ ಬಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಹೊಸ ರಾಜಕೀಯ ಮತ್ತು ವಿತ್ತೀಯ ಸಹಕಾರ ಏರ್ಪಡಲಿದೆ.  ಇದರಿಂದ ಅರ್ಥ ವ್ಯವಸ್ಥೆಗೂ ಅಗತ್ಯವಾದ ಚೇತರಿಕೆ ಸಿಕ್ಕೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT