ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಂಕಷ್ಟ ಕೈಕಟ್ಟಿ ಹಾಕಿತು: ಶಾಂತಕುಮಾರಿ

ಮಹಿಳಾ ಮೇಯರ್‌ಗೆ ಅನ್ಯಾಯ ಎಸಗಿದ ರಾಜ್ಯ ಸರ್ಕಾರ
Last Updated 19 ಏಪ್ರಿಲ್ 2015, 20:32 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನೊಬ್ಬ ಮಹಿಳಾ ಮೇಯರ್‌ ಆಗಿದ್ದೆ. ಚೆನ್ನಾಗಿ ಕೆಲಸವನ್ನೂ ಮಾಡುತ್ತಿದ್ದೆ. ಅಧಿಕಾರಾವಧಿ ಕೊನೆಗೊಳ್ಳಲು ನಾಲ್ಕೇ ದಿನ ಇದ್ದಾಗ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಸರ್ಜನೆ ಮಾಡಿದ್ದು ತುಂಬಾ ನೋವು ತಂದಿದೆ. ಇದು ಮಹಿಳೆಗೆ ಬಗೆದ ಅನ್ಯಾಯವಲ್ಲದೆ ಬೇರೇನೂ ಅಲ್ಲ’

–ಶನಿವಾರದವರೆಗೆ ಬೆಂಗಳೂರಿನ ಮೇಯರ್‌ ಆಗಿದ್ದ ಎನ್‌.ಶಾಂತಕುಮಾರಿ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಪರಿ ಇದು.
ಮೇಯರ್‌ ಪೀಠದಿಂದ ನಾಲ್ಕು ದಿನ ಮುಂಚಿತವಾಗಿಯೇ ಕೆಳಗಿಳಿದ ಅವರು, ಬಿಬಿಎಂಪಿ ವಿಷಯವಾಗಿ ಇತ್ತೀಚೆಗೆ ನಡೆದಿರುವ ಬೆಳವಣಿಗೆ, ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಕೆಲಸ, ರಾಜಕೀಯದ ಮಧ್ಯೆ ಕುಟುಂಬ ನಿರ್ವಹಣೆ ಮತ್ತಿತರ ವಿಷಯಗಳ ಮೇಲೆ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬೆಳಕು ಚೆಲ್ಲಿದರು.

* ಕೊನೆಗೂ ರಾಜ್ಯ ಸರ್ಕಾರ ಬಿಬಿಎಂ ಪಿ ಯನ್ನು ವಿಸರ್ಜನೆ ಮಾಡಿತಲ್ಲ?
ಕಾಂಗ್ರೆಸ್‌ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ ಇದಾಗಿದೆ. ಬಿಬಿಎಂಪಿ ವಿಸರ್ಜನೆಗೆ ತೀರ್ಮಾನ ತೆಗೆದು ಕೊಂಡವರು ತಾವೂ ಜನಪ್ರತಿನಿಧಿಗಳು ಎನ್ನುವುದನ್ನು ಮರೆತುಬಿಟ್ಟಿದ್ದಾರೆ. ನಾನೊಬ್ಬ ಮಹಿಳಾ ಮೇಯರ್‌ ಆಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೆ. ಕೌನ್ಸಿಲ್‌ ಅವಧಿ ಮುಗಿಯಲು ನಾಲ್ಕೇ ದಿನ ಬಾಕಿಯಿದ್ದಾಗ ಇಂತಹ ಕ್ರಮದ ಅಗತ್ಯ ಏನಿತ್ತು?
ಬಿಬಿಎಂಪಿ ಎಂದೊಡನೆ ಅಲ್ಲಿನ ರಾಜಕೀಯ ಶಕ್ತಿಯಾದ ಬಿಜೆಪಿಯೂ ನೆನಪಾಗಿ ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ. ಆದ್ದರಿಂದಲೇ ಅದು ಇಂತಹ ಆತುರದ ಕ್ರಮಕ್ಕೆ  ಮುಂದಾಗಿದೆ. ‘ರಾಜ್ಯ ಸರ್ಕಾರ ಮಹಿಳಾ ಮೇಯರ್‌ಗೆ ಅನ್ಯಾಯ ಮಾಡಿದೆ’ ಎನ್ನುವ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲು ಸಹ ವ್ಯಕ್ತವಾಗಿದೆ. ಜನಸಾಮಾನ್ಯರ ಬಾಯಲ್ಲೂ ಇಂತಹ ಮಾತು ಕೇಳಿಬರುತ್ತಿದೆ.

* ಬಿಬಿಎಂಪಿ ವಿಭಜನೆ ಬೇಡ ಎನ್ನುವ ನಿರ್ಣಯವನ್ನು ನಿಮ್ಮ ಅಧ್ಯಕ್ಷತೆಯಲ್ಲೇ ನಡೆದ ಕೌನ್ಸಿಲ್‌ ಸಭೆ ತೆಗೆದುಕೊಂಡಿದೆ. ಅದನ್ನು ಲೆಕ್ಕಿಸದ ಸರ್ಕಾರ ವಿಭಜನೆಗಾಗಿಯೇ ವಿಶೇಷ ಅಧಿವೇಶನ ಕರೆದಿದೆಯಲ್ಲ?
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವ ಭಯವಲ್ಲದೆ ಬಿಬಿಎಂಪಿ ವಿಭಜನೆಗೆ ಮತ್ತೇನು ಕಾರಣ ಕಾಣುತ್ತಿಲ್ಲ. ಕೌನ್ಸಿಲ್‌ ಸಭೆಯಲ್ಲಿ ಕೈಗೊಂಡ ನಿರ್ಣಯ ಎಂದರೆ ಬೆಂಗಳೂರಿನ ಜನರೇ ತೆಗೆದುಕೊಂಡ ತೀರ್ಮಾನ. ಅದಕ್ಕೆ ಬೆಲೆ ನೀಡದ ಕಾಂಗ್ರೆಸ್‌ ಸರ್ಕಾರ, ಈಗ ಮಾಡುತ್ತಿರುವ ತಪ್ಪಿಗೆ ತಕ್ಕ ಪಾಠವನ್ನೂ ಕಲಿಯಲಿದೆ.

* ವಿಭಜನೆ ವಿರುದ್ಧದ ನಿಮ್ಮ ಹೋರಾಟದಲ್ಲಿ ಬಿಜೆಪಿ ಮುಖಂಡರಿಂದ ಯಾವ ರೀತಿ ಬೆಂಬಲ ಸಿಗುತ್ತಿದೆ?
ಸೋಮವಾರ ಅಧಿವೇಶನ ನಡೆಯಲಿದೆ. ಅಲ್ಲಿ ಬಿಬಿಎಂಪಿ ವಿಭಜನೆಗೆ ವಿರೋಧಿಸುವುದು ಪಕ್ಷದ ಮೊದಲ ಹೆಜ್ಜೆ. ಕಾನೂನು ಸಮರದ ಕುರಿತೂ ಚಿಂತನೆ ನಡೆದಿದೆ. ಪಕ್ಷದ ವಿವಿಧ ವೇದಿಕೆಗಳಲ್ಲಿ ಬಿಬಿಎಂಪಿ ವಿಷಯವೇ ಪ್ರಧಾನವಾಗಿ ಚರ್ಚೆ ಆಗುತ್ತಿದೆ. ನಮ್ಮ ಮುಖಂಡರ ಮಾರ್ಗದರ್ಶನದಂತೆ ಎಲ್ಲ ಸದಸ್ಯರೂ ಮುಂದಿನ ಹೆಜ್ಜೆ ಇಡಲಿದ್ದೇವೆ.

* ಮೇಯರ್‌ ಆಗಿ ನಿಮ್ಮ ಸಾಧನೆ ತೃಪ್ತಿ ತಂದಿದೆಯೇ?
ನನಗೆ ಅಧಿಕಾರ ಸಿಕ್ಕಿದ್ದು ಆರೂವರೆ ತಿಂಗಳು ಮಾತ್ರ. ಈ ಅವಧಿಯಲ್ಲಿ 12 ತಿಂಗಳಲ್ಲಿ ಆಗುವಷ್ಟು ಕೆಲಸ ಮಾಡಿದ್ದೇನೆ. ಮಳೆ ಸುರಿದು ನಗರದ ವಿವಿಧ ಪ್ರದೇಶದಲ್ಲಿ ಮಹಾಪೂರ ಉಂಟಾದಾಗ ನಡುರಾತ್ರಿ ಘಟನಾ ಸ್ಥಳಗಳಿಗೆ ಹೋಗಿ ರಕ್ಷಣಾ ಕಾರ್ಯದ ನೇತೃತ್ವದ ವಹಿಸಿದ್ದು ನನಗೆ ತೃಪ್ತಿ ನೀಡಿದ ಕ್ಷಣವಾಗಿದೆ. ಯಾರೂ ಇದುವರೆಗೆ ತಲೆ ಕೆಡಿಸಿಕೊಳ್ಳದ ದನದ ದೊಡ್ಡಿ, ನಾಯಿ ದೊಡ್ಡಿಗಳಿಗೆ ಭೇಟಿ ನೀಡಿ ಮೂಕಪ್ರಾಣಿಗಳು ಅನುಭವಿಸುತ್ತಿದ್ದ ಚಿತ್ರಹಿಂಸೆ ದೂರಮಾಡಿದ ಸಮಾಧಾನ ಇದೆ. ಭಿಕ್ಷುಕರ ಕೇಂದ್ರದ ಸಮಸ್ಯೆ ಬಗೆಹರಿಸಲು ಕೈಲಾದ ಪ್ರಯತ್ನ ಮಾಡಿದ್ದೇನೆ. ಸ್ಮಶಾನಗಳಲ್ಲಿ ಓಡಾಡಿ ಅಲ್ಲಿನ ಅವ್ಯವಸ್ಥೆ ಹೋಗಲಾಡಿಸಲು ಕ್ರಮ ಕೈಗೊಂಡಿದ್ದೇನೆ. ದೋಬಿ ಘಾಟ್‌ಗಳಿಗೂ ಭೇಟಿ ನೀಡಿದ್ದೇನೆ.ಮೇಯರ್‌ ಸ್ಥಾನದಲ್ಲಿ ದ್ದಾಗ ನಾನು ಮಹಿಳೆ ಎನ್ನುವುದನ್ನೇ ಮರೆತಿದ್ದೆ. ಯಾವ ಬೆದರಿಕೆ– ಒತ್ತಡಗಳೂ ಇರಲಿಲ್ಲ. ನಮ್ಮ ಪಕ್ಷದವರೂ ನನ್ನ ಮೇಲೆ ಪ್ರಭಾವ ಬೀರಲಿಲ್ಲ (ನಗು).

* ಹಾಕಿಕೊಂಡ ಯೋಜನೆಗಳನ್ನು ಮಾಡಲು ಸಾಧ್ಯವಾಯಿತೆ?
ಇಲ್ಲ. ಬಿಬಿಎಂಪಿ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟ ನನ್ನ ಕೈಕಟ್ಟಿಹಾಕಿತು. ಹೊಸ ಯೋಜನೆಗಳನ್ನು ತಡವಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಚಾಲ್ತಿಯಲ್ಲಿದ್ದ ಕಾಮಗಾರಿಗಳಿಗೆ ಚುರುಕು ಮುಟ್ಟಿಸಿದ್ದೇನೆ.   ರಸ್ತೆಗಳ ವಿಸ್ತರಣೆ, ಸಿಗ್ನಲ್‌ಮುಕ್ತ ಕಾರಿಡಾರ್‌ ನಿರ್ಮಾಣ, ಪ್ಲಾಸ್ಟಿಕ್‌ ಮುಕ್ತ ವಾತಾವಾರಣ ನಿರ್ಮಾಣ, ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಯೋಜನೆಗಳು ಕನಸಾಗಿ ಉಳಿದಿವೆ. ಇಂತಹ ದೊಡ್ಡ ಯೋಜನೆಗಳಿಗೆ ಆರೂವರೆ ತಿಂಗಳು ಎಲ್ಲಿ ಸಾಲುವುದು?

* ಮೇಯರ್‌ ಆಗಿದ್ದಾಗ ಕುಟುಂಬದ ಕಡೆಗೆ ಗಮನಕೊಡಲು ಆಗಿರಲಿಲ್ಲವೇ?
ಆಯ್ಯೋ, ನಮ್ಮದು ಕೂಡುಕುಟುಂಬ. ಮನೆ ಮಂದಿಯಿಂದ ಸಹಕಾರ ಸಿಕ್ಕಿದ್ದರಿಂದಲೇ ಮೇಯರ್‌ ಆಗಿದ್ದಾಗ ನನಗೆ ಹಗಲು–ರಾತ್ರಿ ಕೆಲಸ ಮಾಡಲು ಸಾಧ್ಯವಾಗಿದೆ. ನಾನು ಕುಟುಂಬದ ಕಡೆಗೆ ಗಮನ ಕೊಡುವುದಕ್ಕಿಂತ ಕುಟುಂಬವೇ ನನ್ನತ್ತ ಗಮನಹರಿಸಿ ಬಿಡುವಿಲ್ಲದ ಕೆಲಸಗಳ ನಡುವೆಯೂ ಆರೋಗ್ಯವಾಗಿ ಇರುವಂತೆ ನೋಡಿಕೊಂಡಿದೆ.

* ರಾಜಕಾರಣ ಪುರುಷ ಪ್ರಧಾ ನವೇ? ಮಹಿಳೆಗೆ ಈ ಕ್ಷೇತ್ರ ಕಷ್ಟವೇ?
ರಾಜಕಾರಣದಲ್ಲಿ ಪುರುಷರ ಪ್ರಭಾವ ಹೆಚ್ಚಿದೆ. ಆದರೆ, ಮಹಿಳೆಯರಿಗೆ ಅವಕಾಶ ಏನೂ ಇಲ್ಲದಿಲ್ಲ. ನಾನು ಮೂರು ಬಾರಿ ಪಾಲಿಕೆ ಸದಸ್ಯಳಾಗಿದ್ದೆ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವಲ್ಲದೆ ಉಪ ಮೇಯರ್‌, ಮೇಯರ್‌ ಹುದ್ದೆ ಅಲಂಕರಿಸಿದ್ದೇನೆ. ಪುರುಷರಿಗೆ ಸಮಾನವಾಗಿ ಕೆಲಸ ಮಾಡಿದ್ದೇನೆ. ಜನಪರ ಮನೋಭಾವ ಇರುವ ಎಲ್ಲರಿಗೂ ಅವಕಾಶ ಇಲ್ಲಿ ಮುಕ್ತವಾಗಿದೆ. ಮುನ್ನುಗ್ಗುವ ಧೈರ್ಯ ಇರಬೇಕು. ಕುಟುಂಬದ ಸಹಕಾರವೂ ಅಗತ್ಯ.

* ಮುಂದಿನ ಹೆಜ್ಜೆ?
ಇದರಲ್ಲಿ ಯಾವ ಗುಟ್ಟೂ ಇಲ್ಲ. ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು. ಆ ಕಾರ್ಯ ಈಗಾಗಲೇ ಆರಂಭವಾಗಿದೆ. ಪಕ್ಷವೂ ನಮಗೆ ಅದೇ ಸಂದೇಶವನ್ನೇ ನೀಡಿದೆ.

*ಕಳೆದ 5 ವರ್ಷಗಳಲ್ಲಿ ಸಾಧನೆಗಳಿಗಿಂತ ಹಗರಣಗಳೇ ಸದ್ದು ಮಾಡಿದವಲ್ಲ?
ಹಾಗೇನಿಲ್ಲ. ಹಲವು ಯೋಜನೆಗಳನ್ನು ಪೂರ್ಣಗೊಳಿಸಿ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇವೆ. ಎಷ್ಟೇ ಯೋಜನೆ ರೂಪಿಸಿದರೂ ಆಗಾಧವಾಗಿ ಬೆಳೆಯುತ್ತಿರುವ ಈ ಮಹಾನಗರದ ಸಮಸ್ಯೆಗಳ ಮುಂದೆ ಅವು ಸಣ್ಣದಾಗಿ ಕಂಡಿದ್ದರಿಂದ ಸಾಧನೆಗಳು ದೊಡ್ಡದಾಗಿ ಬಿಂಬಿತವಾಗಿಲ್ಲ ಅಷ್ಟೇ. ಹಗರಣಗಳು ಈಗಷ್ಟೇ ಅಲ್ಲ, ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ, ಅಧಿಕಾರಿಗಳ ಆಡಳಿತವಿದ್ದಾಗ ಕೂಡ ನಡೆದಿವೆ. ಆದ್ದರಿಂದಲೇ 2000ದಿಂದ ಇದುವರೆಗೆ ನಡೆದ ಎಲ್ಲ ಹಗರಣಗಳ ತನಿಖೆಯನ್ನೂ ರಾಜೇಂದ್ರಕುಮಾರ್‌ ಕಠಾರಿಯಾ ಸಮಿತಿಗೆ ವಹಿಸಬೇಕು. ತಪ್ಪು ಮಾಡಿದ ಎಲ್ಲರೂ ಶಿಕ್ಷೆ ಅನುಭವಿಸಲೇಬೇಕು ಎನ್ನುವುದು ನಮ್ಮ ವಾದವಾಗಿತ್ತು.


ನನಗೆ ಅಧಿಕಾರ ಸಿಕ್ಕಿದ್ದು ಆರೂವರೆ ತಿಂಗಳು ಮಾತ್ರ. ಈ ಅವಧಿಯಲ್ಲಿ 12 ತಿಂಗಳಲ್ಲಿ ಆಗುವಷ್ಟು ಕೆಲಸ ಮಾಡಿದ್ದೇನೆ.
ಶಾಂತಕುಮಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT