ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಉತ್ಪಾದನೆ­ ಕುಸಿತ

66 ತಾಲ್ಲೂಕುಗಳಲ್ಲಿ ಬರ; ಎಂಟು ಜಿಲ್ಲೆಗಳಲ್ಲಿ ಅತಿವೃಷ್ಟಿ
Last Updated 19 ಸೆಪ್ಟೆಂಬರ್ 2014, 19:33 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 66 ತಾಲ್ಲೂಕು­ಗಳಲ್ಲಿ ಬರ ಮತ್ತು ಎಂಟು ಜಿಲ್ಲೆಗಳಲ್ಲಿ ಅತಿವೃಷ್ಟಿ ಆಗಿರುವುದರಿಂದ ಈ ವರ್ಷ ರಾಜ್ಯದಲ್ಲಿ ಆಹಾರ ಧಾನ್ಯ ಉತ್ಪಾದನೆ­ಯಲ್ಲಿ ಹತ್ತು ಲಕ್ಷ ಟನ್‌ ಕೊರತೆ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತೊಂದರೆಗೆ ಒಳಗಾಗಿರುವ ಪ್ರದೇಶ­ಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳು­ವುದರ ಕುರಿತು ಅವರು ಶುಕ್ರವಾರ ವಿಧಾನಸೌಧದಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಮುಖ್ಯಮಂತ್ರಿ­ಯವರು ಈ ವಿಷಯ ತಿಳಿಸಿದರು.

ಈ ವರ್ಷ 74 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆ ಗುರಿ ಇತ್ತು. ಆದರೆ, ಬರ ಮತ್ತು ನೆರೆಯ ಕಾರಣದಿಂದ 65 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಒಟ್ಟು 135 ಲಕ್ಷ ಟನ್‌ ಆಹಾರ ಧಾನ್ಯ ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ, ಬರಗಾಲ ಮತ್ತು ಅತಿವೃಷ್ಟಿ­ಯಿಂದಾಗಿ 125 ಲಕ್ಷ ಟನ್‌ ಆಹಾರ ಧಾನ್ಯ ಉತ್ಪಾದನೆ ಮಾತ್ರ ಸಾಧ್ಯವಾಗ­ಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಸೆ. 26ಕ್ಕೆ ತೀರ್ಮಾನ: ಕೋಲಾರ, ಚಿಕ್ಕಬಳ್ಳಾ­ಪುರ, ತುಮ­ಕೂರು, ಬೆಂಗ­ಳೂರು ನಗರ, ಬೆಂಗಳೂರು ಗ್ರಾಮಾಂ­ತರ, ರಾಮನಗರ, ಬೀದರ್‌, ಗುಲ್ಬರ್ಗ ಜಿಲ್ಲೆಗಳ 66 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಕಂದಾಯ ಇಲಾಖೆ ಅಧಿಕಾರಿಗಳು ಈ ಕುರಿತು ವರದಿ ಸಿದ್ಧಪಡಿಸಿದ್ದಾರೆ. ಸೆಪ್ಟೆಂಬರ್‌ 26ರ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗುವುದು ಎಂದರು.

ಬರ ಪರಿಸ್ಥಿತಿ ಎದುರಿಸುತ್ತಿರುವ  ಪ್ರದೇಶ­ಗಳಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಪೂರೈಕೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. 1,052 ಗ್ರಾಮೀಣ ಜನವಸತಿಗಳಿಗೆ ಟ್ಯಾಂಕರುಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದಕ್ಕಾಗಿ 1,057 ಟ್ಯಾಂಕರುಗಳನ್ನು ಬಳಸಿಕೊಳ್ಳ­ಲಾಗುತ್ತಿದೆ. ಮೇವಿನ ಕೊರತೆಯೂ ಇಲ್ಲ ಎಂದು ವಿವರಿಸಿದರು. ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ  224 ಕೋಟಿ ಲಭ್ಯವಿದೆ. ಅದನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಹಣ ಬಿಡುಗಡೆಗೆ ಸಿದ್ಧ. ಬರಪೀಡಿತ ಜಿಲ್ಲೆ­ಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ನೆರವು ಕೋರಿ ತಿಂಗಳ ಅಂತ್ಯದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

₨ 426 ಕೋಟಿ ನಷ್ಟ: ಬೀದರ್‌, ಗುಲ್ಬರ್ಗ, ಯಾದ­ಗಿರಿ, ಬಾಗಲಕೋಟೆ, ಬಳ್ಳಾರಿ, ಗದಗ ಮತ್ತು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಆಗಸ್ಟ್‌ 18ರಿಂದ ಆ.30ರವರೆಗೆ ಸುರಿದ ಭಾರಿ ಮಳೆಯಿಂದ  426 ಕೋಟಿ ನಷ್ಟ­ವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಅತಿವೃಷ್ಟಿಯಿಂದ 11 ಸಾವಿರ ಮನೆ­ಗಳು ಕುಸಿದಿವೆ. 22 ಜನರು ಸಾವಿಗೀಡಾ­ಗಿದ್ದಾರೆ. ಅಪಾರ ಪ್ರಮಾ­ಣದ ಕೃಷಿ ಜಮೀ­ನಿಗೆ ಹಾನಿಯಾಗಿದೆ. ಕೇಂದ್ರ ಸರ್ಕಾ­ರ­ದಿಂದ 266 ಕೋಟಿ ನೆರವು ಕೋರಿ ಮನವಿ ಸಲ್ಲಿಸಲಾಗಿದೆ. ಶನಿವಾ­ರದ ನಂತರ ಕೇಂದ್ರ ಅಧ್ಯಯನ ತಂಡ ಅತಿವೃಷ್ಟಿ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದೆ ಎಂದರು.

ಪ್ರಧಾನಿಗೆ ಮನವಿ: ಭಾರಿ ಮಳೆ­ಯಿಂದ ಆಗಿರುವ ನಷ್ಟದ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಸಚಿವ ಜಯಚಂದ್ರ ಮಾಹಿತಿ ನೀಡಿ­ದ್ದಾರೆ. ಹೆಚ್ಚಿನ ಹಣಕಾಸಿನ ನೆರವಿಗೂ ಮನವಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಪರಿ­ಶೀಲನಾ ತಂಡವನ್ನು ರಾಜ್ಯಕ್ಕೆ ಕಳುಹಿ­ಸುವ ಭರವಸೆ ನೀಡಿ­ದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದಾಗ ಈ ವಿಷಯ ತಿಳಿಸ­ಲಾಗುವುದು ಎಂದು ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದರು.

ಕಂದಾಯ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಎಚ್‌.ಕೆ. ಪಾಟೀಲ ಇತರರು ಹಾಜರಿದ್ದರು.

ಜಿಲ್ಲಾಧಿಕಾರಿಗಳ ಸಭೆ
ಮಂಗಳವಾರ ಎಲ್ಲ ಜಿಲ್ಲಾ­ಧಿ­ಕಾರಿಗಳ ಸಭೆ ಕರೆದಿ­ದ್ದೇನೆ. ಅತಿ­ವೃಷ್ಟಿ ಮತ್ತು ಅನಾವ­ೃಷ್ಟಿ­ಯಿಂದ ತೊಂದರೆಗೆ ಒಳಗಾಗಿ­ರುವ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿಗಳ ಕುರಿತು ಚರ್ಚೆ ನಡೆಸುತ್ತೇನೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT