ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೋಚನೆಗೆ ಹಕ್ಕಿನ ‘ಬೇಲಿ’

ಬೌದ್ಧಿಕ ಆಸ್ತಿ ಹಕ್ಕು
Last Updated 18 ಜೂನ್ 2016, 5:15 IST
ಅಕ್ಷರ ಗಾತ್ರ

ಸಮಗ್ರ ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್‌) ನೀತಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದೆ. ನಮ್ಮ ಬೌದ್ಧಿಕ ಆಸ್ತಿಯನ್ನು ಇತರರು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯುವಲ್ಲಿ, ಆರ್ಥಿಕ ಬೆಳವಣಿಗೆಗೆ ಅದನ್ನು ಪೂರಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ನೀತಿ ಎಷ್ಟರಮಟ್ಟಿಗೆ ಪರಿಣಾಮಕಾರಿ?

ಇತ್ತೀಚಿನ ದಿನಗಳಲ್ಲಿ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತೀಯರ ಬೃಹತ್ ಮಟ್ಟದ ಪಾಲ್ಗೊಳ್ಳುವಿಕೆ ಕಾಣುತ್ತಿದೆ. ಈ ಪಾಲ್ಗೊಳ್ಳುವಿಕೆ ವಿದೇಶಿಗರ ಕಣ್ಣಿಗೆ ರಾಚುವಂತೆ ಕಂಡರೂ ದೇಶದ ಆರ್ಥಿಕತೆಯ ಮೇಲೆ ಇದು ಅಷ್ಟಾಗಿ ಪರಿಣಾಮ ಬೀರಲೇ ಇಲ್ಲ.

ಇದಕ್ಕೆ ನಮ್ಮ ನೀತಿ ನಿರೂಪಣೆಯ ಕೊರತೆಯೇ ಕಾರಣ ಇರಬಹುದೇನೋ. ಇದರರ್ಥ, ದೇಶಿ ತಂತ್ರಜ್ಞರು, ವಿಜ್ಞಾನಿಗಳು ಜೀವನವಿಡೀ ಪಟ್ಟ ಶ್ರಮ ವಿದೇಶಿ ಕಂಪೆನಿಗಳಿಗೆ ಅಲ್ಪ ಮೊತ್ತಕ್ಕೆ ಬೌದ್ಧಿಕ ಸ್ವತ್ತಾಗಿ ಬಿಕರಿಗೊಂಡದ್ದೇ ಎನ್ನಬಹುದು.

ನಮ್ಮ ಬೌದ್ಧಿಕ ಆಸ್ತಿಗಳಿಗೆ ಸರಿಯಾದ ಬೇಲಿ ಹಾಕಿ ಅದನ್ನು ಆರ್ಥಿಕ ಬೆಳವಣಿಗೆಗೆ ಬಳಸಿಕೊಳ್ಳುವಲ್ಲಿ ನಾವಿನ್ನೂ ಗಟ್ಟಿ ಹೆಜ್ಜೆ ಇಡಬೇಕಿದೆ. ಇಂಥದ್ದೊಂದು  ಸೈದ್ಧಾಂತಿಕ ನಿಲುವಿನೊಂದಿಗೆ ಇತ್ತೀಚೆಗೆ ಜಾರಿಗೊಂಡಿರುವ ನೀತಿ ‘ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕು’(ಐಪಿಆರ್).

‘ನಿಮ್ಮ ಆಲೋಚನೆಯನ್ನು ಇತರರಿಗೆ ಕದಿಯಲು ಬಿಟ್ಟರೆ, ನಿಮ್ಮ ಯಶಸ್ಸಿನ ಹಾದಿಗೆ ನೀವೇ ಅಡ್ಡಗಾಲು ಹಾಕಿದಂತೆ...’ ಎನ್ನುವ ಇಂದಿನ ಸನ್ನಿವೇಶವನ್ನು ಗಮನದಲ್ಲಿ ಇಟ್ಟುಕೊಂಡು, ಆ ಆಲೋಚನೆಗಳಿಗೆ ‘ಬೇಲಿ’ ಹಾಕಲು ಜಾರಿಗೊಂಡಿರುವ ನೀತಿಯಿದು. ‘ಏನೇ ಹೊಸತು ಮಾಡಿದರೂ ಅದು ನೋಂದಣಿಗೊಳ್ಳಬೇಕು, ಸಾಧ್ಯವಿದ್ದಲ್ಲಿ ಅದಕ್ಕೆ ಪೇಟೆಂಟ್ ಪಡೆದುಕೊಳ್ಳಬೇಕು’ ಎಂಬ ಘೋಷಣೆಯೊಂದಿಗೆ ಇದು ಜಾರಿಗೊಂಡಿದೆ.

ಭಾರತದಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲಕರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ನೀತಿಯನ್ನು ಜಾರಿಗೆ ತರಲಾಗಿದೆ. ಇದರ ಮೂಲ ಉದ್ದೇಶ ವಿದೇಶಿ ಉತ್ಪನ್ನಗಳ ಮೇಲೆ ಹೆಚ್ಚುತ್ತಿರುವ ಭಾರತದ ಅವಲಂಬನೆಯನ್ನು ತಗ್ಗಿಸಿ ಸ್ವದೇಶಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು, ಹೊಸದಾಗಿ ಕಂಡುಹಿಡಿಯುವ ಆವಿಷ್ಕಾರಗಳ ಟ್ರೇಡ್‌ಮಾರ್ಕ್‌ ಹಾಗೂ ಹಕ್ಕುಸ್ವಾಮ್ಯವನ್ನು ರಕ್ಷಿಸಿಕೊಳ್ಳುವುದು,

ಸೃಜನಶೀಲತೆ ಹಾಗೂ ಸಂಶೋಧನೆಗೆ ಅನುಕೂಲ ಮಾಡಿಕೊಡುವ ಮೂಲಕ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಯನ್ನು ಪ್ರೇರೇಪಿಸುವುದು, ಆರೋಗ್ಯ ಕಾಳಜಿ, ಆಹಾರ ಭದ್ರತೆ ಹಾಗೂ ಪರಿಸರ ಸಂರಕ್ಷಣೆ ಸೌಲಭ್ಯಗಳು ಜನರ ಕೈಗೆಟುಕುವಂತಾಗುವುದು... ಇತ್ಯಾದಿ.

ಯಾವುದೇ ಆವಿಷ್ಕಾರವನ್ನು ವಾಣಿಜ್ಯ ದೃಷ್ಟಿಯಿಂದ ಮಾಡುವ, ಬಳಸುವ ಹಾಗೂ ಮಾರಾಟ ಮಾಡುವ ಹಕ್ಕನ್ನು ಕಾನೂನು ರೀತ್ಯಾ ಹೊಂದುವ ಪೇಟೆಂಟ್‌ಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಬೌದ್ಧಿಕ ಆಸ್ತಿ ಹಕ್ಕು ನೀತಿ ಮುಖ್ಯವಾಗಿ ಗಮನ ಕೇಂದ್ರೀಕರಿಸಿದೆ.

ಅದರಂತೆಯೇ ಟ್ರೇಡ್‌ಮಾರ್ಕ್‌, ಕೃತಿಸ್ವಾಮ್ಯಗಳ ಕುರಿತೂ ಇದು ನಿಗಾ ವಹಿಸಿದೆ. ಇದರಿಂದಾಗಿ ಯಾವುದೇ ಕ೦ಪೆನಿಯ ಸ್ವತ್ತುಗಳನ್ನು ಬೇರೆಯವರು ಕದಿಯುವುದನ್ನು ತಪ್ಪಿಸಬಹುದಾಗಿದೆ.

ಉದಾಹರಣೆಗೆ ಧಾರವಾಡ ಪೇಡಾ. ಈ ಪೇಡೆಗೆ ಇದರದ್ದೇ ಆದ ವಿಶೇಷತೆ ಇದೆ. ಇದೊಂದು ಭೌಗೋಳಿಕ ಸೂಚಕ. ಇತರ ಪ್ರದೇಶಗಳಲ್ಲಿ ತಯಾರಾಗುವ ಪೇಡಾಗಳನ್ನು ‘ಧಾರವಾಡ ಪೇಡಾ’ದ ಹೆಸರಿನಲ್ಲಿ ಮಾರುವುದು ಕಾನೂನಿನ ಅಡಿ ಅಪರಾಧ.

ಇದೇ ರೀತಿ ಮೈಸೂರು ರೇಷ್ಮೆ, ದಾವಣಗೆರೆ ಬೆಣ್ಣೆ ದೋಸೆ, ಗೋಕಾಕ ಕರದಂಟು, ಬೆಳಗಾವಿ ಕುಂದಾ, ಹರಿಯಾಣ ಜಿಲೇಬಿ, ವಿಜಯಪುರ ಬಾಬಾನಗರ ದ್ರಾಕ್ಷಿ, ಮೈಸೂರು ಮಲ್ಲಿಗೆ... ಹೀಗೆ ಇವೆಲ್ಲವೂ ಭೌಗೋಳಿಕ ಸೂಚಕಗಳು.

‘ಈ ರೀತಿಯಾಗಿ ಪೇಟೆಂಟ್ ಪಡೆದುಕೊಳ್ಳದ ಕೆಲವು ಭೌಗೋಳಿಕ ಸೂಚಕಗಳನ್ನೂ ಪೇಟೆಂಟ್ ವ್ಯಾಪ್ತಿಗೆ ತಂದು ಇವುಗಳನ್ನು ಬೇರೆಯವರು ಕದಿಯುವುದನ್ನು ತಪ್ಪಿಸುವ ಉದ್ದೇಶವನ್ನು ಹೊಸ ನೀತಿ ಹೊಂದಿದೆ’ ಎನ್ನುತ್ತಾರೆ ಸಂಕೇಶ್ವರ ಕೃಷಿ ಸಂಶೋಧನಾ ಕೇಂದ್ರದ ಡಾ. ಸೋಮಶೇಖರ ಗುಡ್ಡದಮಠ.

‘ಬೇವು, ಅರಿಶಿಣ, ಬಾಸುಮತಿ ಅಕ್ಕಿಗೆ 1995ರಲ್ಲಿ ವಿದೇಶಿ ಪೇಟೆಂಟ್ ಸಿಕ್ಕಿದ್ದು ಗೊತ್ತಾಗಿ ಡಾ. ವಂದನಾ ಶಿವ, ಡಾ. ಸುಮನ್ ಸಹಾಯ್‌ರಂಥ ಕ್ರಿಯಾಶೀಲ ವ್ಯಕ್ತಿಗಳು ಪ್ರಚಾರಾಂದೋಲನ ನಡೆಸಿದ ಪರಿಣಾಮವಾಗಿ ಕೇಂದ್ರ ಸರ್ಕಾರ ಎಚ್ಚೆತ್ತು, ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಖಟ್ಲೆ ಹಾಕಿ, ಅವು ನಮ್ಮವೇ ಎಂಬುದನ್ನು ಸಾಬೀತುಪಡಿಸಲೆಂದು ಪುರಾಣ ಗ್ರಂಥಗಳ ಉಲ್ಲೇಖಗಳನ್ನು ನೀಡಬೇಕಾಯಿತು.

ಬೇವು, ಅರಿಶಿಣಕ್ಕೆ ಅಷ್ಟೆಲ್ಲ ಮಹತ್ವ ಇದೆಯೆಂಬುದು (ಬೇರೆಯವರು ಲಪಟಾಯಿಸಹೊರಟಾಗಲೇ) ನಮ್ಮ ಆಧುನಿಕ ಪ್ರಜೆಗಳಿಗೆ ಮೊದಲ ಬಾರಿ ಗೊತ್ತಾಯಿತು’ ಎಂಬ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅವರ ಮಾತು ದೇಶಿ ವಸ್ತುಗಳಿಗೆ ಪೇಟೆಂಟ್‌ ಎಷ್ಟು ಅವಶ್ಯಕ ಎಂಬ ಬಗ್ಗೆ ತಿಳಿಸುತ್ತದೆ.

ಬೋಧನೆ, ತರಬೇತಿ, ಸಂಶೋಧನೆ ಮತ್ತು ಕೌಶಲ ಅಭಿವೃದ್ಧಿ ಕ್ಷೇತ್ರಗಳಿಗೆ ಒತ್ತು ನೀಡುವ ಮೂಲಕ ಹೊಸ ನೀತಿ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯನ್ನು ಐಪಿಆರ್ ತಿಳಿಸುತ್ತದೆ.

ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕಿನ ಹೊಸ ಪೀಳಿಗೆಯನ್ನು ಹುಟ್ಟುಹಾಕುವುದು ಕೂಡ ಈ ನೀತಿಯ ಉದ್ದೇಶಗಳಲ್ಲೊಂದು. ಶಾಲಾ ಕಾಲೇಜುಗಳಲ್ಲಿ ಈ ವಿಷಯವನ್ನು ಪಠ್ಯವಾಗಿ ಅಳವಡಿಸುವ ಮೂಲಕ ಇಂಥದ್ದೊಂದು ಭವಿಷ್ಯ ರೂಪಿಸಲು ಸಾಧ್ಯ ಎನ್ನುತ್ತದೆ ಈ ನೀತಿ.

ಗ್ರಾಮೀಣ ಕುಶಲಕರ್ಮಿಗಳ ಬೌದ್ಧಿಕ ಆಸ್ತಿ ಹಕ್ಕು, ವಾಣಿಜ್ಯ ಉದ್ದೇಶಗಳ ಬಳಕೆಗೆ ಅನುಕೂಲವಾಗುವಂತೆ ಗ್ರಾಮೀಣ ಬ್ಯಾಂಕ್ ಮತ್ತು ಸಹಕಾರ ಸಂಘಗಳಿಂದ ಸಾಲ ನೀಡುವುದರ ಕುರಿತು ಇದರಲ್ಲಿ ಉಲ್ಲೇಖವಾಗಿದೆ.

ಬೌದ್ಧಿಕ ಆಸ್ತಿ ಹಕ್ಕುಗಳನ್ನು ವಾಣಿಜ್ಯೀಕರಣಗೊಳಿಸುವ ಬಗ್ಗೆ ಈ ನೀತಿಯಲ್ಲಿ ವಿಷದಪಡಿಸಲಾಗಿದೆ. ಈ ಮೂಲಕ ಆಸ್ತಿ ಹಕ್ಕಿಗೆ ಮೌಲ್ಯ ತರುವುದು ಇದರ ಉದ್ದೇಶ. ಏಕೆಂದರೆ ಉತ್ಪಾದಕರಿಗೆ ಅವರು ತಯಾರಿಸುವ ವಸ್ತುಗಳ ನಿಜವಾದ ಮೌಲ್ಯ ತಿಳಿದಿರುವುದಿಲ್ಲ.

ಅಪರೂಪದ ವಸ್ತುಗಳಾಗಿದ್ದಲ್ಲಿ ಅವುಗಳಿಗೆ ಟ್ರೇಡ್‌ಮಾರ್ಕ್‌, ಕಾಪಿರೈಟ್ ಅಥವಾ ಪೇಟೆಂಟ್ ಪಡೆದುಕೊಳ್ಳುವ ಅವಶ್ಯಕತೆ ಇದ್ದರೂ ಅವರಿಗೆ ಅದರ ಅರಿವು ಇರುವುದಿಲ್ಲ. ಇಂಥ ಅರಿವನ್ನು ಮೂಡಿಸುವ ಉದ್ದೇಶ ಐಪಿಆರ್‌ ನೀತಿಯದ್ದು.

ಇದಕ್ಕೆ ಉತ್ತಮ ಉದಾಹರಣೆ ಕೃಷಿ ಕ್ಷೇತ್ರ. ಕೆಲವು ರೈತರು ವಿಭಿನ್ನ ಪ್ರಯೋಗಗಳ ಮೂಲಕ ಬೆಳೆಗಳನ್ನು ಬೆಳೆಯುತ್ತಾರೆ. ಆ ಬೆಳೆಗಳಿಗೆ ಪೇಟೆಂಟ್‌ ಪಡೆದುಕೊಳ್ಳಬೇಕು ಎನ್ನುವ ಅರಿವು ಅವರಿಗೆ ಇರುವುದಿಲ್ಲ.

ವಿಶ್ವವಿದ್ಯಾಲಯದವರಿಗೆ ಅಂಥ ನೂತನ ಬೆಳೆಗಳನ್ನು ರೈತರು ಮಾರುತ್ತಾರೆ. ಆದರೆ ಅದೇ ಬೆಳೆಗೆ ಪೇಟೆಂಟ್‌ ಮಾಡಿಕೊಂಡು ಅದರ ಹಕ್ಕುಸ್ವಾಮ್ಯವನ್ನು ಆ ರೈತ ಕಾಪಾಡಿಕೊಂಡರೆ ಇದು ಆತನ ಉಜ್ವಲ ಭವಿಷ್ಯಕ್ಕೆ ಕಾರಣವಾಗಬಹುದು. ಇಂಥ ವಿಷಯಗಳಿಗೆ ಈ ನೀತಿ ಒತ್ತು ಕೊಟ್ಟಿದೆ.

ಮಾಲೀಕರ ಹಕ್ಕಿನ ಹಿತಾಸಕ್ತಿ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಪೂರಕವಾಗಿರುವಂಥ ಪ್ರಬಲ ಹಾಗೂ ಪರಿಣಾಮಕಾರಿ ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕು ಕಾನೂನುಗಳನ್ನು ಜಾರಿಗೆ ತರುವ ಬಗ್ಗೆ ನೀತಿಯಲ್ಲಿ ವಿವರಿಸಲಾಗಿದೆ.

ಈ ಮೂಲಕ ಹೊಸ ಆವಿಷ್ಕಾರಗಳ ನಕಲಿಗೆ ಕಡಿವಾಣ ಹಾಕುವುದು ಇದರ ಉದ್ದೇಶ. ಜೊತೆಗೆ, ಜಾರಿ ಮತ್ತು ನ್ಯಾಯ ವ್ಯವಸ್ಥೆಯನ್ನು ಬಲಗೊಳಿಸುವ ಮೂಲಕ ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಯನ್ನು ತಡೆಯುವ ಗುರಿಯನ್ನೂ ರಾಷ್ಟ್ರೀಯ ಐಪಿಆರ್ ನೀತಿ ಹೊಂದಿದೆ. ಇದರ ಹೊರತಾಗಿ ಬೌದ್ಧಿಕ ಆಸ್ತಿಯ ಕುರಿತಾಗಿ ಇರುವ ಎಲ್ಲ ಕಾನೂನುಗಳನ್ನು ಒಂದೇ ಸೂರಿನಡಿ ತರುವ ಯೋಜನೆ ಇದೆ.

ಈ ಕಾನೂನಿನ ವ್ಯಾಪ್ತಿಗೆ ಸ೦ಗೀತ, ಚಲನಚಿತ್ರ ಹಾಗೂ ಕೈಗಾರಿಕಾ ಚಿತ್ರ ವಿನ್ಯಾಸವನ್ನೂ ಸೇರ್ಪಡೆಗೊಳಿಸಲಾಗಿದೆ. ವಾಣಿಜ್ಯ ನಿಯಮ ಮತ್ತು ಪ್ರಚಾರ (ಡಿಐಪಿಪಿ) ಇಲಾಖೆಯನ್ನು ಈ ಸ೦ಬ೦ಧ ನೋಡಲ್ ಏಜೆನ್ಸಿಯನ್ನಾಗಿ ನೇಮಿಸುವ ಗುರಿ ಇದೆ.

ಸರ್ಕಾರದ ಪ್ರತಿ ಇಲಾಖೆಯಲ್ಲಿಯೂ ಐಪಿಆರ್ ಘಟಕ ಸ್ಥಾಪಿಸುವುದು,  ಐಪಿಆರ್‌ಗೆ ಸಂಬಂಧಿಸಿದ ದೂರುಗಳ ಕುರಿತು ವಿಚಾರಣೆಗೆ ಆರ್ಥಿಕ ಐಪಿ ಕೋರ್ಟ್‌ಗಳನ್ನು ರಚಿಸುವುದು, ಪ್ರತಿ ಐದು ವರ್ಷಗಳಿಗೊಮ್ಮೆ ಈ ನೀತಿಯನ್ನು ಪುನರ್‌ವಿಮರ್ಶೆ ಮಾಡುವ ಉಲ್ಲೇಖವಿದೆ.

‘ಐಪಿಆರ್ ನೀತಿ ಅನುಷ್ಠಾನಕ್ಕಾಗಿ ಡಿಐಪಿಪಿ ಜತೆಗೆ ರಾಜ್ಯ ಸರ್ಕಾರ ಈ ಘಟಕಗಳೊ೦ದಿಗೆ ಸಮನ್ವಯ ಸಾಧಿಸುತ್ತದೆ. ರಾಷ್ಟ್ರೀಯ ಐಪಿಆರ್ ನೀತಿ ಅನುಮೋದನೆಗೊಳ್ಳುವ ಮೂಲಕ ಸೃಜನಶೀಲತೆ ಹಾಗೂ ಆವಿಷ್ಕಾರಕ್ಕೆ ಪ್ರೋತ್ಸಾಹ ದೊರಕುತ್ತದೆ. ಉದ್ಯಮಶೀಲತೆ ಬೆಳೆಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಡಿಐಪಿಪಿ ಕಾಯ೯ದಶಿ೯ ರಮೇಶ್ ಅಭಿಷೇಕ್.

ಅಪಸ್ವರಗಳ ಬೆಂಬತ್ತಿ...
ಯಾವುದೇ ಹೊಸ ನೀತಿ ಪ್ರಕಟವಾದಾಗ ಅದರಲ್ಲೊಂದಿಷ್ಟು ಅಪಸ್ವರಗಳು ಕೇಳುವುದು ಸಾಮಾನ್ಯ. ಅಂತೆಯೇ ರಾಷ್ಟ್ರೀಯ ಐಪಿಆರ್‌ ನೀತಿಗೂ ಕೆಲವು ತಜ್ಞರು ಅಪಸ್ವರ ಎತ್ತಿದ್ದಾರೆ. ಈ ನೀತಿಯ ಆರಂಭಿಕ ಹಂತವೇ ಸರಿಯಿಲ್ಲ ಎನ್ನುವುದು ಕೆಲವರ ಅಭಿಮತ. 

‘2014ರಲ್ಲಿ ಐದು ದೇಶಗಳ ಸರ್ಕಾರಗಳು ಐಪಿಆರ್ ನೀತಿಯ ಪ್ರಕ್ರಿಯೆಯ ಮಾಹಿತಿ ಕೋರಿ ಡಿಐಪಿಪಿಗೆ ಪತ್ರ ಬರೆದಿದ್ದವು. ಈ ಪತ್ರದ ಹಿನ್ನೆಲೆಯಲ್ಲಿ ಡಿಐಪಿಪಿ, ಸ್ವಯಂಸೇವಾ ಸಂಸ್ಥೆಗಳು, ಜನಸಾಮಾನ್ಯರು, ಬಹುರಾಷ್ಟ್ರೀಯ ಕಂಪೆನಿಗಳು, ಉದ್ಯಮ ಮತ್ತು ವ್ಯಾಪಾರ ಸಂಸ್ಥೆ ಹಾಗೂ ಇತರ ಕ್ಷೇತ್ರಗಳಿಂದ ಪ್ರತಿಕ್ರಿಯೆ ಕೇಳಲಾಗಿತ್ತು.

ಈ ಸಂಬಂಧ ಸುಮಾರು 300 ಪತ್ರಗಳು ಡಿಐಪಿಪಿಗೆ ಬಂದಿದ್ದವು. ಕರಡು ನೀತಿಯನ್ನು ರಚಿಸಲು ಒಂದು ತಂಡ ರಚಿಸಲಾಯಿತು. ಆದರೆ ಆ ತಂಡವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಕರಡು ನೀತಿಯನ್ನು ಬಿಡುಗಡೆ ಮಾಡುವಲ್ಲಿ ವಿಳಂಬವಾಯಿತು.

ಆದರೆ ಅದಾಗಲೇ ಸಿದ್ಧಗೊಂಡಿದ್ದ ಕರಡು ಪ್ರತಿ ಸೋರಿಕೆಯಾಯಿತು. ಸ್ವೀಕೃತವಾಗಿದ್ದ 300 ಪತ್ರಗಳಿಗೆ ಪ್ರತಿಕ್ರಿಯೆ ನೀಡದೆಯೇ ಅಂತಿಮ ಪ್ರತಿ ಸಿದ್ಧಗೊಂಡಿದೆ. ಈ ನೀತಿಯ ಆರಂಭವೇ ಗೊಂದಲಮಯವಾಗಿದೆ’ ಎಂದು ‘ದಿ ವೈರ್‌’ ಪತ್ರಿಕೆಯಲ್ಲಿ ಐಪಿಆರ್‌ ತಜ್ಞರಾಗಿರುವ ಅನುಭಾ ಸಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೇಟೆಂಟ್‌ ನೀತಿಯ ಬಗ್ಗೆಯೂ ಕೆಲವು ತಜ್ಞರಿಂದ ವಿರೋಧ ವ್ಯಕ್ತವಾಗಿದೆ. ಪೇಟೆಂಟ್ ದಾಖಲಾತಿಗೂ ಮತ್ತು ಒಂದು ದೇಶದ ಒಟ್ಟಾರೆ ಸಂಶೋಧನಾ ನಿರ್ವಹಣೆಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವುದು ಅವರ ಮಾತು.

ಈ ಮಾತನ್ನು ಸಮರ್ಥಿಸಿಕೊಳ್ಳುವವರು ನೀಡುವ ಉದಾಹರಣೆ ಚೀನಾ ಸರ್ಕಾರದ್ದು. 1995ರಲ್ಲಿ ಚೀನಾದಲ್ಲಿನ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಬೌದ್ಧಿಕ ಆಸ್ತಿ ಹಕ್ಕನ್ನು ಜನಪ್ರಿಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು.

ಹತ್ತು ವರ್ಷಗಳ ಅವಧಿಯ ಈ ಕಾರ್ಯವು ಫಲಶ್ರುತಿ ಕಂಡದ್ದು ಕಳೆದ ವರ್ಷ. ಏಕೆಂದರೆ ಒಂದೇ ವರ್ಷದಲ್ಲಿ ಚೀನಾ 10 ಲಕ್ಷ ಪೇಟೆಂಟ್‌ ಮನವಿಗಳನ್ನು ಪಡೆದು ಅಂತರರಾಷ್ಟ್ರೀಯ ದಾಖಲೆ ಮಾಡಿದೆ.

ಇದೊಂದು ದಾಖಲೆ ಎಂಬ ಹೆಗ್ಗಳಿಕೆ ಪಡೆದಿದ್ದರೂ ಸತ್ಯದ ಬೆನ್ನಟ್ಟಿ ಹೋದಾಗ ತಿಳಿದ ಅಂಶವೆಂದರೆ, ಪೇಟೆಂಟ್‌ಗಾಗಿ ಹೊಸ ಹೊಸ ಸಂಶೋಧನೆ ನಡೆಯುವ ತರಾತುರಿಯಲ್ಲಿ ಕಡಿಮೆ ಗುಣಮಟ್ಟದ ಸಂಶೋಧನೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದ್ದವು. ಚೀನಾದ ಪೇಟೆಂಟ್‌ಗಳಲ್ಲಿ ಸಾಧಾರಣ ಅಥವಾ ಅತ್ಯುತ್ತಮ ಗುಣಮಟ್ಟ ಹೊಂದಿರುವ ಪ್ರಮಾಣ ಶೇಕಡ ಒಂದಕ್ಕಿಂತಲೂ ಕಡಿಮೆ ಇದೆ.

ಹಾಗಾಗಿ ಚೀನಾ ಹೆಚ್ಚು ಪೇಟೆಂಟ್‌ ದಾಖಲಾತಿ ತೋರಿಸಿದ್ದರೂ ಅದರ ಸಂಶೋಧನಾ ನಿರ್ವಹಣೆ ಮಾತ್ರ ಕಳಪೆಯಾಗಿದೆ ಎನ್ನುತ್ತಿದ್ದಾರೆ ಇವರು. ಆದರೆ ಈ ಮಾತಿಗೆ ವಿರೋಧ ವ್ಯಕ್ತಪಡಿಸುವ ಹೈಕೋರ್ಟ್‌ ವಕೀಲ ಎನ್‌.ಪಿ.ಅಮೃತೇಶ್‌, ಚೀನಾದ ನೀತಿಗೂ ಭಾರತದ ನೀತಿಗೂ ವ್ಯತ್ಯಾಸವಿದೆ ಎಂದು ಅಭಿಪ್ರಾಯ ಪಡುತ್ತಾರೆ. 

ಜ್ಞಾನದ ಮುಕ್ತ ಹರಿವಿಗೆ ಮಾರಕ
ಹೊಸ ಐಪಿಆರ್‌ ನೀತಿಯ ಅನ್ವಯ ವಿಜ್ಞಾನಿಗಳು ಹಾಗೂ ಉಪನ್ಯಾಸಕರು ತಮ್ಮ ಎಲ್ಲ ಸಂಶೋಧನೆಗಳನ್ನು ಬೌದ್ಧಿಕ ಆಸ್ತಿಯನ್ನಾಗಿಸಬೇಕಾಗುತ್ತದೆ. ಆದರೆ ಇದು ಜ್ಞಾನದ ಮುಕ್ತ ಹರಿವಿಗೆ ಮಾರಕವಾಗಿದೆ. ಚಲನಚಿತ್ರಗಳ ನಕಲು ಮಾಡುವುದು ಕೇವಲ ಸಿವಿಲ್‌ ಅಪರಾಧ. ಅದನ್ನು ಈ ನೀತಿಯಲ್ಲಿ ಕ್ರಿಮಿನಲ್‌ ಅಪರಾಧಕ್ಕೆ ಸೇರಿಸಿರುವುದು ಸಹ ಉಚಿತವಲ್ಲ.
‘ಇನ್‌ಸೈಡ್‌ ಇಂಡಿಯಾ’ ನಿಯತಕಾಲಿಕದಲ್ಲಿ 
ತಜ್ಞರ ಅಭಿಮತ

ಹೊಸ ನೀತಿಯ ಪ್ರಮುಖ ಉದ್ದೇಶ

* ಎಲ್ಲ ಕ್ಷೇತ್ರಗಳಲ್ಲಿ ಹೊಸ ಹೊಸ ಸಂಶೋಧನೆ ಮತ್ತು  ಅಭಿವೃದ್ಧಿಗೆ ಉತ್ತೇಜನ ನೀಡಲು ತೆರಿಗೆ ವಿನಾಯ್ತಿ
* ನೂತನ ಸಂಶೋಧನೆಗಳಿಗೆ ಶೀಘ್ರದಲ್ಲಿ ಟ್ರೇಡ್‌ಮಾರ್ಕ್, ಕಾಪಿರೈಟ್ ಅಥವಾ ಪೇಟೆಂಟ್ ನೀಡುವುದು
* ತಮ್ಮ ಸಂಶೋಧನೆಗಳನ್ನು ನಕಲು ಮಾಡಬಹುದೆನ್ನುವ ಹೆದರಿಕೆ ಇಲ್ಲದೆ ಸಂಶೋಧಕರು ಸೂಕ್ತ ಆರ್ಥಿಕ ಲಾಭ ಪಡೆಯುವುದನ್ನು ಖಾತ್ರಿಪಡಿಸುವುದು
* ರೈತರು, ನೇಕಾರರಂತಹ ಗ್ರಾಮೀಣ ವಲಯದವರ ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆಗೆ ಕ್ರಮ
* ಕುಶಲಕರ್ಮಿಗಳ ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆಗೆ ಉತ್ತೇಜನ ಮತ್ತು ವಾಣಿಜ್ಯ ಉದ್ದೇಶಗಳ ಬಳಕೆಗೆ ಅನುಕೂಲವಾಗುವಂತೆ ಗ್ರಾಮೀಣ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಿಂದ ಸಾಲ ನೀಡಿಕೆ

ಅರ್ಜಿ ವಿಲೇವಾರಿ

ದೇಶದಲ್ಲಿನ ಹಾಲಿ ಸ್ಥಿತಿ
*1 ಪೇಟೆಂಟ್‌ ಅರ್ಜಿ ಇತ್ಯರ್ಥಕ್ಕೆ ಕನಿಷ್ಠ ಆರು ವರ್ಷ ಬೇಕು
*(ಅಮೆರಿಕದಲ್ಲಿ ಇದಕ್ಕೆ ತೆಗೆದುಕೊಳ್ಳುವ ಅವಧಿ ಸುಮಾರು 3 ವರ್ಷ)
*68 ಸಾವಿರ ಅರ್ಜಿಗಳನ್ನು ಮಾತ್ರ ಕಳೆದ 10 ವರ್ಷಗಳಲ್ಲಿ ವಿಲೇವಾರಿ ಮಾಡಲಾಗಿದೆ
*2.37 ಲಕ್ಷ ಪೇಟೆಂಟ್‌ ಕೋರಿಕೆ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ (ಕಳೆದ ಮಾರ್ಚ್‌ವರೆಗೆ)
*5.44 ಕೋಟಿ  ಟ್ರೇಡ್‌ಮಾರ್ಕ್‌ ನೋಂದಣಿ ಕೋರಿಕೆ ಅರ್ಜಿಗಳು ಇತ್ಯರ್ಥಕ್ಕಾಗಿ ಕಾಯುತ್ತಿವೆ.
*2015ರಲ್ಲಿ ವಿಲೇವಾರಿ ಮಾಡಲಾದ ಅರ್ಜಿಗಳಲ್ಲಿ ಶೇ 98ರಷ್ಟು 5  ವರ್ಷಗಳಿಗಿಂತಲೂ ಹಳೆಯವಾಗಿದ್ದವು
*19 ವರ್ಷಗಳಷ್ಟು ಹಳೆಯ ಅರ್ಜಿಯೂ ಇದರಲ್ಲಿತ್ತು!

ಬದಲಾವಣೆ ನಿರೀಕ್ಷೆ
*ಪೇಟೆಂಟ್, ಟ್ರೇಡ್‌ಮಾರ್ಕ್‌ ಕೋರಿಕೆ ಅರ್ಜಿಗಳ ವಿಳಂಬ ವಿಲೇವಾರಿ ಭಾರತದ ಪ್ರಗತಿಗೆ ಮಾರಕ.
*ಬೌದ್ಧಿಕ ಆಸ್ತಿ ಪೇಟೆಂಟ್ ಹಾಗೂ ನೋಂದಣಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯೇ ಇದಕ್ಕೆ ಮುಖ್ಯ ಕಾರಣ.
*ಈ ಅರ್ಜಿಗಳ ತ್ವರಿತ ವಿಲೇವಾರಿಗೆ ಹೊಸ ನೀತಿಯಲ್ಲಿದೆ ಉತ್ತರ:
*ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ ಆಡಳಿತದ ಆಧುನೀಕರಣ ಮತ್ತು ಬಲಗೊಳಿಸುವಿಕೆ
*ಎಲ್ಲ ಸಕಾ೯ರಿ ದಾಖಲೆಗಳ ಡಿಜಿಟಲೀಕರಣ
*ಬೌದ್ಧಿಕ ಹಕ್ಕುಸ್ವಾಮ್ಯ ನೀತಿಯ ವೆಬ್‌ಸೈಟ್‌ ಬಳಸಿ ಆನ್‌ಲೈನ್‌ ಮೂಲಕ ಟ್ರೇಡ್‌ಮಾರ್ಕ್‌ಗಳ ನೋ೦ದಣಿ
*ಅರ್ಜಿಗಳ ಮೇಲೆ ನಿಗಾ ವಹಿಸಲು ನೋಡಲ್ ಏಜೆನ್ಸಿಯಾಗಿ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಯ (ಡಿಐಪಿಪಿ) ನೇಮಕ
*ಎಲ್ಲ ಬಾಕಿ ಅರ್ಜಿಗಳನ್ನೂ 2017ರ ಒಳಗಾಗಿ ಇತ್ಯರ್ಥಗೊಳಿಸುವ ಉದ್ದೇಶ
*ಪ್ರಸಕ್ತ ವ್ಯವಸ್ಥೆಯಲ್ಲಿ 5-7 ವರ್ಷ ತೆಗೆದುಕೊಳ್ಳಬಹುದಾದ ಐಪಿಆರ್ ಅರ್ಜಿಗಳ ಇತ್ಯರ್ಥದ ಕಾಲಾವಧಿಯನ್ನು 18 ತಿಂಗಳಿಗೆ ಇಳಿಸುವುದು
*13 ತಿಂಗಳು ತೆಗೆದುಕೊಳ್ಳಬಹುದಾಗಿದ್ದ ಟ್ರೇಡ್‌ಮಾರ್ಕ್‌ ನೋಂದಣಿಯನ್ನು ಒಂದು ತಿಂಗಳಿಗೆ ಇಳಿಸುವುದು.

ಆಧಾರ: ‘ಇಂಡಿಯಾಸ್ಪೆಂಡ್‌’ ಸಂಸ್ಥೆ

*
ಪೇಟೆಂಟ್‌ ಎನ್ನುವುದು ಸಾಫ್ಟ್‌ವೇರ್‌ ಉದ್ಯಮಕ್ಕೆ ಪೀಡೆ.
–ವಿಶಾಲ್‌ ಸಿಕ್ಕಾ,
ಇನ್ಫೊಸಿಸ್‌ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT