ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ ಸ್ಟೋರ್‌ನಲ್ಲೂ ನಕಲಿ ಹಾವಳಿ

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಆ್ಯಪಲ್‌ ಕಂಪೆನಿ ಇತ್ತೀಚೆಗೆ ತನ್ನ ಆ್ಯಪ್‌ ಸ್ಟೋರ್‌ನಿಂದ 250ಕ್ಕೂ ಹೆಚ್ಚು ಅಪ್ಲಿಕೇಷನ್ಸ್‌ಗಳನ್ನು ತೆಗೆದುಹಾಕಿತು. ಈ ಅಪ್ಲಿಕೇಷನ್ಸ್‌ಗಳು ಬಳಕೆದಾರನಿಗೆ ಯಾವುದೇ ಸುಳಿವು ನೀಡದೆ, ಆತ ಬಳಸುವ ಗ್ಯಾಡ್ಜೆಟ್‌ನಿಂದ ವೈಯಕ್ತಿಕ ಮಾಹಿತಿಗಳನ್ನು, ದತ್ತಾಂಶಗಳನ್ನು  ಕದ್ದು ಮೂರನೆಯ ವ್ಯಕ್ತಿಗೆ/ಸಂಸ್ಥೆ ರವಾನಿಸುತ್ತಿದ್ದವು. ಆ್ಯಪಲ್‌ ಈ ಆ್ಯಪ್‌ಗಳನ್ನು ಐಸ್ಟೋರ್‌ನಿಂದ ತೆಗೆದು ಹಾಕುವುದಕ್ಕಿಂತ ಮೊದಲೇ 10 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಐಫೋನ್‌, ಐಪ್ಯಾಡ್‌ಗಳಿಗೆ ಇದನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದರು.

ಚೀನಾದ ಯೂಮಿ ಎಂಬ ಮೊಬೈಲ್‌ ಜಾಹೀರಾತು ಕಂಪೆನಿ ಬಳಕೆದಾರನ ಖಾಸಗಿ ಮಾಹಿತಿಗಳನ್ನು ಕದಿಯುವ ಉದ್ದೇಶದಿಂದಲೇ ಇಂತಹ ನಕಲಿ ಅಪ್ಲಿಕೇಷನ್ಸ್‌ಗಳನ್ನು ಅಭಿವೃದ್ಧಿಪಡಿಸಿ ಅದನ್ನು ಐಸ್ಟೋರ್‌ನಲ್ಲಿ ಲಭ್ಯಗೊಳಿಸಿತ್ತು. ಸಾಮಾನ್ಯವಾಗಿ ಐಸ್ಟೋರ್‌ನಲ್ಲಿರುವ ಅಪ್ಲಿಕೇಷನ್ಸ್‌ಗಳನ್ನು  ಐಒಎಸ್‌ ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಕಿಟ್‌ (iPhone SDK) ಬಳಸಿ ಅಭಿವೃದ್ಧಿಪಡಿಸಲಾಗಿರುತ್ತದೆ.

ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಕಿಟ್‌  ಅಥವಾ ಇಂತಹ SDK ಬಳಸಿಕೊಂಡು ಪ್ರೋಗ್ರಾಂ ಅಭಿವೃದ್ಧಿಪಡಿಸುವವರು ಐಫೋನ್‌, ಐಪ್ಯಾಡ್, ಆಂಡ್ರಾಯ್ಡ್‌ , ವಿಂಡೋಸ್‌ ಸೇರಿದಂತೆ ಬೇರೆ ಬೇರೆ ಕಾರ್ಯನಿರ್ವಹಣಾ ತಂತ್ರಾಂಶಗಳನ್ನು ಬಳಸಿಕೊಳ್ಳುವ ಗ್ಯಾಡ್ಜೆಟ್‌ಗಳಿಗೆ ಕಿರು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುತ್ತಾರೆ. ಆದರೆ, ಯೂಮಿ ಮೊಬೈಲ್‌ iPhone SDK ಬಳಸಿಕೊಳ್ಳದೇ, ಬಳಕೆದಾರನ ಮಾಹಿತಿ ಕದಿಯುವ ಉದ್ದೇಶದಿಂದ, ತನ್ನದೇ ಆದ ನಕಲಿ ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಕಿಟ್‌ ಅಭಿವೃದ್ಧಿಪಡಿಸಿತ್ತು. ಇದೊಂದು ಗೋಪ್ಯ ಮತ್ತು  ಥರ್ಡ್‌ ಪಾರ್ಟಿ ಜಾಹೀರಾತು ಸಾಧನ.

ಹೀಗೆ ಅಭಿವೃದ್ಧಿಪಡಿಸಿದ ಆ್ಯಪ್‌ಗಳು ಬಳಕೆದಾರನ ವೈಯಕ್ತಿಕ ಮಾಹಿತಿ ಕದಿಯುತ್ತಿವೆ, ಆತನ ಖಾಸಗೀತನಕ್ಕೆ ಅಪಾಯ ತರುತ್ತಿವೆ ಎನ್ನುವುದು ಆ್ಯಪಲ್‌ಗೆ ಗೊತ್ತಾಗುವ ಹೊತ್ತಿಗೆ ಸಾವಿರಾರು ಬಳಕೆದಾರರು ಮೋಸ ಹೋಗಿದ್ದರು. ಯೂಮಿ ಕಂಪೆನಿಯು  ನಕಲಿ SDK  ಪ್ರೋಗ್ರಾಂ (Xcode) ಬಳಸಿಕೊಂಡು  ನೂರಾರು ಅಪ್ಲಿಕೇಷನ್ಸ್‌ಗಳನ್ನು ಅಭಿವೃದ್ಧಿಪಡಿಸಿ ಐಸ್ಟೋರ್‌ನಲ್ಲಿ ಲಭ್ಯಗೊಳಿಸಿತ್ತು. ಆ್ಯಪಲ್‌ ಐಸ್ಟೋರ್‌, ಗೂಗಲ್‌ ಪ್ಲೇ, ಅಥವಾ ವಿಂಡೋಸ್‌ ಸ್ಟೋರ್‌ನಲ್ಲಿರುವ ಅಪ್ಲಿಕೇಷನ್ಸ್‌ಗಳು ಅಧಿಕೃತ ಎನ್ನುವ ಭಾವನೆ ಇದೆ. ಹಾಗಾಗಿ ಬಳಕೆದಾರರು ಅದರ ಪೂರ್ವಾಪರ ಪರಿಶೀಲಿಸದೆ, ತಮಗಿಷ್ಟದ ಅಪ್ಲಿಕೇಷನ್ಸ್‌ ಅನ್ನು ಸರ್ಚ್‌ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳುತ್ತಾರೆ. ಆ್ಯಪಲ್‌ ಬಳಕೆದಾರರು ಕೂಡ ಹೀಗೆಯೇ ವಿಶ್ವಾಸ ವಂಚನೆಗೆ ಒಳಗಾಗಿದ್ದರು.

ಆಂಡ್ರಾಯ್ಡ್‌ ಮತ್ತು ಆ್ಯಪಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸುವವರ ವೇದಿಕೆಯಾದ ‘ಸೋರ್ಸ್‌ ಡಿಎನ್‌ಎ’ ವರದಿ ಪ್ರಕಾರ, ಚೀನಾದ ಮೊಬೈಲ್‌ ಕಂಪೆನಿ ನಕಲಿ ಎಸ್‌ಡಿಕೆ ಬಳಸಿ ಅಭಿವೃದ್ಧಿಪಡಿಸಿದ ಅಪ್ಲಿಕೇಷನ್ಸ್‌ಗಳು,  ಖಾಸಗಿ ಅಪ್ಲಿಕೇಷನ್‌ ಪ್ರೋಗ್ರಾಂಮಿಂಗ್‌ ಇಂಟರ್‌ಫೇಸ್‌ (API)  ಬಳಸಿಕೊಂಡು ಬಳಕೆದಾರನ ಖಾಸಗಿ ಮಾಹಿತಿ, ಅಂದರೆ, ಆತನ ಇ–ಮೇಲ್‌ ವಿಳಾಸ, ಮೊಬೈಲ್‌ ಸಂಖ್ಯೆ, ಬ್ಯಾಂಕ್‌ ಖಾತೆ ವಿವರ, ಭೌಗೋಳಿಕ ಮಾಹಿತಿ (ಜಿಪಿಎಸ್‌ ಲೊಕೇಷನ್‌) ಮತ್ತಿತರ ಮಾಹಿತಿಗಳನ್ನು  ಯೂಮಿ ಕಂಪೆನಿಯ ಸರ್ವರ್‌ಗೆ ಕಳುಹಿಸುತ್ತಿತ್ತು.  ಕಂಪೆನಿಯು ಇದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿತ್ತು.

ಯೂಮಿ ಎಸ್‌ಡಿಕೆ ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಎಲ್ಲ ಅಪ್ಲಿಕೇಷನ್ಸ್‌ಗಳನ್ನು ಆ್ಯಪ್‌ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ ಎಂದು ಆ್ಯಪಲ್‌ ಸ್ಪಷ್ಟಪಡಿಸಿದೆ. ಇಂತಹ ನಕಲಿ ಎಸ್‌ಡಿಕೆ ಮೇಲೆ ನಿಗಾ ವಹಿಸುವುದಾಗಿಯೂ ಕಂಪೆನಿ ಹೇಳಿದೆ. ಆ್ಯಪಲ್‌ ಮಾತ್ರವಲ್ಲ, ಆಂಡ್ರಾಯ್ಡ್‌ ಪ್ಲೇ ಸ್ಟೋರ್‌ನಲ್ಲೂ ಇತ್ತೀಚೆಗೆ ಬಳಕೆದಾರನ ಖಾಸಗಿ ಮಾಹಿತಿ ಸೋರಿಕೆ ಮಾಡುವ ಕೆಲವು ಗೇಮಿಂಗ್ ಅಪ್ಲಿಕೇಷನ್ಸ್‌ಗಳು ಪತ್ತೆಯಾಗಿದ್ದವು. ಇಂಟರ್‌ನೆಟ್‌ ಸೆಕ್ಯುರಿಟಿ ಸಂಸ್ಥೆ ಅವಾಸ್ತ್‌  ಈ ನಕಲಿ ಅಪ್ಲಿಕೇಷನ್ಸ್‌ಗಳನ್ನು ಪತ್ತೆ ಹಚ್ಚಿದ ನಂತರ ಗೂಗಲ್‌ ಇದನ್ನು ತೆಗೆದುಹಾಕಿತ್ತು. 

ನಕಲಿ ಎಸ್‌ಡಿಕೆ ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಇವೆಲ್ಲವೂ ಗೋಪ್ಯ ವೈರಸ್‌ಗಳಾಗಿದ್ದವು. ಟಾಸ್ಕರ್ (Tasker)  ಎಂಬ ಜನಪ್ರಿಯ ಆ್ಯಪ್‌, ಡ್ಯುರ್‍ಯಾಕ್‌ (Durak) ಎಂಬ ಗೇಮಿಂಗ್‌ ಆ್ಯಪ್‌ ಕೂಡ ಇದರಲ್ಲಿ ಸೇರಿದ್ದವು. ಇವುಗಳನ್ನು ಲಕ್ಷಾಂತರ ಮಂದಿ ಇನ್‌ಸ್ಟಾಲ್‌ ಮಾಡಿಕೊಂಡಿದ್ದರು. ಇವು ಎಷ್ಟು ಜಾಣ ವೈರಸ್‌ ಎಂದರೆ, ಡೌನ್‌ಲೋಡ್‌ ಮಾಡಿಕೊಂಡ 30 ದಿನಗಳವರೆಗೆ ಯಾವುದೇ ಸಮಸ್ಯೆಯುಂಟು ಮಾಡದೆ ತಟಸ್ಥವಾಗಿರುತ್ತಿದ್ದವು. ಒಂದು ತಿಂಗಳು ಕಳೆಯುತ್ತಿದ್ದಂತೆ ಅಸಲಿ ಬಣ್ಣ ತೋರಿಸುತ್ತಿದ್ದವು. 

ಕೋರ್ಟನಾ –ಎಸ್‌ಡಿಕೆ
ಮೈಕ್ರೊಸಾಫ್ಟ್‌ ಕಂಪೆನಿ ವಿಂಡೋಸ್‌  Cortana-SDK ಎಂಬ ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಟೂಲ್‌ ಅಭಿವೃದ್ಧಿಪಡಿಸಿದೆ. ಕೊರ್ಟೊನಾ ಲ್ಯಾಬ್‌ ಸ್ಥಾಪಕರಾದ ವಾಲ್ಟರ್‌ ಲಾ ಈ ಎಸ್‌ಡಿಕೆ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಬಳಸಿ ಐಫೋನ್‌, ಆಂಡ್ರಾಯ್ಡ್‌  ಮೊಬೈಲ್‌ ಅಪ್ಲಿಕೇಷನ್ಸ್‌ಗಳನ್ನು ಅಭಿವೃದ್ಧಿಪಡಿಸಬಹುದು. ಪ್ರೋಗ್ರಾಂ ಅಭಿವೃದ್ಧಿಪಡಿಸುವವರು ಈ  ಎಸ್‌ಎಡಿಕೆಗೆ ಯಾವುದೇ ರಾಯಧನ ನೀಡಬೇಕಿಲ್ಲ. ಅಷ್ಟೇ ಅಲ್ಲ,  ಲುಆ (Lua) ಎಂಬ ಪ್ರೋಗ್ರಾಂಮಿಂಗ್‌ ಲಾಂಗ್ವೇಜ್‌ ಬಳಸಿಕೊಂಡು ಗ್ರಾಫಿಕ್‌ ಅಪ್ಲಿಕೇಷನ್ಸ್‌ ಕೂಡ ಅಭಿವೃದ್ಧಿಪಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT