ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ ಬಹುತೇಕ ಭರ್ತಿ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಆಲಮಟ್ಟಿ (ವಿಜಾಪುರ)/ ಬೆಳಗಾವಿ/ ಮಂಡ್ಯ/ ಶಿವಮೊಗ್ಗ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಿಂದಾಗಿ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾ­ಗಿದ್ದು ಸೋಮವಾರ ಸಂಜೆಯಿಂದ 11 ಕ್ರೆಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್‌ ಇದ್ದು 518.6 ಮೀಟರ್‌ವರೆಗೆ ನೀರು ಸಂಗ್ರಹಿಟ್ಟು­ಕೊಳ್ಳಲಾಗಿದೆ. ಒಳಹರಿವು 1.50 ಲಕ್ಷ ಕ್ಯೂಸೆಕ್‌ ಇದೆ. ಕ್ರೆಸ್ಟ್‌ಗೇಟ್‌ ಮೂಲಕ 50,000 ಕ್ಯೂಸೆಕ್‌ ಮತ್ತು ವಿದ್ಯುತ್‌ ಉತ್ಪಾದನೆಗೆ 42,000 ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. ಒಟ್ಟಾರೆ ನಾರಾ­ಯ­ಣ­ಪುರ ಜಲಾಶಯಕ್ಕೆ 92,000 ಕ್ಯೂಸೆಕ್‌ ಹರಿದು ಹೋಗುತ್ತಿದೆ.

123 ಟಿಎಂಸಿ ಅಡಿ ಸಂಗ್ರಹ ಸಾಮ­ರ್ಥ್ಯದ ಜಲಾಶಯದಲ್ಲಿ ಈಗ 106 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಎಲ್ಲ ಘಟಕಗಳಿಂದ ಒಟ್ಟು 270 ಮೆ.ವಾ ವಿದ್ಯುತ್ ಉತ್ಪಾದಿಸಲಾಗು­ತ್ತಿದೆ ಎಂದು ಕೆಪಿಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ.
ಪ್ರವಾಹ ಇಳಿಮುಖ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ಒಳಹರಿವು ಕಡಿಮೆ­ಯಾಗಿದ್ದು ಅಕ್ಕೋಳ– ಸಿದ್ನಾಳ ಹಾಗೂ ಕುನ್ನೂರ–ಭೋಜವಾಡಿ ನಡು­ವಿನ ಸೇತುವೆಗಳು ಸಂಚಾರಕ್ಕೆ ಮುಕ್ತ­ಗೊಂಡಿವೆ. ಇನ್ನೂ ನಾಲ್ಕು ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿಯೇ ಇವೆ.

ಮಹಾರಾಷ್ಟ್ರದ ನದಿ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಸೋಮ­ವಾರ ಮತ್ತೆ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಕೃಷ್ಣೆಯ ಉಗಮ­ಸ್ಥಾನ ಮಹಾಬಳೇಶ್ವರದಲ್ಲಿ 96 ಮಿ.ಮೀ., ಕೊಯ್ನಾ–126 ಮಿ.ಮೀ., ನವಜಾ–280 ಮಿ.ಮೀ ಮಳೆ ಬಿದ್ದಿದೆ.

ಮುಂದುವರಿದ ಮಳೆ: ಖಾನಾಪುರ ತಾಲ್ಲೂ­ಕಿನ ಕಣಕುಂಬಿ ಹಾಗೂ ಭೀಮ­ಗಡ ಅರಣ್ಯ ಪ್ರದೇಶದಲ್ಲಿ ವರ್ಷಧಾರೆ ಮುಂದುವರೆದಿದೆ. ತಾಲ್ಲೂಕಿನ ಹೆಮ್ಮ­ಡಗಾ- ತಳೇವಾಡಿ, ಕೊಂಗಳಾ- ನೇರಸಾ, ಪಾರವಾಡ- ಚಿಕಲೆ ಗ್ರಾಮಗಳ ನಡುವೆ ಇರುವ ಹಳ್ಳಗಳ ಮೇಲೆ ಮೂರ್ನಾಲ್ಕು ಅಡಿಗಳಿಗಿಂತಲೂ ಹೆಚ್ಚಿನ ಪ್ರಮಾಣ­ದಲ್ಲಿ ನೀರು ಹರಿಯುತ್ತಿದೆ. ಇದರಿಂದ ಈ ಗ್ರಾಮಗಳ ಸಂಪರ್ಕ ಭಾಗಶಃ ಕಡಿತಗೊಂಡಿದೆ. ಪಟ್ಟಣದ ಹಳೆಯ ಸೇತುವೆಯ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿ­ಯುತ್ತಿದ್ದು, ಹಬ್ಬನಹಟ್ಟಿಯ ಆಂಜ­ನೇಯ ದೇವಸ್ಥಾನ ಸೋಮ­ವಾರವೂ ಜಲಾವೃತಗೊಂಡಿದೆ. ಕಳೆದ 24 ಗಂಟೆ­ಗಳಲ್ಲಿ ಕಣಕುಂಬಿಯಲ್ಲಿ 57.4 ಮಿ.ಮೀ. ಮಳೆ ದಾಖಲಾಗಿದೆ.

ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಜಲಾಶಯಕ್ಕೆ 1.56 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು ಅಷ್ಟೇ ಪ್ರಮಾ­ಣದ ನೀರನ್ನು ಹೊರ­ಬಿಡಲಾಗುತ್ತಿದೆ. ಕೆಆರ್‌ಎಸ್‌: ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಮಟ್ಟವು ಸೋಮವಾರ 113.35 ಅಡಿಗೆ ತಲುಪಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೇವಲ ಒಂದು ಅಡಿ ನೀರು ಸಂಗ್ರಹವಾಗಿದೆ.

ಭಾನುವಾರ 20,965 ಸಾವಿರ ಕ್ಯೂಸೆಕ್‌ ಇದ್ದ ಒಳಹರಿವಿನ ಪ್ರಮಾ­ಣವು ಸೋಮವಾರ 19,333 ಕ್ಯೂಸೆ­ಕ್‌ಗೆ ಇಳಿದಿದೆ. ಹೊರಹರಿವು 12,973 ಕ್ಯೂಸೆಕ್‌ ಇದೆ. ಭದ್ರಾ ಜಲಾಶಯ: ಶಿವಮೊಗ್ಗ ಜಿಲ್ಲೆ­ಯಾ­ದ್ಯಂತ ಮಳೆ ಕ್ಷೀಣಿಸಿದೆ. ಭದ್ರಾ ಜಲಾಶಯದ ನೀರಿನಮಟ್ಟ 171.90 ಅಡಿಗೆ ಏರಿದ್ದು, ಒಳ ಹರಿವು 16,259 ಕ್ಯೂಸೆಕ್‌ಗೆ ಇಳಿದಿದೆ. ಜಲಾಶಯ ಭರ್ತಿಯಾಗಲು ಇನ್ನೂ 14.10 ಅಡಿ ನೀರು ಸಂಗ್ರಹ ವಾಗಬೇಕಿದೆ.

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1787.5 ಅಡಿಗೆ ಏರಿಕೆಯಾ­ಗಿದ್ದು, ಒಳ ಹರಿವು 25,406 ಕ್ಯೂಸೆಕ್‌ಗೆ ಕುಸಿದಿದೆ. ಜಿಲ್ಲೆಯ ವಿವಿಧ ಕಡೆ ಜಲಾವೃತ­ಗೊಂಡಿದ್ದ ಗ್ರಾಮ ಹಾಗೂ ಗದ್ದೆಗಳಲ್ಲಿ ನೀರು ಗಣನೀಯವಾಗಿ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT