ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರದ ಮೈಲುಗಳು

ಮಿನುಗು ಮಿಂಚು
Last Updated 28 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಆಹಾರವು ಬೆಳೆದ ಸ್ಥಳ ಹಾಗೂ ಅದು ಮಾರಾಟವಾಗುವ ಸ್ಥಳ– ಈ ಎರಡೂ ಜಾಗಗಳ ಅಂತರವನ್ನು ‘ಫುಡ್ ಮೈಲ್’ ಅಥವಾ ‘ಆಹಾರದ ಮೈಲುಗಳು’ ಎಂದು ಕರೆಯುತ್ತಾರೆ. ಲಂಡನ್‌ನ ಸಿಟಿ ವಿಶ್ವವಿದ್ಯಾಲಯದ ಆಹಾರ ಯೋಜನೆ ವಿಭಾಗದ ಪ್ರೊಫೆಸರ್ ಡಾ. ಓಮ್ ಲ್ಯಾಂಗ್ ೧೯೯೦ರಲ್ಲಿ ‘ಫುಡ್ ಮೈಲ್’ ಪದಪುಂಜವನ್ನು ಮೊದಲು ಬಳಸಿದರು. ಆಹಾರದ ಮೈಲುಗಳ ಸಂಖ್ಯೆ ಹೆಚ್ಚಾದಷ್ಟೂ ನಿರ್ದಿಷ್ಟ ಆಹಾರವು ಪರಿಸರ ಸ್ನೇಹಿಯಲ್ಲ ಎಂಬ ಅಭಿಪ್ರಾಯವಿದೆ.

ಆಹಾರ ಉತ್ಪಾದನೆ, ವಿತರಣೆ ಹಾಗೂ ಸೇವನೆ ಕ್ರಮಗಳು ಕಳೆದ ಕೆಲವು ದಶಕಗಳಿಂದ ಗಣನೀಯವಾಗಿ ಬದಲಾಗಿವೆ. ಹಿಂದೆ ಸೇವಿಸುವ ಆಹಾರ ಬಹುತೇಕ ಅಕ್ಕಪಕ್ಕದ ಊರುಗಳಲ್ಲಿ ಬೆಳೆದದ್ದೇ ಆಗಿರುತ್ತಿತ್ತು. ಕನಿಷ್ಠ ಒಂದೇ ದೇಶದಿಂದ ಬಂದಂಥದ್ದಾಗಿರುತ್ತಿತ್ತು. ಈಗ ಋತು ಅತೀತ ಹಣ್ಣು, ತರಕಾರಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿರುವುದರಿಂದ ಪರಿಸರಕ್ಕೆ ಅತೀವ ಹಾನಿ ಆಗುತ್ತಿದೆ. ಟ್ರಕ್‌ಗಳು, ಹಡಗುಗಳು ಹಾಗೂ ವಿಮಾನಗಳು ಆಹಾರವನ್ನು ದೂರ ದೂರದ ಪ್ರದೇಶಗಳಿಗೆ ಸಾಗಿಸಲು ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ಅವುಗಳು ಹೆಚ್ಚಿನ ಪ್ರಮಾಣದ ಇಂಧನ ಉಪಯೋಗಿಸುತ್ತಿವೆ. ಇವಲ್ಲದೆ ಈ ಎಲ್ಲಾ ಸಾರಿಗೆ ಸಂಪರ್ಕ ಸಾಧನಗಳು ಅಪಾಯಕಾರಿ ಕಾರ್ಬನ್ ಡಯಾಕ್ಸೈಡ್ ಅನಿಲವನ್ನು ಪರಿಸರಕ್ಕೆ ಸೇರಿಸುತ್ತವೆ. ಜಾಗತಿಕ ತಾಪಮಾನ ಇದರಿಂದ ಹೆಚ್ಚುವುದಲ್ಲದೆ ಆಹಾರದ ಮೇಲೆ ಇಂಗಾಲದ ಕಣಗಳು ಬೀಳಲು ಕಾರಣವಾಗುತ್ತದೆ.

ಅಮೆರಿಕದಲ್ಲಿ ಶುರುವಾದ ಲೊಕೊವೋರ್ ಚಳವಳಿ ಬೇರೆ ದೇಶಗಳಿಗೂ ಹಬ್ಬಿತು. ಯಾರು ಸ್ಥಳೀಯವಾಗಿ ಬೆಳೆಯುವ ಹಣ್ಣು, ತರಕಾರಿಗಳನ್ನು ಮಾತ್ರ ಸೇವಿಸುವರೋ ಅವರನ್ನು ‘ಲೊಕೊವೋರ್‌’ಗಳೆನ್ನುತ್ತಾರೆ. ಅಮೆರಿಕನ್ ಆಕ್ಸ್‌ಫರ್ಡ್ ಡಿಕ್ಷನರಿಯು ೨೦೦೭ರಲ್ಲಿ ಲೊಕೊವೋರ್ ಪದವನ್ನು ವರ್ಷದ ಪದ ಎಂದು ಗುರುತಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT