ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ದಿನಗಳು...!

Last Updated 27 ಮೇ 2016, 19:50 IST
ಅಕ್ಷರ ಗಾತ್ರ

ಆ ದಿನಗಳೆಂದಾಕ್ಷಣ ಬಾಲ್ಯದ ದಿನಗಳು ನೆನಪಾಗುತ್ತವೆ. ನಾನಾಗ ಏಳನೇ ತರಗತಿಯಲ್ಲಿಬೇಕು. ಅಂದಿನ ಘಟನೆಗಳು ಇನ್ನೂ ಮಾಸಿಲ್ಲ. ಶಾಲೆಯ ಮಧ್ಯಂತರ ವಿರಾಮದ ವೇಳೆ ತರಗತಿಯ ಮೂಲೆಯಲ್ಲಿ ಹುಡುಗಿಯರ ಗುಂಪೊಂದು ಗಂಭೀರ ಚರ್ಚೆಯಲ್ಲಿ ತೊಡಗಿತ್ತು.  ಪಿಸುಧ್ವನಿ, ಮುಸಿನಗು,  ನಿಗೂಢ ಭಾಷೆ... ಏನೊಂದು ಅರ್ಥವಾಗುತ್ತಿರಲಿಲ್ಲ.

ಅದೇ ವೇಳೆಗೆ ಸರಿಯಾಗಿ ಸಹಪಾಠಿ ಹುಡುಗಿಯೊಬ್ಬಳು ಅಲ್ಲಿಗೆ ನುಗ್ಗಿದಳು. ಅನಿರೀಕ್ಷಿತ ಅತಿಥಿಯ ಆಗಮನದಿಂದ ಗುಂಪು ಮಾತು ನಿಲ್ಲಿಸಿ ಮೌನವಾಯಿತು.  ಆಕಸ್ಮಿಕವಾಗಿ ನುಗ್ಗಿ ಬಂದ ಹುಡುಗಿಗೆ ಅಲ್ಲಿ ಏನು ನಡೆಯುತ್ತಿದೆ ಎಂದು ತಕ್ಷಣಕ್ಕೆ ಅರ್ಥವಾಗಲಿಲ್ಲ. ಅರ್ಥವಾಗುವ ವಯಸ್ಸೂ ಅವಳದ್ದಲ್ಲ. ಅವಳು ಕೂಡ ಅದೇ ಕ್ಲಾಸಿನ ಹುಡುಗಿಯಾದರೂ ಇನ್ನೂ ಚಿಕ್ಕವಳು. 

ಗುಂಪಿನಲ್ಲಿದ್ದ ಹುಡುಗಿಯರಿಗೆ ತಾವು ಚರ್ಚಿಸುತ್ತಿದ್ದ ಗುಟ್ಟಿನ ವಿಷಯವನ್ನು ಯಾರಾದರೂ ಕೇಳಿಸಿಕೊಂಡಾರು ಎಂಬ ಆತಂಕ. ಉಳಿದ ಸಹಪಾಠಿಗಳಿಗಿಂತ ತಮಗೆ ಹೆಚ್ಚಿಗೆ ಗೊತ್ತು ಎಂಬ ಹಮ್ಮು ಅವರಲ್ಲಿತ್ತು. ಒಂದೇ ತರಗತಿಯಲ್ಲಿದ್ದರೂ ಈ ಹುಡುಗಿಯರ ಗುಂಪು  ಇತರ ಸಹಪಾಠಿಗಳೊಂದಿಗೆ ಅಂತರ ಕಾಯ್ದುಕೊಂಡಿತ್ತು.

ಆ ಗುಂಪಿನಲ್ಲಿದ್ದವರೆಲ್ಲ ಮೈನೆರೆದಿದ್ದರು.  ಹೀಗಾಗಿ ಅವರು ಎಲ್ಲವನ್ನೂ ಬಲ್ಲ ಅನುಭವಿಗಳಂತೆ ವರ್ತಿಸುತ್ತಿದ್ದರು. ಇನ್ನೂ ಋತುಮತಿಯರಾಗದ ಹುಡುಗಿಯರನ್ನು  ಅಸಡ್ಡೆಯಿಂದ ಚಿಕ್ಕ ಮಕ್ಕಳಂತೆ ಕಾಣುತ್ತಿತ್ತು.

ಕೆಲವು ದಿನಳಲ್ಲಿಯೇ ನಾವೂ ನಮ್ಮ, ನಮ್ಮಲಿ  ಅವರಂತೆಯೇ ನಿಗೂಢ ಭಾಷೆ ಬಳಸಲು ಶುರು ಮಾಡಿ ನಾವೂ ದೊಡ್ಡವರಾಗಿದ್ದೇವೆ ಎಂಬ ಸಂದೇಶ ರವಾನಿಸಿದ್ದೆವು. 
ಇಂಥ ಪರಿಸ್ಥಿತಿಯಲ್ಲಿ ಬೆಳೆದ ನಾವು ಕಾಲೇಜು ಮೆಟ್ಟಿಲು ಏರಿದ ನಂತರವೂ ಮುಕ್ತವಾಗಿ ಮುಟ್ಟಿನ ಬಗ್ಗೆ ಮಾತನಾಡಲು ಸಾಧ್ಯವಾಗಲಿಲ್ಲ. ಕಾಲೇಜಿಗೆ ಬಂದಾಗ ನಾವು ಸಾಕಷ್ಟು ಬದಲಾಗಿದ್ದೆವು. ತಿಳಿವಳಿಕೆ ಜೊತೆಗೆ ಧೈರ್ಯವೂ ಬಂದಿತ್ತು. ಕ್ರಾಂತಿಕಾರಿಗಳಂತೆ ವರ್ತಿಸುತ್ತಿದ್ದೆವು.  ಆದರೂ... ಮುಟ್ಟಿನ ವಿಷಯ ಬಂದಾಗ ಮಾತ್ರ ಅದೇ ಹಳೆಯ ಅಳುಕು, ನಾಚಿಕೆ ಮಾತ್ರ ಹೋಗಿರಲಿಲ್ಲ. 

ಆಗ ನಮಗೆ ಒಂದು ವಿಷಯ  ಅರ್ಥವಾಗಿತ್ತು. ಎಲ್ಲವನ್ನೂ ಬದಲಾಯಿಸುವುದು ನಮ್ಮಿಂದ ಸಾಧ್ಯವಿಲ್ಲ. ನಾವು ಎಷ್ಟೇ ಆಧುನಿಕತೆ ಬೆಳಸಿಕೊಳ್ಳಲಿ ಕೆಲವು ವಿಷಯಗಳಲ್ಲಿ ನಾವೆಣೆಸಿದಷ್ಟು ಮುಕ್ತವಾಗಿ, ಸ್ವಚ್ಛಂದವಾಗಿ ವ್ಯವಹರಿಸುವುದು ಸಾಧ್ಯವಿಲ್ಲ ಎಂಬುದು ಮನದಟ್ಟಾಗಿತ್ತು.  

ಸಂಕೋಚದ ವಿಷಯ: ಕಾಲೇಜಿನಲಿದ್ದರೂ ಸ್ತನಗಳ ಬಗ್ಗೆ ಮಾತನಾಡಲೂ ನಮಗೆ ಸಂಕೋಚವಾಗುತಿತ್ತು. ಅಪ್ಪಿತಪ್ಪಿ  ನಾವೆಂದೂ  ಮಾತೃಭಾಷೆಯಲ್ಲಿ ‘ಸ್ತನ’ ಅಥವಾ ‘ಮೊಲೆ’ ಎಂಬ ಶಬ್ದ ಬಳಸುತ್ತಿರಲಿಲ್ಲ. ‘ಶಿಶ್ನ’, ‘ಸಂಭೋಗ’ದಂಥ ಅಶ್ಲೀಲ ಶಬ್ದಗಳನ್ನು ಬಳಸುವಾಗ ಆಗುವ ಮುಜುಗರವೇ ‘ಮೊಲೆ’ ಎಂಬ ಪದ ಬಳಸುವಾಗಲೂ ಆಗುತಿತ್ತು.  ಅದೇ ರೀತಿ ಹೆಣ್ಣಿನ ತಿಂಗಳ ಮುಟ್ಟು ಕೂಡ ಮುಕ್ತವಾಗಿ ಚರ್ಚಿಸದ ರಹಸ್ಯ ವಿಷಯವಾಗಿ ಉಳಿದುಕೊಂಡಿತ್ತು.

ನನ್ನ ಮಾತೃಭಾಷೆ ತೆಲುಗಿನಲ್ಲಿ ‘ಮುಟ್ಟು’  ‘ತಿಂಗಳ ಋತುಸ್ರಾವ’ ಅಥವಾ ‘ಋತುಚಕ್ರ’ಕ್ಕೆ ಏನೆನ್ನುತ್ತಾರೆ ಎಂಬ ಸಣ್ಣ ಸಂಗತಿಯೂ ಗೊತ್ತಿರಲಿಲ್ಲ. ಅಷ್ಟೇ ಏಕೆ,  ಇಂದಿಗೂ ನನಗದು  ಅಪರಿಚಿತ ಶಬ್ದವೇ.

ಇಂಗ್ಲಿಷ್‌ನಲ್ಲಿ Monthly Cycle, Manustrual Cycle, Periods – ಈ ಶಬ್ದಗಳಿಗೆ ತೆಲುಗಿನಲ್ಲಿ ಏನು ಅರ್ಥ  ಎಂಬ ಕುತೂಹಲವಿತ್ತು.  ಗೂಗಲ್‌ನಲ್ಲಿ ಜಾಲಾಡಿದಾಗ   ‘ಋತುಕ್ರಮಂ’ ಅಥವಾ ‘ಋತುಸ್ರಾವಂ’ ಎಂಬ ಶಬ್ದ ಸಿಕ್ಕವು.

ಋತುಚಕ್ರ ಅಥವಾ ಋತುಸ್ರಾವವನ್ನು ಹಳ್ಳಿಗಳ ಆಡುಭಾಷೆಯಲ್ಲಿ ‘ಮುಟ್ಟು’ ಇಲ್ಲವೇ ‘ಅಂಟು’ ಎಂದೂ ಕರೆಯುತ್ತಾರೆ. ಹೀಗೆಂದರೆ ಮಡಿ, ಮೈಲಿಗೆ ಎಂದರ್ಥ. ಹೆಣ್ಣು  ಸ್ರವಿಸಲು ಆರಂಭಿಸುತ್ತಲೇ ಆಕೆ ಅಸ್ಪೃಶ್ಯಳಾಗಿಬಿಡುತ್ತಾಳೆ. ಇದು ಇನ್ನೊಂದು ಬಗೆಯ ಅಸ್ಪೃಶ್ಯತೆ.

ರಟ್ಟಾಗುವಂತಿರಲಿಲ್ಲ ಮುಟ್ಟಿನ ಗುಟ್ಟು
ಮುಟ್ಟಿನ ಬಗ್ಗೆ ನಿಸ್ಸಂಕೋಚವಾಗಿ ಚರ್ಚಿಸಲು ಮಹಿಳೆಯರು ಹಿಂಜರಿಯುತ್ತಿದ್ದ ಕಾಲವದು. ಅವರಿಗಿದು ಸಂಕೋಚದ ವಿಚಾರವಾಗಿತ್ತು.  ಅಪ್ಪಿತಪ್ಪಿ ಈ ವಿಷಯ ಪ್ರಸ್ತಾಪವಾದರೆ ನಾಚಿ ನೀರಾಗುತ್ತಿದ್ದರು. ಹೀಗಾಗಿ ಮಹಿಳೆಯರಿಗೆ ಮುಟ್ಟಿನ ವಿಷಯವನ್ನು ಮುಚ್ಚಿಟ್ಟೇ ರೂಢಿ.

ನಮ್ಮ ಓರಗೆಯ ಹುಡುಗಿಯೊಬ್ಬಳು ಋತುಮತಿಯಾದಳು ಎಂದರೆ ಅದು ನಮಗೆ ಎಲೆ, ಅಡಿಕೆಯಂತೆ ಬಾಯಿಗೆ ಆಹಾರವಾಗುತಿತ್ತು. ನಾವು ಗೆಳತಿಯರೆಲ್ಲ  ಆ ಬಗ್ಗೆ ಚರ್ಚಿಸಲು ‘ಸಾಂಕೇತಿಕ ಭಾಷೆ’ ಕಂಡುಕೊಂಡಿದ್ದೆವು. ಆ ಬಗ್ಗೆ ಮಾತನಾಡುವಾಗಲೆಲ್ಲ ಯಾರಿಗೂ ಅರ್ಥವಾಗದ ‘ಕೋಡ್‌ ಭಾಷೆ’ಯಲ್ಲಿಯೇ ವ್ಯವಹರಿಸುತ್ತಿದ್ದೆವು.
ನನಗಿನ್ನೂ ನೆನಪಿರುವಂತೆ ಹುಡುಗಿ ಮೈನೆರೆದು ಪ್ರತಿ ತಿಂಗಳು  ಹೊರಗೆ ಕೂಡಲು ಆರಂಭಿಸಿದಳು ಎಂದರೆ ಮನೆಯಲ್ಲೂ ಹೊಸ ಶಬ್ದ ಭಂಡಾರದ ಬಳಕೆ ಆರಂಭವಾಗುತಿತ್ತು. ಮುಟ್ಟಾದ ಯುವತಿ ‘ನಾನು ಹೊರಗಾಗಿದ್ದೇನೆ’ ಎಂದು ಅಮ್ಮ ಇಲ್ಲವೇ ಅಕ್ಕನಿಗೆ ಸೂಚ್ಯವಾಗಿ ಹೇಳುತ್ತಿದ್ದಳು. 

‘ಹೊರಗಾಗಿದ್ದೇನೆ’ ಎಂದು ತೆಲುಗಿನಲ್ಲಿ ಸುಲಭವಾಗಿ ಹೇಳಬಹುದಾದ ಸಂಗತಿಯನ್ನು ಇಂಗ್ಲಿಷಿನಲ್ಲಿ  ಹೇಳುವುದು ಹೇಗೆ ಎಂದು ಆಗಾಗ ಯೋಚಿಸುತ್ತೇನೆ.  ‘ಐ ಹ್ಯಾವ್‌ ಬಿಕಮ್‌ ಔಟ್‌ಸೈಡ್‌’ ಅಥವಾ ‘ಐ ಆ್ಯಮ್‌ ಔಟ್‌ಸೈಡ್‌’ ಎಂದರೆ  ಬಹಳ ವಿಚಿತ್ರವಾಗಿ ಕಾಣಿಸುತ್ತದೆ ಅಲ್ಲವ?

ಕೆಲವರು ಮುಟ್ಟನ್ನು  ‘ತಿಂಗಳ ರಜೆ’ ಎಂದು  ಕರೆದರೆ, ಇನ್ನೂ ಕೆಲವರು ‘ನಾನು ಯಾರನ್ನೂ ಮುಟ್ಟಿಸಿಕೊಳ್ಳುವಂತಿಲ್ಲ’, ‘ಎಲ್ಲಿಗೂ ಬರುವಂತಿಲ್ಲ’ ಎಂದು  ಸೂಚ್ಯವಾಗಿ ತಿಳಿಸುತ್ತಾರೆ.

ಹೆಣ್ಣುಮಗಳೊಬ್ಬಳು ತನಗೆ ಬೆನ್ನುನೋವು ಅಥವಾ ಹೊಟ್ಟೆನೋವು  ಅಂದರೆ ಸಮಸ್ಯೆ ಏನು ಎಂಬುದು  ಹಿರಿಯರಿಗೆ ಅರ್ಥವಾಗುತಿತ್ತು. ಅದೇ ಹೊಸದಾಗಿ ಮದುವೆಯಾದ ಹೆಣ್ಣುಮಗಳು ‘ಮುಟ್ಟು ನಿಂತಿದೆ’ ಅಥವಾ ‘ಎರಡು ತಿಂಗಳಿಂದ ಹೊರಗಾಗಿಲ್ಲ’ ಎಂದರೆ ಆಕೆ ಬಸಿರಾಗಿದ್ದಾಳೆ ಎಂದೇ ಅರ್ಥ.  

ಹಾವು ಮೆಟ್ಟಿದಂತೆ ..!
ಹದಿ ಹರೆಯದ ಹುಡುಗಿಯರು ಮೊದಲ ಬಾರಿಗೆ ತಮ್ಮ ಪ್ಯಾಂಟಿ ಅಥವಾ ಬಟ್ಟೆಯಲ್ಲಿ ರಕ್ತದ ಕಲೆ ಕಾಣುತ್ತಲೇ ಹಾವು ಮೆಟ್ಟಿದವರಂತೆ ಬೆಚ್ಚಿ ಬೀಳುತ್ತಾರೆ. ಸಾವು ಎದೆ ಮೇಲೆ ಬಂದು ಕುಳಿತಂತೆ ಪಾತಾಳಕ್ಕೆ ಕುಸಿಯುತ್ತಾರೆ. ತಾವು ಏನೋ ಮಹಾ ಅಪರಾಧ ಮಾಡಿರಬಹುದೆಂದು ಭಾವಿಸಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.

ಹಠಾತ್ತನೇ ತಮ್ಮಲ್ಲಾದ ಬದಲಾವಣೆಯಿಂದ ಭಯ ಬೀಳುತ್ತಾರೆ. ತಮ್ಮ ಸ್ಥಿತಿಯನ್ನು ಯಾರ ಮುಂದೆಯೂ ಹೇಳಿಕೊಳ್ಳಲಾಗದೆ ಚಡಪಡಿಸುತ್ತಾರೆ.  ಖಿನ್ನತೆಯಿಂದ ಕುಗ್ಗಿ ಹೋಗುತ್ತಾರೆ. ಆಗ ನಿಜವಾದ ಒಂಟಿತನ ಕಾಡತೊಡಗುತ್ತದೆ.  ಕತ್ತಲು ಕೋಣೆಯಲ್ಲಿ ಒಬ್ಬಳೆ ಮೊಳಕಾಲ ಸಂಧಿಯಲ್ಲಿ ಮುಖವಿಟ್ಟು  ಸಾಕೆನಿಸುವಷ್ಟು ಕಣ್ಣೀರು ಹಾಕುತ್ತಾಳೆ.
ಅಲ್ಲಿಯವರೆಗೆ ಕುಂಟಾಬಿಲ್ಲೆಯಾಡಿಕೊಂಡು ತುಂಟಾಟವಾಡಿಕೊಂಡಿರುತ್ತಿದ್ದ  ಹುಡಗಿಯರು ಗಂಭೀರವಾಗುತ್ತಾರೆ.   ನಿನ್ನೆ, ಮೊನ್ನೆಯವರೆಗೆ ಎಲ್ಲರೊಂದಿಗೆ ಹುಡಗಾಟಿಕೆಯಾಡುತ್ತ ಚೆಲ್ಲು, ಚೆಲ್ಲಾಗಿ ವರ್ತಿಸುತ್ತಿದ್ದವರು ಇದ್ದಕ್ಕಿಂದಂತೆಯೇ ದೊಡ್ಡವರಾಗಿಬಿಡುತ್ತಾರೆ.

ಹೆಣ್ಣಿನ ಕಣ್ಣೀರಿಗೆ ಹೊಣೆ ಯಾರು?
ಹದಿವಯಸ್ಸಿಗೆ ಕಾಲಿಡುವ ಬಾಲಕಿ ಮುಂದೆ ತನ್ನ ದೇಹದಲ್ಲಿ ಆಗಬಹುದಾದ  ಬದಲಾವಣೆಗೆ ಮಾನಸಿಕವಾಗಿ ಸಿದ್ಧಳಾಗಿರುವುದಿಲ್ಲ. ತಾನು ‘ಋತುಮತಿ’ಯಾಗಿದ್ದೇನೆ ಇಲ್ಲವೇ  ‘ದೊಡ್ಡವಳಾಗಿದ್ದೇನೆ’ ಎಂಬ ಕಲ್ಪನೆಯೇ ಆಕೆಗೆ ಇರುವುದಿಲ್ಲ.

ಅಮ್ಮ ಅಥವಾ ಅಕ್ಕನಿಗೆ ಹೇಳಲು ಮುಜುಗರದ ಜತೆಗೆ ಹೆದರಿಕೆ. ತನಗೆ ಏನೋ ಆಗಿಬಿಟ್ಟಿದೆ ಎಂಬ ಭಯ. ಅಣ್ಣ, ತಮ್ಮಂದಿರಲ್ಲೂ ಹಂಚಿಕೊಳ್ಳುವ ವಿಚಾರವಂಥೂ ಅಲ್ಲವೇ ಅಲ್ಲ. ಗೆಳತಿಯರಲ್ಲಿ ಹೇಳಿಕೊಳ್ಳಲು ಸಂಕೋಚ. ಚೂಟಿಯಾಗಿದ್ದ ಹುಡುಗಿ ಸಂಕೋಚದ ಮುದ್ದೆಯಾಗುತ್ತಾಳೆ.

ಅವಳ ಈ ಕನಿಕರದ ಸ್ಥಿತಿಗೆ ಕಾರಣರಾರು?
ಮನೆಯಲ್ಲಿ ಹಿರಿಯರೆನಿಸಿಕೊಂಡ ಅಮ್ಮ, ಅಜ್ಜಿ, ಅಕ್ಕ ಅಥವಾ ಸಂಬಂಧಿಗಳಾರೂ ಆಕೆಗೆ ಮುಂಚಿತವಾಗಿ ಈ ಬಗ್ಗೆ ತಿಳಿವಳಿಕೆ ನೀಡಿರುವುದಿಲ್ಲ. ಹೀಗಾಗಿ ಹೆಚ್ಚಿನ ಹುಡುಗಿಯರು ತಮ್ಮ ಒಳ ಉಡುಪು ಮತ್ತು ಬಟ್ಟೆಯಲ್ಲಿ ರಕ್ತದ ಕಲೆಗಳನ್ನು ಕಂಡ ತಕ್ಷಣ ಅಪರಾಧಿಗಳಂತೆ  ವರ್ತಿಸತೊಡಗುತ್ತಾರೆ. ಅಂತರ್ಮುಖಿಗಳಾಗುತ್ತಾರೆ. ಏನೊಂದೂ ತೋಚದೆ ಗಾಬರಿ ಬೀಳುತ್ತಾರೆ.  

ಹಿರಿಯರಾದವರು ಮನೆಯ ಹುಡುಗಿ ಹದಿವಯಸ್ಸಿಗೆ ಕಾಲಿಡುತ್ತಲೇ   ಆಕೆಯಲ್ಲಿ ಆಗಬಹುದಾದ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಮುಂಚಿತವಾಗಿ ತಿಳಿ ಹೇಳಬೇಕು. ಸ್ನೇಹಿತರ ರೀತಿ  ಮುಕ್ತವಾಗಿ ಚರ್ಚಿಸಬೇಕು.

ಹುಡುಗಿಯರ ಕಷ್ಟ ಉಳಿದವರಿಗೆ ಹೇಗೆ ಗೊತ್ತಾಗಬೇಕು?
ಈಗ ಅಜ್ಜಿಯಾಗಿರುವ ನನ್ನ ಸಹೋದರಿ ಋತುಮತಿಯಾದಾಗಿನ ಅನುಭವ ಕೂಡ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆಕೆ ಮೈನೆರೆದಾಗ ಅದನ್ನು ತಾಯಿ ಬಳಿ  ಹೇಳಿಕೊಳ್ಳುವಷ್ಟು ಧೈರ್ಯ  ಅಥವಾ  ಸಲುಗೆಯಾಗಲಿ ಇರಲಿಲ್ಲ.

ತಾನು ಮಾಡಿದ ಯಾವುದೋ ತಪ್ಪಿಗಾಗಿ ದೇವರು ತನಗೆ ಈ ಶಿಕ್ಷೆ ನೀಡಿರಬಹುದು ಎಂದು ಆಕೆ ಭಾವಿಸಿದ್ದಳು. ಅದಕ್ಕಿಂತಲೂ ಹೆಚ್ಚಾಗಿ  ಅಮ್ಮನ  ಬೈಗುಳಿಗೆ ಆಕೆ ಹೆದರಿದ್ದಳು.

ಇನ್ನೂ ಮೈನೆರೆಯದ ಹುಡುಗಿಯರು ಹೆಚ್ಚಾಗಿ ಲಂಗ–ಬ್ಲೌಸ್‌ ತೊಡುತ್ತಿದ್ದ ಕಾಲವದು. ಪ್ಯಾಂಟಿ ಹಾಕುತ್ತಿರಲಿಲ್ಲ.   ಋತುಮತಿಯಾದರೆ ರಕ್ತ ಕಾಲಿನಗುಂಟ ಇಳಿಯುತಿತ್ತು. ಇಲ್ಲವೇ ಆಕೆ ತೊಟ್ಟಿದ್ದ ಲಂಗಕ್ಕೆ ಅಲ್ಲಲ್ಲಿ ಅಂಟಿಕೊಳ್ಳುತಿತ್ತು. ಆಗ ಬೆದರಿದ ಜಿಂಕೆಯಂತೆಯಾಗುತ್ತಿದ್ದ ಹುಡುಗಿ ತನ್ನ ಪರಿಸ್ಥಿತಿಯನ್ನು ಅಕ್ಕನ ಬಳಿ ತೋಡಿಕೊಳ್ಳುತ್ತಿದ್ದಳು. ಆಕೆ ಅದನ್ನು  ಯಥಾರೀತಿ ತಾಯಿಗೆ ಮುಟ್ಟಿಸಿ ತನ್ನ ರಾಯಭಾರ ಮುಗಿಸುತ್ತಿದ್ದಳು.

ತಿಂಗಳಿಗೊಮ್ಮೆ ಅನುಭವಿಸಬೇಕಾದ ಆ ಮೂರು ದಿನಗಳು ಒಂದರ್ಥದಲ್ಲಿ ಹೆಣ್ಣಿನ ಪಾಲಿಗೆ ಅಗ್ನಿಪರೀಕ್ಷೆ. ಆಗ ಕಾಣಿಸಿಕೊಳ್ಳುವ ವಿಪರೀತ ನೋವು, ಅತಿಯಾದ ರಕ್ತಸ್ರಾವ, ಮಾನಸಿಕ ಹಿಂಸೆಯಿಂದಾಗಿ ಆ ದಿನಗಳು  ನಿಜಕ್ಕೂ ಹೆಣ್ಣಿನ ಪಾಲಿಗೆ ಭಯಾನಕ. ಎಲ್ಲ ಕೆಲಸದ ಮೇಲೂ ನಿರಾಸಕ್ತಿ. ಕಾಡುವ ಒಂಟಿತನದಿಂದ ದುಃಸ್ವಪ್ನದಂತೆ ಕಾಡುತ್ತವೆ.

ರಕ್ತದ ಹರಿವು ಕಡಿಮೆಯಾದಂತೆ ಹುಡುಗಿಯರ ಕಣ್ಣೀರು ನಿಲ್ಲುತ್ತದೆ.  ಹೆಣ್ಣು ಬಹಿಷ್ಠೆಯಾಗಿದ್ದಾಳೆ ಎಂಬುವುದು ಗೊತ್ತೇ ಆಗದಂತೆ ಮೂರು ದಿನ ತಮ್ಮ ಪಾಡಿಗೆ ತಾವು ಸರಿದು ಹೋಗುತ್ತವೆ. ಮೂರನೆಯ ರಾತ್ರಿ ಸರಿದು ಬೆಳಗಾದರೆ ಆಯಿತು,  ರಕ್ತದ ಪಸೆ ನಿಂತು ಆಕೆ ನಿರಾಳ ಹಾಗೂ ನಿರಾತಂಕವಾಗುತ್ತಾಳೆ.

ಮುಟ್ಟಿನದು ಒಂದು ಕಥೆಯಾದರೆ, ಮುಟ್ಟಿನ ಬಟ್ಟೆಗಳದ್ದು ಇನ್ನೊಂದು ಕಥೆ. ಅವನ್ನು ತೊಳೆದು ಒಣಗಿಸುವುದು ಹೆಣ್ಣು ಮಕ್ಕಳ ಪಾಲಿಗೆ ಮತ್ತೊಂದು ಮುಜುಗರದ ಸಂಗತಿ. ಮುಟ್ಟಿನ ದಿನಗಳಲ್ಲಿ ಬಳಸುವ ರಕ್ತದ ಕಲೆಗಳ ಬಟ್ಟೆ, ಒಳ ಉಡುಪು ಒಣಗಿಸಲು ಆಕೆ ಪಡುವ ಪಡಿಪಾಟ ಅಷ್ಟಿಷ್ಟಲ್ಲ. 

ಆರಂಭದ ಕೆಲವು ತಿಂಗಳು ಅನನುಭವಿ ಮಗಳ ನೆರವಿಗೆ ನಿಲ್ಲುವ ತಾಯಿಯೇ ಆಕೆಯ ಮುಟ್ಟಿನ ಬಟ್ಟೆ ತೊಳೆಯುತ್ತಾಳೆ.  ಶ್ರೀಮಂತರ ಹಾಗೂ ಮೇಲ್ವರ್ಗದ ಮನೆಯ ಹುಡುಗಿಯರಿಗೆ ಇಂಥ ಅನುಭವ ಕಡಿಮೆ. ಮನೆಯ ಕೆಲಸಗಾರರು ಇಲ್ಲವೇ ದೋಬಿಗಳು ಬಟ್ಟೆ ತೊಳೆದು ಹಾಕುವುದರಿಂದ ಅವರಿಗೆ ಆ ಒಂದು ಕಷ್ಟ ತಪ್ಪುತ್ತದೆ. ದೋಬಿಗಳು ಮುಟ್ಟಿನ ಬಟ್ಟೆಗಳನ್ನು ಮುಂಜಾನೆ ಕೊಂಡೊಯ್ದು ತೊಳೆದು, ನೀಟಾಗಿ ಒಣಗಿಸಿ ಸಂಜೆ ವೇಳೆಗೆ ಹಿಂದಿರುಗಿಸುತ್ತಾರೆ.

ಬಡ ಹೆಣ್ಣುಮಕ್ಕಳಿಗೆ ಆ ಬಟ್ಟೆಗಳನ್ನು ತೊಳೆದು, ಒಣ ಹಾಕಲು ಜಾಗ ಹುಡುಕುವುದೇ ದೊಡ್ಡ ಕಷ್ಟದ ಕೆಲಸ. ಯಾರೂ ಓಡಾಡದ  ಜಾಗದಲ್ಲಿ ಅವಸರ, ಅವಸರವಾಗಿ ಅವನ್ನು ತೊಳೆದು ಕತ್ತಲ ಕೋಣೆಯಲ್ಲಿ ಯಾರ ಕಣ್ಣಿಗೂ ಬೀಳದಂತೆ ಒಣಗಿಸಿದರೆ ಬೆಟ್ಟ ಹತ್ತಿ ಗೆದ್ದ ಅನುಭವ.  ರಕ್ತ ಹೀರಿಕೊಳ್ಳಲು ಉಟ್ಟು ಬಿಸಾಕಿದ ಹಳೆಯ ಹತ್ತಿಯ ಬಟ್ಟೆಗಳನ್ನೇ ನ್ಯಾಪ್‌ಕಿನ್‌ಗಳಂತೆ ಬಳಸಲಾಗುತ್ತಿತ್ತು. ಆ ಬಟ್ಟೆಗಳನ್ನು ಯಾರಾದರೂ ನೋಡಿಬಿಟ್ಟಾರು ಎಂಬ ಭಯ ಸದಾ ಕಾಡುತ್ತದೆ.

ಹೆಣ್ಣಾಗಿ ಹುಟ್ಟುವುದೇ ತಪ್ಪಾ?
ಈ ಸಂಕಟದ ದಿನಗಳಲ್ಲಿ ನಮ್ಮ ಕಣ್ಣಲ್ಲಿ ನಾವೇ ಕೀಳಾಗಿ ಬಿಡುತ್ತಿದ್ದೆವು.  ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯಿತು ಅಂತ ಭಾವಿಸುವಷ್ಟು ಹೀನಾಯ ಮನಃಸ್ಥಿತಿಗೆ ತಲುಪಿಸಿಬಿಡುತ್ತಿತ್ತು. 

ಮುಟ್ಟಾದ ಮಹಿಳೆ ಮೈಲಿಗೆಯಾದ ಕಾರಣ ಯಾರೊಂದಿಗೂ ಮುಕ್ತವಾಗಿ ಬೆರೆಯುವಂತಿರಲಿಲ್ಲ. ಅಪ್ಪಿತಪ್ಪಿಯೂ ಯಾರನ್ನೂ ಮುಟ್ಟುವಂತಿರಲಿಲ್ಲ. ಆ ದಿನಗಳಲ್ಲಿ ಜನರಿಂದ ದೂರ ಪ್ರತ್ಯೇಕವಾಗಿ ಇರಬೇಕಾಗಿತ್ತು. ಯಾರ ಕಣ್ಣಿಗೂ ಬೀಳದೆ ಮನೆಯ ಮೂಲೆಯೊಂದರಲ್ಲಿ ಕಳ್ಳರಂತೆ ಅವಿತು ಕುಳಿತು ಕೊಳ್ಳುವ ಹೀನಾಯ ಪರಿಸ್ಥಿತಿಯದು.  ಆ ದಿನಗಳಲ್ಲಿ  ಪೂಜಾಕೋಣೆ, ಅಡುಗೆಮನೆ ಪ್ರವೇಶಿಸುವಂತಿರಲಿಲ್ಲ. ಶುಭಕಾರ್ಯಗಳಲ್ಲಿ ಪಾಲ್ಗೊಳ್ಳುವಂತಿರಲಿಲ್ಲ, ದೇವಸ್ಥಾನ ಪ್ರವೇಶ ನಿಷಿದ್ಧ...

ಮುಟ್ಟಿನ ಮನೆಯ ಗೋಳು
ಮೂರು ದಿನಗಳಲ್ಲಿ ಮತ್ತೊಂದು ಬಗೆಯ ಅಸ್ಪೃಶ್ಯತೆಯ ದರ್ಶನವಾಗುತಿತ್ತು. ತಲೆಮೇಲೆ ನಾಲ್ಕು ಚೊಂಬು ನೀರು ಸುರಿದುಕೊಂಡರೆ ಮೈಲಿಗೆ ತೊಳೆದು ಅಪ್ಪಟ ಪರಿಶುದ್ಧರಾಗುತ್ತಿದ್ದೆವು!

ಕೆಲವು ಮನೆಗಳಲ್ಲಿ ಮೂರು ದಿನಗಳ ನಂತರ ಮಹಿಳೆಗೆ ಭಾಗಶಃ ಪ್ರವೇಶ ಲಭಿಸಿದರೆ, ಬ್ರಾಹ್ಮಣರ ಮನೆಗಳಲ್ಲಿ ಭಾರಿ ಕಟ್ಟುನಿಟ್ಟು. ಐದು ದಿನ ಮಡಿ, ಮೈಲಿಗೆ ನಿಯಮ ಜಾರಿಯಲ್ಲಿರುತಿತ್ತು.  ಎರಡು ಮಕ್ಕಳ ತಾಯಿಯಾಗಿರುವ  ನನ್ನ ಬ್ರಾಹ್ಮಣ ಗೆಳತಿಯ ‘ಪಿರಿಯಡ್‌’ ಪ್ರಹಸನ ಇನ್ನೂ ಕರುಣಾಜನಕ. 

ಆಕೆ ಹೊರಗಾದರೆ ಐದು ದಿನ ಮನೆ ಬಿಡಬೇಕಿತ್ತು.  ಮೈಲಿಗೆ ಸಮಯದಲ್ಲಿ  ಆಕೆ ಮನೆಯಲ್ಲಿರುವುದು ಮಾವನಿಗೆ (ಗಂಡನ ತಂದೆ)  ಇಷ್ಟವಾಗುತ್ತಿರಲಿಲ್ಲ.  ಆ ದಿನಗಳು ಸಮೀಪಿಸುತ್ತಿದ್ದಂತೆಯೇ ಆಕೆ ಹತ್ತಿರದ  ಹಳ್ಳಿಯಲ್ಲಿಯ ತವರುಮನೆಗೆ ಹೋಗಬೇಕಾಗಿತ್ತು.  ಇದು ಒಂದು ಅಥವಾ ಎರಡು ದಿನದ ಮಾತಲ್ಲ. ಪ್ರತಿ ತಿಂಗಳು ಈ ಸಂಪ್ರದಾಯ ನಡೆದುಕೊಂಡು ಬಂದಿತ್ತು.  

ಕೆಲವು ದಿನಗಳ ನಂತರ ಅವರ ಕುಟುಂಬ ಹಳ್ಳಿಯಿಂದ ನಗರಕ್ಕೆ ಹೋಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿತು.  ಆಗಲೂ ಅವಳ ತಿಂಗಳ ರಜೆಯ ಗೋಳು ತಪ್ಪಲಿಲ್ಲ.  ಮೂರ್‍್ನಾಲ್ಕು ದಿನ ಅವಳ ಮಾವ ಆಕೆಯನ್ನು ಸಮೀಪದ ಬಂಧುಗಳ ಮನೆಗೆ ಕಳಿಸುತ್ತಿದ್ದ. ಆವಳ ಸಂಬಂಧಿಗಳಿಗೂ ಬ್ರಾಹ್ಮಣರಾಗಿದ್ದ ಕಾರಣ ತಮ್ಮ ಜಾತಿಯ ಮನೆಗಲಲ್ಲಿ ಮುಟ್ಟಾದ ಹೆಂಗಸಿನ ಗೋಳು ಗೊತ್ತಿತ್ತು. ಆಕೆಯನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬ ಅರಿವಿತ್ತು. ಹೀಗಾಗಿ ಸಂಬಂಧಿಗಳು ನನ್ನ ಗೆಳತಿಯನ್ನು ಮನೆಗೆ ಸೇರಿಸಿಕೊಳ್ಳುತ್ತಿದ್ದರು. ಮೈಲಿಗೆ ಕಳೆದ ನಂತರ ಮನೆಗೆ ವಾಪಾಸಾಗುತ್ತಿದ್ದಳು.

ಕತ್ತಲು ಕೋಣೆಯ ಸೆರೆವಾಸ
ಕೊನೆಗೊಂದು ದಿನ ನನ್ನ ಗೆಳತಿಯ ಕಷ್ಟಗಳು ದೂರವಾಗುವ ದಿನಗಳು ಬಂದವು. ಆಕೆಯ ಅತ್ತೆಯೇ ಸೊಸೆಯ ಬೆಂಬಲಕ್ಕೆ ನಿಂತರು. ಅಷ್ಟು ದಿನ ಸೊಸೆ ಅನುಭವಿಸುತ್ತಿದ್ದ ಕಷ್ಟ ಕಂಡು ಬೇಸತ್ತಿದ್ದ   ಅತ್ತೆ ‘ಎಷ್ಟು ದಿನ ಅಂಥ ಸೊಸೆಯನ್ನು ಬೇರೆಯವರ ಮನೆಗೆ ಕಳಿಸುವುದು? ಮನೆಯಲ್ಲಿಯೇ ಇರಲಿ’ ಎಂದು ಧ್ವನಿ ಎತ್ತಿದರು. 

ಆ ದಿನಗಳಲ್ಲೂ ಮನೆಯಲ್ಲೇ ಇರಲು  ಗೆಳತಿಗೆ ಅವಕಾಶವೊಂದು ಸಿಕ್ಕಿತು. ಅತ್ತೆ, ಮಾವ, ಗಂಡ ಸೇರಿ ಒಪ್ಪಂದವೊಂದಕ್ಕೆ  ಬಂದರು. ಮೂರ್‍ನಾಲ್ಕು ದಿನ ಮಾತ್ರ ಆಕೆ ತನ್ನ ಮಾವನಿಗೆ ಮುಖ ತೋರಿಸುವಂತಿರಲಿಲ್ಲ ಎಂಬ ಷರತ್ತು ಬೇರೆ. 

ಮಾವ, ಪತಿ ಅಥವಾ ಕುಟುಂಬದ ಯಾರಾದರೂ ಅಪ್ಪಿತಪ್ಪಿ ತಿಳಿಯದೆ ತಾನಿರುವ ಸ್ಥಳಕ್ಕೆ ಬಂದರೆ ಆಕೆ ಜೋರಾಗಿ ಕೆಮ್ಮಿ ಇಲ್ಲವೇ ಏನನ್ನಾದರೂ ಸದ್ದು ಮಾಡಿ ತನ್ನ ಇರುವಿಕೆಯನ್ನು ಸೂಚ್ಯವಾಗಿ ತಿಳಿಸಬೇಕಾಗಿತ್ತು.

ಹೆಣ್ಣು  ಹೊರಗಾದ ಮೂರ್‍ನಾಲ್ಕು ದಿನ  ಮನೆಗೆಲಸ ಗಳಿಂದ ಆಕೆಗೆ ಸಂಪೂರ್ಣ ರಜೆ.  ನನ್ನ ಪೂರ್ವಜರ ದೊಡ್ಡ ಮನೆಯಲ್ಲಿ ಇದಕ್ಕಾಗಿಯೇ ಒಂದು ಪ್ರತ್ಯೇಕ  ಖಾಯಂ ಕೋಣೆಯನ್ನೇ ಮೀಸಲಿಡಲಾಗಿತ್ತು. ನಮ್ಮದು ದೊಡ್ಡ ಕುಟುಂಬವಾದ ಕಾರಣ ಸದಾ ಯಾರಾದರೂ ಒಬ್ಬರು ಹೊರಗಾಗುತ್ತಿದ್ದರು. ಹೀಗಾಗಿ ಈ ‘ಮುಟ್ಟಿನ ಕೋಣೆ’ ಖಾಲಿ ಇದ್ದದ್ದು ಬಹಳ ಕಡಿಮೆ. 

ಅಮ್ಮ ಧಾರೆ ಎರೆದ ಅನುಭವ
ತಿಂಗಳು ರಜೆಯ ದಿನಗಳ ಅನುಭವಗಳ ಬಗ್ಗೆ ನನ್ನ ತಾಯಿ ನನಗೆ  ಮಧುರವಾದ ಅನುಭವ ಕಟ್ಟಿಕೊಟ್ಟಳು. ಅದರಿಂದ ನಾನು ಸಾಕಷ್ಟು ಕಲಿತೆ.  ಇಂಥ ವಿಷಯಗಳ ಬಗ್ಗೆ ತಾಯಿ ಮತ್ತು ಹೇಗೆ ಮಗಳು ಮುಕ್ತವಾಗಿ ಚರ್ಚಿಸಬಹುದು ಎನ್ನುವುದನ್ನು ಅರಿತುಕೊಂಡೆ.

ಹೆಣ್ಣಿಗೆ ದೊರೆತ ಈ ರಜೆಯ ದಿನಗಳನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವುದಕ್ಕೆ ನನ್ನ ಅಮ್ಮ ಮಾದರಿಯ ಹಾದಿ ನಿರ್ಮಿಸಿದಳು.
ನಿರಂತರ ಮನೆಗೆಲಸದಿಂದ ಅಮ್ಮನಿಗೆ ಬಿಡುವು ಸಿಗುತ್ತಿದ್ದದೇ ಆಕೆ ಹೊರಗಾದಾಗ.  ಆಗಲೂ ಆಕೆ ಸುಮ್ಮನೆ ಕಾಲಹರಣ ಮಾಡುತ್ತಿರಲಿಲ್ಲ.  ಸುಮ್ಮನೆ ಕೂಡುವ ಜಾಯಮಾನವೂ ಆಕೆಯದ್ದಲ್ಲ. ನಮ್ಮ ಮನೆಯಲ್ಲಿರುವ ಅನೇಕ ಅದ್ಭುತ ಕಸೂತಿಯ ಕಲಾಕುಸುರಿ ಅಮ್ಮನ ಬೆರಳುಗಳಿಂದ  ಅರಳಿದ್ದು ಆ ಸಮಯದಲ್ಲಿಯೇ! 

ಪುಟ್ಟ ಗೊಂಬೆಗಳಿಗೆ ಸುಂದರ ದಿರಿಸು, ಆಕರ್ಷಕ ಕಸೂತಿಯ ತಲೆದಿಂಬು, ಟೇಬಲ್ ಕ್ಲಾಥ್‌ ಅಮ್ಮನ ಕೈಯಲ್ಲಿ ಸುಂದರ ರೂಪ ಪಡೆಯುತ್ತಿದ್ದವು. ಅಮ್ಮನಿಗೆ ನಾವು ಒಟ್ಟು ಹನ್ನೊಂದು ಮಕ್ಕಳು. ನನ್ನ ದೊಡ್ಡ ಅಕ್ಕನ ಜತೆ ಸೇರಿ ಅಮ್ಮ ಸಾಕಷ್ಟು ಅಂದದ ಕಸೂತಿ ಬಟ್ಟೆಗಳನ್ನು ಸಿದ್ಧಪಡಿಸಿದ್ದಾರೆ. ಒಂದು ಮೂಲೆಯಿಂದ ಅಮ್ಮ, ಮತ್ತೊಂದು ಮೂಲೆಯಿಂದ ಅಕ್ಕ ಏಕಕಾಲಕ್ಕೆ ಕಸೂತಿ ಹಾಕುತ್ತಿದ್ದರಂತೆ. ಅಮ್ಮ–ಮಗಳು ಪೈಪೋಟಿಯ ಕಸೂತಿ ನೋಡಲು ಸೊಗಸಾಗಿರುತ್ತಿತ್ತಂತೆ. ಮುಟ್ಟಿನ ಯಾತನೆಯ  ದಿನಗಳನ್ನು ಮಹಿಳೆಯರು ಹೇಗೆ ಕ್ರಿಯಾತ್ಮಕವಾಗಿ ಪರಿವರ್ತಿಸಬಹುದು ಎನ್ನಲು ಅಮ್ಮ ನಿರ್ಮಿಸಿದ ಮಾದರಿ ಇದು.

ಬೆನ್ನು, ಸೊಂಟನೋವು, ಕಾಲಿನ ಮೀನ ಖಂಡಗಳಲ್ಲಿ ಸೆಳೆತ, ಭಾವನೆಗಳಲ್ಲಿ ಬದಲಾವಣೆ, ಸಿಡಿಮಿಡಿ ಕಾಣಿಸಿಕೊಳ್ಳುವ ದಿನಗಳಲ್ಲಿ ಹೆಣ್ಣಿಗೆ ಹೆಚ್ಚು ವಿರಾಮ ಅಗತ್ಯ. ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆ ಕಾಡುವ ಸಮಯದಲ್ಲಿ ಹೆಣ್ಣಿನ ವಿರಾಮದ ದಿನಗಳು ಆರಂಭವಾಗುತ್ತವೆ. ಮನೆಗೆಲಸದಿಂದ ಬಿಡುವು ದೊರೆಯುತ್ತದೆ. ಆದರೆ, ನಮ್ಮ ವ್ಯವಸ್ಥೆ ಆಕೆಯ ನಿಸರ್ಗ ನಿಯಮಕ್ಕೆ ಮೈಲಿಗೆಯ  ಕೊಳೆ ಅಂಟಿಸಿದೆ. ಗರ್ಭಧರಿಸಿ ತಾಯ್ತನಕ್ಕೆ ಮುನ್ನುಡಿ ಬರೆಯುವ ಆ ಶುಭ ದಿನಗಳಿಗೆ ಮೈಲಿಗೆ ಎಲ್ಲಿಂದ ಬಂತು? ನಿಸರ್ಗ ನಿಯಮದ ಬಗ್ಗೆ ಹೆಣ್ಣಿನಲ್ಲಿಯೇ ಕೀಳರಿಮೆ ಹುಟ್ಟಿಸಿ ಸಂಪ್ರದಾಯದ ಹೆಸರಿನಲ್ಲಿ ಆಕೆಯನ್ನು ಕಟ್ಟಿ ಹಾಕಲಾಗಿದೆ.

ತಿಂಗಳ ರಜೆ ನಿಸರ್ಗ ನಿಯಮ. ಅದನ್ನು ಯಾರಿಂದಲೂ ತಪ್ಪಿಸಲು ಆಗದು, ಅದರಿಂದ ಪಾರಾಗಲೂ ಆಗದು ಎಂಬ ಸತ್ಯ ಒಪ್ಪಿಕೊಳ್ಳಬೇಕು.
(ಲೇಖಕರು ಹಿರಿಯ ಪತ್ರಕರ್ತರು, ಶಿಕ್ಷಣತಜ್ಞೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT