ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್ ಆಧಾರಿತ ಟ್ಯಾಕ್ಸಿ ನಿಯಂತ್ರಣಕ್ಕೆ ನಿಯಮಾವಳಿ

ಕ್ಯಾಬ್‌ ಚಾಲಕರಿಂದ ಭಾರಿ ವಿರೋಧ * ಅಧಿಸೂಚನೆ ಹೊರಡಿಸಲು ಇಲಾಖೆ ತಯಾರಿ
Last Updated 26 ನವೆಂಬರ್ 2015, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಮೊಬೈಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ’ ಒದಗಿಸುವ ವಾಹನಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಿರುವ ಸಾರಿಗೆ ಇಲಾಖೆ, ಅದಕ್ಕಾಗಿ ಹೊಸ ನಿಯಮಗಳನ್ನು ಒಳಗೊಂಡ  ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಗಳು– 2015’ ಎಂಬ ಕರಡನ್ನು ಸಿದ್ಧಪಡಿಸಿದೆ.

ಈಗಾಗಲೇ  ಆ ಕರಡನ್ನು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾಗಿದೆ.  ಸದ್ಯದಲ್ಲೇ ಕರಡು ಅಧಿಸೂಚನೆ ಹೊರಬೀಳಲಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಇಲಾಖೆ ಆಹ್ವಾನಿಸಲಿದೆ.

ದೆಹಲಿಯಲ್ಲಿ ಉಬರ್ ಚಾಲಕನಿಂದ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತುಕೊಂಡಿದ್ದ ಕೇಂದ್ರ ಸರ್ಕಾರ, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ‘ಮೊಬೈಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ’ಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಹೀಗಾಗಿ ಇಲಾಖೆ ಹೊಸ ನಿಯಮಗಳ ಕರಡು ಸಿದ್ದಪಡಿಸಿತ್ತು.

ಆದರೆ, ಮೊಬೈಲ್ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಕಂಪೆನಿಗಳಲ್ಲಿ ನೋಂದಾಯಿಸಿಕೊಡು ಬಾಡಿಗೆ ಓಡಿಸುತ್ತಿರುವ ಚಾಲಕರು ಈ ಕರಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ವಿರೋಧ ಏಕೆ: ‘ರಾಜಧಾನಿಯಲ್ಲಿ ‘ಮೊಬೈಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ’ ಒದಗಿಸುವ ಕಂಪೆನಿಗಳೊಂದಿಗೆ ಸುಮಾರು 60 ಸಾವಿರ ಚಾಲಕರು ನೋಂದಾಯಿಸಿಕೊಂಡಿದ್ದಾರೆ. ಬೇಡಿಕೆಗೆ ಅನುಗುಣವಾಗಿ ದೊರೆಯುವ ಈ ಸೇವೆಯಲ್ಲಿ ಒಬ್ಬ ಚಾಲಕ ಒಂದೇ ಕಂಪೆನಿಯಲ್ಲಿ ವಾಹನ ಓಡಿಸಲಾರಂಭಿಸಿದರೆ, ತೀವ್ರ ನಷ್ಟಕ್ಕೆ ಒಳಗಾಗುತ್ತಾನೆ’ ಎನ್ನುತ್ತಾರೆ ಚಾಲಕ ಮುರುಗನ್.

‘ಐಟಿ– ಬಿಟಿ ಕಂಪೆನಿ ಜತೆ ನೋಂದಾಯಿಸಿಕೊಂಡಿರುವ ಚಾಲಕ, ಅಲ್ಲಿಗೆ ದಿನಕ್ಕೆ ಒಂದೆರಡು ಟ್ರಿಪ್ ಹೋಗಿ ಬಂದ ನಂತರ ಉಳಿದ ಅವಧಿಯಲ್ಲಿ ಮೊಬೈಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲಾರಂಭಿಸುತ್ತಾನೆ. ಇತ್ತೀಚಿಗೆ ಆರಂಭವಾಗಿರುವ ಈ ಸೇವೆಯಿಂದಾಗಿ, ಚಾಲಕನ ಆರ್ಥಿಕ ಸ್ಥಿತಿ ಸುಧಾರಿಸಿದೆ. ಅಲ್ಲದೆ, ಎಷ್ಟೊ ಬಾಡಿಗೆ ಚಾಲಕರು ಸ್ವಂತ ವಾಹನಗಳ ಮಾಲೀಕರೂ ಆಗಿದ್ದಾರೆ’ ಎಂದು ಅವರು ಗಮನ ಸೆಳೆದರು.

ಮತ್ತೊಬ್ಬ ಚಾಲಕ ಕೆ. ರವಿ, ‘ಒಂದೇ ಕಂಪೆನಿಯಡಿ ಕೆಲಸ ಮಾಡಬೇಕೆಂದು ಹೇಳುವ ಮೂಲಕ, ಚಾಲಕನ ದುಡಿಮೆಗೆ ಅಡ್ಡಗಾಲು ಹಾಕಲು ಇಲಾಖೆ ಮುಂದಾಗಿದೆ. ನೋಂದಾಯಿಸಿಕೊಂಡಿರುವವರು ಇಚ್ಛಾನುಸಾರವಾಗಿ ಯಾರ ಕಿರುಕುಳವೂ ಇಲ್ಲದಂತೆ, ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ದುಡಿಯುತ್ತಾರೆ. ಅದಕ್ಕೆ ಯಾಕೆ ತಡೆ ಹಾಕಬೇಕು?’ ಎಂದು ಪ್ರಶ್ನಿಸಿದರು.

‘ಪ್ರಯಾಣಿಕರಿಗೆ ಆ್ಯಪ್‌ನಲ್ಲೇ ಬಾಡಿಗೆ ದರ ಎಷ್ಟೆಂದು ಗೊತ್ತಾಗುತ್ತದೆ. ಹಾಗಾಗಿ, ಟ್ಯಾಕ್ಸಿಗಳಲ್ಲಿ ಚಾಲಕರಿಗೆ ಹೊರೆಯಾಗುವ ಡಿಜಿಟಲ್ ಮೀಟರ್ ಅಳವಡಿಸುವ ಅಗತ್ಯವಿಲ್ಲ. ಅಲ್ಲದೆ, ಪರವಾನಗಿ ವ್ಯಾಪ್ತಿ ಮೀರುವಂತಿಲ್ಲ ಎಂಬ ನಿಯಮ ಸರಿಯಿಲ್ಲ. ಯಾಕೆಂದರೆ, ಗ್ರಾಹಕರು ನಗರದ ಹೊರವಲಯಕ್ಕೆ ಹೋಗಬೇಕಿದ್ದರೆ ಆಗ ಏನು ಮಾಡಬೇಕು’ ಎಂದರು.

‘ನಿಗದಿತ ಬಾಡಿಗೆ ಮಾತ್ರವೇ  ವಸೂಲಿ ಮಾಡಬೇಕು. ಕಾದಿದ್ದಕ್ಕೆ ಹೆಚ್ಚಿಗೆ ವಸೂಲಿ ಮಾಡಬಾರದು ಎಂದಿದೆ. ನಗರದ ಸಂಚಾರ ದಟ್ಟಣೆಗೆ 3 ಕಿ.ಮೀ. ಪ್ರಯಾಣಕ್ಕೆ ಕೆಲವೊಮ್ಮೆ ಅರ್ಧ ಗಂಟೆ ತಗಲುತ್ತದೆ. ಆಗಲೂ ನಿಗದಿತ ಬಾಡಿಗೆಯನ್ನೇ ವಸೂಲಿ ಮಾಡಿದರೆ, ನಾವು ಬದುಕುವುದೇ ಕಷ್ಟ’ ಎಂದು ಚಾಲಕ ಸುಬ್ರಮಣ್ಯ ಆಕ್ರೋಶ ವ್ಯಕ್ತಪಡಿಸಿದರು.

ಸೇವೆ ಒದಗಿಸುತ್ತಿರುವ ಕಂಪೆನಿಗಳು: ಒಲಾ ಕ್ಯಾಬ್ಸ್, ಟ್ಯಾಕ್ಸಿ ಫಾರ್‌ ಶೂರ್‌, ಉಬರ್‌ ಕ್ಯಾಬ್ಸ್, ಝೂಮ್‌, ಈಜಿ ಕ್ಯಾಬ್, ಸವಾರಿ ಡಾಟ್‌ ಕಾಂ, ಮೆಗಾ ಕ್ಯಾಬ್ಸ್, ಟ್ಯಾಬ್ ಕ್ಯಾಬ್, ವಿಂಗ್ಸ್ ರೇಡಿಯೊ ಕ್ಯಾಬ್ಸ್ ಹಾಗೂ ಸೆಲ್‌ ಕ್ಯಾಬ್ಸ್ ಸೇರಿದಂತೆ ಹಲವು ಕಂಪೆನಿಗಳು ಕಾರ್ಯಾಚರಣೆ ನಡೆಸುತ್ತಿವೆ.
*
ಹೊಸ ನಿಯಮದಲ್ಲೇನಿದೆ?
* ಸಂಬಂಧಪಟ್ಟ ಇಲಾಖೆಯಿಂದ ಬಾಡಿಗೆ ಪರವಾನಗಿ (ರಾಜ್ಯವ್ಯಾಪಿ ಅಥವಾ ನಗರ) ಪಡೆಯಬೇಕು.

* ಏಕಕಾಲದಲ್ಲಿ ಹಲವು ಕಂಪೆನಿಗಳಲ್ಲಿ ನೋಂದಣಿ ಮಾಡಿಕೊಂಡು ಕಾರ್ಯನಿರ್ವಹಿಸುವ ಬದಲು ಒಂದೇ ಕಂಪೆನಿಯಡಿ ಕಾರ್ಯನಿರ್ವಹಿಸಬೇಕು.
* ವಾಹನಗಳಲ್ಲಿ ‘ಟ್ಯಾಕ್ಸಿ’ ಎಂಬ ನಾಮಫಲಕ ಎದ್ದು ಕಾಣುವಂತಿರಬೇಕು.
* ಚಾಲಕನ ವಿವರ ಒಳಗೊಂಡ ‘ಡಿಸ್‌ಪ್ಲೆ ಕಾರ್ಡ್‌’ ಪ್ರಯಾಣಿಸುವವರಿಗೆ ಕಾಣುವಂತೆ ಇರಬೇಕು.
* ಪರವಾನಗಿ ವ್ಯಾಪ್ತಿಯನ್ನು ಮೀರಿ ಬೇರೆ ಪ್ರದೇಶಗಳಿಗೆ ಬಾಡಿಗೆ ಹೋಗುವಂತಿಲ್ಲ.
* ತಮ್ಮಲ್ಲಿ ಎಷ್ಟು ವಾಹನಗಳು ಸೇವೆ ಒದಗಿಸುತ್ತಿವೆ ಎಂಬುದನ್ನು ಪ್ರತಿ ಕಂಪೆನಿ ಇಲಾಖೆಗೆ ತಿಳಿಸಬೇಕು.
* ಚಾಲಕರಿಗೆ ಅಗತ್ಯ ತರಬೇತಿ ಯನ್ನು ಕಂಪೆನಿಯೇ ನೀಡಬೇಕು.
* ಚಾಲಕರಿಂದ ಪ್ರಯಾಣಿಕರಿಗೆ ತೊಂದರೆಯಾದರೆ ಕಂಪೆನಿಯೇ ಹೊಣೆ.
* ನಿಯಮ ಉಲ್ಲಂಘಿಸಿದರೆ ಕನಿಷ್ಠ ₹ 5 ಸಾವಿರದಿಂದ ₹ 10 ಸಾವಿರದವರಿಗೆ ದಂಡ. ಜತೆಗೆ, ಕನಿಷ್ಠ 30 ದಿನದಿಂದ 6 ತಿಂಗಳವರೆಗೆ ಚಾಲಕನ ಪರವಾನಗಿ ಅಮಾನತು.
*
ಅಗತ್ಯವಿದ್ದರೆ ಮಾರ್ಪಾಡು
‘ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕರಡು ಸಿದ್ಧಪಡಿಸಲಾಗಿದೆ. ಇದರಿಂದಾಗಿ ಮನ ಬಂದಂತೆ ಸಂಚರಿಸುವ ಈ ಕ್ಯಾಬ್‌ಗಳಿಗೆ ಕಡಿವಾಣ ಬೀಳಲಿದೆ. ಅಧಿಸೂಚನೆ ಬಂದ ನಂತರ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು. ಅಗತ್ಯ ವಿದ್ದರೆ ಮಾರ್ಪಾಡು ಮಾಡಲಾಗುವುದು’ ಎಂದು ಸಾರಿಗೆ ಇಲಾಖೆ ಆಯುಕ್ತ ಡಾ. ರಾಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
*
ಹೊಸ ನಿಯಮಗಳು ಆ್ಯಪ್‌ ಆಧಾರಿತ ಟ್ಯಾಕ್ಸಿಗಳಿಗೆ ಕಡಿವಾಣ ಹಾಕುವಂತಿವೆ. ಟ್ಯಾಕ್ಸಿ ಅಥವಾ ಆಟೊ ನಿಲ್ದಾಣ ಹುಡುಕಿಕೊಂಡು ಹೋಗುವ ಬದಲು, ನಾನಿರುವ ಸ್ಥಳಕ್ಕೆ ಟ್ಯಾಕ್ಸಿ ಕರೆಯಿಸಿಕೊಂಡು ಪ್ರಯಾಣಿಸಬಹುದು.
- ರಾಜ್‌ಕುಮಾರ್‌,
ಕೋರಮಂಗಲ
*
ಆಟೊಗಳಿಗೆ ಹೋಲಿಸಿದರೆ, ಈ ಟ್ಯಾಕ್ಸಿಗಳ ಸೇವೆ ಉತ್ತಮವಾಗಿದೆ. ಸುರಕ್ಷತೆ ದೃಷ್ಟಿಯಿಂದ ತರುವ ನಿಯಮಗಳು,ಪ್ರಯಾಣಿಕರ ಮೇಲೆ ವ್ಯತಿರಿಕ್ತ   ಪರಿಣಾಮ ಬೀರದಿರಲಿ.
- ವೀಣಾ ಮಿರಾಜ್‌ಕರ್
ಆಡುಗೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT