ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರದಲ್ಲಿ ಹಲ್ಲಿ: 355 ವಿದ್ಯಾರ್ಥಿಗಳು ಅಸ್ವಸ್ಥ

Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಲ್ಲಿ ಬಿದ್ದಿದ್ದ ಆಹಾರ ಸೇವಿಸಿ ದೇವರ­ಜೀವನಹಳ್ಳಿ ಸಮೀಪದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ 355 ಮಕ್ಕಳು ಅಸ್ವಸ್ಥಗೊಂಡ ಘಟನೆ ಶುಕ್ರವಾರ ನಡೆದಿದೆ.

ಆ ಶಾಲೆಗೆ ಇಸ್ಕಾನ್‌ನಿಂದ ಮಧ್ಯಾಹ್ನ ಊಟ ಸರಬರಾಜು ಆಗಿದೆ. ಒಂದು ಕ್ಯಾನ್‌­ನಲ್ಲಿದ್ದ ಅನ್ನದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಆದರೆ, ಇದಕ್ಕೂ ಮೊದಲು ಊಟ ಮಾಡಿದ್ದ ಮಕ್ಕಳು ಹೊಟ್ಟೆ ನೋವಿನಿಂದ ಒದ್ದಾಡಲು ಆರಂಭಿಸಿದ್ದಾರೆ. ಕೆಲವರು ವಾಂತಿ ಮಾಡಿ­ಕೊಂಡಿದ್ದಾರೆ. ಕೂಡಲೇ ಅವರನ್ನು ಅಂಬೇ­ಡ್ಕರ್‌ ಆಸ್ಪತ್ರೆಗೆ ಕರೆದೊಯ್ಯ­ಲಾ­ಯಿತು. ‘355 ಮಕ್ಕಳ ಪೈಕಿ 335 ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸ­ಲಾ­ಗಿದೆ. ಉಳಿದ 20 ಮಕ್ಕಳಿಗೆ ಚಿಕಿತ್ಸೆ ಮುಂದು­ವರಿದಿದ್ದು, ಪ್ರಾಣಕ್ಕೆ ಯಾವುದೇ ಅಪಾಯ­ವಿಲ್ಲ’ ಎಂದು  ಡಾ.ಪರಶುರಾಮ್ ತಿಳಿಸಿದರು.

‘ಅನ್ನ ಹಾಗೂ ಸಾಂಬಾರನ್ನು ಪರಿಶೀಲನೆ­ಗಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಕಳುಹಿಸ­ಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಕ್ಕಳು ಹಾಗೂ ಶಿಕ್ಷಕರಿಂದ ಮಾಹಿತಿ ಪಡೆದು­ಕೊಂ­ಡಿದ್ದಾರೆ. ಆದರೆ, ಕ್ಯಾನ್‌ನಲ್ಲಿ ಮೊದಲೇ ಹಲ್ಲಿ ಬಿದ್ದಿತ್ತೋ ಅಥವಾ ಶಾಲೆಗೆ ತಂದ ನಂತರ ಬಿದ್ದಿದಿಯೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಒಂದರಿಂದ ಎಂಟನೇ ತರಗತಿವರೆಗೆ ಓದುತ್ತಿ­ರುವ 850 ಮಕ್ಕಳು ಇಲ್ಲಿದ್ದಾರೆ. 22 ಶಿಕ್ಷಕರು ಮತ್ತು ಐವರು ಸಿಬ್ಬಂದಿ ಶಾಲೆಯಲ್ಲಿ ಇದ್ದಾರೆ. ಬಿಸಿಯೂಟ ಯೋಜನೆಯಡಿ ಪ್ರತಿದಿನ ಎಂಟು ಕ್ಯಾನ್‌ ಅನ್ನ ಹಾಗೂ ಎಂಟು ಕ್ಯಾನ್‌ ಸಾಂಬಾ­ರನ್ನು ಇಸ್ಕಾನ್‌ನಿಂದ ತರಿಸಲಾಗು­ತ್ತದೆ. ಅದ­ರಂತೆ ಶುಕ್ರವಾರ  ಮಧ್ಯಾಹ್ನ 12.30ಕ್ಕೆ ಸಿಬ್ಬಂದಿ ಆಹಾರ ತರಿಸಿದ್ದರು.

ಏಳನೇ ತರಗತಿಯ ಮಕ್ಕಳಿಗೆ ಅನ್ನ–ಸಾಂಬಾರು ಬಡಿ­ಸುತ್ತಿದ್ದ ವೇಳೆ ಅನ್ನದ ಕ್ಯಾನ್‌­ನಲ್ಲಿ ಹಲ್ಲಿ ಪತ್ತೆಯಾಗಿದೆ. ಅದನ್ನು ಕಂಡ ಶಿಕ್ಷಕರು ಊಟ ಮಾಡದಂತೆ ವಿದ್ಯಾರ್ಥಿ­ಗಳಿಗೆ ಸೂಚಿಸಿದ್ದಾರೆ. ಆದರೆ, ಈ ವೇಳೆಗಾಗಲೇ ಊಟ ಮಾಡಿದ್ದ ಮಕ್ಕಳ ಪೈಕಿ ಮೂವರು ಹೊಟ್ಟೆನೋವಿ­ನಿಂದ ಒದ್ದಾಡಲು ಆರಂಭಿಸಿದ್ದಾರೆ.

ಶಿಕ್ಷಕರು, ಕೂಡಲೇ ಅವರನ್ನು ಆಟೊದಲ್ಲಿ ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ವಾಪಸ್ ಬಂದಾಗ ಮತ್ತೆ 45 ಮಕ್ಕಳು ಅಸ್ವಸ್ಥ­ಗೊಂಡಿ­ದ್ದರು. ಕೂಡಲೇ ಮೂರು ಆಂಬು­ಲೆನ್ಸ್‌ಗಳಲ್ಲಿ ಅವ­ರನ್ನೂ ಆಸ್ಪತ್ರೆಗೆ ಕರೆದೊಯ್ಯಲಾ­ಯಿತು. ನಂತರ ಮುಂಜಾಗ್ರತಾ ಕ್ರಮವಾಗಿ ಅಂಬೇ­ಡ್ಕರ್ ಆಸ್ಪತ್ರೆಯ 15 ಮಂದಿ ವೈದ್ಯರ ತಂಡ ಹಾಗೂ ಬಿಬಿಎಂಪಿ ಆರೋಗ್ಯ ಕೇಂದ್ರದ ಸಿಬ್ಬಂದಿ ಆಂಬುಲೆನ್ಸ್‌ನಲ್ಲಿ ಶಾಲೆಗೆ ಬಂದು ತಪಾಸಣೆ ನಡೆಸಿದ್ದಾರೆ.

ವಿಷಯ ತಿಳಿದ ಪೋಷ­ಕರು ಆತಂಕದಿಂದ ಅಂಬೇಡ್ಕರ್‌ ಆಸ್ಪತ್ರೆಯತ್ತ ದೌಡಾಯಿಸಿದರು. ಶಾಲಾ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಾಂಧಲೆ ನಡೆಸಿದ್ದರಿಂದ ಕೆಲ ಕಾಲ ಗೊಂದ­ಲದ ವಾತಾವರಣ ನಿರ್ಮಾಣವಾಯಿತು. ಸ್ಥಳೀಯರ ಸಹಕಾರ: ಅಸ್ವಸ್ಥಗೊಂಡ ಮಕ್ಕ­ಳನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆದೊ­ಯ್ಯುವ ಕಾರ್ಯಕ್ಕೆ ಶಾಲೆಯ ಸುತ್ತಮುತ್ತಲ ನಿವಾಸಿ­ಗಳು ಹಾಗೂ ವ್ಯಾಪಾರಿಗಳು ಸ್ವಯಂ­ಪ್ರೇರಿತ­ರಾಗಿ ಕೈಜೋಡಿಸಿದರು.

ಸದಾ ವಾಹನ ದಟ್ಟಣೆಯಿಂದ ಗಿಜಿಗುಡುವ ಟ್ಯಾನರಿ ರಸ್ತೆಯಲ್ಲಿ ಆಂಬುಲೆನ್ಸ್‌ಗಳ ಓಡಾಟ­ವನ್ನು ಸುಗಮ­ಗೊಳಿ­ಸಲು ನೆರವಾದವರು ಅಲಾಂ ಪಾಷಾ ಮತ್ತು ಮುನಿಯಪ್ಪ ನಾಯ್ಡು. ಸಮೀಪದ ಅಂಬೇಡ್ಕರ್‌ ಜಂಕ್ಷನ್‌­ನಲ್ಲಿ ಮಾಂಸ ಮಾರಾಟ ಅಂಗಡಿ ಇಟ್ಟು­ಕೊಂಡಿರುವ ಅವರು, ಜಂಕ್ಷನ್‌ಗಳಲ್ಲಿ ನಿಂತು ಸಂಚಾರ ಪೊಲೀಸರಂತೆ ಕರ್ತವ್ಯ ನಿರ್ವಹಿಸಿ­ದರು. ಟ್ಯಾನರಿ ರಸ್ತೆಯ ಒಂದು ಬದಿಯಲ್ಲಿ ವಾಹನ­ಗಳ ಸಂಚಾರವನ್ನು ತಡೆದ ಇವರು, ಆ ಮಾರ್ಗ­ದಲ್ಲಿ ಆಂಬುಲೆನ್ಸ್‌­ಗಳ ಓಡಾಟಕ್ಕೆ ದಾರಿ ಮಾಡಿಕೊಟ್ಟರು.

ಘಟನೆ ವಿರುದ್ಧ ಪೋಷಕರ ಆಕ್ರೋಶ
ಶಾಲೆಯಲ್ಲಿ ಸ್ವಚ್ಛತೆ ಕಾಪಾಡಿಲ್ಲ. ಬಿಸಿಯೂಟಕ್ಕೆ ಬಳಸುವ ಅಕ್ಕಿಯೂ ಕಳಪೆಯಾಗಿದ್ದು, ಉತ್ತಮ ಆಹಾರ ನೀಡುವುದಿಲ್ಲ. ಸರ್ಕಾರಿ ಶಾಲೆ ಎಂದರೆ ಅಲ್ಲಿ ಶುಚಿತ್ವ ಕಾಪಾಡಬೇಕೆಂಬ ಧೋರಣೆ ಸರ್ಕಾರಕ್ಕಿಲ್ಲ. ಅಲ್ಲಿ ಬಡವರೇ ಓದುತ್ತಾರೆ ಎಂಬ ತಾತ್ಸಾರ ಇರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದಲೇ ಚಿಕಿತ್ಸೆ ವೆಚ್ಚ
ಆಸ್ಪತ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ವನ್ನು ಸಚಿವ ಯು.ಟಿ.ಖಾದರ್ ವಿಚಾರಿಸಿದರು. ಆನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಎಲ್ಲಾ ಮಕ್ಕಳಿಗೂ ಅಗತ್ಯವಿರುವ ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ತೀವ್ರವಾಗಿ ಅಸ್ವಸ್ಥಗೊಂಡಿಲ್ಲ. ಹೆಚ್ಚುವರಿ ವೈದ್ಯರ ತಂಡವನ್ನು ಕರೆಸಲಾಗಿದೆ. ಪೋಷಕರು ಆತಂಕ ಪಡುವಂತಹುದ್ದು ಏನೂ ಆಗಿಲ್ಲ. ಮಕ್ಕಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ’ ಎಂದರು. ‘ಕೆಲವು ಮಕ್ಕಳು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಘಟನೆಯ ಕುರಿತು ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ, ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಸ್ವಯಂ ಪ್ರೇರಿತ ದೂರು ದಾಖಲು
‘ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಮೂವರು ಡಿಸಿಪಿಗಳ ನೇತೃತ್ವದಲ್ಲಿ 70 ಪೊಲೀಸ್‌ ಸಿಬ್ಬಂದಿಯನ್ನು ಆಸ್ಪತ್ರೆ ಬಳಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.  ಘಟನೆ ಸಂಬಂಧ ಈವರೆಗೆ ಯಾವುದೇ ಪೋಷಕರಿಂದ ದೂರು ಬಂದಿಲ್ಲ. ಹೀಗಾಗಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು’
– ಸತೀಶ್ ಕುಮಾರ್,  ಪೂರ್ವ ವಿಭಾಗದ ಡಿಸಿಪಿ

ಇಲಾಖೆಗೆ ವರದಿ ರವಾನೆ
‘ಪ್ರಕರಣ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವರದಿ ಕೇಳಿದ್ದು, ಸಂಬಂಧಪಟ್ಟ ಅಧಿಕಾರಿಗಳು ವರದಿಯನ್ನು ಇ–ಮೇಲ್ ಮೂಲಕ ರವಾನೆ ಮಾಡಿದ್ದಾರೆ’
– ಕೆ.ಆನಂದ್, ನಿರ್ದೇಶಕರು, ಪ್ರಾಥಮಿಕ ಶಿಕ್ಷಣ

ಪರೀಕ್ಷಿಸಿದ ಬಳಿಕವೇ ಆಹಾರ ಕೊಟ್ಟಿದ್ದೆವು
‘ಪ್ರತಿದಿನ ಸಿಬ್ಬಂದಿ ಊಟ ಪರೀಕ್ಷಿಸಿ ನಂತರ ಮಕ್ಕಳಿಗೆ ಕೊಡುತ್ತಾರೆ. ಶುಕ್ರವಾರ ಸಹ ಅದೇ ರೀತಿ ಮಾಡಲಾಗಿತ್ತು. ಆದರೆ, ಸ್ವಲ್ಪ ಹೊತ್ತಿನಲ್ಲೇ ಮಕ್ಕಳು ಹೊಟ್ಟೆ ನೋವು ಎನ್ನುತ್ತಾ ವಾಂತಿ ಮಾಡಿಕೊಂಡರು’
– ಜರೀನಾ, ಮುಖ್ಯ ಶಿಕ್ಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT