ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಎದುರಿನ ಸರಣಿ ಯುವಪಡೆಗೆ ಸವಾಲು...

Last Updated 17 ಜನವರಿ 2016, 19:30 IST
ಅಕ್ಷರ ಗಾತ್ರ

2007ನೇಇಸವಿಯ ಆ ಸಂಜೆ. ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಅನನುಭವಿ ಮಧ್ಯಮವೇಗಿ ಜೋಗಿಂದರ್ ಶರ್ಮಾ ಅವರ ಕೈಗೆ ಮಹೇಂದ್ರಸಿಂಗ್ ದೋನಿ ಚೆಂಡು ಕೊಟ್ಟಾಗ ಲಕ್ಷಾಂತರ ಕ್ರಿಕೆಟ್‌ ಅಭಿಮಾನಿಗಳ ಹುಬ್ಬೇರಿದ್ದವು. ಆದರೆ, ಕೆಲವೇ ನಿಮಿಷಗಳ ನಂತರ ಅವರೆಲ್ಲರ ಮುಖದಲ್ಲಿಯೂ ವಿಜಯದ ನಗೆ ಮೂಡಿತ್ತು. ದೋನಿಯನ್ನು ಟೀಕಿಸಿದ್ದವರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದರು. ಏಕೆಂದರೆ, ಅಲ್ಲಿ ಅವರ ಅದೃಷ್ಟ ಗೆದ್ದಿತ್ತು. ಪಾಕಿಸ್ತಾನ ಎದುರಿನ ಫೈನಲ್‌ನಲ್ಲಿ ಭಾರತ ಚುಟುಕು ಕ್ರಿಕೆಟ್‌ನ ಮೊಟ್ಟಮೊದಲ ವಿಶ್ವಕಪ್‌ ಎತ್ತಿ ಮೆರೆದಿತ್ತು.

ಇದೀಗ ಭಾರತ ಆರನೇ ವಿಶ್ವ ಟ್ವೆಂಟಿ–20 ಟೂರ್ನಿಗೆ ಆತಿಥ್ಯ ವಹಿಸಲು ಸಿದ್ಧವಾಗಿದೆ. ಕಳೆದ ಎಲ್ಲ ಐದು ಟೂರ್ನಿಗಳಲ್ಲಿಯೂ ಭಾರತ ತಂಡವನ್ನು ಮುನ್ನಡೆಸಿದ್ದ ದೋನಿಯೇ ಈ ಬಾರಿಯೂ ನಾಯಕನಾಗಿ ಇರುವುದು ಬಹುತೇಕ ಖಚಿತ. ಆದರೆ, ಒಂಬತ್ತು ವರ್ಷಗಳ ಹಿಂದೆ ಇದ್ದ ಛಲ, ಬಲಗಳು ಅವರಲ್ಲಿ ಇನ್ನೂ ಇದೆಯೇ?  ಈ ಸಂಶಯಕ್ಕೆ ಮಹಿಯ ಇತ್ತೀಚಿನ ಮಾತುಗಳೂ ಪುಷ್ಟಿ ನೀಡುತ್ತಿವೆ.

ಹೋದ ಶುಕ್ರವಾರ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ಎದುರು ಎರಡನೇ ಏಕದಿನ ಪಂದ್ಯ ಸೋತ ನಂತರ ಅವರು,  ‘ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಬ್ಯಾಟ್ಸ್‌ಮನ್‌ಗಳ ಮೇಲೆ ಇನ್ನಷ್ಟು ಒತ್ತಡ ಹಾಕಿ 330ಕ್ಕಿಂತ ಹೆಚ್ಚಿನ ಮೊತ್ತ ಗಳಿಸುವಂತೆ ಮಾಡಬೇಕು. ಎರಡನೇಯದ್ದು; ನಾವು ಟಾಸ್ ಗೆದ್ದರೂ ಎದುರಾಳಿಗಳಿಗೆ ಬ್ಯಾಟಿಂಗ್ ನೀಡಿ ನಂತರ ಗುರಿಯನ್ನು ಬೆನ್ನತ್ತಬೇಕು’ ಎಂದಿದ್ದರು. 

ತಮ್ಮ ತಂಡದ ಬೌಲರ್‌ಗಳ ಮೇಲೆ ಅವರು ವಿಶ್ವಾಸ ಕಳೆದುಕೊಂಡಿರುವುದನ್ನು ಈ ಮಾತುಗಳು ಧ್ವನಿಸಿದ್ದವು. 300 ರನ್‌ಗಳಿಗಿಂತಲೂ ಹೆಚ್ಚು ಮೊತ್ತದ ನೆರವು ಇದ್ದರೂ ಬೌಲರ್‌ಗಳು ವಿಫಲರಾಗಿರುವುದು ಅವರ ಆತ್ಮವಿಶ್ವಾಸ ಕುಂದಲು ಕಾರಣವಾಗಿದೆ. ಅವತ್ತು ಜೋಹಾನ್ಸ್‌ಬರ್ಗ್‌ನಲ್ಲಿ ಪಾಕ್ ಎದುರು ನಿರ್ಣಾಯಕ ಓವರ್ ಬೌಲಿಂಗ್ ಮಾಡಿ ನಾಯಕನ ವಿಶ್ವಾಸ ಉಳಿಸಿಕೊಂಡಿದ್ದ ಜೋಗಿಂದರ್ ಅವರಂತಹ ಬೌಲರ್‌ಗಳ ಕೊರತೆ ಇದೆಯೇ ಎಂಬ ಪ್ರಶ್ನೆಯ ಜೊತೆಗೆ,  ತಂಡದ ಆಯ್ಕೆಯಲ್ಲಿ ದೋನಿ ಎಡವುತ್ತಿದ್ದಾರೆಯೇ ಎಂಬ ಸಂಶಯವೂ ಕಾಡುತ್ತಿದೆ.

ತಪ್ಪಿದ ಲೆಕ್ಕಾಚಾರಗಳು
ಭಾರತ ಕ್ರಿಕೆಟ್ ತಂಡವು ಕಂಡ ಯಶಸ್ವಿ ನಾಯಕರಲ್ಲಿ ಮಹೇಂದ್ರಸಿಂಗ್ ದೋನಿ ಪ್ರಮುಖರು ಎನ್ನುವುದರಲ್ಲಿ ಎರಡು ಮಾತಿಲ್ಲ.  ಟ್ವೆಂಟಿ–20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕರಾಗಿ ಮಿಂಚಿದವರು ರಾಂಚಿಯ ಆಟಗಾರ. ಟೆಸ್ಟ್‌ ಕ್ರಿಕೆಟ್‌ನಲ್ಲಿಯೂ ಭಾರತವನ್ನು ಅಗ್ರಸ್ಥಾನದಲ್ಲಿ ಮೆರೆಸಿದ ಕೀರ್ತಿ ದೋನಿಗೆ ಸಲ್ಲುತ್ತದೆ. ಆದರೆ, ಕಳೆದ ಕೆಲವು ತಿಂಗಳುಗಳಿಂದ ಅವರ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. 

ತವರಿನಲ್ಲಿಯೇ ನಡೆದಿದ್ದ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಎದುರು ದೋನಿ ಬಳಗ ಸೋಲನುಭವಿಸಿತ್ತು. ಭಾರತವು ಆತಿಥ್ಯ ವಹಿಸಲಿರುವ ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಆಡುವ ತಂಡವನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು.  ಆದರೆ, ಮೊದಲ ಎರಡು ಏಕದಿನ ಪಂದ್ಯಗಳಲ್ಲಿಯೇ ತಂಡ ಸಮತೋಲನದಿಂದ ಕೂಡಿಲ್ಲ ಎಂಬುದು ಬಹಿರಂಗವಾಗಿದೆ.

ಶಿಖರ್ ಧವನ್ ಹೊರತುಪಡಿಸಿದರೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದಾರೆ. ರೋಹಿತ್ ಶರ್ಮಾ ಎರಡೂ ಪಂದ್ಯಗಳಲ್ಲಿ ಶತಕ ಸಿಡಿಸಿ ತಾವು ನಿಗದಿತ ಓವರ್‌ಗಳ ಕ್ರಿಕೆಟ್‌ನ ಪರಿಣತ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಆದರೆ, ಚಿಂತೆ ಇರುವುದು ಬೌಲಿಂಗ್ ವಿಭಾಗದ್ದು. ಮೊಣಕಾಲಿನ ಶಸ್ತ್ರಚಿಕಿತ್ಸೆಯ ನಂತರ ದೀರ್ಘ ಕಾಲದ ವಿಶ್ರಾಂತಿ ಪಡೆದಿದ್ದ ಮೊಹಮ್ಮದ್ ಶಮಿ ಮತ್ತೆ ಗಾಯಗೊಂಡಿದ್ದಾರೆ. ಒಂದೂ ಪಂದ್ಯವನ್ನು ಆಡದೇ ಆಸ್ಟ್ರೇಲಿಯಾದಿಂದ ಮರಳಿದ್ದಾರೆ.

ಹೊಸ ಹುಡುಗ ಬರೀಂದರ್ ಸರನ್‌ ಮೊದಲ ಪಂದ್ಯದಲ್ಲಿ ತೋರಿದ್ದ ಕೈಚಳಕವನ್ನು ಎರಡನೇ ಪಂದ್ಯದಲ್ಲಿ ತೋರಲಿಲ್ಲ. ಅವರಿಗೆ ಇನ್ನೂ ಸಾಕಷ್ಟು ಅನುಭವದ ಅಗತ್ಯ ಇದೆ. ಅಗ್ರಮಾನ್ಯ ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ ಕೂಡ ತುಟ್ಟಿಯಾಗಿದ್ದಾರೆ. ಇಶಾಂತ್ ಶರ್ಮಾ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡುತ್ತಿಲ್ಲ. ಲೈನ್‌ ಮತ್ತು ಲೆಂಗ್ತ್‌ಗಾಗಿ ಪರದಾಡುತ್ತಿದ್ದಾರೆ. ಉಮೇಶ್ ಯಾದವ್ ಕೂಡ ಪರಿಣಾಮಕಾರಿಯಾಗುತ್ತಿಲ್ಲ.

ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವು ನಾಲ್ವರು ವೇಗದ ಬೌಲರ್‌ಗಳನ್ನಿಟ್ಟುಕೊಂಡು ಕಣಕ್ಕಿಳಿದಿತ್ತು. ಆದರೆ, ದೋನಿ ಮಾತ್ರ ಇಬ್ಬರು ಸ್ಪಿನ್ನರ್, ಮೂವರು ವೇಗಿಗಳೊಂದಿಗೆ ಕಣಕ್ಕಿಳಿದಿದ್ದು ಅವರಿಗೇ ತಿರುಗೇಟು ನೀಡಿತು. ಪದಾರ್ಪಣೆಗಾಗಿ ಕಾಯುತ್ತಿರುವ ಮಧ್ಯಮವೇಗಿ ರಿಷಿ ಧವನ್ ಮತ್ತು ಅನುಭವಿ ಭುವನೇಶ್ವರಕುಮಾರ್ ಅವರಿಗೆ ಅವಕಾಶ ನೀಡಲಿಲ್ಲ. ಸ್ಟೀವನ್ ಸ್ಪಿನ್, ಆ್ಯರನ್ ಫಿಂಚ್, ಜಾರ್ಜ್ ಬೇಲಿ ಅವರ ಆಕ್ರಮಣಕಾರಿ ಬ್ಯಾಟಿಂಗ್‌ ಕಟ್ಟಿಹಾಕಲು ಸ್ಪಿನ್ನರ್‌ಗಳಿಗೆ ಸಾಧ್ಯವೇ ಆಗಲಿಲ್ಲ. ಫೀಲ್ಡಿಂಗ್ ವಿಭಾಗದಲ್ಲಿ ಚುರುಕಿನ ಪ್ರದರ್ಶನ ಮೂಡಿ ಬರುತ್ತಿರುವುದು ಆಶಾದಾಯಕ ಬೆಳವಣಿಗೆ.

‘ಮಧ್ಯಮವೇಗಿ ಆಲ್‌ರೌಂಡರ್‌ ಹುಡುಕಾಟದಲ್ಲಿದ್ದೇವೆ. ಆಸ್ಟ್ರೇಲಿಯಾ ಪಿಚ್‌ನಲ್ಲಿ ಬ್ಯಾಟಿಂಗ್ ಮತ್ತು ಮಧ್ಯಮವೇಗದ ಬೌಲಿಂಗ್ ಎರಡನ್ನೂ ಮಾಡುವವರಿದ್ದರೆ ತಂಡಕ್ಕೆ ಹೆಚ್ಚಿನ ಬಲ ಸಿಗುತ್ತದೆ. ನಮ್ಮ ತಂಡದಲ್ಲಿ ಇಬ್ಬರು ಸ್ಪಿನ್ ಆಲ್‌ರೌಂಡರ್ ಇದ್ದಾರೆ. ವೇಗಿ ಇಲ್ಲ’ ಎಂದು ದೋನಿ ಪರ್ತ್ ಪಂದ್ಯದ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅಶ್ವಿನ್ ಮತ್ತು ಜಡೇಜ ಕೆಳಕ್ರಮಾಂಕದಲ್ಲಿ ಒಂದಿಷ್ಟು ರನ್‌ ಗಳಿಸುವ ಸಾಮರ್ಥ್ಯ ಇರುವುದು ಅವರ ಆಯ್ಕೆಗೆ ಕಾರಣವಾಗುತ್ತಿದೆ. ಆದರೆ, ತಂಡದ ಆಯ್ಕೆ ಸಮಿತಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೆನ್ನಾಗಿ ಆಡಿದ್ದ ಅನುಭವಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ಮುಂಬೈನ ಶಾರ್ದೂಲ್ ಠಾಕೂರ್, ಬರೋಡಾದ ಹಾರ್ದಿಕ್ ಪಾಂಡ್ಯ ಕಣ್ಣಿಗೆ ಬಿದ್ದಿಲ್ಲ ಎನ್ನುವುದು ಸೋಜಿಗ.

ಯುವಿ, ನೆಹ್ರಾ ಮೇಲೆ ಕಣ್ಣು
ಏಕದಿನ ಸರಣಿಯ ಫಲಿತಾಂಶ ಏನೇ ಆಗಲಿ. ನಂತರದ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯು ಕುತೂಹಲದ ಕೇಂದ್ರಬಿಂದುವಾಗಿದೆ. ಏಕೆಂದರೆ,  ಆ ಸರಣಿಯ ನಂತರ ಭಾರತವು ಸ್ವದೇಶಕ್ಕೆ ಮರಳಲಿದ್ದು, ವಿಶ್ವ ಟ್ವೆಂಟಿ–20 ಟೂರ್ನಿ ಆಡಲಿದೆ. ಅದರಲ್ಲೂ ತಂಡಕ್ಕೆ ಮರಳಿರುವ ಆಲ್‌ರೌಂಡರ್ ಯುವರಾಜ್ ಸಿಂಗ್ ಮತ್ತು ಎಡಗೈ ವೇಗಿ ಆಶಿಶ್ ನೆಹ್ರಾ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ.

2011ರ ಏಕದಿನ ವಿಶ್ವಕಪ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್, ನಂತರದ ಟೂರ್ನಿಗಳಲ್ಲಿ ಕಳೆಗುಂದಿದ್ದರು. ಅದರಲ್ಲಿಯೂ 2014ರ ಟ್ವೆಂಟಿ–20 ವಿಶ್ವಕಪ್ ಫೈನಲ್‌ನ ಅವರ ಬ್ಯಾಟಿಂಗ್ ತೀವ್ರ ಟೀಕೆಗೆ ಒಳಗಾಗಿತ್ತು. 25 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿದ್ದ ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ಭಾರತಕ್ಕೆ ಗೆಲುವು ಕೈತಪ್ಪಿತ್ತು. ಆದರೆ ಈಗ ಅವರಿಗೆ ಮತ್ತೊಂದು ಅವಕಾಶ ಲಭಿಸಿದೆ. ಆಸ್ಟ್ರೇಲಿಯಾ ಸರಣಿ ಅವರ ಪಾಲಿಗೆ ‘ಫೈನಲ್’ ಪರೀಕ್ಷೆ. ಗಾಯದಿಂದ ಚೇತರಿಸಿಕೊಂಡು ಬಂದಿರುವ ಆಶಿಶ್ ನೆಹ್ರಾ  ತಮ್ಮ ಅನುಭವದ ಮೂಟೆಯಲ್ಲಿರುವ ಅಸ್ತ್ರಗಳನ್ನು ಪ್ರಯೋಗಿಸಲು ಒಳ್ಳೆಯ ಅವಕಾಶ ಇದೆ. ಪಂದ್ಯ ಗೆಲ್ಲಿಸುವ ಬೌಲರ್‌ ಎನಿಸಿಕೊಂಡರೆ ಮತ್ತೊಂದಿಷ್ಟು ಟೂರ್ನಿಗಳಲ್ಲಿ ಮಿಂಚುವ ಅವಕಾಶ ಅವರದ್ದಾಗಲಿದೆ.

ಅನುಭವಿ ಮತ್ತು ಯುವ ಆಟಗಾರರ ಪ್ರತಿಭೆಯನ್ನು ಸೂಕ್ತವಾಗಿ ಬಳಸಿಕೊಂಡು ತಂಡವನ್ನು ಮುನ್ನಡೆಸುವಲ್ಲಿ ದೋನಿ ಯಶಸ್ವಿಯಾಗುವರೇ ಎನ್ನುವ ಕುತೂಹಲವೂ ಈಗ ಗರಿಗೆದರಿದೆ.  ಹೋದ  ವರ್ಷ ಆಸ್ಟ್ರೇಲಿಯಾದಲ್ಲಿಯೇ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದೋನಿ ಬಳಗವು ಉತ್ತಮವಾಗಿ ಆಡಿತ್ತು.

ಆದರೆ, ಇದೀಗ ಅದೇ ನೆಲದಲ್ಲಿ ಜಯಕ್ಕಾಗಿ ಪರದಾಡುತ್ತಿದೆ. ಈ ಹಂತದಲ್ಲಿ ಮುಂಬರಲಿರುವ ವಿಶ್ವಕಪ್ ಟೂರ್ನಿಗೆ ತಂಡದ ಆತ್ಮಬಲವನ್ನು ಗಟ್ಟಿಯಾಗಿರಿಸುವ ಸವಾಲನ್ನು ತಂಡದ ನಾಯಕ ಎದುರಿಸುವುದು ಸಹಜ.  ಆದರೆ, ಈ ಎಲ್ಲ ಅಡೆತಡೆಗಳನ್ನೂ ದಾಟಿ, ತವರಿನ ನೆಲದಲ್ಲಿ ಮತ್ತೊಂದು ವಿಶ್ವಕಪ್ ಗೆದ್ದು, ನಿಗದಿಯ ಓವರ್‌ಗಳ ಕ್ರಿಕೆಟ್‌ಗೆ ದೋನಿ ವಿದಾಯ ಹೇಳಬಹುದೇ ಎಂಬ ಚರ್ಚೆಗಳಂತೂ ಈಗ ಆರಂಭವಾಗಿವೆ. ಏಪ್ರಿಲ್ ಮೊದಲ ವಾರದಲ್ಲಿ ಉತ್ತರ ಸಿಗಲಿದೆ!
*
ಬಾಕ್ಸಿಂಗ್‌ ಬಿಟ್ಟು ಬೌಲರ್ ಆದ ಬರೀಂದರ್
ಪರ್ತ್ ಅಂಗಳದಲ್ಲಿ ಪದಾರ್ಪಣೆ ಮಾಡಿ ಆಸ್ಟ್ರೇಲಿಯಾ ಮೂವರು ಪ್ರಮುಖ ಬ್ಯಾಟ್ಸ್‌ಮನ್‌ಗಳ ವಿಕೆಟ್ ಎಗರಿಸಿದ ಪಂಜಾಬಿ ಹುಡುಗ ಬರೀಂದರ್ ಬಲಬೀರ್‌ಸಿಂಗ್ ಸರನ್‌ ಮೂಲತಃ ಬಾಕ್ಸರ್.

ಒಲಿಂಪಿಯನ್ ವಿಜೇಂದರ್‌ ಸಿಂಗ್ ಅವರ ಭಿವಾನಿ ಬಾಕ್ಸಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆದಿದ್ದಾರೆ. ಆದರೆ, ಅವರು ಕ್ರಿಕೆಟ್‌ಗೆ ಕಾಲಿಟ್ಟಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ. ರೈತಾಪಿ ಕುಟುಂಬದ ಹುಡುಗ ತನ್ನ ಹಳ್ಳಿ ಸಿರ್ಸಾದ ಬೀದಿಗಳಲ್ಲಿ ಮಾತ್ರ ಕ್ರಿಕೆಟ್ ಆಡಿದ್ದ. ಆದರೆ, ಬಾಕ್ಸಿಂಗ್ ತರಬೇತಿ ಪಡೆದು ದೊಡ್ಡ ಬಾಕ್ಸರ್ ಆಗುವ ಕನಸು ಕಾಣುತ್ತಿದ್ದ. ಅದೊಮ್ಮೆ ಐಪಿಎಲ್‌ನ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಆಯ್ಕೆ ಟ್ರಯಲ್ಸ್‌ ಜಾಹೀರಾತು ಬರೀಂದರ್ ಗಮನ ಸೆಳೆಯಿತು. ಭಾಗವಹಿಸಿದ ಬರೀಂದರ್‌ಗೆ ಯಶಸ್ಸು ಸಿಗಲಿಲ್ಲ.

ಚಂಡೀಗಡದ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿ ಪಡೆದರು. 19 ವರ್ಷದೊಳಗಿನವರಿಗಾಗಿ ನಡೆದ ಗ್ಯಾಟೊರೇಡ್ ಸ್ಪೀಡ್‌ಸ್ಟರ್ ಸ್ಪರ್ಧೆಯಲ್ಲಿ ಅವರ ಎಡಗೈ ವೇಗದ ಬೌಲಿಂಗ್  ಪ್ರದರ್ಶಿಸಿದರು. ದುಬೈನ ಐಸಿಸಿ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಅವಕಾಶ ಗಿಟ್ಟಿಸಿಕೊಂಡರು. ಆದರೆ, ಗಾಯದ ಸಮಸ್ಯೆಯಿಂದ ಬಳಲಿದರು. ನಂತರ 2015ರಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಗಮನ ಸೆಳೆದರು. ಮಾರ್ಗದರ್ಶಕ ರಾಹುಲ್ ದ್ರಾವಿಡ್ ಅವರ ಸಲಹೆಗಳೂ ಅವರಿಗೆ ಸಂಜೀವಿನಿಯಾದವು. 

ಕೇವಲ 11 ಪ್ರಥಮ ದರ್ಜೆ ಪಂದ್ಯಗಳಲ್ಲಿ 32 ವಿಕೆಟ್ ಗಳಿಸಿದರು. ಡಿಸೆಂಬರ್ ತಿಂಗಳಲ್ಲಿ ಅವರಿಗೆ ಭಾರತ ತಂಡದ ಬುಲಾವ್ ಬಂದಿತು. 23 ವರ್ಷದ ಬರೀಂದರ್ ಮೊದಲ ಎರಡೂ ಏಕದಿನ ಪಂದ್ಯಗಳಲ್ಲಿ ಭಾರತದ ಆರಂಭಿಕ ಬೌಲರ್‌ ಆಗಿ ಆಡಿದ್ದು ವಿಶೇಷ. ಜಹೀರ್ ಖಾನ್, ಇರ್ಫಾನ್ ಪಠಾಣ್, ಆರ್‌.ಪಿ. ಸಿಂಗ್ ಅವರಂತೆ ಉತ್ತಮ ಎಡಗೈ ಮಧ್ಯಮವೇಗಿಯಾಗಿ ರೂಪುಗೊಳ್ಳುವ ಅವಕಾಶ ಅವರಿಗೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT