ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಎರಡು ನಿಮಿಷದಲ್ಲಿ ಏನೆಲ್ಲಾ ಮಾಡಬಹುದು!

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪೂರ್ತಿಯಾಗಿ ಹಾಡಿದರೆ ಸುಮಾರು ಮೂರೂವರೆ ನಿಮಿಷ ಬೇಕು; ಎಷ್ಟೊಂದು ಸಮಯ ವ್ಯರ್ಥ! ಸರಿಯಾಗಿ ಒಂದು ನಿಮಿಷ ಇಪ್ಪತ್ತಾರು ಸೆಕೆಂಡಿನಲ್ಲಿ ಹಾಡಿ ಮುಗಿಸಿದರೆ ಸುಮಾರು ಎರಡು ನಿಮಿಷ ನಾಲ್ಕು ಸೆಕೆಂಡು ಉಳಿಯುತ್ತದೆ. ಇವತ್ತಿನ ಕಾಲದಲ್ಲಿ ‘ಸಮಯ ಅಂದರೆ ಹಣ’ (time is money)! ಕರ್ನಾಟಕದ ಪ್ರತಿ ನಾಗರಿಕನೂ ಉಳಿಸುವ ಸಮಯ ಲೆಕ್ಕ ಹಾಕಿದರೆ ಸುಮಾರು ಹದಿಮೂರು ಕೋಟಿ ನಿಮಿಷಗಳು ಅಂದರೆ ಸುಮಾರು ಇಪ್ಪತ್ತೊಂದು ಲಕ್ಷ ಗಂಟೆಗಳು ಅಂದರೆ ಸುಮಾರು ತೊಂಬತ್ತು ಸಾವಿರ ದಿವಸಗಳು. ಅಂದರೆ ಸುಮಾರು ಇನ್ನೂರ ನಲವತ್ತೇಳು ವರ್ಷಗಳು! ‘ಕನ್ನಡ ಎನೆ ಕುಣಿದಾಡುವ ಗೇಹಗಳು’ ವರುಷವೊಂದರಲ್ಲಿ ಅದೆಷ್ಟು ಬಾರಿ ನಾಡಗೀತೆ ಹಾಡುತ್ತವೆ ಮತ್ತು ಎಷ್ಟು ಸಮಯ ಉಳಿಸಬಹುದು. ನೀವೇ ಲೆಕ್ಕ ಹಾಕಿಕೊಳ್ಳಿ!

ಹೀಗೆ ಉಳಿಸುವ ಸಮಯದಲ್ಲಿ ಕರ್ನಾಟಕಕ್ಕೋಸ್ಕರ ಎಷ್ಟೆಲ್ಲಾ ಕೆಲಸ ಮಾಡಬಹುದು! ನಾಡಗೀತೆಯ ಮೇಲಿನ ಕತ್ತರಿ ಪ್ರಯೋಗದಿಂದ ಕರ್ನಾಟಕಕ್ಕೆ ಎಂತಹ ಅದ್ಭುತ ಉಳಿತಾಯ! ರಸಋಷಿ ಇದನ್ನೆಲ್ಲಾ ಆಲೋಚಿಸದೇ ಉದ್ದ ಮಾಡಿಬಿಟ್ಟರು ತಮ್ಮ ಕವಿತೆಯನ್ನು!
ಕವಿಗೆ ಈ ಸಮಯ ಉಳಿತಾಯ, ಆ ಮೂಲಕ ಆಗುವ ದುಡ್ಡಿನ ಉಳಿತಾಯ, ಜಾತಿ ರಾಜಕೀಯ, ಸೆಕ್ಯುಲರಿಸಂ, ಓಲೈಕೆ ರಾಜಕಾರಣ, ಒಡೆದು ಆಳುವ ನೀತಿ ಇವೆಲ್ಲದರ ಬಗ್ಗೆ ಗಮನವೇ ಇದ್ದಂತಿಲ್ಲ! ಯಾವುದೇ ಮುಲಾಜಿಲ್ಲದೆ ಕರ್ನಾಟಕದ ಸೌಂದರ್ಯವನ್ನು, ವೈಶಿಷ್ಟ್ಯಗಳನ್ನು, ನದಿಗಳನ್ನು, ಗಿರಿಗಳನ್ನು, ಕರ್ನಾಟಕ ಕಂಡ ಪ್ರಮುಖ ಅರಸು ಮನೆತನಗಳನ್ನು, ಮಹಾ ಕವಿಗಳನ್ನು, ತತ್ತ್ವಜ್ಞಾನಿಗಳನ್ನು ಹೀಗೆ ಎಲ್ಲರನ್ನೂ ಸೇರಿಸಿ ಕರ್ನಾಟಕವನ್ನು ವರ್ಣಿಸಿಬಿಟ್ಟಿದ್ದಾರೆ. ಕವಿಗೇನೋ ಕಾವ್ಯಸೃಷ್ಟಿ ಒಂದು ತಪಸ್ಸು. ಅಂತಹ ತಪಸ್ಸಿನ ಫಲವೇ ನಮ್ಮ ಸುಂದರ ನಾಡಗೀತೆ. ಆದರೆ ನಮಗೆ ಅದನ್ನು ನೆನಪಿಟ್ಟುಕೊಂಡು ಹಾಡಲು ಪುರುಸೊತ್ತೆಲ್ಲಿದೆ!

ನಮಗೆ ಮಾಡಲು ಬಹಳಷ್ಟು ಕೆಲಸಗಳಿವೆ! ನಾಡಗೀತೆಯ ಕತ್ತರಿ ಪ್ರಯೋಗದಿಂದ ಉಳಿಸುವ ಸಮಯದಲ್ಲಿ ಖಂಡಿತಾ ಕರ್ನಾ­ಟಕವನ್ನು ಅಭಿವೃದ್ಧಿ ಮಾಡಬಹುದು. ಕನಿಷ್ಠ ಕನ್ನಡದ ಅಭಿವೃದ್ಧಿ ಕೆಲಸವನ್ನಂತೂ ಮಾಡಬಹುದು. ಕನ್ನಡದ ಅಭಿವೃದ್ಧಿ ಅಂದರೇನು? ನಮ್ಮ ಸರ್ಕಾರಕ್ಕಾಗಲೀ ಕನ್ನಡ ಮತ್ತು ಸಂಸ್ಕತಿ ಇಲಾಖೆಗಾಗಲೀ ಈ ಬಗ್ಗೆ ಖಚಿತ ಕಲ್ಪನೆ ಇದ್ದಂತಿಲ್ಲ. ಕನ್ನಡ ಅಭಿವೃದ್ಧಿ ಎಂದಾಕ್ಷಣ ಒಂದಷ್ಟು ಕಾರ್ಯ­ಕ್ರಮಗಳಾಗುತ್ತವೆ. ಅದಕ್ಕೆ ಒಂದಷ್ಟು ಹಣ ಬಿಡುಗಡೆಯಾ­ಗು­ತ್ತದೆ. ಇಲಾಖೆಯ ಅಧಿಕಾರಿಗಳನ್ನೊ, ಗುಮಾಸ್ತರನ್ನೊ ‘ಸರಿಯಾಗಿ ಹಿಡಿದವರಿಗೆ’ ಕಾರ್ಯಕ್ರಮ ಮಾಡುವ ಅವಕಾಶ ಸಿಗುತ್ತದೆ! ಇನ್ನು ಕಾರ್ಯಕ್ರಮ ಆಯೋಜಕರನ್ನು ಸರಿ­ಯಾಗಿ ಹಿಡಿದವರಿಗೆ ಕಾರ್ಯಕ್ರಮದಲ್ಲಿ ಒಂದು ನೃತ್ಯಕ್ಕೋ, ಕವನ ವಾಚನಕ್ಕೋ, ಭಾಷ­ಣಕ್ಕೋ ಅವಕಾಶ ಸಿಗುತ್ತದೆ. ಆಯೋಜಕರ ಹಾಗೂ ಕಾರ್ಯಕ್ರಮದಲ್ಲಿ ಏನಾದರೂ ಪ್ರದರ್ಶನ ನೀಡುತ್ತಿರುವವರ ಆಪ್ತರು ಪ್ರೇಕ್ಷಕರು!

ಇನ್ನೊಂದು ದೊಡ್ಡ ಕಾರ್ಯಕ್ರಮ ಸಾಹಿತ್ಯ ಸಮ್ಮೇಳನ! ಇದೂ ದೊಡ್ಡದ್ದೇನನ್ನೂ ಸಾಧಿಸುತ್ತಿಲ್ಲ. ತಡವಾಗಿ ಪ್ರಾರಂಭ­ವಾಗುವ ಉದ್ಘಾಟನಾ ಕಾರ್ಯಕ್ರಮ, ಊಟಕ್ಕಾಗಿ ನೂಕಾಟ, ತಡವಾಗಿ ಮುಗಿಯುವ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯ­ಕ್ರಮ ನೀಡಲು ಮಧ್ಯರಾತ್ರಿಯವರೆಗೆ ಕಾದು ಕುಳಿತುಕೊಳ್ಳುವ ಪುಟ್ಟ ಮಕ್ಕಳು, ಕೊನೆಯ ದಿನ ಮಂಡನೆಯಾಗುವ ಸಮ್ಮೇ­ಳನದ ನಿರ್ಣಯಗಳು; ಎಲ್ಲಾ ಒಂದೇ ರೀತಿ! ಅಲ್ಲಿ ಮಂಡ­ನೆ­ಯಾಗುವ ನಿರ್ಣಯಗಳನ್ನು ಕಾರ್ಯಗತಗೊಳಿಸುವವರು ಯಾರೆಂಬುದು ಮಾತ್ರ ಚರ್ಚೆಯಾಗುವುದಿಲ್ಲ. ನಮ್ಮ ಸಮ್ಮೇ­ಳನಗಳ ಸ್ವರೂಪದಲ್ಲಿ ಒಂದಷ್ಟೂ ಬದಲಾವಣೆಯಾಗಲಿಲ್ಲ!

ನಮ್ಮ ಸಮ್ಮೇಳನಗಳ ಸ್ವರೂಪ ಬದಲಾಗಬೇಕಿದೆ! ಅವು ಕೇವಲ ಸೃಜನಶೀಲ ಸಾಹಿತ್ಯದ ಜಾತ್ರೆಯಾಗಬಾರದು. ಅವು ಕನ್ನಡದ ಹಬ್ಬವಾಗಬೇಕು. ಕನ್ನಡ ನಾಡಿನಲ್ಲಿರುವ ವೈವಿಧ್ಯ­ಗಳನ್ನು, ಸಂಸ್ಕೃತಿಯ ಸೊಗಡನ್ನು ಪ್ರದರ್ಶಿಸುವ ಹಬ್ಬವಾಗ­ಬೇಕು. ಜನಸಾಮಾನ್ಯರು ಸಮ್ಮೇಳನಕ್ಕೆ ಬರುವಂತೆ ಆಗಬೇಕು. ಜನಸಾಮಾನ್ಯರು ಯಾವಾಗ ಬರುತ್ತಾರೆ ಹೇಳಿ? ಒಂದು ಕುತೂಹಲ ಇರಬೇಕು. ಇನ್ನೊಂದು ತನ್ನ ನಿತ್ಯ ಜೀವನಕ್ಕೆ ಉಪ­ಯೋಗ, ಲಾಭ ಆಗುವಂತಹ ಏನಾದರೂ ಆಕರ್ಷಣೆ ಇರ­ಬೇಕು. ಗಮನಿಸಿ, ಸಮ್ಮೇಳನದ ಸಭೆಗಿಂತ ಹೆಚ್ಚು ಜನ ಪುಸ್ತಕ ಮಾರಾಟ ಮಳಿಗೆಯಲ್ಲಿರುತ್ತಾರೆ! ಇಂತಹ ಮಳಿಗೆಗಳು ಪುಸ್ತಕ ಹಾಗೂ ಸಿ.ಡಿ.ಗಳಿಗೆ ಸೀಮಿತವಾಗದೇ ಕರ್ನಾಟಕದ ಹಲವಾರು ಸೃಜನಶೀಲ ಉತ್ಪನ್ನಗಳ, ಗುಡಿಕೈಗಾರಿಕೆಗಳ ಹಾಗೂ ಕನ್ನಡ ತಂತ್ರಾಂಶಗಳ ಪ್ರದರ್ಶನ ಮತ್ತು ಮಾರಾಟದ ಕೇಂದ್ರವಾಗಲಿ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೊನೆಯ ಕಾರ್ಯಕ್ರಮ­ಗಳಾಗಿರದೆ ಅವುಗಳಿಗೂ ಪ್ರಾಮುಖ್ಯ ಸಿಗಲಿ. ಸಮ್ಮೇಳನಗಳಲ್ಲಿ ಆಗಬೇಕಾದ ಬದಲಾವಣೆ­ಗಳಿಗೆ ಮೂಡು­ಬಿದಿರೆಯ ‘ಆಳ್ವಾಸ್ ನುಡಿಸಿರಿ’­ಯನ್ನೇ ಒಂದು ಮಾದರಿಯನ್ನಾಗಿ ತೆಗೆದು­ಕೊಳ್ಳ­ಬಹುದು.
  
ಭಾಷೆ ನಶಿಸಿ ಹೋಗುವುದು ದಿನನಿತ್ಯದ ವ್ಯವ­ಹಾರಗಳಲ್ಲಿ ಅದರ ಬಳಕೆ ಸಾಧ್ಯವಿಲ್ಲ ಹಾಗೂ ಅಗತ್ಯವಿಲ್ಲ ಎಂದಾದಾಗ. ಭಾಷೆಯ ಬಳಕೆ ಸಾಧ್ಯವಿಲ್ಲದ ಹಂತ ಬಂದಾಗ ಪರ್ಯಾಯ ಭಾಷೆ ಹುಟ್ಟುತ್ತದೆ ಅಥವಾ ಬೇರೊಂದು ಭಾಷೆ ಬಳಕೆಗೆ ಬರುತ್ತದೆ. ಹೊಸ ಭಾಷೆಯ ಬಳಕೆ ರೂಢಿಯಾಗುತ್ತಿದ್ದಂತೆ ಹಳೆ ಭಾಷೆ ‘ಅಗತ್ಯ­ವಿಲ್ಲ’ ಎಂಬ ಸ್ಥಿತಿಗೆ ಬರುತ್ತದೆ. ಕನ್ನಡ ಈ ಸ್ಥಿತಿಯ ಹತ್ತಿರ ತಲು­ಪುವ ಸಾಧ್ಯತೆಗಳೇ ಹೆಚ್ಚಾಗಿವೆ.

ಮೊದಲನೆಯದಾಗಿ ತಂತ್ರ­ಜ್ಞಾನ ಅಪಾರವಾದ ಬಳಕೆಯ ಈ ಕಾಲದಲಿ, ಕನ್ನಡದಲ್ಲಿ ಅದರ ಬಳಕೆ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಹೊಸತನ್ನು ಕಲಿಯುವ ಅನಿವಾರ್ಯ ಬರುತ್ತದೆ. ಉದಾಹರಣೆಗೆ ಮೊಬೈಲ್ ತೆಗೆದು­ಕೊಳ್ಳಿ. ಇವತ್ತು ಮೊಬೈಲ್ ಇಲ್ಲದ ವ್ಯಕ್ತಿಯೇ ಇಲ್ಲವೆನ್ನ­ಬಹುದು. ಮೊಬೈಲ್ ಬಳಸ­ಬೇಕಾ­ದರೆ ಇಂಗ್ಲಿಷ್ ಕೊಂಚ ಗೊತ್ತಿರಬೇಕು. ಅನಕ್ಷರಸ್ಥ­ನಾದರೂ ಮೊಬೈಲ್ ಬಳಕೆಗಾಗಿ ಒಂದಷ್ಟು ಇಂಗ್ಲಿಷ್ ಕಲಿತೇ ಕಲಿಯು­ತ್ತಾನೆ. ಅಲ್ಲಿಗೆ ಕನ್ನಡ ಕಲಿ­ಯುವುದು ಅನಿವಾರ್ಯ­ವಲ್ಲ­ದಿದ್ದರೂ ನಾಲ್ಕಕ್ಷರ ಎ ಬಿ ಸಿ ಡಿ ಕಲಿಯುವುದು ಅನಿವಾರ್ಯ­ವಾ­ಯಿತು! ವ್ಯಾಪಾರಿಯೊಬ್ಬ ಅಂಗಡಿ­ಯಲ್ಲಿ ಲೆಕ್ಕಾಚಾರ ಸಲುವಾಗಿ ಕಂಪ್ಯೂಟರ್ ಅಳವಡಿಸಿ­ಕೊಂಡರೂ ಅದೇ ಕಥೆ­ಯಾ­ಗುತ್ತದೆ. ಮುಂದೆ ತನ್ನ ಮಕ್ಕಳಿಗೆ ಸಹಜವಾಗಿಯೇ ‘ಇಂಗ್ಲಿಷ್ ಸರಿಯಾಗಿ ಕಲಿ’ ಎಂಬ ಸಲಹೆ ಮನೆಯಲ್ಲೇ ಪ್ರಾರಂಭ ಮಾಡುತ್ತಾನೆ. ಈಗಾಗಲೇ ಸಾಮಾನ್ಯ ಜನರ ಮಾತು­ಕತೆಗಳಲ್ಲಿ ಅರ್ಧದಷ್ಟು ಇಂಗ್ಲಿಷ್‍ ಶಬ್ದಗಳು ಬಳಕೆ­­ಯಲ್ಲಿವೆ. ಕನ್ನಡ ಕಲಿಯುವ ಅನಿವಾರ್ಯ ಕಡಿಮೆ­ಯಾಗುತ್ತಾ ಹೋಗುತ್ತಿದೆ!

ಕನ್ನಡ ಸಾಹಿತ್ಯ ಲೋಕ ಕನ್ನಡದಲ್ಲಿ ವಿಚಾರ ಸಾಹಿತ್ಯ ಹಾಗೂ ತಂತ್ರಾಂಶಗಳ ಅಭಿವೃದ್ಧಿಯ ಕಡೆಗೆ ಅಸಡ್ಡೆ ತೋರುತ್ತಾ ಬಂದಿದೆ. ಕನ್ನಡ ತಂತ್ರಾಂಶದ ಪಿತಾಮಹ ಕೆ.ಪಿ.ರಾವ್ ಅವರು ಅಧ್ಯಕ್ಷರಾಗಿದ್ದ ಸಮ್ಮೇಳನದಲ್ಲೂ ಆಯೋ­ಜ­ಕರು ಕನ್ನಡದಲ್ಲಿ ವಿವಿಧ ವಿಷಯಗಳ ಸಾಹಿತ್ಯದ ಕುರಿತು ಅಥವಾ ತಂತ್ರಜ್ಞಾನದಲ್ಲಿ ಕನ್ನಡದ ಕುರಿತು ಒಂದು ಚರ್ಚೆಯನ್ನೂ ಆಯೋಜಿಸಿರಲಿಲ್ಲ! ಅವರ ಜೊತೆ ನಡೆದ ಸಂವಾದದಲ್ಲೂ ತಂತ್ರಾಂಶ ಅಭಿವೃದ್ಧಿಯ ಅವರ ಅನುಭವಗಳ ಕುರಿತು ಒಂದೆ­ರಡು ಪ್ರಶ್ನೆಗಳು ಇತ್ತಾದರೂ ತಾಂತ್ರಿಕತೆಯ ಕುರಿತಾಗಿ ವಿಸ್ತೃತ ಚರ್ಚೆಯಾಗಲಿಲ್ಲ!

ಭಾಷೆ, ಚರಿತ್ರೆಯನ್ನು ಭವಿಷ್ಯದ ಜೊತೆ ಬೆಸೆಯುವ ಸಾಧನ. ಅದು ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆ­ಮಾರಿಗೆ ತಲುಪಿಸುವ ವಾಹನ. ಆದರೆ ಭವಿಷ್ಯವನ್ನು ಕಟ್ಟಿ­ಕೊಳ್ಳು­ವುದಕ್ಕೆ ನನ್ನ ನುಡಿಯನ್ನು ಕಲಿಯುವ ಅಗತ್ಯವಿಲ್ಲ ಹೊಸ­ತೊಂದು ಭಾಷೆಯ ಅಗತ್ಯವಿದೆ ಎಂಬ ಪರಿಸ್ಥಿತಿಯಿದ್ದರೆ? ಇವತ್ತು ಕಂಪ್ಯೂಟರಿನಲ್ಲಿ, ಮೊಬೈಲ್‌ಗಳಲ್ಲಿ ಕನ್ನಡವನ್ನು ಬಳ­ಸುತ್ತಿರುವವರಲ್ಲಿ ಹೆಚ್ಚಿನವರು ಭಾಷಾಭಿಮಾನದಿಂದ ಬಳ­ಸು­ತ್ತಿದ್ದಾರೆಯೇ ಹೊರತು ‘ಅನಿವಾರ್ಯ’ದಿಂದಲ್ಲ ಎಂಬುದು ನನ್ನ ಅಭಿಪ್ರಾಯ! ಅದು ಅನಿವಾರ್ಯವೇ ಆಗಿದ್ದರೆ ಸುಮಾರು ನಾಲ್ಕು ಕೋಟಿಗೂ ಅಧಿಕ ಸ್ಮಾರ್ಟ್‌ಫೋನ್‌ಗಳು ಬಳಕೆ­ಯಲ್ಲಿ­ರುವ ಕರ್ನಾಟಕದಲ್ಲಿ ಕನ್ನಡ ತಂತ್ರಾಂಶಗಳ ಇಳಿಕೆಗಳ (download) ಸಂಖ್ಯೆ ಕೇವಲ ಒಂದೆರಡು ಲಕ್ಷಗಳಷ್ಟೇ ಇರುತ್ತಿರಲಿಲ್ಲ!

ಭವಿಷ್ಯಕ್ಕೆ  ವಿವಿಧ ವಿಷಯಗಳ ಕುರಿತ ಸಾಹಿತ್ಯ ಬೇಕು; ಚರಿತ್ರೆಯ, ಸಂಸ್ಕೃತಿಯ ಬೆಸುಗೆಗೆ ಸೃಜನಶೀಲ ಸಾಹಿತ್ಯ ಬೇಕು. ನಮ್ಮ ನಾಡಗೀತೆ ಹಾಗೂ ಅಂತಹ ಇನ್ನೂ ಅನೇಕ ಕೃತಿಗಳು ಕನ್ನಡ ನಾಡಿನ ಬಗ್ಗೆ, ಭಾಷೆಯ ಬಗ್ಗೆ ಅಭಿಮಾನ ಬೆಳೆಸುವ ಸಾಧನಗಳಾಗಬೇಕು.

ಶಾಲೆಗಳಲ್ಲಿ ಪ್ರಾರ್ಥನೆಯ ಹೊತ್ತಿಗೆ, ಕನ್ನಡ ರಾಜ್ಯೋ­ತ್ಸವದ ಆಚರಣೆಗಳಿಗೆ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನ­ದಂತಹ ಕೆಲವೇ ಸಮಾರಂಭಗಳಿಗೆ ಸೀಮಿತವಾದ ನಾಡಗೀತೆ­ಯನ್ನು ಪೂರ್ತಿಯಾಗಿ ಹಾಡಿದರೆ ಆಗುವ ನಷ್ಟ­ವೇನೆಂದು ಅರ್ಥವಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಸಮಾ­ರಂಭ­ಗಳಿಗೆ ತಡವಾಗಿ ಬರುವ ರಾಜಕಾರಣಿಗಳಿಗೆ, ಅಧಿ­ಕಾರಿಗಳಿಗೆ ಹಾಗೂ ಅತಿಥಿ ಮಹಾಶಯರಿಗೆ ಕಾಯುವ ಹೊತ್ತಿ­ನಲ್ಲಿ ನಾಡ­ಗೀತೆಯನ್ನು ಪೂರ್ತಿಯಾಗಿ ಹಾಡಬಹುದು. ಹಾಗೂ ಆ ಸಮಯದಲ್ಲಿ ಕನ್ನಡತನ ಉಳಿಸುವ ಬೆಳೆಸುವ ಕೆಲಸ ಮಾಡಬಹುದು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT