ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಷಾಢಕ್ಕೆ ಬರುತಾಳ ಗುಳ್ಳವ್ವ...

Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

ಹಬ್ಬ ಹರಿದಿನಗಳ ಆಚರಣೆ ಎಂದ ತಕ್ಷಣ ಕಣ್ಮುಂದೆ ಬರುವುದು ಉತ್ತರ ಕರ್ನಾಟಕ. ಒಕ್ಕಲುತನವೇ ಕೇಂದ್ರಬಿಂದುವಾಗಿರುವ ಈ ಪ್ರದೇಶದಲ್ಲಿ ಒಂದೊಂದು ಮಾಸದಲ್ಲೂ ಒಂದೊಂದು ಆಚರಣೆ, ಪ್ರತಿ ವಿಶೇಷ ಸಂದರ್ಭಗಳಲ್ಲೂ ವಿಶಿಷ್ಟ್ಯ ಬಗೆಯ ಸಂಪ್ರದಾಯ. ಇಂದಿನ ಜಾಗತೀಕರಣದ ದಿನಗಳಲ್ಲಿಯೂ ಇಲ್ಲಿನ ಸಂಪ್ರದಾಯ ಮಾತ್ರ ನಶಿಸಿಲ್ಲ.

ಅದರಲ್ಲೂ ಮಳೆಗಾಲದ ಆರಂಭ ಎಂದರೆ ಇಲ್ಲಿ ಪೂಜೆ, ಪುನಸ್ಕಾರಗಳ ಮಹಾಪೂರ. ಆ ಪೈಕಿ ಆಷಾಢ ಮಾಸದಲ್ಲಿ ನಡೆಯುವ ಗುಳ್ಳವ್ವನ ಪೂಜೆ ಬಹುವಿಶೇಷ ಎನಿಸಿದೆ. ಅನ್ನ ನೀಡುವ ಭೂತಾಯಿಯನ್ನು ಪೂಜಿಸುವುದು ಇದರ ವಿಶೇಷ. ಪ್ರತಿ ವರ್ಷ ಆಷಾಢ ಮಾಸದಲ್ಲಿ ಬರುವ ಈ ಹಬ್ಬವನ್ನು ಮಣ್ಣೆತ್ತಿನ ಅಮಾವಾಸ್ಯೆಯಿಂದ ನಾಗರ ಅಮಾವಾಸ್ಯೆಯವರೆಗೆ ಒಂದು ತಿಂಗಳ ಕಾಲ ಆಚರಿಸಲಾಗುತ್ತದೆ.

ಗುಳ್ಳವ್ವ ಪಾರ್ವತಿಯ ಪ್ರತಿರೂಪವೆಂದೇ ತಿಳಿಯಲಾಗಿದೆ. ಈಕೆಗೆ ಚನಮೀರಿ, ಚನ್ನವ್ವ, ಕೊಂತಿ ಇತ್ಯಾದಿ ಹೆಸರುಗಳು. ಆಷಾಢದ ಮಂಗಳವಾರ ಗೆಳತಿಯರೆಲ್ಲ ಸೇರಿ ಹತ್ತಿರದ ಕೆರೆ ಅಥವಾ ಹೊಳೆಗಳಿಗೆ ಮಣ್ಣು ತರಲು ಹೋಗುತ್ತಾರೆ. ಗುಳ್ಳೆವ್ವ ಮೂರ್ತಿಗೆ ಬೇಕಾದ ಎರೆಮಣ್ಣನ್ನು ಸಂಗ್ರಹಿಸಿ, ತಾವು ತಂದಿದ್ದ ತಿಂಡಿ, ತಿನಿಸು, ಚುರುಮುರಿ, ಶೇಂಗಾ, ಬೆಲ್ಲ, ಅರಳು, ಕಡ್ಲಿ, ಪುಟಾಣಿಗಳನ್ನು ಹಂಚಿ ತಿನ್ನುತ್ತಾರೆ. ಮಣ್ಣನ್ನು ಹೊತ್ತ ಮಹಿಳೆಯರ ತಂಡ ಗುಳ್ಳವ್ವನ ಹಾಡುಗಳನ್ನು ಹೇಳುತ್ತಾ ಊರ ಕಡೆ ಬರುತ್ತಾರೆ.

ಆದರೆ ಕೆಲವೆಡೆ ಗೆಳತಿಯರು ಹೋಗುವ ಸಂಪ್ರದಾಯ ಬದಲಾಗಿದೆ. ಕುಂಬಾರರೇ ಗುಳ್ಳೆವ್ವನನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಗುಳ್ಳವ್ವನನ್ನು ಮಾಡುವ ಆಕಾರ ವಾರದಿಂದ ವಾರಕ್ಕೆ ಕೆಲವೊಂದು ಪ್ರದೇಶದಲ್ಲಿ ಬದಲಾಗುತ್ತ ಹೋಗುತ್ತದೆ. ಮೊದಲನೆಯ ಮಂಗಳವಾರ ಲಿಂಗಾಕಾರದ ಗುಳ್ಳವ್ವ, ಎರಡನೆಯ ವಾರ ಗುಡಿಯಾಕಾರದ ಗುಳ್ಳವ್ವ, ಮೂರನೇ ವಾರ ಕಟ್ಟೆಯಾಕಾರದ ಗುಳ್ಳವ್ವ, ನಾಲ್ಕನೆಯ ವಾರ ನವಿಲಾಕಾರದ ಗುಳ್ಳವ್ವ ಸೃಷ್ಟಿಯಾಗುತ್ತದೆ. ಒಂದು ವೇಳೆ ಆ ಮಾಸದಲ್ಲಿ ಐದು ಮಂಗಳವಾರಗಳು ಬಂದರೆ ಐದನೆಯದನ್ನು ಹೆಣ್ಣಿನಾಕಾರದ ಗುಳ್ಳವ್ವನನ್ನು ಮಾಡುತ್ತಾರೆ.

ಹಿಂದೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ದೊರೆಯುವ ಮಣ್ಣಿನಿಂದ ಗುಳ್ಳವ್ವನನ್ನು ತಯಾರಿಸುತ್ತಿದ್ದರು. ಆದರೆ ಈಗ ಮಣ್ಣಿನ ಕೊರತೆಯಿಂದ ಉಚಿತವಾಗಿ ದೊರೆಯುವ ಮಣ್ಣನ್ನು ಖರೀದಿ ಮಾಡಿ ತರಲಾಗುತ್ತಿದೆ.

ಗುಳ್ಳವ್ವ ಮಾಡುವುದು ಹೀಗೆ
ಮೊದಲು ಕುಂಬಾರರು ತಿರಗಣಿಯ ಮೇಲೆ ಗುಳ್ಳವ್ವನನ್ನು ಮಾಡುತ್ತಿದ್ದರು. ಆದರೆ ಈಗ ತಿರಗಣಿಯ ಮೇಲೆ ಗುಳ್ಳವ್ವ ಮಾಡುವವರು ಸಂಪೂರ್ಣವಾಗಿ ಮಾಯವಾಗಿದ್ದಾರೆ. ಈಗ ಮತ್ತೆ ಕೈಯಿಂದ ಗುಳ್ಳವ್ವ ಮಾಡುತ್ತಿದ್ದಾರೆ.

ಗುಳ್ಳವ್ವನನ್ನು ಮನೆಗೆ ತಂದು, ಅದಕ್ಕೆ ಬಣ್ಣ ಬಣ್ಣದ ಗುಲಗಂಜಿ, ಕುಸಬಿ ಕಾಳುಗಳಿಂದ ಮತ್ತು ಹೂವಿನ ಮಾಲೆಗಳಿಂದ ಅಲಂಕಾರ ಮಾಡುತ್ತಾರೆ. ಜೊತೆಗೆ ಕೋಣ ಮಾಡುತ್ತಾರೆ. ಅದರಂತೆ ಹಾವು ಚೇಳುಗಳನ್ನು ಮಾಡುತ್ತಾರೆ. ಯಾಕೆಂದರೆ ಇವು ಭೂತಾಯಿಯ ಮಕ್ಕಳು ಎಂಬುದು ಕೆಲವರ ಭಾವನೆ. ಗುಳ್ಳವ್ವನನ್ನು ಪೂಜಿಸುವುದು ಹೆಣ್ಣು ಮಕ್ಕಳು. ಆದರೆ ಇಲ್ಲಿರುವ ಕೋಣವನ್ನು ಕಡಿಯುವುದು ಮಾತ್ರ ಗಂಡು ಮಕ್ಕಳ ಕೆಲಸ.

ಸಂಜೆಯ ಹೊತ್ತಿಗೆ ಸುತ್ತಲೂ ರಂಗೋಲಿಯನ್ನು ಹಾಕಿ ಪೂಜೆ ಮಾಡುತ್ತಾರೆ. ಗುಳ್ಳವ್ವನ ಪೂಜೆ ಸಂದರ್ಭದಲ್ಲಿ ಮಣ್ಣಿನಿಂದ ಮಾಡಿದ ಆರತಿ ಇರುತ್ತದೆ. ಇದು ವಿಶೇಷವಾದುದು. ಗುಳ್ಳವ್ವನಿಗೆ ಮಣ್ಣಿನ ಆರತಿಯಿಂದಲೇ ಆರತಿ ಮಾಡುವುದು ರೂಢಿ. ಈ ಸಂದರ್ಭದಲ್ಲಿ ಗುಳ್ಳವ್ವನ ಸುತ್ತಲೂ ಹಾವು ಮತ್ತು ಚೇಳುಗಳನ್ನು ಮಾಡಿರುತ್ತಾರೆ. ಇವು ಮಣ್ಣಿನ ಮಕ್ಕಳು ಎಂಬುದು ಗ್ರಾಮಸ್ಥರ ನಂಬಿಕೆ. 

ಸಂಜೆ ಓಣಿಯಲ್ಲಿರುವ ಬಾಲ ಮುತ್ತೈದೆಯರು ಮಣ್ಣಿನ ಆರತಿಯನ್ನು ಹಿಡಿದುಕೊಂಡು ಮನೆ ಮನೆಗೆ ಹೋಗಿ ಗುಳ್ಳವ್ವನ ಸುತ್ತಲೂ ಕುಳಿತು ಗುಳ್ಳವ್ವನ ಹಾಡುಗಳನ್ನು ಹಾಡಿ ಆರತಿ ಮಾಡಿ ಮುಸುಕಿನಜೋಳದ ಅಳ್ಳು ಮತ್ತು ಚುರುಮುರಿ ಪ್ರಸಾದ ತೆಗೆದುಕೊಂಡು ಬರುತ್ತಾರೆ.
ಮರುದಿವಸ ಬುಧವಾರ ಊಟ ಕಟ್ಟಿಕೊಂಡು ತೋಟ, ಹೊಲ, ಕೆರೆ ಇಲ್ಲವೆ ನದಿ ತೀರಕ್ಕೆ ಹೆಣ್ಣುಮಕ್ಕಳು ಹೋಗುತ್ತಾರೆ. ಆಕೆಯನ್ನು ಪೂಜಿಸಿ, ನೈವೇದ್ಯ ಸಮರ್ಪಿಸುತ್ತಾರೆ. ನಂತರ ಗುಳ್ಳವ್ವನ ಸಾವನ್ನು ಕುರಿತ ಹಾಡುಗಳನ್ನು ಹೇಳುತ್ತಾ ನೀರಿಗೆ ವಿಸರ್ಜಿಸುತ್ತಾರೆ. ತಾವು ಕೊಂಡುಹೋದ ಸಿಹಿ ಅಡುಗೆಯನ್ನು ಹಂಚಿಕೊಂಡು ಉಣ್ಣುತ್ತಾರೆ. ಮನೆಗೆ ಬರುವುದರೊಂದಿಗೆ ಗುಳ್ಳವ್ವನ ಪೂಜೆ ಮುಗಿದಂತೆ.

ಆಧುನಿಕತೆಯ ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರು ಗುಳ್ಳವ್ವ ಪೂಜೆ ಮಾಡುತ್ತಿರುವುದು ನಮ್ಮ ಜಾನಪದ ಜನಾಂಗೀಯ ಬದುಕನ್ನು ಮುನ್ನಡೆಸಿಕೊಂಡು ಬಂದಿರುವುದಕ್ಕೆ ಸಾಕ್ಷಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT