ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆಪಡುವುದೂ ತಪ್ಪೇ?

ಚರ್ಚೆ
Last Updated 26 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಅಧಿಕಾರಕ್ಕೆ ಬರುವುದು ತಿರುಕನ ಕನಸು’ ಎಂದು ಪಾಟೀಲ ಪುಟ್ಟಪ್ಪ ಹೇಳಿದ್ದಾರೆ. ಇದರ ಹಿಂದಿನ ಉದ್ದೇಶ ಏನೆಂಬುದು ಬಹುಶಃ ಅವರಿಗಷ್ಟೇ ಗೊತ್ತು. ಆದರೆ ಇದಕ್ಕಿಂತಲೂ ಹೆಚ್ಚಾಗಿ, ದಲಿತರು ತಮ್ಮ ಸಮುದಾಯದವರು ಮುಖ್ಯಮಂತ್ರಿಯಾಗಲಿ ಎಂದು ಆಸೆಪಡುವುದು ತಿರುಕನ ಕನಸೇ ಎಂಬುದು ಮುಖ್ಯ.

ಜನಪರ ಎನಿಸಿಕೊಂಡವರ ನಡುವೆಯೂ ದಲಿತರನ್ನು ನೋಡುವ ದೃಷ್ಟಿಕೋನ ತಿರುಕನ ಸ್ವರೂಪದ್ದಾಗಿರುತ್ತದೆ ಎಂದರೆ, ಈ ದೇಶದ ಮೇಲ್ಜಾತಿ ಮತ್ತು ಬಲಾಢ್ಯ ಜಾತಿಗಳ ಆಳದಲ್ಲಿ ದಲಿತರನ್ನು ನೋಡುವ ದೃಷ್ಟಿಕೋನ ಇನ್ನೂ ಬದಲಾಗಿಲ್ಲ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಅಷ್ಟಕ್ಕೂ ದಲಿತರು ಮುಖ್ಯಮಂತ್ರಿಯಾಗಬಾರದೇ? ಆಗಲೇಬೇಕು. ಆದರೆ ಯಾರು ಆಗಬೇಕು? ಶಿವರಾಂ ಮತ್ತು ಸಂಗಡಿಗರು ಕೊಡುವ ಪಟ್ಟಿಯಲ್ಲಿ ಇರುವವರೇ? ಈ ಪ್ರಜಾಪ್ರಭುತ್ವವೆಂಬ ಕಣ್ಕಟ್ಟಿನಲ್ಲಿ ಆಳುತ್ತಿರುವ ಪ್ರಭುಪ್ರಭುತ್ವದ ವಾರಸುದಾರರೇ?

ಈಗಿನ ಚುನಾವಣೆಯಲ್ಲಿ ಗೆದ್ದು ಬರಬಲ್ಲ ಶಕ್ತಿ ಇರುವ ದಲಿತ ಬಂಡವಾಳಶಾಹಿಗಳೇ? ನಾಮಮಾತ್ರಕ್ಕೆ ದಲಿತರಾಗಿ ದಲಿತತನದ ಅನುಭವ ಇಲ್ಲದವರೇ? ಏಕೆಂದರೆ ದಲಿತರಿಗೆ ಬೇಕಿರುವುದು ದಲಿತರಲ್ಲೊಬ್ಬ ಮುಖ್ಯಮಂತ್ರಿ ಆಗುವುದಷ್ಟೇ ಅಲ್ಲ. ಬದಲಿಗೆ ದಲಿತರ ಸಮಗ್ರ ಬದಲಾವಣೆಯೆಡೆಗೆ ತುಡಿಯುವ ಮನಸ್ಸಿರುವ ದಲಿತ ಮುಖ್ಯಮಂತ್ರಿ ಬೇಕಾಗಿದೆ. ಆದರೆ ದುರದೃಷ್ಟವಶಾತ್ ಮೇಲೆ ಪ್ರಸ್ತಾಪಿಸಿದ  ಗುಂಪಿಗೆ ಸೇರಿದವರನ್ನು  ಮುಖ್ಯಮಂತ್ರಿ ಮಾಡಬೇಕೆನ್ನುವ ಹಂಬಲ ಎದ್ದು ಕಾಣುತ್ತಿದೆ. 

ಆದರೆ ಇವರೆಲ್ಲ ಒಂದು ಸಿದ್ಧಾಂತಕ್ಕೆ ಬದಲಾಗಿ ಒಂದು ಪಕ್ಷದ ಚೌಕಟ್ಟಿಗೆ ಒಳಪಟ್ಟವರು. ಏನೇ ಆದರೂ ಆ ಪಕ್ಷಗಳ ಚೌಕಟ್ಟಿನಿಂದ ಕೊಂಚ ಕದಲಲಿಕ್ಕೂ ಸಾಧ್ಯವಾಗದವರು ಅಥವಾ ಅಸಹಾಯಕರು. ಈ ಅಸಹಾಯಕತೆಯನ್ನು ಆ ಪಕ್ಷಗಳೇ ನಿರಂತರವಾಗಿ ಅವರ ಹೆಗಲ ಮೇಲಿರುವಂತೆ ನೋಡಿಕೊಳ್ಳುತ್ತಲೇ ಬರುತ್ತಿವೆ. ಇಂತಹವರಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಕಂಬಾಲಪಲ್ಲಿಯಲ್ಲಿ ದಲಿತರ ಕಗ್ಗೊಲೆಯಾಗಿ 15 ವರ್ಷಗಳೇ ಕಳೆದಿವೆ. ಈಗ ಈ ಪ್ರಕರಣ ಸುಪ್ರೀಂಕೋರ್ಟ್‌ನ ಅಂಗಳದಲ್ಲಿದೆ.

ಇದರ ಸಾಧಕ– ಬಾಧಕಗಳನ್ನು ಜನರ ಮುಂದೆ ತೆರೆದಿಡಬೇಕಾದ ಅವಶ್ಯಕತೆ ಇಂದು ಅತ್ಯಂತ ಜರೂರಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಶಿವರಾಂ ಅವರು ದಲಿತ ಮುಖ್ಯಮಂತ್ರಿಗಾಗಿ ಧ್ವನಿಯೆತ್ತಿದ್ದಾರೆ. ಈಗಾಗಲೇ ಹೊಲೆಮಾದಿಗರ ನಡುವೆ ಬಿರುಕುಂಟಾಗಿ ಆಳದ ಕಂದರ ಏರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ಇದನ್ನು ಮತ್ತಷ್ಟು ಹಿಗ್ಗಿಸಲಿಕ್ಕೆ ಛಲವಾದಿಗಳ ಏಕತೆಯ ಹೆಸರಿನಲ್ಲಿ ಹೊರಟಿರುವ ಶಿವರಾಂರಿಂದ ಬಂದಿರುವ ಈ ಮಾತು ಎಷ್ಟು ಸರಿ?

ಕೇಳಬೇಕಾದ ಬಾಯಿಗಳು ಸುಮ್ಮನಿವೆ. ಸುಮ್ಮನಿರಬೇಕಾದ ಬಾಯಿಗಳು ಕೇಳುತ್ತಿವೆ. ಪಕ್ಷದಿಂದ ಪಕ್ಷಕ್ಕೆ ಅಧಿಕಾರದ ಆಸೆಗಾಗಿ ಸ್ಥಾನಾಂತರ ಮಾಡಿದ ಶಿವರಾಂ, ದಲಿತ ಮುಖ್ಯಮಂತ್ರಿಯನ್ನು ಮಾಡಬೇಕೆಂದು ಪಣ ತೊಟ್ಟಿರುವುದರ ಹಿಂದಿನ ಉದ್ದೇಶವೇನೋ ತಿಳಿಯದಾಗಿದೆ. ದಲಿತರಲ್ಲಿ ಮುಖ್ಯಮಂತ್ರಿ ಯಾರಾಗಬೇಕು? ಅಂಬೇಡ್ಕರ್ ಅವರ ‘ಜಾತ್‌ಪಾತ್‌ತೊಡಕ್  ಮಹಾಧಿವೇಶನ’ದ ಅಧ್ಯಕ್ಷೀಯ ಭಾಷಣದಲ್ಲಿ ಕೊಂಚ ಬದಲಾವಣೆಯನ್ನು ಆಯೋಜಕರು ಕೇಳಿದಾಗ, ‘ಇದರಲ್ಲಿನ ಒಂದು ಅಲ್ಪವಿರಾಮವನ್ನೂ ತೆಗೆಯಲಾರೆ’ ಎಂದು ಹೇಳಿ ಅವರು ಅಧ್ಯಕ್ಷ ಸ್ಥಾನದಿಂದಲೇ ಹೊರನಡೆದರು.

ಇಂತಹ ಬದ್ಧತೆ ಇರುವ ವ್ಯಕ್ತಿ ದಲಿತ ನೆಲೆಯಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಅಥವಾ ಮುಖ್ಯಮಂತ್ರಿ ಆದ ಮೇಲಾದರೂ ಇಂತಹ ಬದ್ಧತೆಗಳಿಗೆ ಒಳಗಾಗಬೇಕು. ಆದರೆ ಸದ್ಯಕ್ಕೆ ಇಂತಹವರು ಯಾರಿದ್ದಾರೆ? ಇರುವ ದಲಿತ ರಾಜಕೀಯ ನಾಯಕರಿಂದ ಇಂತಹ ನಡೆಯನ್ನು ನಿರೀಕ್ಷಿಸಲು ಸಾಧ್ಯವೇ? ಇಲ್ಲಿನ ಕೆಲವು ದಲಿತ ನಾಯಕರು ದಲಿತ ಪರ ಕಾಳಜಿಯನ್ನು ಉಳ್ಳವರಾಗಿದ್ದರೂ, ದಲಿತರ ಏಳ್ಗೆಗಾಗಿ  ಶ್ರಮ ವಹಿಸಿರುವವರಾದರೂ ಆಯಾ ಪಕ್ಷಗಳ ಹಿಡಿತದಲ್ಲೇ ಸಾಗುವವರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ದಲಿತರೇ ಒಗ್ಗೂಡಿ ತಮ್ಮದೇ ಆದ ಮತಗಳಿಂದ  ದಲಿತ ಪರ ಕಾಳಜಿಯುಳ್ಳ, ರಾಜಿ ರಹಿತ ಮನೋಭಾವದ ವ್ಯಕ್ತಿಯನ್ನು ಆರಿಸಬೇಕಾದ ಅಗತ್ಯ ಇದೆ. ಆದರೆ ಇದಕ್ಕೆ ಪುಣೆ ಒಪ್ಪಂದದಲ್ಲಿ ಕಳೆದುಹೋದ (ಕಿತ್ತುಕೊಂಡ) ಪ್ರತ್ಯೇಕ ಮತದಾನ ಪದ್ಧತಿ ಅಥವಾ ಎರಡು ವೋಟಿನ ಹಕ್ಕನ್ನು ಮರಳಿ ಪಡೆದುಕೊಳ್ಳುವುದು ಅತ್ಯಗತ್ಯ. ಇದಾಗುವವರೆಗೂ ದಲಿತ ಮುಖ್ಯಮಂತ್ರಿ ಬೇಡವೆಂದಲ್ಲ. ಈ ನಿಟ್ಟಿನಲ್ಲಿ ಸಾಗುತ್ತಲೇ, ತಮ್ಮ ಬಗ್ಗೆ ಪ್ರಾಮಾಣಿಕ ಕಳಕಳಿಯುಳ್ಳ ವ್ಯಕ್ತಿಯನ್ನು ದಲಿತರು ಒಕ್ಕೊರಲಿನಿಂದ ಆಯ್ಕೆ ಮಾಡಿ ಅವರು ಮುಖ್ಯಮಂತ್ರಿಯ ಗದ್ದುಗೆ ಏರುವಂತೆ ಮಾಡಬೇಕು.

ಬದುಕು ‘ಮುಖ್ಯ’
ನಿಜವಾದ ದಲಿತರು ಇನ್ನೂ ದಲಿತರಾಗಿ, ಹೊಲೆ-ಮಾದಿಗರಾಗಿ ಉಳಿದಿದ್ದಾರೆ. ಅವರ ಸಮಸ್ಯೆಗಳು ಬೆಟ್ಟದಷ್ಟಿವೆ. ‘ಅನ್ನಭಾಗ್ಯ’ ಹೊರತುಪಡಿಸಿದರೆ ಹೊಲೆಮಾದಿಗರಿಗೆ ಯಾವುದೇ ಭಾಗ್ಯಗಳು ಇಲ್ಲವಾಗಿವೆ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ, ದಲಿತರಲ್ಲಿ ದಲಿತರಾದ ಮಾದಿಗ ಸಮುದಾಯದವರಿಗೆ ಒಂದು ಸೂರು, ಅಂಗೈ ಅಗಲ ಜಮೀನು ಇಲ್ಲವಾಗಿದೆ. ಗುಳೆ ಬಂದು ಕೂಲಿ–ನಾಲಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರ್‍್ಯಾರಿಗೂ ದಲಿತ ಮುಖ್ಯಮಂತ್ರಿಯ ಪರ– ವಿರೋಧದ ಅರಿವು ಇಲ್ಲ. ಅವರಾಯಿತು ಅವರ ಕೂಲಿಯಾಯಿತು ಎಂಬಂತಿದ್ದಾರೆ.

ಕೆಲವೇ ಕೆಲವು ಸ್ವಹಿತಾಸಕ್ತ ಹೋರಾಟಗಾರರು ಪರ– ವಿರೋಧದ ಚುಂಗು ಹಿಡಿದು ಎಳೆದಾಡುತ್ತಿದ್ದಾರೆ. ದಲಿತರು ಸಂಪುಟ ದರ್ಜೆ‌ ಸಚಿವರಾಗಿದ್ದು ಅವರ ಜನಾಂಗಕ್ಕೆ ಏನೇನು ಮಾಡಿದ್ದಾರೆಂದು ಹುಡುಕಿದರೆ ಏನೂ ಸಿಗಲಾರದು. ಗ್ರಾಮೀಣ ಪ್ರದೇಶದ ತಳಸಮುದಾಯದವರ ಬದುಕು– ಬವಣೆ ಬರಗಾಲದ ಬೇಸಿಗೆ ಬಿಸಿಲಿನಂತೆ ಝಳ ಹೊಡೆಯುತ್ತಿದ್ದು ‘ದಲಿತ ಮುಖ್ಯಮಂತ್ರಿ’ ಪರ ಹೇಳಿಕೆ, ಪ್ರತಿಹೇಳಿಕೆಗಳು ಹಾಸ್ಯಾಸ್ಪದ ಎನಿಸುತ್ತವೆ. ದಲಿತ ಯುವ ಪೀಳಿಗೆಯಲ್ಲಿ ನಿರುದ್ಯೋಗ ಸಮಸ್ಯೆ ಭೀಕರವಾಗಿದೆ. ದಲಿತರಲ್ಲಿಯೇ ಬಲಿಷ್ಠ ದಲಿತರು ಮಾತ್ರ ಸವಲತ್ತು ಕಬಳಿಸುತ್ತಿದ್ದು ನಿಜವಾದ ದಲಿತ ಅವಕಾಶವಂಚಿತನಾಗಿ ಬದುಕುತ್ತಿದ್ದಾನೆ.

‘ಬೇಕೇ ಬೇಕು ದಲಿತ ಮುಖ್ಯಮಂತ್ರಿ’ ಎಂಬುದೇನೋ ಸುಂದರ ವಾಕ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಅಷ್ಟು ಸುಲಭವಲ್ಲ. ‘ದಲಿತರು ಬರುವರು ದಾರಿ ಬಿಡಿ. ದಲಿತರ ಕೈಗೆ ರಾಜ್ಯ ಕೊಡಿ’ ಎಂದು ಅಬ್ಬರಿಸಿದವರು ಅವಕಾಶಗಳ ಬೆನ್ನುಹತ್ತಿ ಸವಲತ್ತು ಪಡೆದರು. ಅದೇ ಸಮುದಾಯದ ಉಳಿದ ದಲಿತರ ಬದುಕು ಇನ್ನೂ ಶೋಚನೀಯವಾಗಿದೆ.
 

ಒಂದಲ್ಲ ಒಂದು ರೀತಿ ಶೋಷಣೆ ನಡೆಯುತ್ತಲೇ ಇದೆ. ಈ ಕುರಿತು  ಗಂಭೀರವಾಗಿ ಆಲೋಚನೆ ನಡೆಸಬೇಕಿದೆ. ಸಾಮಾನ್ಯ ದಲಿತನ ಕೂಗು ಕ್ಷೀಣಗೊಂಡಿದೆ. ಬದುಕು ದುಸ್ತರವಾಗಿದೆ. ದಲಿತ ಮುಖ್ಯಮಂತ್ರಿ ಎಂಬ ಪದದ ಆಚೆ ನಿಂತು ಯೋಚಿಸಬೇಕಾದ ಕಾಲದಲ್ಲಿ ನಾವಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT