ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ: ಪಾಲಿಕೆ ವಿರುದ್ಧ ಪ್ರತಿಭಟನೆ

ವಲಯ ವಿಂಗಡಣೆ ರದ್ದು ಪಡಿಸಲು ಆಗ್ರಹ * ಕಸ ವಿಲೇವಾರಿ ಸಮಸ್ಯೆ ತ್ವರಿತ ಪರಿಹಾರಕ್ಕೆ ಒತ್ತಾಯ
Last Updated 3 ಮೇ 2016, 19:41 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಪರಿಷ್ಕರಿಸುವ ಆಸ್ತಿ ತೆರಿಗೆಯನ್ನು ಕೂಡಲೇ ಹಿಂಪಡೆಯಬೇಕು ಹಾಗೂ ವಲಯ ವಿಂಗಡಣೆಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ  ನಗರ ಮತ್ತು ಜಿಲ್ಲಾ ಘಟಕವು ಮಂಗಳವಾರ ಕಸ್ತೂರಬಾ ರಸ್ತೆಯಲ್ಲಿ ಪ್ರತಿಭಟನೆ ನಡೆಸಿತು.

ಆಸ್ತಿ ತೆರಿಗೆ ಪಾವತಿಸುವ ಆನ್‌ಲೈನ್‌ ವ್ಯವಸ್ಥೆಯಲ್ಲಿನ ದೋಷಗಳನ್ನು ತುರ್ತಾಗಿ  ಸರಿಪಡಿಸಬೇಕು ಹಾಗೂ ಶೇ 5ರಷ್ಟು ತೆರಿಗೆ ರಿಯಾಯಿತಿ ಅವಧಿಯನ್ನು ಜೂನ್‌ 30ರವರೆಗೆ ವಿಸ್ತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯ ಸಮಗ್ರ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಬೇಕು. ಕಸ ವಿಲೇವಾರಿ ಸಮಸ್ಯೆ ತ್ವರಿತವಾಗಿ ಪರಿಹರಿಸಬೇಕು ಎಂದು ಅವರು ಆಗ್ರಹಿಸಿದರು.

ಬೆಂಗಳೂರಿಗರಿಗೆ ಹೊರೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದು ಪೈಸೆ ಆಸ್ತಿ ತೆರಿಗೆಯನ್ನೂ ಹೆಚ್ಚಿಸಿರಲಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರ ನೀರು, ವಿದ್ಯುತ್‌, ಹಾಲಿನ ದರ ಹೆಚ್ಚಿಸಿದೆ. ಕೊಳವೆ ಬಾವಿಗಳಿಗೂ ತೆರಿಗೆ ವಿಧಿಸಿದೆ. ಇದೀಗ ಆಸ್ತಿ ತೆರಿಗೆಯನ್ನು ಹೆಚ್ಚಿಸಿ ಬೆಂಗಳೂರಿಗರಿಗೆ ಹೆಚ್ಚಿನ ಹೊರೆ ಆಗುವಂತೆ ಮಾಡಿದೆ ಎಂದು ದೂರಿದರು.

‘ನಮ್ಮ ಅಧಿಕಾರದ ಅವಧಿಯಲ್ಲಿ ಬಿಬಿಎಂಪಿಗೆ ಸಹಸ್ರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದೆವು. ಆದರೆ ಈಗಿನ ಸರ್ಕಾರಕ್ಕೆ ಅದು  ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಅವರು ಕಿಡಿಕಾರಿದರು.

‘ಬಿಬಿಎಂಪಿಗೆ ಜಾಹೀರಾತು ವಿಭಾಗದಿಂದ ವಾರ್ಷಿಕ ₹ 25ರಿಂದ 30 ಕೋಟಿ ಆದಾಯ ಇದೆ. ಅದನ್ನು ₹ 300 ಕೋಟಿಗೆ ವೃದ್ಧಿಸಲು ಅವಕಾಶ ಇದೆ. ಈ ಕುರಿತು ಕಾರ್ಯ ನಿರ್ವಹಿಸಲು ಮುಂದಾದ ಪಾಲಿಕೆಯ ಜಂಟಿ ಆಯುಕ್ತ ಮಥಾಯಿ ಅವರಿಗೆ ವರ್ಗಾವಣೆಯ ಕೊಡುಗೆಯನ್ನು ಸರ್ಕಾರ ನೀಡಿದೆ’ ಎಂದು ಅವರು ವ್ಯಂಗ್ಯವಾಡಿದರು.

ಸವಾಲು: ಬಿಬಿಎಂಪಿ ಪರಿಷ್ಕರಿಸಿರುವ ಆಸ್ತಿ ತೆರಿಗೆ ಹಿಂಪಡೆಯಲು ಒತ್ತಾಯಿಸಿದ ಬಿಜೆಪಿ ಸದಸ್ಯರ ಪೈಕಿ ನಾಲ್ವರನ್ನು ಅಮಾನತು ಪಡಿಸಿರುವುದು ಸರಿಯಲ್ಲ. ಬೇಷರತ್ತಾಗಿ ಅವರ ಅಮಾನತನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿಯ ಉಳಿದ ಸದಸ್ಯರನ್ನು ಅಮಾನತುಪಡಿಸುವ ಮೂಲಕ ತಮ್ಮ ತಾಕತ್ತು ಪ್ರದರ್ಶಿಸಬೇಕು ಎಂದು ಅವರು ಸವಾಲು ಹಾಕಿದರು.

ಬಿಜೆಪಿ ಅವಧಿಯಲ್ಲಿ ತಿರಸ್ಕರಿಸಲಾಗಿತ್ತು: ಶಾಸಕ ಆರ್‌. ಅಶೋಕ ಮಾತನಾಡಿ,  ಬಿಜೆಪಿಯು ಬಿಬಿಎಂಪಿ ಅಧಿಕಾರ ನಡೆಸಿದ ಅವಧಿಯಲ್ಲಿಯೇ ಆಸ್ತಿ ತೆರಿಗೆ ಪರಿಷ್ಕರಿಸುವ ಪ್ರಕ್ರಿಯೆ ನಡೆದಿತ್ತು ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ. ಆದರೆ ಬಿಜೆಪಿಯ ಶಾಂತಕುಮಾರಿ ಅವರು ಮೇಯರ್‌ ಆಗಿದ್ದಾಗ ಬಂದಿದ್ದ ಈ ಪ್ರಸ್ತಾಪವನ್ನು ತಿರಸ್ಕರಿಸಿ, ವಾಪಸು ಕಳುಹಿಸಲಾಗಿತ್ತು ಎಂದು ತಿಳಿಸಿದರು.

ಆಸ್ತಿ ತೆರಿಗೆ ವಿರೋಧಿಸಿ ಬಿಜೆಪಿಯು ಹೋರಾಟ ನಡೆಸುತ್ತದೆ ಎಂದು ಹೆದರಿ ಕಾಂಗ್ರೆಸ್ಸಿಗರು ಆಸ್ತಿ ತೆರಿಗೆಯನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಿ ನ್ಯಾಯಯುತವಾಗಿ ತೆರಿಗೆಯನ್ನು ಇಳಿಸಬೇಕು ಎಂದು ಅವರು ಆಗ್ರಹಿಸಿದರು.

‘ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ಮೂರು ದಿನದಲ್ಲಿ ಬೆಂಗಳೂರನ್ನು ಕ್ಲೀನ್‌ ಮಾಡುತ್ತೇವೆ ಎಂದು ಕಾಂಗ್ರೆಸ್‌ ಮುಖಂಡರು ಹಾರಾಡಿದ್ದರು. ಆದರೆ ಕಾಂಗ್ರೆಸ್‌ಗೆ ಅಧಿಕಾರ ದೊರೆತು ಮೂರು ವರ್ಷವಾಯಿತು. ಇನ್ನೂ ಬೆಂಗಳೂರು ದುರ್ವಾಸನೆಯಿಂದಲೇ ಕೂಡಿದೆ’ ಎಂದು ಅವರು ವ್ಯಂಗ್ಯವಾಡಿದರು.

ಹಿಂದೆಯೂ ಹೀಗೆ ಆಗಿತ್ತು:  ಶಾಸಕ ಎಸ್‌. ಸುರೇಶ್‌ ಕುಮಾರ್‌ ಮಾತನಾಡಿ, ‘1986ರಲ್ಲಿ ಬೆಂಗಳೂರಿನ ಮೇಯರ್‌ ಆಗಿದ್ದ ಪುಟ್ಟೇಗೌಡ ಅವರು ಈಗಿನಂತೆಯೇ ಅವೈಜ್ಞಾನಿಕವಾಗಿ ಆಸ್ತಿ ತೆರಿಗೆಯನ್ನು ಹೆಚ್ಚಿಸಿದ್ದರು. ಆಗ ನನ್ನನ್ನು ಸೇರಿದಂತೆ ನಾಲ್ವರು ಬಿಜೆಪಿ ಸದಸ್ಯರು ಅದನ್ನು ವಿರೋಧಿಸಿ ಮೆಯೋಹಾಲ್‌ ಬಳಿ ಪ್ರತಿಭಟನೆ ನಡೆಸಿದ್ದೆವು. ಆ ನಂತರ ತೆರಿಗೆಯನ್ನು ಇಳಿಸಲಾಗಿತ್ತು. ಈಗಲೂ ಅದೇ ರೀತಿ ಕಾಂಗ್ರೆಸ್‌ ನಡೆದುಕೊಳ್ಳುತ್ತಿದೆ. ಅದನ್ನು ವಿರೋಧಿಸಿ ಬಿಜೆಪಿ ಬೀದಿಗಿಳಿದು ಹೋರಾಡುತ್ತಿದೆ’ ಎಂದರು.

ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ‘ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೊದಲೇ ಏಕೆ ಆಕ್ಷೇಪಣೆ ಸಲ್ಲಿಸಲಿಲ್ಲ. ಬಿಜೆಪಿಯವರೇನು ಸತ್ತು ಹೋಗಿದ್ದರಾ ಎಂದು ಮೇಯರ್‌ ಪ್ರಶ್ನಿಸಿದ್ದಾರೆ.  ಬೆಂಗಳೂರಿನ ಜನರಿಗಾಗಿ ಬಿಜೆಪಿ ಸಾಯಲು ಸಿದ್ಧವಿದೆ’ ಎಂದರು.
ಸಂಸದ ಪಿ.ಸಿ.ಮೋಹನ್‌, ಶಾಸಕ ರಾದ ಬಿ.ಎನ್‌.ವಿಜಯ್‌ ಕುಮಾರ್‌, ಎಸ್‌.ಆರ್‌.ವಿಶ್ವನಾಥ್‌, ವಿ. ಸೋಮಣ್ಣ, ವೈ.ಎ.ನಾರಾಯಣಸ್ವಾಮಿ, ಎಂ.ಕೃಷ್ಣಪ್ಪ, ಅಶ್ವಥ್‌ ನಾರಾಯಣ, ತಾರಾ , ಬಿಬಿಎಂಪಿಯ ಬಿಜೆಪಿ ಸದಸ್ಯರು ಪಾಲ್ಗೊಂಡಿದ್ದರು.

ಬಂಧನ, ಬಿಡುಗಡೆ: ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಬಿಎಂಪಿ ಮುತ್ತಿಗೆ ಹಾಕಲು ಮುಂದಾಗಿದ್ದ 100ಕ್ಕೂ ಹೆಚ್ಚು ಬಿಜೆಪಿ ಮುಖಂಡರನ್ನು ಪೊಲೀಸರು ಕಸ್ತೂರಬಾ ರಸ್ತೆಯಲ್ಲಿಯೇ ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದರು.

ಪ್ರತಿಭಟನೆಯಿಂದ ಮತ್ತಷ್ಟು ತ್ಯಾಜ್ಯ: ಬಿಜೆಪಿಯ ಮುಖಂಡರು ನಗರದ ಘನ ತ್ಯಾಜ್ಯ ನಿರ್ವಹಣೆ ಸರಿಯಾಗಿಲ್ಲ ಎಂದು ಆರೋಪಿಸಿದ್ದರು. ಆದರೆ ಪ್ರತಿಭಟನೆಯ ನಂತರ ಕಸ್ತೂರಬಾ ರಸ್ತೆಯ ತುಂಬೆಲ್ಲ ಕಾರ್ಯಕರ್ತರು ಕುಡಿದು ಮಜ್ಜಿಗೆ ಮತ್ತು ನೀರಿನ ಪ್ಲಾಸ್ಟಿಕ್‌ ಕವರ್‌ಗಳು ಬಿದ್ದಿದ್ದವು.

ಸಂಚಾರ ದಟ್ಟಣೆಯಿಂದ ಸವಾರರಿಗೆ ಕಿರಿಕಿರಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ತಿ ತೆರಿಗೆ ಪರಿಷ್ಕರಣೆ ವಿರೋಧಿಸಿ ಬಿಜೆಪಿಯ ನಗರ ಮತ್ತು ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಿಂದ ಕಸ್ತೂರಬಾ ರಸ್ತೆ, ಹಡ್ಸನ್‌ ವೃತ್ತದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಸಹಸ್ರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಕಸ್ತೂರಬಾ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದರಿಂದ, ಹತ್ತಿರದ ನೃಪತುಂಗ ರಸ್ತೆ, ಮಿಷನ್‌ ರಸ್ತೆ, ಕೆ.ಜಿ.ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ರಾಜಾರಾಮ್‌ ಮೋಹನರಾಯ್‌ ರಸ್ತೆ, ಕಬ್ಬನ್‌ ಪಾರ್ಕ್‌ ರಸ್ತೆಗಳಲ್ಲಿ ವಾಹನ ದಟ್ಟಣೆ ತೀವ್ರವಾಗಿತ್ತು. ಇದರಿಂದ ವಾಹನಗಳು ಚಲಿಸುವುದು ಕಷ್ಟವಾಗಿ, ಗಂಟೆಗಟ್ಟಲೆ ನಿಂತಲ್ಲೆ ನಿಲ್ಲಬೇಕಾದ ಸ್ಥಿತಿಯೂ ನಿರ್ಮಾಣವಾಗಿತ್ತು.

ಕಸ್ತೂರಬಾ ರಸ್ತೆಯಲ್ಲಿ ವಾಹನ ದಟ್ಟಣೆಯ ಬಿಸಿಯು ಆಂಬುಲೆನ್ಸ್‌ವೊಂದಕ್ಕೂ ತಟ್ಟಿತ್ತು. ಅಕ್ಕ ಪಕ್ಕದಲ್ಲಿ ಜಾಗ ಇಲ್ಲದ ಕಾರಣ ಮುಂದಕ್ಕೆ ಹೋಗಲು ಅದಕ್ಕೆ ಕಷ್ಟವಾಯಿತು. ಬಳಿಕ ಪೊಲೀಸರು ಅದಕ್ಕೆ ಜಾಗ ಮಾಡಿಸಿಕೊಟ್ಟರು.  ಇದೇ ರಸ್ತೆಯಲ್ಲಿ ತಿರುಪತಿಗೆ ಹೋಗಬೇಕಿದ್ದ ಬಸ್‌ವೊಂದು  ಗಂಟೆ ಗಟ್ಟಲೆ ನಿಂತಲ್ಲೆ ನಿಂತಿತ್ತು.

ಪ್ರತಿಭಟನೆಗೆಂದು ನಗರದ ವಿವಿಧ ಭಾಗಗಳಿಂದ 75ಕ್ಕೂ ಹೆಚ್ಚು ಬಸ್‌ಗಳಲ್ಲಿ, ನೂರಾರು ಕಾರು, ದ್ವಿಚಕ್ರ ವಾಹನಗಳಲ್ಲಿ ಕಾರ್ಯಕರ್ತರು ಬಂದಿದ್ದರು. ಇದರಿಂದ ಸಂಚಾರದ ಒತ್ತಡ ಈ ಭಾಗದಲ್ಲಿ ಇನ್ನಷ್ಟು ಹೆಚ್ಚಾಗಿತ್ತು. ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT