ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪ್ರಗತಿ ಪರಿಸರ ಸೇಹಿಯಾಗಿರಲಿ

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ರಾಜ್ಯಸಭಾ ಸದಸ್ಯ ಜೈರಾಂ ರಮೇಶ್‌ ಉಪನ್ಯಾಸ
Last Updated 25 ಏಪ್ರಿಲ್ 2015, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶವು ಆರ್ಥಿಕವಾಗಿ ಅಭಿವೃದ್ಧಿ ಆಗಬೇಕಾಗಿರುವುದು ಇಂದಿನ ಅಗತ್ಯ. ಆದರೆ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಪ್ರಗತಿ ಸಾಧಿಸುವ ಮಾರ್ಗ ಕಂಡು ಹಿಡಿಯಬೇಕಿದೆ’ ಎಂದು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್‌ ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ  (ಐಐಎಸ್‌ಸಿ) ‘ಪರಿಸರ ಅಭಿವೃದ್ಧಿ ಮತ್ತು ಭಾರತದ ಪ್ರಜಾಪ್ರಭುತ್ವ’ ವಿಷಯದ ಕುರಿತು ಶನಿವಾರ ಉಪನ್ಯಾಸ ನೀಡಿದ ಅವರು, ‘ಪರಿಸರ ಸ್ನೇಹಿ ಆರ್ಥಿಕ ಪ್ರಗತಿಗಾಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದಕ್ಕಾಗಿ ನಾಲ್ಕು ಸ್ತಂಭಗಳನ್ನು ಆಧರಿಸಿದ ನಿಯಮಗಳನ್ನು ಅನುಸರಿಸುವ ಅಗತ್ಯವಿದೆ’ ಎಂದರು.

ನಿಯಂತ್ರಣದ ಬಗ್ಗೆ ಪ್ರಸ್ತಾಪಿಸಿದ ಅವರು, ‘ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ಬಗ್ಗೆ ನಾವೇ ನಿಯಂತ್ರಣ ಹೇರಿಕೊಳ್ಳಬೇಕು. ಸಂಪನ್ಮೂಲಗಳನ್ನು  ಲೆಕ್ಕಾಚಾರ ಹಾಕಿಯೇ ಬಳಸಿಕೊಳ್ಳಬೇಕು’ ಎಂದರು.

‘ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆ, ಅನುಷ್ಠಾನ, ನಿರ್ವಹಣೆ ಮತ್ತು ಕಾನೂನಾತ್ಮಕ ಕ್ರಮಗಳಿಗೆ ಪ್ರತ್ಯೇಕವಾದ ಸಂಸ್ಥೆಗಳು ಇರಬೇಕು’ ಎಂದು ಹೇಳುತ್ತಾ ಎರಡನೇ ಸ್ತಂಭವಾದ  ಸ್ವಯಂ ಸಂಸ್ಥೆಯ ಅಗತ್ಯವನ್ನು ವಿಶ್ಲೇಷಿಸಿದರು.

ರಾಜಕೀಯ ವಿಕೇಂದ್ರಿಕರಣ ವ್ಯವಸ್ಥೆಯನ್ನು ಉಲ್ಲೇಖಿಸಿದ ಅವರು, ‘ಯೋಜನೆಗಳ ಅನುಷ್ಠಾನದಲ್ಲಿ ಗ್ರಾಮಸಭೆಗಳಂತಹ ಸ್ಥಳೀಯ ಸಂಸ್ಥೆಗಳು ಪ್ರಮುಖ ಪಾತ್ರವಹಿಸುವಂತಾಗಬೇಕು’ ಎಂದು ವಿವರಿಸಿದರು.

ಯೋಜನೆಗಳನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡುವ ಅಗತ್ಯವನ್ನು ಪ್ರತಿಪಾದಿಸಿದ ಅವರು,  ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎಂದು ಆಶಿಸಿದರು.

ತಾಪಮಾನ ಏರಿಕೆ ನಿಯಂತ್ರಣಕ್ಕೆ ಪ್ರತ್ಯೇಕ ಮಾರ್ಗ: ಭಾರತ ಹಾಗೂ ಇತರ ದೇಶಗಳಿಗೆ ಭೌಗೋಳಿಕವಾಗಿ ಭಿನ್ನತೆ ಇದೆ. ಬೇರೆ ದೇಶಗಳಲ್ಲಿ ಹವಾಮಾನ ವೈಪರೀತ್ಯವು ಕೇವಲ ಅರಣ್ಯ ನಾಶದಿಂದ ಸಂಭವಿಸಬಹುದು. ಇನ್ನು ಕೆಲವು ರಾಷ್ಟ್ರಗಳಲ್ಲಿ ಹಿಮದ ಕರಗುವಿಕೆಯಿಂದ ಉಂಟಾಗಬಹುದು. ಮತ್ತೂ ಕೆಲವು ಕಡೆಗಳಲ್ಲಿ ಸಮುದ್ರ ಮಟ್ಟದ ಏರಿಕೆಯು ಹವಾಮಾನವನ್ನು ಕಾಡಬಹುದು. ಆದರೆ, ಭಾರತದಲ್ಲಿ ಅರಣ್ಯವೂ ಇದೆ. ಹಿಮಾಲಯದಲ್ಲಿ ಹಿಮವೂ  ಇದೆ. ಸಾಲದ್ದಕ್ಕೆ ಮೂರು ದಿಕ್ಕುಗಳಲ್ಲಿ ಸಮುದ್ರಗಳಿವೆ. ಹಾಗಾಗಿ, ತಾಪಮಾನ ಏರಿಕೆ ನಿಯಂತ್ರಣಕ್ಕೆ ಇತರ ರಾಷ್ಟ್ರಗಳು ಅನುಸರಿವುದಕ್ಕಿಂತ ಭಿನ್ನವಾದ ಮಾರ್ಗವನ್ನು ಭಾರತ ಕಂಡುಕೊಳ್ಳಬೇಕಿದೆ ಎಂದರು.

ಪರಮಾಣು ಇಂಧನ ಪರ ಒಲವು: ಕೂಡುಂಕುಳಂ ಸ್ಥಾವರ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘125 ಕೋಟಿ ಜನಸಂಖ್ಯೆ ಇರುವ ರಾಷ್ಟ್ರದಲ್ಲಿ ವಿದ್ಯುತ್‌ಗಾಗಿ ಕೇವಲ ಸೌರಶಕ್ತಿ, ಗಾಳಿ, ನೀರು ಹಾಗೂ ಕಲ್ಲಿದ್ದಲನ್ನು ಅವಲಂಬಿಸುವುದಕ್ಕೆ ಸಾಧ್ಯವೇ?’ ಎಂದು ಪ್ರಶ್ನಿಸಿದರು.

‘ವಿದ್ಯುತ್‌ ಸಮಸ್ಯೆಗೆ ಪರಮಾಣು ಶಕ್ತಿ ಇದಕ್ಕೆ ಪರಿಹಾರ ಒದಗಿಸಬಲ್ಲುದು. ಈ ಕಾರಣಕ್ಕಾಗಿಯೇ ಸರ್ಕಾರಗಳು ಪರಮಾಣು ಸ್ಥಾವರ ನಿರ್ಮಾಣಕ್ಕೆ ಉತ್ತೇಜನ ನೀಡುತ್ತವೆ’ ಎಂದರು.

‘ಪರಮಾಣು ಸ್ಥಾವರ ಅಪಾಯಕಾರಿ ನಿಜ. ಇತರ ಶಕ್ತಿ ಮೂಲಗಳೂ ಅಪಾಯಕಾರಿಯೆ. ಉಷ್ಣ ವಿದ್ಯುತ್‌ ಸ್ಥಾವರಗಳಿಂದ ಪರಿಸರಕ್ಕೆ, ಆರೋಗ್ಯಕ್ಕೆ ಹಾನಿಯಾಗುತ್ತದೆ. ಜಲವಿದ್ಯುತ್‌ಗಾಗಿ ಅಣೆಕಟ್ಟು ಕಟ್ಟುವುದರಿಂದ ಸಾವಿರಾರು ಎಕರೆ ಭೂಮಿ ಮುಳುಗಡೆಯಾಗುತ್ತದೆ’ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
*
ವಿರೋಧಿಗಳ ದಮನಕ್ಕೆ ಯತ್ನ
ಕೆಲವು ಎನ್‌ಜಿಒಗಳಿಗೆ ವಿದೇಶದಿಂದ ಬರುತ್ತಿರುವ ಹಣದ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈರಾಂ ರಮೇಶ್‌, ಕೇಂದ್ರ ಸರ್ಕಾರವು ತನ್ನನ್ನು ಪ್ರಶ್ನಿಸುವ ಸ್ವಯಂಸೇವಾ ಸಂಸ್ಥೆಗಳ (ಎನ್‌ಜಿಒ) ಹಾಗೂ ವ್ಯಕ್ತಿಗಳನ್ನು ದಮನಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
*
ನಿಯಂತ್ರಣ, ಸ್ವಯಂ ಸೇವಾ ಸಂಸ್ಥೆಗಳು, ವಿಕೇಂದ್ರೀಕೃತ ರಾಜಕೀಯ ವ್ಯವಸ್ಥೆ  ಮತ್ತು ವೈಜ್ಞಾನಿಕ ಮೌಲ್ಯಮಾಪನ. ಈ ನಾಲ್ಕು ಸ್ತಂಭಗಳ ಮೇಲೆ ಪರಿಸರ ಸ್ನೇಹಿ ಆರ್ಥಿಕ  ಪ್ರಗತಿಯ ಗೋಡೆ ಕಟ್ಟಬೇಕು.
– ಜೈರಾಂ ರಮೇಶ್‌,
ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT