ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಏರಿಕೆ: ಶೇ 20ರ ಮಿತಿ

Last Updated 2 ಮೇ 2016, 19:58 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ತೆರಿಗೆ ಪಾವತಿ ಸಂಬಂಧ ಉಂಟಾಗಿರುವ ಇದುವರೆಗಿನ ಎಲ್ಲ ಗೊಂದಲವನ್ನು ದೂರ ಮಾಡಲು ಯತ್ನಿಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಕಳೆದ ವರ್ಷ ತುಂಬಿರುವ ತೆರಿಗೆ ಮೊತ್ತದ ಆಧಾರದ ಮೇಲೆಯೇ ತೆರಿಗೆ ದರ ಹೆಚ್ಚಳವಾಗಲಿದೆ ಎಂದು ತಿಳಿಸಿದೆ.

ವಸತಿ ಕಟ್ಟಡಗಳಿಗೆ ಕಳೆದ ವರ್ಷ ತುಂಬಿದ ತೆರಿಗೆ ಮೊತ್ತದಲ್ಲಿ ಶೇ 20ರಷ್ಟು, ವಾಣಿಜ್ಯ ಕಟ್ಟಡಗಳಿಗೆ ಪಾವತಿಸಲಾದ ತೆರಿಗೆ ಮೊತ್ತದಲ್ಲಿ ಶೇ 25ರಷ್ಟು ಮಾತ್ರ ಏರಿಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಉದಾಹರಣೆಗೆ ಕಳೆದ ಆರ್ಥಿಕ ವರ್ಷದಲ್ಲಿ ವಸತಿ ಕಟ್ಟಡಕ್ಕೆ ₹ 1,400 ತೆರಿಗೆ ತುಂಬಿದ್ದರೆ, ಈ ಸಲ ತುಂಬಬೇಕಾದ ಮೊತ್ತ ₹ 1,680 ಆಗಲಿದೆ. ಹಾಗೆಯೇ ವಾಣಿಜ್ಯ ಕಟ್ಟಡಕ್ಕೆ ಕಳೆದ ವರ್ಷ ₹ 16,800 ತೆರಿಗೆ ಪಾವತಿಸಿದ್ದರೆ, ಈ ಸಲ ₹ 21,000 ತುಂಬಬೇಕಾಗುತ್ತದೆ.

ಆನ್‌ಲೈನ್‌ನಲ್ಲಿ ಚಲನ್‌ ಸೃಷ್ಟಿಸುವಾಗ ಸ್ವಯಂಚಾಲಿತವಾಗಿ ಹೊಸ ಲೆಕ್ಕಾಚಾರ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಗುರುವಾರದಿಂದ ಅದು ಅನುಷ್ಠಾನಕ್ಕೆ ಬರಲಿದೆ ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಿವರಾಜು ಸ್ಪಷ್ಟಪಡಿಸಿದರು.

‘ವಲಯ ವರ್ಗೀಕರಣದ ಪರಿಷ್ಕರಣೆ ಏನೇ ಇದ್ದರೂ ಆಸ್ತಿ ತೆರಿಗೆ ಹೆಚ್ಚಳದ ಪ್ರಮಾಣ ಶೇ 20 (ವಸತಿ) ಹಾಗೂ ಶೇ 25 (ವಾಣಿಜ್ಯ) ಮಿತಿಯನ್ನು ದಾಟುವುದಿಲ್ಲ. ಈ ವಿಷಯದಲ್ಲಿ ನಾಗರಿಕರು ಗೊಂದಲಕ್ಕೆ ಒಳಗಾಗುವುದು ಬೇಡ’ ಎಂದು ಅವರು ಹೇಳಿದರು.

ಮೊಕದ್ದಮೆ ದಾಖಲಿಸಲು ಆಗ್ರಹ: ಏಪ್ರಿಲ್‌ 29ರಂದು ನಡೆದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಗಲಾಟೆ ಮಾಡಿದವರ ಸದಸ್ಯತ್ವ ರದ್ದುಗೊಳಿಸಿ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ ಅವರನ್ನು ಮಾಜಿ ಮೇಯರ್‌ಗಳು ಆಗ್ರಹಿಸಿದರು.

ಮಾಜಿ ಮೇಯರ್‌ಗಳಾದ ಕೆಎಚ್‌ಎನ್‌ ಸಿಂಹ, ಪಿ.ಆರ್‌. ರಮೇಶ್‌, ಜೆ.ಹುಚ್ಚಪ್ಪ ಹಾಗೂ ಎಂ.ರಾಮಚಂದ್ರಪ್ಪ ಈ ಸಂಬಂಧ ಸೋಮವಾರ ಮೇಯರ್‌ ಅವರಿಗೆ ಮನವಿಪತ್ರ ಸಲ್ಲಿಸಿದರು.

‘ಬೆಂಗಳೂರಿನ ಪಾಲಿಗೆ ಬಿಜೆಪಿ ಯವರು ಕಟುಕರಾಗಿದ್ದಾರೆ. ಅವರಿಂದಲೇ ನಗರ ಹಾಳಾಗಿದೆ. ವ್ಯವಸ್ಥೆಯನ್ನು ಮತ್ತೆ ಸರಿದಾರಿಗೆ ತರಲು ಕಾಂಗ್ರೆಸ್‌ ಯತ್ನಿಸುತ್ತಿದ್ದು, ಬಿಜೆಪಿಗೆ ಸಹಿಸಲು ಆಗುತ್ತಿಲ್ಲ’ ಎಂದು ಹುಚ್ಚಪ್ಪ ದೂರಿದರು.

ವಲಯ ವರ್ಗೀಕರಣ ಬಿಜೆಪಿ ಕೊಡುಗೆ: ಮೇಯರ್‌
ಬೆಂಗಳೂರು:
ಆಸ್ತಿ ತೆರಿಗೆ ಹೆಚ್ಚಳದ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಲು ಬಿಜೆಪಿ ಸಿದ್ಧತೆ ನಡೆಸಿರುವಾಗಲೇ ಅದರ ಮೇಲೆ ತಿರುಗಿ ಬಿದ್ದಿರುವ ಕಾಂಗ್ರೆಸ್‌, ವಲಯ ವರ್ಗೀಕರಣ ಆಧಾರದ ಮೇಲೆ ತೆರಿಗೆ ಆಕರಣೆಗೆ ನಾಂದಿ ಹಾಡಿದ್ದೇ ಹಿಂದಿನ ಬಿಜೆಪಿ ಸರ್ಕಾರ ಎಂದು ಆರೋಪಿಸಿದೆ.

ನಾಲ್ವರು ಮಾಜಿ ಮೇಯರ್‌ಗಳ ಜತೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ ಈ ಆರೋಪ ಮಾಡಿದರು.

‘ಕರ್ನಾಟಕ ಮುನ್ಸಿಪಲ್‌ ಕಾಯ್ದೆಗೆ 108 (ಎ) ತಿದ್ದುಪಡಿ ಮಾಡಿ ವಲಯ ವರ್ಗೀಕರಣ ವ್ಯವಸ್ಥೆಯನ್ನು ಬಿ.ಎಸ್‌. ಯಡಿಯೂರಪ್ಪ ಅವರ ಸರ್ಕಾರ ಜಾರಿಗೆ ತಂದಿತ್ತು. ಬಿಜೆಪಿಯ ಡಿ. ವೆಂಕಟೇಶಮೂರ್ತಿ ಅವರು ಮೇಯರ್‌ ಆಗಿದ್ದಾಗ ವಲಯ ವರ್ಗೀಕರಣದ ಮೇಲೆ ತೆರಿಗೆ ಪರಿಷ್ಕರಣೆಗೆ ಕೌನ್ಸಿಲ್‌ ಸಭೆಯಲ್ಲಿ (2013ರ ಜನವರಿ 11) ನಿರ್ಣಯ ಕೈಗೊಳ್ಳಲಾಗಿತ್ತು. ಈಗ ರಾಜಕೀಯಕ್ಕಾಗಿ ಬಿಜೆಪಿ ತೆರಿಗೆ ಪರಿಷ್ಕರಣೆಗೆ ವಿರೋಧಿಸುತ್ತಿದೆ’ ಎಂದು ದೂರಿದರು.

‘ಕಾನೂನು ಮಾಡುವುದು ತಾನೇ ಮುರಿಯುವುದು ಬಿಜೆಪಿ ಸಿದ್ಧಾಂತವೇ’ ಎಂದು ಪ್ರಶ್ನಿಸಿದರು. ‘ಕೌನ್ಸಿಲ್‌ ಸಭೆಯಲ್ಲಿ ಮಹಿಳಾ ಸದಸ್ಯರನ್ನು ಮುಂದೆ ಬಿಟ್ಟು ಪ್ರತಿಭಟನೆ ನಡೆಸಿದ್ದು, ಗೌನು ಹಿಡಿದು ಎಳೆದಿದ್ದು, ದುಂಡಾವರ್ತನೆ ತೋರಿದ್ದು ಬಿಜೆಪಿಯವರು. ಮೇಯರ್‌ ಸ್ಥಾನಕ್ಕೆ ಅವರು ಗೌರವ ತೋರಿಲ್ಲ. ಪ್ರತಿಭಟಿಸುವ ಹಕ್ಕು ಸಹ ಅವರಿಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಜಾಪ್ರಭುತ್ವದ ವೇದಿಕೆ ದುರುಪಯೋಗ ಮಾಡಿಕೊಂಡು ಬಿಜೆಪಿ ಸದಸ್ಯರು ಸ್ವಾಮಿ ನಿಷ್ಠೆ ಪ್ರದರ್ಶಿಸಲು ಇಡೀ ಸಭೆಯನ್ನು ವ್ಯರ್ಥಗೊಳಿಸಿ ನಗರದ ಜನತೆಗೆ ದ್ರೋಹ ಬಗೆದಿದ್ದಾರೆ’ ಎಂದು ದೂರಿದರು. ‘ಏನೇ ವಿಷಯವಿದ್ದರೂ ಚರ್ಚೆಗೆ ಬರಬೇಕಿತ್ತು. ಈ ರೀತಿ ರಂಪಾಟ ಮಾಡುವ ಅಗತ್ಯವೇನಿತ್ತು’ ಎಂದು ಅವರು ಕೇಳಿದರು.

ಕೌನ್ಸಿಲ್‌ಗೂ ಬೇಕು ಮಾರ್ಷಲ್‌ಗಳು
‘ಬಿಜೆಪಿ ಸದಸ್ಯರ ವರ್ತನೆಯಿಂದ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದರೆ ವಿಧಾನಸಭೆ ಮಾದರಿಯಲ್ಲಿ ಬಿಬಿಎಂಪಿ ಕೌನ್ಸಿಲ್‌ ಸಭೆಗೂ ಮಾರ್ಷಲ್‌ಗಳ ಅಗತ್ಯವಿದೆ ಎನಿಸಿದ್ದು, ಈ ಸೌಲಭ್ಯವನ್ನು ಒದಗಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತೇನೆ’ ಎಂದು ಮೇಯರ್‌ ತಿಳಿಸಿದರು.

‘ಮೇಯರ್‌ ಪೀಠದತ್ತ ನುಗ್ಗಿ ಬರುವುದು, ಗೌನು ಹಿಡಿದು ಎಳೆಯುವುದು, ನಿರ್ಣಯಗಳ ಪ್ರತಿಯನ್ನು ಕಸಿದುಕೊಂಡು ಹರಿದು ಹಾಕುವುದು, ದಾರಿಯಲ್ಲಿ ಅಡ್ಡ ಮಲಗುವುದು –ಇಂತಹ ಬೆಳವಣಿಗೆ ಕಂಡಾಗ ಮಾರ್ಷಲ್‌ಗಳು ಬೇಕೇಬೇಕು ಎನಿಸುತ್ತದೆ’ ಎಂದು ಹೇಳಿದರು.

‘ಪಾಲಿಕೆಗೆ ಒಂದು ದೊಡ್ಡ ಇತಿಹಾಸವಿದೆ. ಹಲವು ಮಹನೀಯರು ಪಾಲಿಕೆ ಸದಸ್ಯರಾಗಿ ಕೌನ್ಸಿಲ್‌ ಸಭೆಗಳಲ್ಲಿ ಚರ್ಚಿಸಿ ನಗರದ ಏಳ್ಗೆಗೆ ಕೊಡುಗೆ ನೀಡಿದ್ದಾರೆ. ಅಂತಹ ಕೌನ್ಸಿಲ್‌ ಸಭೆಯನ್ನು ಬಿಜೆಪಿ ಸದಸ್ಯರು ರಣರಂಗ ಮಾಡಿದರು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಕೌನ್ಸಿಲ್‌ ಸಭೆಯಲ್ಲಿ ದಾರಿಯಲ್ಲಿ ಮಲಗುವವರನ್ನು ನಾಯಕರನ್ನಾಗಿ ಹೊಂದಿರುವುದು ಬಿಜೆಪಿ ತಲುಪಿದ ದುರಂತ ಸ್ಥಿತಿಗೆ ಕನ್ನಡಿ ಹಿಡಿದಿದೆ’ ಎಂದು ಲೇವಡಿ ಮಾಡಿ ದರು. ‘ಅಮಾನತು ಆದೇಶವನ್ನು ಸಂಧಾನ ಸಭೆ ನಡೆಸುವ ಮೂಲಕ ರದ್ದುಗೊಳಿಸುವ ಉದ್ದೇಶವಿದೆ. ಆದರೆ, ಅವರು ಗಲಾಟೆ ಮಾಡುವುದಿಲ್ಲ ಎಂಬ ಭರವಸೆ ನೀಡಬೇಕು’ ಎಂಬ ಷರತ್ತು ವಿಧಿಸಿದರು.

ಬಿಜೆಪಿ ಮುತ್ತಿಗೆ ಇಂದು
ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ಬಿಜೆಪಿ ಸದಸ್ಯರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಲಿದೆ.

ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಭಾರಿ ಪ್ರಮಾಣದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಬಿಎಂಟಿಎಫ್‌ ಎಡಿಜಿಪಿ ಟಿ. ಸುನಿಲ್‌ಕುಮಾರ್‌ ಅವರೊಂದಿಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಈ ಸಂಬಂಧ ಸೋಮವಾರ ಸಂಜೆ ಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT