ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾ ಪುರುಷಾಕಾರಂ...

Last Updated 19 ಜುಲೈ 2014, 19:30 IST
ಅಕ್ಷರ ಗಾತ್ರ

ಭೂತಾನ್‌ ದೇಶದ ರಾಜಧಾನಿ ನಗರ ಥಿಂಪು. ಅಲ್ಲಿನ ‘ನ್ಯಾಷನಲ್‌ ಹೆರಿಟೇಜ್‌ ಮ್ಯೂಸಿಯಂ’ನಲ್ಲಿ ಜಾನಪದ ವಸ್ತುಗಳ ದೊಡ್ಡ ಸಂಗ್ರಹವೇ ಇದೆ. ಸಂಗ್ರಹಾಲಯದ ಬಾಗಿಲ ಮೇಲೆ ಮರದ ಶಿಶ್ನವನ್ನು ಸಿಕ್ಕಿಸಿದ್ದಾರೆ. ಕಸಿವಿಸಿಯಾಗುತ್ತದೆ. ನಮ್ಮಲ್ಲಿ ಕೆಲವೆಡೆ ಕುದುರೆ ಲಾಳವನ್ನು ಬಾಗಿಲಿಗೆ ಹೊಡೆದಂತೆ ಅವರು ಶಿಶ್ನವನ್ನು ಅದೇ ಉದ್ದೇಶದಿಂದ ಇಟ್ಟಿರಬಹುದೆಂದು ಭಾವಿಸಿಕೊಂಡರೆ ನಮ್ಮ ಊಹೆ ತಪ್ಪು.

ಥಿಂಪುವಿನ ಕರಕುಶಲ ವಸ್ತುಗಳ ಮಳಿಗೆಗಳಿಗೆ ಹೋದರೆ ಅಲ್ಲಿ ವಿವಿಧ ಆಕಾರ ಮತ್ತು ಬಣ್ಣಗಳ ಶಿಶ್ನಗಳು ಮಾರಾಟಕ್ಕಿವೆ. ಪುರುಷ ಲಿಂಗದ ಆಕಾರದ ಕೀ ಚೈನ್‌, ಪೆಂಡೆಂಟ್‌ಗಳು ಬಿಕರಿಗೆ ಪೇಟೆಯಲ್ಲಿವೆ. ತೋರಣದಂತೆ ಕಟ್ಟಲು, ಮರದ, ಲೋಹದ, ಸೆರಾಮಿಕ್‌ ಮುಂತಾದ ವೈವಿಧ್ಯಮಯ ಶಿಶ್ನಗಳು ದೊರೆಯುತ್ತವೆ. ಡ್ರಾಗನ್‌ ಸುತ್ತಿಕೊಂಡಿರುವ, ನಗುಮೊಗದ, ಕೋಪೋದ್ರಿಕ್ತ– ಹೀಗೆ, ವಿವಿಧ ರೂಪದ ಶಿಶ್ನವೇ ಪ್ರಧಾನವಾದ ಕಲಾಕೃತಿಗಳಿಗೂ ಕೊರತೆಯಿಲ್ಲ. ಶಿಶ್ನದ ಅಂಚೆ ಚೀಟಿಯೂ ಭೂತಾನ್‌ನಲ್ಲಿ ಚಾಲ್ತಿಯಲ್ಲಿದೆ.

ಭೂಮ್‌ತಾಂಗ್‌, ಮಧ್ಯ ಭೂತಾನ್‌ನಲ್ಲಿರುವ ಒಂದು ಜಿಲ್ಲೆ. ಈ ಭೂಮ್‌ತಾಂಗ್‌ ಸುತ್ತಮುತ್ತ ಬಹುತೇಕ ಮನೆಗಳ ಮೇಲೆ ಶಿಶ್ನಗಳ ಚಿತ್ರವಿದೆ. ಮನೆಗಳ ನಾಲ್ಕು ಮೂಲೆಗಳಲ್ಲೂ ಈ ಚಿತ್ರರೂಪಕಗಳನ್ನು ನೇತುಹಾಕಿದ್ದಾರೆ. ಮೊದಮೊದಲು ಮುಜುಗರಕ್ಕೊಳಗಾದರೂ ಅವರು ಅದನ್ನು ಬಳಸಿರುವ ರೀತಿ ನೋಡುತ್ತಿದ್ದರೆ, ನಮ್ಮಲ್ಲಿ ಕೆಡುಕಾಗದಂತೆ, ಕೆಟ್ಟ ದೃಷ್ಟಿ ಬೀಳದಂತೆ, ಶುಭ ಶಕುನಕ್ಕಾಗಿ, ಅಭಿವೃದ್ಧಿಗಾಗಿ ಯಂತ್ರದ ಕಲ್ಲು, ತಾಯತ, ಕುದುರೆ ಲಾಳ, ದೃಷ್ಟಿ ಬೊಂಬೆ ಮೊದಲಾದ ವಸ್ತುಗಳನ್ನು ಬಳಸುವಂತೆಯೇ ಅವರು ಶಿಶ್ನವನ್ನು ಬಳಸಿರುವುದು ಅರಿವಿಗೆ ಬರುತ್ತದೆ.

ನಮ್ಮಲ್ಲಿ ಕೆಲವು ದೇಗುಲಗಳನ್ನು ಆಶೀರ್ವಾದದ ರೂಪದಲ್ಲಿ ಪಾದುಕೆಗಳು ಕಾಣಿಸುತ್ತವೆ. ದುಷ್ಟ ಶಕ್ತಿಗಳು ಕಾಟಕೊಡದಿರಲೆಂದು ಮನೆಗಳಲ್ಲಿ ನಿಂಬೆಹಣ್ಣು – ಮೆಣಸಿನಕಾಯಿ ಮುಂತಾದವನ್ನು ತೋರಣದಂತೆ ಬಾಗಿಲ ಮೇಲೆ ಕಟ್ಟುವುದು ನಮ್ಮಲ್ಲಿ ರೂಢಿಯಷ್ಟೇ. ಇದೇರೀತಿ, ಭೂತಾನ್‌ನಲ್ಲಿ ಹೊಲ, ಗದ್ದೆ, ಮನೆ, ಅಂಗಡಿ ಎಲ್ಲೆಡೆಯೂ ಅವರು ಪುರುಷಲಿಂಗವನ್ನು ಬಳಸಿರುವರು. ದನಕರುಗಳ ಕುತ್ತಿಗೆಗೂ ಮರದ ಶಿಶ್ನದ ಅಲಂಕಾರ. ಹೊಸ ಮನೆಯ ಗೃಹಪ್ರವೇಶ ಮಾಡುವ ಸಮಯದಲ್ಲಿ ಐದು ಶಿಶ್ನಗಳನ್ನಿಟ್ಟು ಪೂಜಿಸಿ, ನಾಲ್ಕನ್ನು ಮನೆಯ ನಾಲ್ಕು ದಿಕ್ಕಿಗೆ ಕಟ್ಟಿ, ಐದನೆಯದ್ದನ್ನು ದೇವರಮನೆಯಲ್ಲಿಡುವುದು ಅವರ ಪದ್ಧತಿ.

ರೂಪಕಗಳ ಹರಿವು
ನಮ್ಮಲ್ಲಿ ಶಿವಲಿಂಗವು ಭಕ್ತರ ಮನಸ್ಸಿನಲ್ಲಿ ಶಿವನ ಸ್ವರೂಪವಾಗಿ, ನಿರಾಕಾರ ರೂಪಕವಾಗಿ ದಾಖಲಾಗಿದೆ. ‘ಭಗ’ದ ಪ್ರತೀಕವಾಗಿರುವ ‘ಪಾಣಿಪೀಠ’ ಮತ್ತು ಲಿಂಗದ ಪ್ರತೀಕವಾಗಿರುವ ‘ಲಿಂಗ’ – ಇವೆರಡೂ ಸೇರಿ ಶಿವಲಿಂಗ ರೂಪುಗೊಂಡಿತು ಎನ್ನುತ್ತಾರೆ ತಿಳಿದವರು. ಭೂಮಿ ಎಂದರೆ ‘ಸೃಜನ’ ಮತ್ತು ಶಿವ ಎಂದರೆ ‘ಪಾವಿತ್ರ್ಯ’– ಹೀಗೆ, ಪಾಣಿಪೀಠದಲ್ಲಿ ಸೃಜನ ಮತ್ತು ಪಾವಿತ್ರ್ಯವು ಒಟ್ಟಿಗಿದ್ದರೂ ವಿಶ್ವದ ಉತ್ಪತ್ತಿಯು ರೇತಸ್ಸಿನಿಂದ (ವೀರ್ಯದಿಂದ) ಆಗದೇ ಶಿವನ ಸಂಕಲ್ಪದಿಂದಾಯಿತು. ಈ ರೀತಿ ಶಿವ-ಪಾರ್ವತಿಯರು ಜಗತ್ತಿನ ತಂದೆತಾಯಿಯಾಗಿದ್ದಾರೆ ಎನ್ನುತ್ತದೆ ಪುರಾಣ.

ಶಿವಲಿಂಗವು ಶಕ್ತಿಯ ಪ್ರತೀಕವಾಗಿದೆ. ಇತ್ತೀಚಿನ ಅಣುಸ್ಥಾವರಗಳ ಆಕಾರವೂ ಶಿವಲಿಂಗದಂತೆಯೇ ಇರುತ್ತದೆ. ದೇಶ, ಭಾಷೆ, ವಾತಾವರಣ, ಸಾಮಾಜಿಕ ಸ್ಥಿತಿ ಬದಲಾದಂತೆ ಹಿಂದಿನ ಪದ್ಧತಿ ಹಾಗೂ ರೂಪಕ ಚಿಹ್ನೆಗಳು ಬೇರೆ ಬೇರೆ ಅರ್ಥ ಮತ್ತು ಆಕಾರಗಳನ್ನು ಕಂಡುಕೊಳ್ಳುತ್ತವೆ. ರೂಪಕಗಳ ಈ ಹರಿವಿನ ರೂಪದಲ್ಲಿ ಭೂತಾನ್‌ನಲ್ಲಿ ಶಿಶ್ನದ ಪರಿಕಲ್ಪನೆಯನ್ನು ಕಾಣಬಹುದೆನ್ನಿಸುತ್ತದೆ.‌ ಭೂತಾನ್‌ನ ಪ್ರಮುಖ ಸಂತರಲ್ಲಿ ಒಬ್ಬನಾದ, ಹದಿನೈದನೇ ಶತಮಾನದಲ್ಲಿದ್ದ ದ್ರುಕ್‌ಪಾ ಕುನ್ಲೆ ತನ್ನ ವಿಶೇಷ ಗುಣಗಳಿಂದಲೇ ಖ್ಯಾತಿ ಪಡೆದಿದ್ದಾನೆ.

ಈತನ ತಾಂತ್ರಿಕ ಸಾಧನೆಗಳಿಗಿಂತ ಈತನ ಕುರಿತ ಅಸಂಖ್ಯ ಜನಪ್ರಿಯ ಕತೆಗಳು ಈತನನ್ನು ಅಜರಾಮರನನ್ನಾಗಿಸಿವೆ. ದ್ರುಕ್‌ಪಾ ಕುನ್ಲೆಯ ಆಶೀರ್ವಾದ ಕಾಮದ ರೂಪದಲ್ಲಿ ಇರುತ್ತಿತ್ತಂತೆ. ಪುನಾಖಾ ಬಳಿ ಇರುವ ಚಿಮಿ ಲಾಖಾಂಗ್‌ ಎಂಬ ದೇವಾಲಯ ಈತನಿಗಾಗಿ ನಿರ್ಮಿಸಲಾಗಿದೆ. ಅಲ್ಲಿಗೆ ತಲುಪಲು ಲೊಬೆಸ ಹೆಸರಿನ ಹಳ್ಳಿಯ ಮೂಲಕ ಹೋಗಬೇಕು.

ಅಲ್ಲಿರುವ ಮನೆಗಳ ಮೇಲೆಲ್ಲಾ ಶಿಶ್ನದ ಚಿತ್ರಗಳಿವೆ. ದ್ರುಕ್‌ಪಾ ಕುನ್ಲೆ ತನ್ನ ಶಿಶ್ನದಿಂದ ಶತ್ರು ನಾಶಮಾಡಿದನಂತೆ. ಅಂದಿನಿಂದ ಶಿಶ್ನಾರಾಧನೆ ಭೂತಾನಿನ ಸಂಸ್ಕೃತಿಯ ಒಂದು ಭಾಗವಾಗಿದೆ. ಕೆಟ್ಟಶಕ್ತಿಗಳನ್ನು ದೂರ ಮಾಡಲು ಎಲ್ಲಾ ಮನೆ, ಅಂಗಡಿಗಳ ಮೇಲೂ ಶಿಶ್ನದ ಚಿತ್ರ ಅವರು ಬರೆಯುತ್ತಾರೆ.

ಉರಿಯುವ ಕೋಲ್ಮಿಂಚು!
ಚಿಮಿ ಲಾಖಾಂಗ್‌ ಮಂದಿರವನ್ನು ದ್ರುಕ್‌ಪಾ ಕುನ್ಲೆಯ ಸೋದರ ಸಂಬಂಧಿ 1499ರಲ್ಲಿ ಕಟ್ಟಿಸಿದನಂತೆ. ಒಳಗೆ ದ್ರುಕ್‌ಪಾ ಕುನ್ಲೆಯ ವಿಗ್ರಹ ಇದೆ. ಒಂದು ಕೈ ಕಿವಿಗೆ ಇಟ್ಟು ಆಲಿಸುವ ಹಾಗೆ ಇರುವ ದ್ರುಕ್‌ಪಾ ವಿಗ್ರಹ ಸುಂದರವಾಗಿದೆ. ಆತ ಉಪಯೋಗಿಸುತ್ತಿದ್ದ ಎನ್ನಲಾಗುವ ಬಿಲ್ಲು, ಬೆಳ್ಳಿಯ ಹಿಡಿಕೆಯಿರುವ ಮರದ ಶಿಶ್ನ, ಮದ್ಯ ತುಂಬಿಸುವ ಮರದ ದಾನಿಗಳೆಲ್ಲ ಮಂದಿರದಲ್ಲಿವೆ. ಇಲ್ಲಿಗೆ ಬಂದವರಿಗೆ ಮರದ ಶಿಶ್ನದಿಂದ ಆಶೀರ್ವಾದ ಮಾಡುತ್ತಾರೆ. ‘ಫಲವತ್ತತೆಯ ದೇವಾಲಯ’ ಎಂದೇ ಈ ಮಂದಿರ ಪ್ರಸಿದ್ಧ. ಮಕ್ಕಳಾಗದವರು ಅಲ್ಲಿಗೆ ಬಂದು ಆಶೀರ್ವಾದ ತೆಗೆದುಕೊಂಡರೆ ಮಕ್ಕಳಾಗುತ್ತವೆ ಎನ್ನುವುದು ಪ್ರತೀತಿ.

ಬೌದ್ಧಧರ್ಮದ ದ್ರುಕ್‌ಪಾ ಪಂಥದ ಟಿಬೆಟ್‌ನ ರಾಲುಂಗ್‌ ಮೊನೆಸ್ಟರಿಯಲ್ಲಿ ದ್ರುಕ್‌ಪಾ ಕುನ್ಲೆ ಜನಿಸಿದವನು. ಅವನಿಗೂ ಮೊದಲೇ ಹಲವು ಹಟಯೋಗಿಗಳಿದ್ದರೂ, ದ್ರುಕ್‌ಪಾ ಕುನ್ಲೆ ತನ್ನ ಹಾಸ್ಯ, ಜನಸಾಮಾನ್ಯರೊಂದಿಗಿನ ಒಡನಾಟ, ರಸಿಕತೆಗಳಿಂದಾಗಿ ಹೆಚ್ಚು ಜನಪ್ರಿಯನಾಗಿದ್ದಾನೆ. ಈತ ‘ಉರಿಯುವ ಕೋಲ್ಮಿಂಚು’ ಎನ್ನುವ ತನ್ನ ಶಿಶ್ನದಿಂದ ರಕ್ಕಸಿಯರನ್ನು ಸೋಲಿಸಿ ಅವರ ಮನಃ ಪರಿವರ್ತನೆಗೊಳಿಸಿದ ಕಥೆಯಿದೆ.

ಬೂಟಾಟಿಕೆ, ಸ್ವಾರ್ಥ ಮತ್ತು ದುರಾಸೆಯಿಂದ ತುಂಬಿದ ಜಗತ್ತಿಗೆ ಬುದ್ಧಿ ಕಲಿಸಲು ಹಲವು ವಿಚಿತ್ರ ನಡವಳಿಕೆಗಳನ್ನು ಈತ ರೂಢಿಸಿಕೊಂಡಿದ್ದ. ಅದ್ಭುತ ಕವಿ ಹಾಗೂ ಹಾಡುಗಾರನಾಗಿದ್ದ ಈತನ ಹಾಡುಗಳು ಇಂದಿಗೂ ಭೂತಾನಿನಲ್ಲಿ ಪ್ರಚಲಿತವಿವೆ.
ಭೂತಾನ್‌ನ ರಾಷ್ಟ್ರೀಯ ಪ್ರಾಣಿ ತಾಕಿನ್‌ ದ್ರುಕ್‌ಪಾ ಸೃಷ್ಟಿಯೇ. ತಾಕಿನ್‌ ಅಪರೂಪದ ಪ್ರಾಣಿ. ಮೇಲ್ನೋಟಕ್ಕೆ ಆಡಿನಂತೆ ಕಾಣುತ್ತದೆ. ಆದರೆ ಆಕಾರ ದೊಡ್ಡದು. ಮುನ್ನೂರೈವತ್ತು ಕಿಲೋ ತನಕವೂ ಇದು ಭಾರವಿರುತ್ತದೆ. ಶರೀರದ ಮೇಲ್ಭಾಗದಲ್ಲಿ ಮಾತ್ರ ಉಣ್ಣೆ ಇರುತ್ತದೆ.

ಸಂಸ್ಕೃತಿ ಮತ್ತು ಸಂತಸ
ಆಧುನಿಕ ಭೂತಾನ್‌ ಪಾಲಿಗೆ ಅಲ್ಲಿನ ಪುರುಷಲಿಂಗದ ಪರಿಕಲ್ಪನೆ, ಇತರರ ಕಣ್ಣಿಗೆ ಆಕರ್ಷಣೆಯಂತೆಯೂ ಅಪಸವ್ಯದಂತೆಯೂ ಕಾಣಿಸಿದೆ. ಭೂತಾನಿಗರ ಮನೆಗಳ ಮೇಲೆ ಬಣ್ಣಬಣ್ಣದ ಶಿಶ್ನಗಳು ಅಲಂಕರಿಸಲ್ಪಟ್ಟಿವೆ. ದೊಡ್ಡ ಶಿಶ್ನಗಳು ಮನೆಯ ಮೇಲ್ಛಾವಣಿಯ ತುದಿಯಲ್ಲಿ ನೇತು ಹಾಕಲ್ಪಟ್ಟಿವೆ. ಸಣ್ಣ ಶಿಶ್ನಗಳು ಮಕ್ಕಳ ಕುತ್ತಿಗೆಯನ್ನು ಅಲಂಕರಿಸಿವೆ. ಕೀ ಚೈನ್‌ಗಳಾಗಿ ಪ್ರವಾಸಿಗರ ಕೈಸೇರುತ್ತಿವೆ.
ಪ್ರಪಂಚದಲ್ಲೇ ಅತ್ಯಂತ ಸಂತುಷ್ಟ ಜನರಿರುವ ದೇಶ ಎನ್ನುವುದು ಭೂತಾನ್‌ನ ಅಗ್ಗಳಿಕೆ.

ಆಧುನಿಕತೆ ಎಷ್ಟೇ ಕಾಲಿಟ್ಟರೂ ತನ್ನ ಧರ್ಮ, ಆಚಾರ, ನಂಬಿಕೆ, ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಪು, ಭಾಷೆ ಎಲ್ಲವನ್ನೂ ಭೂತಾನ್‌ ಸಾಕಷ್ಟು ಉಳಿಸಿಕೊಂಡಿದೆ. ಎಲ್ಲಾ ದೇಶಗಳೂ ತಮ್ಮ ಪ್ರಗತಿಯನ್ನು ತಲಾದಾಯದಲ್ಲಿ ಅಳೆದರೆ, ಭೂತಾನ್‌ ತನ್ನ ಪ್ರಗತಿಯನ್ನು ‘ರಾಷ್ಟ್ರೀಯ ಸಂತಸ ಸೂಚ್ಯಂಕ’ದಲ್ಲಿ (ಗ್ರಾಸ್‌ ನ್ಯಾಷನಲ್‌ ಹ್ಯಾಪಿನೆಸ್‌) ಕಾಣುತ್ತದೆ. 

ಎಂಟನೇ ಶತಮಾನದಲ್ಲಿ ಬೌದ್ಧ ಸಂತ ಗುರು ಪದ್ಮಸಾಂಭವ (ಗುರು ರಿಂಪೋಚೆ) ಅವರ ಮೂಲಕ ಭೂತಾನ್‌ಗೆ ಆಗಮಿಸಿದ ಬೌದ್ಧ ಧರ್ಮ ಹಾಗೂ ಅದಕ್ಕೂ ಹಿಂದೆ ಇದ್ದ ಆಚಾರ, ನಂಬಿಕೆ, ಸಂಸ್ಕೃತಿ, ವಾಸ್ತುಶಿಲ್ಪ– ಇವೆಲ್ಲವೂ ಈಗಿನ ತಂತ್ರಜ್ಞಾನದೊಂದಿಗೆ ಮಿಳಿತಗೊಂಡು ಭೂತಾನಿಗರ ನೆಮ್ಮದಿ, ಸಂತಸ, ಮನೋಲ್ಲಾಸವನ್ನು ಹೆಚ್ಚಿಸಿವೆ.

ಶಿಶ್ನವು ರಕ್ಷಣೆ, ಫಲವತ್ತತೆಯ ಸಂಕೇತವಷ್ಟೇ ಅಲ್ಲದೆ ಮನುಷ್ಯನ ಅಹಂಕಾರವನ್ನು ಕೊಲ್ಲುವ ಕೋಲ್ಮಿಂಚು ಕೂಡ. ಮಾನವ ತನ್ನ ಬುದ್ಧಿ, ಜ್ಞಾನ, ತಂತ್ರಜ್ಞಾನದ ಸಂಕೇತವಾಗಿ ನಿರ್ಮಿಸುವ ಬೃಹತ್‌ ಸ್ಮಾರಕಗಳನ್ನು ಪ್ರಕೃತಿ ವಿಕೋಪವೊಂದು ನಾಶಮಾಡುವಂತೆ, ಮಾನವನ ಅಹಂಕಾರವನ್ನು ಕೋಲ್ಮಿಂಚಿನಂತಹ ಶಿಶ್ನವು ನಾಶಪಡಿಸುತ್ತದೆ. ಭೂತಾನಿಗರ ಪುರುಷಲಿಂಗ ಪ್ರೀತಿಯನ್ನು ದೇಹದ ಒಂದು ಅಂಗದಂತೆ ನೋಡಿದರೆ ಕಸಿವಿಸಿ ತಪ್ಪದು. ಆದರೆ, ಅದನ್ನು ಸಂಸ್ಕೃತಿಯ ಭಾಗವಾಗಿ, ಅಹಂಕಾರವನ್ನು ನಿರಸನಗೊಳಿಸುವ ರೂಪವಾಗಿ ನೋಡಬೇಕಾಗಿದೆ.

ಕಿಳ್ಳೆಕ್ಯಾತನ ನೆನಪು
ಅಲ್ಲಿನ ಬಹುರೂಪಿ ಶಿಶ್ನಗಳನ್ನು ಕಂಡಾಗ ನಮ್ಮ ಕಿಳ್ಳೆಕ್ಯಾತ ನೆನಪಾಗುತ್ತಾನೆ. ತೊಗಲುಗೊಂಬೆ ಆಟದಲ್ಲಿ, ಪ್ರೇಕ್ಷಕರ ಆಸಕ್ತಿಯನ್ನು ಕಾಯ್ದುಕೊಳ್ಳಲು ಬಂಗಾರಕ್ಕ ಮತ್ತು ಕಿಳ್ಳೆಕ್ಯಾತ ಎಂಬ ಹಾಸ್ಯ ಪಾತ್ರಗಳು ಬರುತ್ತವೆ. ಕಪ್ಪು ಅಥವಾ ತೀರಾ ಕೆಂಪು ಬಣ್ಣ  ದ, ಡೊಳ್ಳು ಹೊಟ್ಟೆ, ಬೋಳು ತಲೆ, ಪುಟ್ಟ ಜುಟ್ಟು, ದಪ್ಪ ತುಟಿ, ಗಿಡ್ಡ ಮೂಗಿನ, ವಕ್ರ ವ್ಯಕ್ತಿ ಕಿಳ್ಳೆಕ್ಯಾತ.

ತನ್ನ ಹೆಂಡತಿ ಬಂಗಾರಕ್ಕನೊಡನೆ ಹಾಸ್ಯ ಮತ್ತು ಅಶ್ಲೀಲ ಮಾತುಗಳನ್ನಾಡುತ್ತ ಕಿಳ್ಳೆಕ್ಯಾತ ಜನರನ್ನು ರಂಜಿಸುತ್ತಾನೆ. ಕಿಳ್ಳೆಕ್ಯಾತ ತನ್ನ ದೊಡ್ಡ ಶಿಶ್ನವನ್ನು ಭುಜದ ಮೇಲೆ ಹಾಕಿಕೊಂಡು ರಂಗದ ಮೇಲೆ ಬರುತ್ತಿದ್ದಂತೆ ಹಳ್ಳಿಗಳಲ್ಲಿ ಮುಂದಿನ ಸಾಲಲ್ಲಿ ಕುಳಿತ ಯುವಕರು ಶಿಳ್ಳೆ ಹೊಡೆಯುತ್ತಾರೆ. ಮುಜುಗರವೆನಿಸಿದರೂ ತೊಗಲು ಗೊಂಬೆ ಆಟದಲ್ಲಿ ಕಿಳ್ಳೆಕ್ಯಾತ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದ್ದಾನೆ.
(ಚಿತ್ರಗಳು ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT