ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೋಚನೆಯೇ ನಿಜವಾದ ವಿದ್ಯೆ

Last Updated 27 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ನಿಜವಾದ ವಿದ್ಯೆ ಮನುಷ್ಯನಿಗೆ ಆಲೋಚನೆ ಮಾಡುವುದನ್ನು ಕಲಿಸುತ್ತದೆ ಎಂದು ಕನ್ನಡದ ಜಾನಪದ ವಿದ್ವಾಂಸ ಹಾಗೂ ಬರಹಗಾರ ಹಾ.ಮಾ.ನಾಯಕ ಅವರು ಹೇಳಿದ್ದಾರೆ. ಅಂದರೆ ಮನುಷ್ಯ ಆಲೋಚನೆಗೆ ಇಳಿದಾಗ ಮಾತ್ರ ಅವನಿಗೆ ಬದುಕಿನ ದಾರಿ ಗೋಚರಿಸುತ್ತದೆ. ಇದೇ ಮಾತನ್ನು ನಂಬಿ ನಡೆದ ಸಾಧಕರ ಕಿರು ಪರಿಚಯ ಇಲ್ಲಿದೆ. 

ಉನ್ನತ ವ್ಯಾಸಂಗ ಮಾಡಿದ ಯುವತಿಯರು ಸಾಮಾನ್ಯವಾಗಿ ಪ್ರತಿಷ್ಠಿತ ಕಂಪೆನಿಗಳು ಅಥವಾ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಆದರೆ ವೈಶಾಲಿ ಮಾತ್ರ ಸಣ್ಣ ಪುಟ್ಟ ಸರಕುಗಳನ್ನು ಮಾರಾಟ ಮಾಡುವ ಸರಕು ವ್ಯಾಪಾರ ಕ್ಷೇತ್ರಕ್ಕೆ ಕಾಲಿಡುವ ಮೂಲಕ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದ್ದಾರೆ.

ಮಹಾರಾಷ್ಟ್ರ ಮೂಲದ ವೈಶಾಲಿ ಸಾರ್ವಂಕರ್ ಮುಂಬೈನಲ್ಲಿ ಉನ್ನತ ವ್ಯಾಸಂಗ ಮಾಡಿದವರು. ವೈಶಾಲಿ ಅವರದ್ದು ಸಂಪ್ರದಾಯಸ್ಥ ಕುಟುಂಬ. ಹಾಗಾಗಿ ವಿದ್ಯಾಭ್ಯಾಸ ಮುಗಿದ ಕೂಡಲೇ ಮನೆಯವರು ಮದುವೆ ಮಾಡಲು ಮುಂದಾದರು.

ವೈಶಾಲಿ ಮದುವೆಗೆ ಒಪ್ಪದಿದ್ದಾಗ ಕೆಲಸಕ್ಕೆ ಹೋಗು ಎಂದರು. ನಾನು ಕೆಲಸಕ್ಕೂ ಹೋಗುವುದಿಲ್ಲ ಚಿಲ್ಲರೆ ಸರಕುಗಳನ್ನು ಮಾರಾಟ ಮಾಡುತ್ತೇನೆ ಎಂದು ಹೇಳಿದಾಗ ಮನೆಯವರು ಶಾಕ್ ಆಗಿದ್ದರಂತೆ.

ಹಟ ಹಿಡಿದ ವೈಶಾಲಿ ಸಣ್ಣದಾಗಿ ಚಿಲ್ಲರೆ ಸರಕುಗಳನ್ನು ಮಾರಾಟ ಮಾಡಲು ಆರಂಭಿಸಿದರು. ಬ್ರೋಕರ್‌ಗಳು ಮತ್ತು ಅಶಿಕ್ಷಿತ ಜನರ ಕೆಟ್ಟ ಭಾಷೆಯನ್ನು ಸಹಿಸಿಕೊಂಡು ಸರಕುಗಳನ್ನು ಖರೀದಿಸುವುದು ಮತ್ತು ಮಾರುವ ಕಾಯಕ ಮುಂದುವರೆಸಿದರು.

ಚಿಲ್ಲರೆ ಸರಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾಕೆ ಮಾರಾಟ ಮಾಡಬಾರದು ಎಂದು ಆಲೋಚಿಸಿದರು. ನಂತರ ವಿವಿಧ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸರಕು ಮಾರಾಟದ ಬಗ್ಗೆ ಮಾಹಿತಿ ಪಡೆದರು. ನಂತರ ತಮ್ಮ ವಹಿವಾಟಿಗೆ ತಂತ್ರಜ್ಞಾನದ ಸ್ಪರ್ಶ ನೀಡುವ ಮೂಲಕ ಸರಕುಗಳನ್ನು ವಿದೇಶಕ್ಕೆ ರಫ್ತು ಮಾಡುವ ವಹಿವಾಟಿಗೆ ಚಾಲನೆ ನೀಡಿದರು.

ಇದೀಗ ರಫ್ತು ಮತ್ತು ಆಮದು ವಹಿವಾಟಿನಲ್ಲಿ ವೈಶಾಲಿ ದೊಡ್ಡ ಹೆಸರು ಮಾಡಿದ್ದಾರೆ. ಅಂತರರಾಷ್ಟ್ರೀಯ ಸರಕು ವ್ಯಾಪಾರದಲ್ಲಿ ವೈಶಾಲಿ ಅವರು ಮೂರನೇ ಸ್ಥಾನದಲ್ಲಿರುವುದು ವಿಶೇಷ. ವೈಶಾಲಿ ಕಂಪೆನಿಯಲ್ಲಿ ಶೇ80ರಷ್ಟು ಮಹಿಳೆಯರು ಕೆಲಸ ಮಾಡುತ್ತಿರುವುದು ಮತ್ತೊಂದು ವಿಶೇಷ.

ಮಹಿಳೆಯರು ಯಾವಾಗಲು ಕುಟುಂಬಕ್ಕೆ ಅವಲಂಬಿತರಾಗದೇ ಅಥವಾ ಇಂಥದ್ದೇ ಕೆಲಸ ಬೇಕು ಎಂದು ಕಾಯುತ್ತ ಕುಳಿತುಕೊಳ್ಳದೆ ಸಿಕ್ಕ ಅವಕಾಶದಲ್ಲಿ ಹಿರಿದಾದ ಸಾಧನೆ ಮಾಡುವುದರಲ್ಲೇ ಜಾಣತನ ಅಡಗಿದೆ ಎಂದು ವೈಶಾಲಿ ಯುವತಿಯರಿಗೆ ಕಿವಿ ಮಾತು ಹೇಳುತ್ತಾರೆ.
Vaishalisarwankar/facebook/commoditytrader

*
ರಾಜ್ಯದಲ್ಲಿ ಪ್ರಥಮ್ ಎಂಬ ಅಧ್ಯಯನ ಸಂಸ್ಥೆಯೊಂದು ವರದಿಯೊಂದನ್ನು ಪ್ರಕಟಿಸಿದೆ. ಶೇ 45 ರಷ್ಟು ಸರ್ಕಾರಿ ಶಾಲಾ ಮಕ್ಕಳು ಹಾಗೂ ಶೇ24ರಷ್ಟು ಖಾಸಗಿ ಶಾಲಾ ಮಕ್ಕಳಿಗೆ ಸರಿಯಾಗಿ ಒಂದೂ ವಾಕ್ಯವನ್ನು ಓದಲು ಅಥವಾ ಒಂದು ಪದವನ್ನು ಬರೆಯಲೂ ಬರುವುದಿಲ್ಲ ಎಂದು ತಿಳಿಸಿದೆ.

ಇದು ನಮ್ಮ ರಾಜ್ಯದ ಶಿಕ್ಷಣ ಗುಣಮಟ್ಟವನ್ನು ತೋರಿಸುತ್ತದೆ! ಬಿಸಿಯೂಟಕ್ಕಾಗಿ ಮಾತ್ರವೇ ಶಾಲೆಗಳು ನಡೆಯುತ್ತಿವೆಯೇ ಎಂಬ ಅನುಮಾನ ಈಗ ಜನರಲ್ಲಿ ಮನೆ ಮಾಡಿರುವುದು ಸುಳ್ಳಲ್ಲ.

ರಾಜ್ಯದ ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಕಾಳಜಿಯೊಂದಿಗೆ ರಾಜ್ಯದಲ್ಲಿ 200ಕ್ಕೂ ಹೆಚ್ಚು ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಮೂಲಕ ಉಮೇಶ್ ಮಲ್ಹೋತ್ರ ಶಿಕ್ಷಣ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

ಬೆಂಗಳೂರಿನವರಾದ ಉಮೇಶ್ ಐಐಟಿ ಪದವೀಧರರು. ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್‌ಗೆ ಶಿಕ್ಷಣ ಕ್ಷೇತ್ರದಲ್ಲಿ ಹಿರಿದಾದ ಸಾಧನೆ ಮಾಡಬೇಕು ಎಂಬ ಹಂಬಲದೊಂದಿಗೆ ಭಾರತಕ್ಕೆ ಮರಳಿದರು.

ಮಕ್ಕಳಿಗೆ ಒತ್ತಡರಹಿತವಾಗಿ ಶಿಕ್ಷಣ ಕಲಿಸಬೇಕು ಎಂಬುದನ್ನು ಉಮೇಶ್ ಅರಿತಿದ್ದರು. ಹಾಗಾಗಿ ಅವರು ಆಟದ ಜೊತೆ ಜೊತೆಗೆ ಶಿಕ್ಷಣ ನೀಡುವ ಸಲುವಾಗಿ ‘ಹಿಪ್ಪೊಕ್ಯಾಂಪಸ್ ಲರ್ನಿಂಗ್ ಸೆಂಟರ್’ (ಎಚ್‌ಎಲ್‌ಸಿ) ಆರಂಭಿಸಿದರು. ಎರಡೂವರೆ ವರ್ಷದ ಮಕ್ಕಳಿಂದ ಹಿಡಿದು 6 ವರ್ಷದ ಮಕ್ಕಳವರೆಗೂ ಎಚ್‌ಎಲ್‌ಸಿಯಲ್ಲಿ ಶಿಕ್ಷಣ ನೀಡಲಾಗುತ್ತದೆ.

ಗಣಿತ, ಇಂಗ್ಲಿಷ್ ಮತ್ತು ಕನ್ನಡವನ್ನು ಮಾತ್ರ ಇಲ್ಲಿ ಕಲಿಸಲಾಗುತ್ತದೆ. ಈ ಕೇಂದ್ರಗಳಲ್ಲಿ 11 ಸಾವಿರ ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿರತರಾಗಿದ್ದಾರೆ ಎನ್ನುತ್ತಾರೆ ಉಮೇಶ್. ಶೇ85ರಷ್ಟು ಮಕ್ಕಳು ನಿರರ್ಗಳವಾಗಿ ಇಂಗ್ಲಿಷ್ ಮತ್ತು ಕನ್ನಡವನ್ನು ಮಾತನಾಡುತ್ತಾರೆ ಎನ್ನುತ್ತಾರೆ ಅವರು.

ಪ್ರಸ್ತುತ ರಾಜ್ಯದಲ್ಲಿ 285 ಪೂರ್ವ ಪ್ರಾಥಮಿಕ ಶಾಲೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲೂ ಶಾಲೆಗಳನ್ನು ತೆರೆಯುವ ಗುರಿಯನ್ನು ಉಮೇಶ್ ಹೊಂದಿದ್ದಾರೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡುವುದರಿಂದ  ಕ್ರಿಯಾಶೀಲರಾಗಿ ಬೆಳೆಯುತ್ತಾರೆ. ಇದರಿಂದ ಅವರ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಉಮೇಶ್ ಹೇಳುತ್ತಾರೆ.
www.hippocampuslearningcenter.org

*
ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ತಿಂಗಳ ಹಿಂದೆ ಕೆನಡಾ ಪ್ರವಾಸಕ್ಕೆ ಹೋಗಿದ್ದರು. ‘84 ಘಾಟ್‌ಗಳಿರುವ ವಾರಾಣಸಿಯಲ್ಲಿ ಯುವತಿಯೊಬ್ಬಳು ತಂಡ ಕಟ್ಟಿಕೊಂಡು ಗಲೀಜನ್ನು ಸ್ವಚ್ಛ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ, ಅವರಿಗೆ ನನ್ನ ಧನ್ಯವಾದಗಳು’ ಎಂದು ಅಲ್ಲಿ ಮಾಡಿದ ಭಾಷಣದಲ್ಲಿ ಮೋದಿ ಹೇಳಿದ್ದರು. ಈ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಂಡ ಯುವತಿ ಇಂದು ಸ್ವಚ್ಛತಾ ಅಭಿಯಾನದ ಐಕಾನ್ ಆಗಿದ್ದಾರೆ. ಅವರೇ ನಾಗಾಲ್ಯಾಂಡ್ ಮೂಲದ ತೆಮ್ಸುಟುಲಾ ಇಮ್ಸಾಂಗ್.

34 ವರ್ಷದ ಇಮ್ಸಾಂಗ್ ಶಾಲಾ ದಿನಗಳಲ್ಲೇ ಸಮಾಜಮುಖಿ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು. ಕಾಲೇಜು ದಿನಗಳಲ್ಲಿ ಎನ್‌ಎಸ್‌ಎಸ್, ಎಸಿಸಿಗೆ ಸೇರಿಕೊಂಡು ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು.

ಕಾಲೇಜು ದಿನಗಳಲ್ಲಿ ತಿಂಗಳಿಗೆ ಎರಡು ಸಲ ಗೆಳೆಯರ ಜೊತೆ ಸೇರಿ ಕಾಲೇಜು ಆವರಣವನ್ನು ಸ್ವಚ್ಛ ಮಾಡುತ್ತಿದ್ದರು. ಉನ್ನತ ವ್ಯಾಸಂಗಕ್ಕಾಗಿ ದೆಹಲಿಗೆ ಬಂದ ಬಳಿಕವು ಸ್ವಚ್ಛತಾ ಕಾರ್ಯ ಮುಂದುವರೆಸಿದ್ದರು.

ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಮಾನವ ಹಕ್ಕುಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಗೆಳೆಯರ ಜೊತೆ ದೆಹಲಿಯಿಂದ ವಾರಾಣಸಿಗೆ ಬಂದು ‘ಸಾಕಾರ್’ ಎಂಬ ಸ್ವಯಂ ಸೇವಾ ಸಂಸ್ಥೆ  ಸ್ಥಾಪಿಸಿದರು. ಅಲ್ಲಿ ಯುವ ಜನರು ಹಳ್ಳಿ ಬಿಟ್ಟು ಹೋಗದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡರು.

ಹಳ್ಳಿಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಿಲ್ಲವಾದ್ದರಿಂದ ಯುವಕರು ನಗರಗಳಿಗೆ ವಲಸೆ ಹೋಗುವುದು  ಅನಿವಾರ್ಯ. ಹಾಗಾಗಿ   ಇವರ ಜಾಗೃತಿ ಯೋಜನೆ ಹಳ್ಳ ಹಿಡಿಯಿತು. ನಂತರ ಇಮ್ಸಾಂಗ್ ನಾಗಾಲ್ಯಾಂಡ್‌ಗೆ ಮರಳಿದರು. ಅಲ್ಲಿ ಊರಿನವರ ಜೊತೆ ಸೇರಿ ಸ್ವಚ್ಛತಾ ಕಾರ್ಯ ಮುಂದುವರೆಸಿದರು. ಗೆಳೆತಿಯೊಬ್ಬರು ವಾರಾಣಸಿ ಘಾಟ್‌ಗಳನ್ನು ಸ್ವಚ್ಛಗೊಳಿಸುವ ಐಡಿಯಾ ಕೊಟ್ಟರು.

ತಡ ಮಾಡದೇ ವಾರಾಣಸಿಗೆ ಬಂದು, ನಿಂತುಹೋಗಿದ್ದ ಸಾಕಾರ್ ಸಂಸ್ಥೆಗೆ ಮರು ಜನ್ಮ ನೀಡಿ ಸ್ವಚ್ಛತಾ ಆಂದೋಲನಕ್ಕೆ ಮುಂದಡಿ ಇಟ್ಟರು. ವಾರಾಣಸಿಯಲ್ಲಿ ಸುಮಾರು 60 ಘಾಟ್‌ಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿದ್ದಾರೆ.

ಪ್ರವಾಸಿಗರು ಹಾಗೂ ಭಕ್ತರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಸ ಮುಕ್ತ ಘಾಟ್‌ಗಳನ್ನಾಗಿ ರೂಪಿಸಿದ್ದಾರೆ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ನಾವು ಸಹ ಆರೋಗ್ಯವಾಗಿ ಬದುಕಬಹುದು ಎನ್ನುತ್ತಾರೆ ಇಮ್ಸಾಂಗ್. 
www.sakaar.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT