ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯದ ಆಸೆಯಲ್ಲಿ ಅಮೆರಿಕದತ್ತ ವಲಸಿಗರು...

ಅದು ನಡು ಮಧ್ಯಾಹ್ನದ ಹೊತ್ತು. ಆಲಿವ್‌ ಬಣ್ಣದ ಸಮವಸ್ತ್ರ ಧರಿಸಿದ ಗಡಿ ಗಸ್ತು ಪಡೆ ಸಿಬ್ಬಂದಿ ಅಮೆರಿಕದ ರಿಯೊ ಗ್ರಾಂಡೆ ನದಿ ದಡದಲ್ಲಿ ನಿಂತು ನೋಡು­ತ್ತಿ­ರುವಂತೆಯೇ ಮೆಕ್ಸಿಕೋ ಕಡೆಯ ಮಾನವ ಕಳ್ಳಸಾಗಣೆ­ಗಾರರು ವಲಸಿಗ­ರನ್ನು ತಂದು ಇಳಿಸುತ್ತಿದ್ದರು. ದಡದಲ್ಲಿ ನಿಂತಿದ್ದ ಗಸ್ತುಪಡೆ ಸಿಬ್ಬಂದಿ ಅವರಿಗೆ ಸ್ಪಷ್ಟವಾ­ಗಿಯೇ ಕಾಣುತ್ತಿದ್ದರೂ ಅವ­ರೇನೂ ಹೆದರಿ­ದಂತೆ ಕಾಣುತ್ತಿ­ರಲಿಲ್ಲ. ಕಳ್ಳಸಾಗಣೆಗಾರರ ತೆಪ್ಪದಿಂದ ನದಿ­ಯನ್ನು ದಾಟಿ ಬಂದಿಳಿದವರಲ್ಲಿ ಮಹಿಳೆ­ಯರು, ಮಕ್ಕಳು ಮತ್ತು 45 ವರ್ಷಗಳ ಒಳಗಿ­ನವರೇ ಹೆಚ್ಚಾಗಿದ್ದರು. ಅಕ್ರಮ ವಲ­ಸಿ­ಗರ ಆ ಗುಂಪು ಅಮೆರಿಕದ ವಲಸೆ ಅಧಿ­ಕಾರಿ­ಗಳಿಗೆ ತಮ್ಮ ಎದುರಿನ ಬಹು­ದೊಡ್ಡ ಸವಾ­ಲಿನ ಸಂಕೇತವಾಗಿ ಕಾಣುತ್ತಿದ್ದರು. 

ಉಳಿದ ಸ್ಥಳಗಳಿಗೆ ಹೋಲಿಸಿದರೆ ದಕ್ಷಿಣ ಟೆಕ್ಸಾಸ್‌ನಲ್ಲಿ ಅಕ್ರಮ ನುಸುಳು­ವಿಕೆ ಪ್ರಮಾಣ ಗಗನಕ್ಕೇರಿದೆ. ಕಳೆದ ಆರು ತಿಂಗಳಲ್ಲಿ ರಿಯೊ ಗ್ರಾಂಡೆ ನದಿ ಕಣಿವೆಯಲ್ಲಿ ಗಡಿ ಗಸ್ತು ಪಡೆ ಸಿಬ್ಬಂದಿ 90,700ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 69ರಷ್ಟು ಹೆಚ್ಚು. 

ಈ ವಲಸಿಗರು ಕೇವಲ ಮೆಕ್ಸಿಕೊದ ಕೆಲಸಗಾರರಷ್ಟೇ ಅಲ್ಲ. ಇವರಲ್ಲಿ ಮಧ್ಯ ಅಮೆರಿಕದವರೂ ಇದ್ದಾರೆ. ಸಣ್ಣ ಸಣ್ಣ ಮಕ್ಕ­ಳನ್ನು ಜತೆಗೆ ಕರೆದುಕೊಂಡು ಬಂದ ಕುಟುಂಬ­ಗಳು, ಮನೆಯವರನ್ನೆಲ್ಲ ಬಿಟ್ಟು ಬಂದ ಯುವಕರು ಎಲ್ಲರೂ ಇದ್ದಾರೆ. ಇವರೆಲ್ಲ ಅಪಾಯಕಾರಿ ದಾರಿಯಲ್ಲಿ ತಮ್ಮ ಜೀವವನ್ನು ಪಣಕ್ಕೊಡ್ಡಿಕೊಂಡು ಅಕ್ರಮವಾಗಿ ಅಮೆರಿಕದೊಳಕ್ಕೆ ನುಸು­ಳಲು ಅವರನ್ನು ಕಿತ್ತು ತಿನ್ನುತ್ತಿರುವ ಬಡ­ತ­ನ­ವಷ್ಟೇ ಕಾರಣವಲ್ಲ. ಬದಲಿಗೆ ತಮ್ಮ ದೇಶ­ದಲ್ಲಿ ನಿರಂತರವಾಗಿ ನಡೆಯುತ್ತಿ­ರುವ ಗುಂಪು ಘರ್ಷಣೆಯ ಕ್ರೌರ್ಯ­ ಕೂಡ ಕಾರಣ. ಇದನ್ನು ತಾಳಲಾರದೇ ದೇಶ ತೊರೆದು ಬಂದವರೂ ಸಾಕಷ್ಟಿದ್ದಾರೆ.

ಅಮೆರಿಕದಲ್ಲಿ ವಲಸೆಗಾರರಿಗೆ ಆಶ್ರಯ ನೀಡಲು ಇರುವ ಸುದೀರ್ಘ ಕಾನೂನು ಪ್ರಕ್ರಿಯೆಗಳನ್ನು ಎದುರಿಸು­ವುದು ಕೂಡ ಅವರಿಗೆ ತಮ್ಮ ದೇಶದ ದಾರುಣ ಬದುಕಿಗಿಂತ ಹೆಚ್ಚು ಸಹನೀಯ­ವಾ­ಗಿಯೇ ಕಾಣಿಸುತ್ತದೆ.

ಇತ್ತೀಚೆಗೆ ಎಲ್‌ಸಾಲ್ವಡೊರ್‌, ಗ್ವಾಟೆಮಾಲಾ ಮತ್ತು ಹೊಂಡುರಾಸ್‌ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ವಲಸಿಗರು ಅಮೆರಿಕದ ಒಳಕ್ಕೆ ನುಸುಳುತ್ತಿದ್ದಾರೆ. ಇದಕ್ಕೆ ಒಬಾಮ ಅವರ ದುರ್ಬಲ ವಲಸೆ ನೀತಿಯೇ ಕಾರಣವಾಗಿದೆ. ಆದ್ದರಿಂದ ವಲಸಿಗರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಗಡಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಪ್ರತಿಪಕ್ಷ ರಿಪಬ್ಲಿಕನ್‌ ವಾದಿಸುತ್ತದೆ. ಇದಕ್ಕೆ ಪೂರಕವಾಗಿ, ‘ಅಮೆರಿಕದಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ವಲಸಿಗರ ಆಶ್ರಯಧಾಮ ಮತ್ತು ವಲಸಿಗರ ನ್ಯಾಯಾ­ಲಯಗಳಿವೆ. ಅಲ್ಲಿ ಅಕ್ರಮ ವಲಸಿ­­ಗರನ್ನು ವಿಚಾರಿಸಿ ನಂತರ ಅವರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಲಾ­ಗುತ್ತದೆ’ ಎಂಬ ಕಲ್ಪನೆ ವಲಸಿಗರಲ್ಲಿದೆ. ‘ನಾವು ಅಕ್ರಮ ವಲಸಿಗರನ್ನು ಸುಲಭ­ವಾಗಿ ಒಳಗೆ ಬಿಟ್ಟುಕೊಂಡು ವಾಸಿಸಲು ಅನುಮತಿ ನೀಡುತ್ತೇವೆ ಎಂಬ ವದಂತಿ ಎಲ್ಲೆಡೆ ಹಬ್ಬಿದೆ. ಆದ್ದರಿಂದಲೇ ಅವರು ಗುಂಪು ಗುಂಪಾಗಿ ವಲಸೆ ಬರುತ್ತಿದ್ದಾರೆ’ ಎಂದು ಅಮೆರಿಕ ರಾಷ್ಟ್ರೀಯ ಗಡಿ ಗಸ್ತು ಪಡೆಯ ಸ್ಥಳೀಯ ಉಪಾಧ್ಯಕ್ಷ ಕ್ರಿಸ್‌ ಕಾಬ್ರೆರಾ ಅಭಿಪ್ರಾಯಪಡುತ್ತಾರೆ.

ಮೆಕ್ಸಿಕೋ ಗಡಿ­ಯಲ್ಲಿನ ನಗರಗಳಲ್ಲಿ ಜನರು ಸುಲ­ಭ­­ವಾಗಿ ಅಲ್ಲಿನ ಮಾದಕ ಕಳ್ಳ­ಸಾಗಣೆ­ದಾ­ರರಿಗೆ ಬಲಿಯಾಗು­ತ್ತಾರೆ. ಈ ಪ್ರದೇ­ಶ­ಗಳಲ್ಲಿ ಮಾದಕವಸ್ತು ಕಳ್ಳಸಾಗಣೆಗಾರರು ಮಾನವ ಕಳ್ಳ ಸಾಗಣೆಯನ್ನೂ ಒಂದು ದಂಧೆಯಾಗಿ ಮಾಡಿಕೊಂಡಿ­ದ್ದಾರೆ. ಇದು ಅಕ್ರಮ ವಲಸಿಗರಿಗೆ ಅಪಾಯ­ಕಾರಿ ಅಷ್ಟೇ ಅಲ್ಲ, ಅಮೆರಿಕಕ್ಕೂ ಭದ್ರತಾ ಬೆದ­ರಿಕೆಯ ವಿಷಯವಾಗಿ ಪರಿಣಮಿಸಿದೆ.

ಹೇಗೆ ವಲಸೆ ಬರುತ್ತಾರೆ?
ರಿಯೋ ಗ್ರಾಂಡೆ ನದಿಯ ಮಧ್ಯ­ಭಾಗದಲ್ಲಿ ಅಮೆರಿಕ ಮತ್ತು ಮೆಕ್ಸಿಕೊದ ಗಡಿರೇಖೆಯಿದೆ. ಸಾಮಾನ್ಯವಾಗಿ ಮಾನವ ಕಳ್ಳಸಾ­ಗ­ಣೆಗಾರರು ರಿಯೋ ಗ್ರಾಂಡೆ ನದಿಯ ಅತ್ಯಂತ ಕಡಿಮೆ ಆಳವಿರುವ ಜಾಗವನ್ನು ಗುರುತಿಸಿ ತೆಪ್ಪದಲ್ಲಿ ಅಕ್ರಮ ವಲಸಿಗರನ್ನು ಅಮೆರಿಕಕ್ಕೆ ದಾಟಿಸು­ತ್ತಾರೆ. ಯಾಕೆಂದರೆ ತೀರಾ ಕಡಿಮೆ ಆಳವಿರುವ ಸ್ಥಳದಲ್ಲಿ ಗಡಿ ಗಸ್ತು ಪಡೆಯ ಬೋಟುಗಳು ಬರಲು ಸಾಧ್ಯ­ವಾ­ಗುವುದಿಲ್ಲ ಎಂಬುದು ಅವರ ಲೆಕ್ಕಾಚಾರ. ಆದರೆ ಗಡಿ ಗಸ್ತು ಪಡೆಯ ವೈಮಾ­ನಿಕ ಸಿಬ್ಬಂದಿ ಹದ್ದಿನ ಕಣ್ಣುಗಳಿಂದ ಅವರು ತಪ್ಪಿಸಿಕೊಳ್ಳುವುದು ತುಂಬ ಕಷ್ಟ. ಹೀಗೆ ಲೋಹದ ಹಕ್ಕಿಯ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಅಕ್ರಮ ವಲ­ಸಿ­ಗರು ಪ್ರಾಣಿ­ಗಳಂತೆ ದಟ್ಟ ಪೊದೆಗಳ ಒಳಗಿ­ನಿಂದ ನುಸುಳಿ ಪಾರಾಗಲು ಯತ್ನಿಸು­ತ್ತಾರೆ. ಹೀಗೆ ವಿಮಾನದ ಮೂಲಕ ಅಕ್ರಮ ವಲ­ಸಿ­­­ಗರನ್ನು ಪತ್ತೆಹಚ್ಚಿ ಬಂಧಿಸಿದ ಗಡಿ­ಗಸ್ತು ಪಡೆಯ ಮುಖ್ಯಸ್ಥ ರೌಲ್‌ ಒರ್ಟಿಜ್‌ ತಮ್ಮ ಅಭಿಪ್ರಾಯವನ್ನು ಹೀಗೆ ಹಂಚಿಕೊಳ್ಳುತ್ತಾರೆ.

‘ಇಲ್ಲಿ ಅಕ್ರಮ ವಲಸಿಗರನ್ನು ಬಂಧಿಸಿ­ದರೂ ನಂತರ ಸುಲಭವಾಗಿ ಬಿಟ್ಟು­ಬಿಡಲಾ­ಗುತ್ತದೆ ಎಂದು ಯಾರೋ ಅವರಿಗೆ ಹೇಳಿರಬೇಕು. ಯಾಕೆಂದರೆ ನಾವು ಅವರನ್ನು ಬಂಧಿಸಿದರೂ ಅವರು ಯಾವುದೇ ಪ್ರತಿ­ಕ್ರಿಯೆ ತೋರದೇ ಸುಮ್ಮನೇ ಕೂತಿದ್ದರು’ ಎಂದು  ವಿವರಿಸುತ್ತಾರೆ.

ಒರ್ಟಿಜ್‌ ಬಂಧಿಸಿದ ಅಕ್ರಮ ವಲಸಿ­ಗರ ಗುಂಪಿನಲ್ಲಿ ಗ್ವಾಟೆಮಾಲಾ ಮೂಲದ ಒಬ್ಬಳು ತಾಯಿ ಈಗಷ್ಟೇ ಅಂಬೆ­­­­ಗಾಲಿಟ್ಟು ನಡೆಯಲು ಪ್ರಾರಂಭಿ­ಸಿದ ಪುಟ್ಟ ಮಗುವನ್ನು ಜತೆಗೆ ಕರೆತಂದಿ­ದ್ದಳು. ಅವಳ ಒಂದು ಕೈಯಲ್ಲಿ ಹಾಲಿನ ಬಾಟಲಿಯಿದ್ದರೆ ಇನ್ನೊಂದು ಕೈಯಲ್ಲಿ ಮತ್ತೊಂದು ಶಿಶುವನ್ನು ಚಾದರದಲ್ಲಿ ಸುತ್ತಿ ಹಿಡಿದುಕೊಂಡಿದ್ದಳು. ಇನ್ನೊಂದು ಗುಂಪಿನಲ್ಲಿ ಹೊಂಡು­ರಾಸ್‌ನ ಹುಡುಗಿ­ಯೊಬ್ಬಳು ಲೂಸಿ­ಯಾ­ನಾ­­­ದಲ್ಲಿ­ರುವ ತನ್ನ ತಾಯಿ ಮತ್ತು ಇಬ್ಬರು ಸಹೋದರ­ರನ್ನು ಹುಡು­ಕಿ­­ಕೊಂಡು ಬಂದಿದ್ದಳು. ಒಂಬತ್ತು ವರ್ಷದ ಅವಳಿಗೆ ಲೂಸಿಯಾನಾದಲ್ಲಿ ಅವರು ಎಲ್ಲಿ ಇರುತ್ತಾರೆ ಎಂಬುದೇ ತಿಳಿದಿ­ರಲಿಲ್ಲ. ಹೊಂಡುರಾಸ್‌ನಿಂದ ಎರಡು ವಾರ­ಗಳ ಕಾಲ  ಪ್ರಯಾಣ­ ಮಾಡಿ ಬಂದ ಅವಳಿಗೆ ತನ್ನ ರಕ್ತ ಸಂಬಂಧಿ­ಗಳನ್ನು ಸೇರಲು ಇರುವ ಏಕೈಕ ಸಂಪರ್ಕ­ವೆಂದರೆ ಕೈಯಲ್ಲಿನ ಒದ್ದೆ­ಮುದ್ದೆ­ ಹರಕು ಚೀಟಿ­ಯಲ್ಲಿ ಅಸ್ಪಷ್ಟ­ವಾಗಿ ಬರೆದು­ಕೊಂಡಿ­ರುವ ಒಂದು ದೂರವಾಣಿ ಸಂಖ್ಯೆ ಅಷ್ಟೆ. ಹೊಸದಾಗಿ ಅಕ್ರಮ ವಲಸೆ ಬರುತ್ತಿ­ರು­­ವ­­ವರು ಸಾಮಾನ್ಯವಾಗಿ ದಕ್ಷಿಣ ಟೆಕ್ಸಾಸ್‌­ನತ್ತ ಮುಖಮಾ­ಡು­ತ್ತಾರೆ.  

ಅನೇಕ ಯುವಕರು ಸರಕು ಸಾಗಣೆಯ ರೈಲುಗಳ ನೆತ್ತಿ ಮೇಲೆ ಹತ್ತಿಕೊಂಡು ಮೆಕ್ಸಿಕೊ­ವನ್ನು ದಾಟಿ ರೇಯ್‌ನೋಸಾಗೆ ಬರುತ್ತಲೇ ಜಿಗಿಯುತ್ತಾರೆ. ರಿಯೊ ಗ್ರಾಂಡೆ ನದಿಯ ಸುಳಿ ಮತ್ತು ಗಾಳಿ­ಗಳಿಂದ ತಪ್ಪಿಸಿಕೊಂಡು ಅದನ್ನು ದಾಟಿ­ದ­ವರು ಕಬ್ಬಿನ ತೋಟ­ದೊಳಕ್ಕೆ ನುಸುಳು­ತ್ತಾರೆ. ಅಲ್ಲಿಂದ ಹತ್ತಿರದ ವ್ಯಾಪಾರ ಮಳಿಗೆಯಲ್ಲೋ ಅಥವಾ ಉಪನಗರದ ಬೀದಿಗಳಲ್ಲೋ ಅಡಗಿಕೊಂಡು ಉತ್ತರಕ್ಕೆ ಸಾಗುತ್ತಾರೆ.
***
ಗಡಿ ಗಸ್ತು ಪಡೆಯ ಅಧಿಕಾರಿಗಳು ತಾವು ಈ ಅಕ್ರಮ ವಲಸೆಯನ್ನು ತಡೆಯಲು ಸಮರ್ಥರಾಗಿದ್ದೇವೆ ಎಂದೇ ಹೇಳುತ್ತಾರೆ. ‘ಹೀಗೆ ಅಕ್ರಮವಾಗಿ ನುಸುಳುವ ಬಹುತೇಕರನ್ನು ನಾವು ಬಂಧಿಸಿದ್ದೇವೆ. ಇದ­ಕ್ಕಾಗಿ ರಿಯೊ ಗ್ರಾಂಡೆ ಕಣಿವೆ­ಯಲ್ಲಿ 3,000 ಗಡಿ ಗಸ್ತು ಪಡೆ ಸಿಬ್ಬಂದಿ ನಿಯೋ­ಜಿಸಲಾಗಿದೆ. ಹೆಲಿ­­ಕಾಪ್ಟರ್‌­ಗಳು ಮತ್ತು ದೋಣಿಗಳ ಮುಖಾಂತರ ಕೂಡ ನಿಗಾ ಇಡಲಾಗು­ತ್ತಿದೆ. ವಾಹನ­ಗಳು, ಕುದುರೆಗಳನ್ನೂ ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಗುರ ವಿಮಾನ ಮತ್ತು ಡ್ರೋಣ್‌ಗಳ ಮೂಲಕ ಆಕಾಶದಿಂದ ಅಕ್ರಮ ವಲಸಿಗರ ಮೇಲೆ ಕಣ್ಣಿಡಲಾಗುತ್ತಿದೆ’ ಎಂದು ವಿವರಿಸುತ್ತಾರೆ. ‘ಮಹಿಳೆಯರನ್ನು ಮತ್ತು ಮಕ್ಕಳನ್ನು ಪ್ರತ್ಯೇಕವಾಗಿ ಬಂಧಿಸಿ, ಪೆನ್ಸಿಲ್ವೇನಿ­ಯಾದಲ್ಲಿನ ‘ಕುಟುಂಬ ಘಟಕ’ಗಳಲ್ಲಿ ಇರಿಸಲಾಗುತ್ತದೆ. ಆದರೆ ಹೀಗೆ ಬಂಧಿತ­ರಾದ ಕುಟುಂಬದವರು ವಿಚಾರಣೆ ವೇಳೆ ಬಿಡುಗಡೆಯಾ­ಗುವ ಸಾಧ್ಯತೆ ಹೆಚ್ಚಿರು­ತ್ತದೆ’ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಪಾಲಕರು ಇಲ್ಲದ ಬಾಲಕರನ್ನು ಆರೋಗ್ಯ ಮತ್ತು ಮಾನವ ಸೇವಾ ವಿಭಾಗಕ್ಕೆ ಒಪ್ಪಿಸಲಾಗುತ್ತದೆ. ಅಲ್ಲಿ ಅವರಿಗೆ ವಸತಿ ಮತ್ತು ಆರೋಗ್ಯ ಸೇವೆ ಒದಗಿಸಿ ಶಿಕ್ಷಣ ನೀಡಲಾಗುತ್ತದೆ. ಅಲ್ಲದೇ ಅವರ ಸಂಬಂಧಿ­ಕರು ಅಮೆರಿಕದಲ್ಲಿ ಇದ್ದರೆ, ಅವರಲ್ಲಿಗೆ ಕಳುಹಿಸುವ ಪ್ರಯತ್ನಗಳೂ ನಡೆಯುತ್ತವೆ. ಈ ವರ್ಷ ಸುಮಾರು 35,000 ಬಾಲಕರು  ಬಂಧನಕ್ಕೊಳಗಾಗ­ಬ­ಹುದು ಎಂದು ಅಧಿಕಾರಿಗಳು ಅಂದಾ­ಜಿ­ಸಿ­ದ್ದಾರೆ. ಕಳೆದ ಎರಡು ವರ್ಷ­ಗಳಲ್ಲಿ ಇದು ಮೂರು ಪಟ್ಟು ಹೆಚ್ಚಾಗಿದೆ.

ಆಶ್ರಯದ ಅನುಮತಿ ಪ್ರಕ್ರಿಯೆ
ವಲಸಿಗರ ಆಶ್ರಯ ಕಾಯ್ದೆ ಪ್ರಕಾರ ಗಡಿ ಗಸ್ತು ಪಡೆ ಅಧಿಕಾರಿಗಳು  ಬಂಧಿ­ತರಾದ ಅಕ್ರಮ ವಲಸಿಗರು ತಮ್ಮ ದೇಶಕ್ಕೆ ತಿರುಗಿ ಹೋಗಲು ಆತಂಕ­ಪಡು­ತ್ತಿ­ದ್ದಾ­­ರೆಯೇ ಎಂಬುದನ್ನು ವಿಚಾರಿಸ­ಬೇಕು. ಹೌದು ಎಂದಾದರೆ ವಲಸೆ ಅಧಿಕಾರಿ­ಗಳು ಬಂದು ವಿಚಾರಿ­ಸು­ವವ­ರೆಗೂ  ಅಂತಹ ವಲಸಿಗ­ರನ್ನು ತಮ್ಮ ವಶದಲ್ಲಿರಿಸಿ­ಕೊಳ್ಳ­ಬೇಕು. 

ವಿಚಾರಣೆ­ಯಲ್ಲಿ ಅಕ್ರಮ ವಲಸಿಗರ ಭಯ ನಿಜವಾ­ದದ್ದು ಎಂದು ಸಾಬೀತಾ­ದರೆ ಅವರು ಆಶ್ರಯಕ್ಕಾಗಿ ಮನವಿ ಸಲ್ಲಿಸ­ಬಹುದು. ಅವರ ಹಿನ್ನೆಲೆಗಳನ್ನು ಪರಿಶೀ­ಲಿಸಿ ಅವರಿಗೆ ಆಶ್ರಯ ನೀಡಬೇಕೆ ಬೇಡವೆ ಎಂಬುದನ್ನು ‘ವಲಸೆ ನ್ಯಾಯಾ­ಲಯ’ ನಿರ್ಧರಿಸುತ್ತದೆ. ಈ ‘ಭಯ ಸಾಬೀತು ಪರೀಕ್ಷೆ’ಯಲ್ಲಿ ವಲಸೆ ಅಧಿಕಾರಿಗಳು ಬೇಕೆಂದೇ ವಲಸಿ­ಗರ ಬಗ್ಗೆ ಸಾಮಾನ್ಯವಾಗಿ ಮೃದು ಧೋರಣೆ ತಳೆಯು­ತ್ತಾರೆ. ಇದರ ಪರಿಣಾಮವಾಗಿ 2013ರಲ್ಲಿ ಶೇ 85 ವಲಸಿಗರು ಸಲ್ಲಿಸಿದ ಮನವಿಗಳು ಆಶ್ರ­ಯಕ್ಕೆ ಅರ್ಹ ಎಂದು ಸಾಬೀತಾಗಿವೆ. ಅಲ್ಲದೇ ಅಸಂಖ್ಯಾತ ಪ್ರಕರಣಗಳು ಇನ್ನೂ ವಿಚಾರಣೆಯಾಗ­ಬೇಕಾಗಿರು­ವು­ದರಿಂದ ಕಾನೂನು ಪ್ರಕ್ರಿಯೆಯೂ ತುಂಬ ನಿಧಾನವಾಗಿರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT