ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಒತ್ತುವರಿ: ಬೋಸರಾಜು ವಿರುದ್ಧ ಆರೋಪ

Last Updated 29 ಆಗಸ್ಟ್ 2015, 7:01 IST
ಅಕ್ಷರ ಗಾತ್ರ

ರಾಯಚೂರು: ಮಾನ್ವಿ ತಾಲ್ಲೂಕಿನಲ್ಲಿ ಅಕ್ರಮ ಆಸ್ತಿ ಸಂಪಾದನೆಯಲ್ಲಿ ತೊಡಗಿರುವ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಸರ್ಕಾರಿ ಆಸ್ತಿ ಒತ್ತುವರಿ ಮಾಡಿದ್ದಾರೆಂದು ಆರೋಪಿಸಿದ ಮಾನ್ವಿ ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಪ್ರಭುರಾಜ ಕೊಡ್ಲಿ, ಈ ಬಗ್ಗೆ ರಾಜ್ಯಪಾಲರಿಗೆ ಮತ್ತು ವಿಧಾನ ಸಭೆಯ ಸ್ಪೀಕರ್‌ಗೆ ದೂರು ನೀಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಒತ್ತಾಯಿಸಲಾಗುವುದು ಎಂದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜಕೀಯ ಪ್ರಭಾವ ಬಳಸಿಕೊಂಡು ದಾಖಲಾತಿ ತಿದ್ದಿ ಭೂಮಿ ನೋಂದಣಿ ಮಾಡಿಸಿಕೊಂಡಿರುವ ಬೋಸರಾಜು ಅಕ್ರಮವೆಸಗಿದ್ದಾರೆ. ಶಾಸಕ ಹಂಪಯ್ಯ ನಾಯಕ ಹೋಬಳಿಗಳಲ್ಲಿ ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಆರಂಭಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

1969ರಲ್ಲಿ  ಅಪ್ಪರಾವು  ಹೆಸರಿನಲ್ಲಿದ್ದ 15 ಗುಂಟೆ ಪಹಣಿಯನ್ನು ಫೋರ್ಜರಿ ಮಾಡಿ ನಡಂಪಲ್ಲಿ ಸತ್ಯನಾರಾಯಣರಾಜು ಮತ್ತು ವೆಂಕಟಪತಿರಾಜು ಹೆಸರು ಅಕ್ರಮವಾಗಿ ಸೇರಿಸಿದ್ದಾರೆ ಎಂದು ದೂರಿದರು.

2014–15ರವರೆಗೆ ಇವರಿಬ್ಬರ ಹೆಸರಿನಲ್ಲೇ ಇದ್ದ ಈ ಭೂಮಿಯನ್ನು 2009ರಲ್ಲಿ ನಡಂಪಲ್ಲಿ ಸತ್ಯನಾರಾಯಣರಾಜು ಅವರಿಂದ ಚದರ ಅಡಿ ಲೆಕ್ಕದಲ್ಲಿ (10885) ಖರೀದಿ ಪತ್ರ ಮತ್ತು 12375 ಚದರ ಅಡಿ ಭೂಮಿಯನ್ನು  ವೆಂಕಟಪತಿರಾಜು ಅವರಿಂದ ದಾನಪತ್ರ ಬರೆಸಿಕೊಂಡು ಒಟ್ಟಾರೆ 23260 ಚದರ ಅಡಿ ಭೂಮಿಯನ್ನು ಬೋಸರಾಜು ನೊಂದಣಿ ಮಾಡಿಸಿಕೊಂಡಿದ್ದಾರೆ. 2015ರವರೆಗೂ 20 ಗುಂಟೆ ಎಂದಿರುವುದನ್ನು 22 ಗುಂಟೆ ಎಂದು ನೋಂದಣಿ ಮಾಡಿಸಿಕೊಂಡಿದ್ದಾರೆ. ರಸ್ತೆ ಮತ್ತು ಜಲ ಸಂಪನ್ಮೂಲ ಇಲಾಖೆಗೆ ಸೇರಿದ 5 ಗುಂಟೆ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆಪಾದಿಸಿದರು.

ಪೋಡಿ, ಸರ್ವೆ ಮಾಡದೇ ನಕ್ಷೆ ದಾಖಲಾತಿಗಳು ಇಲ್ಲದೇ ನೋಂದಣಿ ಮಾಡಿಸಿಕೊಂಡು ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿದ್ದಾರೆ. ಕಟ್ಟಡಕ್ಕೆ ಅಡ್ಡಿಯಾಗಿದ್ದ ವಿದ್ಯುತ್‌ ಕಂಬ ಮತ್ತು ರಸ್ತೆ ವಿಭಜಕವನ್ನು ನಾಶಪಡಿಸಿದ್ದಾರೆ. ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಹಂಪಯ್ಯ ನಾಯಕ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಲ್ಲಟಗಿ ಗ್ರಾಮದಲ್ಲಿ ರಂಗನಾಥ ಬಾರ್ ಮತ್ತು ರೆಸ್ಟೋರೆಂಟ್ ಪ್ರಾರಂಭಿಸಿದ್ದಾರೆ. ಸರ್ಕಾರಿ ಆಸ್ಪತ್ರೆ, ಗ್ರಾಮಪಂಚಾಯಿತಿ ಕಾರ್ಯಾಲಯದ ಪಕ್ಕದಲ್ಲಿ ಬಾರ್ ಪ್ರಾರಂಭಿಸಿರುವುದು ಅಬಕಾರಿ ಕಾಯ್ದೆ ಉಲ್ಲಂಘನೆ ಎಂದರು.

ವಿಜಯಶ್ರೀ ಮತ್ತು ರಂಗನಾಥ ಕಂಪೆನಿಗಳ ಮಾಲೀಕರಾದ ಶಾಸಕರ ಪುತ್ರ ಗಂಗಣ್ಣ ಅವರ ಹೆಸರಿನಲ್ಲಿ ಈ ಬಾರ್‌ಗೆ ಪರವಾನಿಗೆ ಪಡೆಯಲಾಗಿದೆ. 8 ಎಕರೆ ನೀರಾವರಿ ಭೂಮಿ ಹೊಂದಿದ್ದರೂ ಸುಳ್ಳು ಮಾಹಿತಿ ನೀಡಿ ವಾರ್ಷಿಕ ಆದಾಯ ₨20 ಸಾವಿರ ಎಂದು ದಾಖಲೆ ಸಲ್ಲಿಸಿದ್ದಾರೆ. ಅಲ್ಲದೇ,  ಕಾಂಗ್ರೆಸ್ ಪಕ್ಷದ ಬೆಂಬಲಿಗರಿಗೆ 6 ಬಾರ್‌ಗಳನ್ನು ಶಾಸಕರು ಮಂಜೂರು ಮಾಡಿಸಿದ್ದಾರೆ ಎಂದರು.

ಬಸವರಾಜ ನಕ್ಕುಂದಿ ಮಾತನಾಡಿ, ವಿದ್ಯಾರ್ಥಿಗಳ ಸರ್ಕಾರಿ ವಸತಿ ನಿಲಯಗಳು ಅವ್ಯವಸ್ಥೆ ತಾಣಗಳಾಗಿವೆ. ಹಲವೆಡೆ ಈ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇವುಗಳಲ್ಲಿ ಅನೇಕ ವಸತಿ ನಿಲಯಗಳು ಶಾಸಕರ ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿವೆ. ತಮಗೆ ಬರುವ ಬಾಡಿಗೆ ಹಣ ತಪ್ಪುತ್ತದೆ ಎಂಬ ಕಾರಣಕ್ಕಾಗಿ  ಈ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಆಸಕ್ತಿ ತೋರುತ್ತಿಲ್ಲ ಎಂದು ಆಪಾದಿಸಿದರು.

ವಿವಿಧ ಸಂಘಟನೆಗಳು 33 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಈ ಇಬ್ಬರು ಶಾಸಕರು ಸ್ಪಂದಿಸಿಲ್ಲ ಎಂದರು.
ಅಬ್ರಹಾಂ ಪನ್ನೂರು, ರವಿ ಮದ್ದಾಪುರ, ಅಶೋಕ ತಡಕಲ್, ಸದಾನಂದ ,ಪ್ರದೀಪ, ಶೈಲಾಜಾ, ನಾಜೀನಾ, ಶೇಕ್ಷಾವಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT