ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ@ಮನೆ

Last Updated 10 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಪŁತಿನಿತ್ಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಅಥವಾ ಹಾಸಿಗೆ ಹಿಡಿದಿರುವ ಕುಟುಂಬದ ಸದಸ್ಯರನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದೆಯೇ? ವೆಂಟಿಲೇಟರ್‌ ವ್ಯವಸ್ಥೆ ಇರುವ ಐಸಿಯು ನಿಮ್ಮ ಮನೆಯಲ್ಲೇ ಇರಬೇಕೆ? ಕಿಡ್ನಿ ಡಯಾಲಿಸಿಸ್‌, ಕ್ಯಾನ್ಸರ್‌ಗೆ ನೀಡುವ ಚಿಕಿತ್ಸೆಗಳು ಹಾಗೂ ಇತರೆ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರಿಗೆ ಮನೆಯಲ್ಲೇ ವೈದ್ಯಕೀಯ ಚಿಕಿತ್ಸೆ ಬೇಕೆ?
ಬೆಂಗಳೂರಿನ ಟ್ರಾಫಿಕ್‌ನಲ್ಲಿ ನಿತ್ಯ ಮನೆಯಿಂದ ಕಚೇರಿಗಳಿಗೆ ತೆರಳುವುದೇ ಸಾಹಸ. ಇಂತಹ ಪರಿಸ್ಥಿತಿಯಲ್ಲಿ ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ನಗರದಲ್ಲಿ ಆರೋಗ್ಯ ಹದಗೆಟ್ಟವರನ್ನು ನಿತ್ಯ ತಪಾಸಣೆ, ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಕರೆದೊಯ್ಯುವುದು ಸವಾಲೇ ಸರಿ.

ನಗರದ ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಕೆಲ ಖಾಸಗಿ ಸಂಸ್ಥೆಗಳು ಅಗತ್ಯ ವೈದ್ಯಕೀಯ ಸೇವೆಗಳನ್ನು ನಿಮ್ಮ ಮನೆ ಬಾಗಿಲಿಗೆ ಒದಗಿಸುತ್ತಿವೆ. ಒಂದು ದೂರವಾಣಿ ಕರೆ ಮಾಡಿದರೆ ಸಾಕು, ಸುಸಜ್ಜಿತ ಹೈಟೆಕ್‌ ಐಸಿಯು ವಿತ್ ವೆಂಟಿಲೇಟರ್, ಫಿಜಿಯೋಥೆರಪಿ ಸೇವೆಗಳು, ಅಗತ್ಯ ವೈದ್ಯರು ಹಾಗೂ ದಾದಿಯರ ತಂಡ ನಿಮ್ಮ ಮನೆಯಲ್ಲಿ ಹಾಜರಿರುತ್ತದೆ.

ಈ ಖಾಸಗಿ ಸಂಸ್ಥೆಗಳು ಹಿರಿಯ ನಾಗರಿಕರ ಆರೈಕೆ (ಜೆರಿಯಾಟ್ರಿಕ್‌), ಗರ್ಭಿಣಿ, ಬಾಣಂತಿಯರ ಆರೈಕೆ, ಎನ್‌ಆರ್‌ಐ ಸೇವೆಗಳು,

ಹೋಮ್‌ಕೇರ್‌ ಸೇವೆ ನೀಡುವ ಸಂಸ್ಥೆಗಳು
ಇಂಡಿಯಾ ಹೋಮ್‌ ಹೆಲ್ತ್‌ ಕೇರ್‌– indiahomeheathcare.com
ಪೋರ್ಟಿಯಾ- – portea.com
ನೇಷನ್‌ವೈಡ್‌– nationwidedocs.org
ಮ್ಯಾಕ್ಸ್‌ ಹೋಮ್‌ ಹೆಲ್ತ್‌ ಕೇರ್‌- – maxhealthcare.in    
ಹೆಲ್ತ್‌ ಹೀಲ್‌ ನರ್ಸಿಂಗ್ ಅಂಡ್‌ ಹೋಮ್‌ಕೇರ್‌– healthheal.in

ದೀರ್ಘ ಕಾಲದ ಆರೈಕೆ, ರೋಗಿಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸತತ ಆರೈಕೆ, ಶಸ್ತ್ರಚಿಕಿತ್ಸೆ ನಂತರದ ಸೇವೆಗಳು, ಫಿಜಿಯೋಥೆರಪಿ, ಕೀಮೋಥೆರಪಿ, ಕಿಡ್ನಿ ಡಯಾಲಿಸಿಸ್‌, ಪಾರ್ಶ್ವವಾಯು, ಜಿಬಿ ಸಿಂಡ್ರೋಮ್‌, ಹೃದಯ ಸಂಬಂಧಿ ರೋಗಗಳಿಗೆ ಚಿಕಿತ್ಸೆ ಹಾಗೂ ಆರೈಕೆಯನ್ನು ನಿಮ್ಮ ಮನೆಗೆ ಬಂದು ತರುತ್ತವೆ.

ಮನೆಯಲ್ಲಿ ಹಿರಿಯ ನಾಗರಿಕರು ಹಾಸಿಗೆಯಿಂದ ಮೇಲೆ ಏಳಲು ಆಗದ ಸ್ಥಿತಿಯಲ್ಲಿ ಇದ್ದರೆ ಅಂತಹವರಿಗೆ ಜೆರಿಯಾಟ್ರಿಕ್‌ ಕೇರ್‌ ವಿಭಾಗದವರು ಮನೆಗಳಿಗೆ ಬಂದು ಚಿಕಿತ್ಸೆ ಹಾಗೂ ಆರೈಕೆ ನೀಡುತ್ತಾರೆ. ಹಾಸಿಗೆ ಹಿಡಿದ ವ್ಯಕ್ತಿಯ ದಿನನಿತ್ಯದ ಕೆಲಸಗಳು ಅಂದರೆ ಸ್ನಾನ ಮಾಡಿಸುವುದು, ಊಟ, ನೀರು, ಬಟ್ಟೆ ಬದಲಾಯಿಸುವುದು, ಸಮಯಕ್ಕೆ ಸರಿಯಾಗಿ ಔಷಧ ನೀಡುವುದು ಹೀಗೆ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾರೆ. ಇವರೊಂದಿಗೆ ಮನೆಯಲ್ಲಿ ಅಡುಗೆ ಮಾಡುವವರು ಬೇಕಾದಲ್ಲಿ, ಅಡುಗೆ ಮಾಡುವ ದಾದಿಯಿಂದ ಸೇವೆ ಒದಗಿಸಲಾಗುತ್ತದೆ. 

ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರಿಗೆ ಕಾಯಿಲೆಗೆ ಅಗತ್ಯವಾದ ಚಿಕಿತ್ಸೆಯನ್ನು ಮನೆಯಲ್ಲಿಯೇ ನೀಡಲಾಗುವುದು. ರೋಗಿಯ ಪರಿಸ್ಥಿತಿ ಗಂಭೀರವಾಗಿದ್ದಲ್ಲಿ, ಅವರಿಗೆ ವೆಂಟಿಲೇಟರ್‌ ಇರುವ ಐಸಿಯು ವ್ಯವಸ್ಥೆಯನ್ನು ಮನೆಯಲ್ಲಿಯೇ ಕಲ್ಪಿಸಲಾಗುವುದು. ಅದನ್ನು ನೋಡಿಕೊಳ್ಳಲು ಓರ್ವ ನುರಿತ ಸಿಬ್ಬಂದಿಯನ್ನು ಸಹ ನೇಮಿಸಲಾಗುವುದು. ಇಡೀ ದೇಹ ಸ್ಟ್ರೋಕ್‌ಗೆ ಒಳಗಾಗಿರುವ ರೋಗಿಗೂ ಮನೆಯಲ್ಲೇ ಚಿಕಿತ್ಸೆ ನೀಡಲಾಗುವುದು. ಈ ಚಿಕಿತ್ಸೆಯನ್ನು ರೋಗಿಯ ಮನೆಯವರು ಬಯಸಿದಷ್ಟು ಸಮಯ ನೀಡಲಾಗುವುದು.

ಮನೆಯಲ್ಲಿ ಮಹಿಳೆಗೆ ಚಿಕಿತ್ಸೆ ಮತ್ತು ಆರೈಕೆಯ ಅಗತ್ಯ ಇದ್ದಲ್ಲಿ ಅವರಿಗೆ ದಾದಿ ಹಾಗೂ ಪುರುಷರಿಗಾದರೆ ‘ಮೇಲ್ ನರ್ಸ್’ ಸೇವೆಯನ್ನು ಒದಗಿಸಲಾಗುವುದು. ಈ ಸೇವೆ ವಾರದ ಏಳೂ ದಿನಗಳು, ದಿನದ 24 ಗಂಟೆಗಳೂ ಲಭ್ಯ. ರೋಗಿಗೆ ಅಗತ್ಯ ಬಿದ್ದಾಗ ಅಥವಾ ನಿಗದಿಯಾದ ದಿನಾಂಕ, ಸಮಯಕ್ಕೆ ವೈದ್ಯರು ಅವರ ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಾರೆ. ಇಷ್ಟೇ ಅಲ್ಲದೆ ಕೆಲವು ಸಂಸ್ಥೆಗಳು ಮನೆಗಳಿಗೆ ಔಷಧಗಳನ್ನು ತಂದು ಒದಗಿಸುವ ಸೇವೆಯನ್ನು ನೀಡುತ್ತವೆ.
 

ಕಿಡ್ನಿ ಹಾಗೂ ಕ್ಯಾನ್ಸರ್‌ ರೋಗಿಗಳಿಗೆ ಅವರ ಮನೆಗಳಲ್ಲೇ ಡಯಾಲಿಸಿಸ್ ಹಾಗೂ ಎಲ್ಲ ರೀತಿಯ ಥೆರಪಿಗಳನ್ನು ನೀಡಲಾಗುವುದು. ಫಿಸಿಯೋ ಥೆರಪಿ ಅಗತ್ಯ ಇರುವವರಿಗೆ ಸುಲಭವಾಗಿ ಸಾಗಿಸಬಹುದಾದ ಉಪಕರಣಗಳನ್ನು ಮನೆಗಳಿಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತದೆ. ಸಾಗಿಸಲಾಗದ ಉಪಕರಣಗಳನ್ನು ಮನೆಯವರು ಒದಗಿಸಿದರೆ ತಜ್ಞರು ಅವರ ಮನೆಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಾರೆ. ಜಿಬಿ ಸಿಂಡ್ರೋಮ್ನಿಂದ ಬಳಲುತ್ತಿರುವ ವ್ಯಕ್ತಿಗಳನ್ನು ವೆಂಟಿಲೇಟರ್‌ನಲ್ಲೇ ಇಡಬೇಕಾಗುತ್ತದೆ. ಅವರು ಚೇತರಿಸಿಕೊಳ್ಳಲು ವರ್ಷಗಳೇ ಬೇಕಾಗುತ್ತದೆ. ಅಂತಹವರಿಗೆ ಒಂದರಿಂದ 2 ವರ್ಷದವರೆಗೆ ವೆಂಟಿಲೇಟರ್‌ ನೀಡುವ ಅಗತ್ಯ ಇರುತ್ತದೆ. ಹೀಗೆ 2 ವರ್ಷಗಳಿಂದ ಹೋಮ್‌ ಕೇರ್‌ ಸೇವೆ ಪಡೆಯುತ್ತಿರುವ ರೋಗಿಗಳೂ ನಮ್ಮ ಬಳಿ ಇದ್ದಾರೆ. ನಮ್ಮಲ್ಲಿ ದಿನಕ್ಕೆ ₨650–₨2,400 ಮೌಲ್ಯದ ಸೇವೆಗಳು ಲಭ್ಯ. 
– ವಿನೀತ್‌ ಜೋಸ್‌, ಸಂಪನ್ಮೂಲ ಅಧಿಕಾರಿ, ಇಂಡಿಯಾ ಹೋಮ್‌ ಹೆಲ್ತ್‌ ಕೇರ್‌

ವಿದೇಶಗಳಲ್ಲಿ ಇರುವ ವ್ಯಕ್ತಿಗಳ ಸಂಬಂಧಿಕರು ಬೆಂಗಳೂರಿನಲ್ಲಿ ಇದ್ದರೆ ಅವರ ಆರೈಕೆಗಾಗಿ ಇಂಡಿಯಾ ಹೋಮ್‌ಕೇರ್‌ ಸಂಸ್ಥೆ ‘ಎನ್‌ಆರ್‌ಐ ಸೇವೆ’ ಒದಗಿಸುತ್ತಿದೆ. ವಿದೇಶಗಳಲ್ಲಿ ಇರುವ ವ್ಯಕ್ತಿಗಳ ಸಂಬಂಧಿಕರಿಗೆ ಸೇವೆಯ ಅಗತ್ಯ ಇದ್ದಲ್ಲಿ, ಅವರು ವೆಬ್‌ಸೈಟ್ ಅಥವಾ ದೂರವಾಣಿಗೆ ಕರೆ ಮಾಡಿ ವಿಷಯ ಹಾಗೂ ವಿಳಾಸ ತಿಳಿಸಿದರೆ ಸಾಕು, ಅವರಿಗೆ ಸೇವೆಯನ್ನು ಒದಗಿಸಲಾಗುತ್ತದೆ. ಒಂದು ವೇಳೆ ಸೇವೆ ಪಡೆಯುತ್ತಿರುವ ವ್ಯಕ್ತಿಗೆ ಹೊರಗೆ ಹೋಗಲು ಚಾಲಕನ ಅಗತ್ಯ ಬಿದ್ದಲ್ಲಿ, ಚಾಲಕರನ್ನೂ ಮನೆ ಬಾಗಿಲಿಗೆ ಕಳುಹಿಸಲಾಗುವುದು. ಔಷಧ ತರಿಸಬೇಕಾದರೆ, ಮನೆಯಲ್ಲಿರುವ ವೈದ್ಯರು ನೀಡಿರುವ ಔಷಧಗಳ ಹೆಸರನ್ನು ಸಂಸ್ಥೆಯ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರೆ, ಅದನ್ನು ಸಂಸ್ಥೆಯ ಸಿಬ್ಬಂದಿ ನಿಮ್ಮ ಮನೆವರೆಗೆ ತಲುಪಿಸುತ್ತಾರೆ. ನೇಮಿಸಿಕೊಂಡಿರುವ ನರ್ಸ್ ಕೂಡ ಈ ಕೆಲಸ ಮಾಡಬಹುದು.

ಪ್ರತಿ ನಿತ್ಯ ಚೀಫ್ ನರ್ಸ್ ರೋಗಿಯ ಮನೆಗೆ ಭೇಟಿ ನೀಡಿ ವರದಿ ನೀಡುತ್ತಾರೆ. ಅಲ್ಲದೆ ಮನೆಯಲ್ಲಿ ಚಿಕಿತ್ಸೆ ಹಾಗೂ ಆರೈಕೆ ಮಾಡುವ ನರ್ಸ್‌ ಪ್ರತಿನಿತ್ಯ ರೋಗಿಯ ಆರೋಗ್ಯದ ಸ್ಥಿತಿಗತಿ, ಬೆಳಗಿನಿಂದ ರಾತ್ರಿಯವರೆಗೆ ನೀಡಿರುವ ಸೇವೆಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗುತ್ತದೆ. ಈ ಮಾಹಿತಿಯನ್ನು ರೋಗಿಯ ಕುಟುಂಬದವರು ತಮ್ಮ ವೈಯಕ್ತಿಕ ಲಾಗಿನ್‌ ಐಡಿ ಬಳಸಿ ನೋಡಬಹುದು.    
ಈ ಸೇವೆಗಳನ್ನು ಪಡೆಯುವವರು ಆಯಾ ಸಂಸ್ಥೆಗಳ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿದರೆ, ಮೊದಲು ವ್ಯಕ್ತಿಯ ವಯಸ್ಸು, ಇರುವ ಕಾಯಿಲೆ, ಅದರ ತೀವ್ರತೆ ಹಾಗೂ ಅಗತ್ಯ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಂತರ ಆ ಸಂಸ್ಥೆ ಸಿಬ್ಬಂದಿ ನಿಮ್ಮ ಮನೆಗಳಿಗೆ ಭೇಟಿ ನೀಡಿ, ಎಲ್ಲ ರೀತಿಯ ಮಾಹಿತಿ ಪಡೆಯುತ್ತಾರೆ. ನಂತರ ಅಗತ್ಯ ಸೇವೆಯನ್ನು ಒದಗಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT