ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ವೀಣಾ.... ಈ ವೀಣಾ

Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕಾರು ಬಂದು ನಿಲ್ಲುವ ಮೊದಲೇ ಕ್ಷಣಗಣನೆ ಶುರುವಾಗಿತ್ತು. ಬಂದಮೇಲೆ ಹೆಚ್ಚಾದದ್ದು ಅಲ್ಲಿದ್ದ ಸಿನಿಮಾ ಯೂನಿಟ್ ಹುಡುಗರ ಎದೆಬಡಿತ. ಬೆಂಗಳೂರಿನ ಕಂಠೀರವ ಸ್ಟುಡಿಯೊದ ಗೇಟಿಗೆ ಆತುಕೊಂಡು ಮೆಟ್ಟಿಂಗಾಲಿಕ್ಕಿ ಕೆಲವರು ಕಷ್ಟಪಟ್ಟು ಆ ಕಾರಿನ ಕಡೆ ನೋಟ ಹರಿಸುತ್ತಿದ್ದರು. ಕಾರು ನಿಲ್ಲುತ್ತಿದ್ದಂತೆ ಬಿಚ್ಚಿಕೊಂಡ ವಿಶಾಲ ಕೊಡೆಯ ನೆರಳಿನಲ್ಲಿ ನೀಳಕಾಯದ ಸುಂದರಿ. ಪಾಕಿಸ್ತಾನದಿಂದ ವೀಣಾ ಮಲಿಕ್ ಕನ್ನಡ ಸಿನಿಮಾ ಚಿತ್ರೀಕರಣಕ್ಕೆ ಮೊದಲ ದಿನ ಬಂದಾಗಿನ ಈ ಹವಾ ಸಿನಿಮಾ ಬಿಡುಗಡೆಯಾದಾಗ ಅಷ್ಟಾಗಿ ಇರಲಿಲ್ಲವೆನ್ನುವುದು ಬೇರೆ ಮಾತು.

ವೀಣಾ ರಾವಲ್ಪಿಂಡಿಯ ಹುಡುಗಿ. ಸೈಕಾಲಜಿ, ಸೋಷಿಯಾಲಜಿ, ಪರ್ಷಿಯಾ ಮೂರೂ ವಿಷಯಗಳನ್ನು ಓದಿಕೊಂಡ ಅವರು ಮುಂದೆ ನಡೆದದ್ದು ರೆಡ್‌ ಕಾರ್ಪೆಟ್‌ ಮೇಲೆ. ಹೆಣ್ಣುಮಕ್ಕಳು ಅದರಲ್ಲೂ ಮುಸ್ಲಿಂ ಹೆಣ್ಣು ಮಕ್ಕಳು ಬಿಂದಾಸ್‌ ಆಗಿರುವುದು ಕಷ್ಟ ಎನ್ನುವ ವಾತಾವರಣದಲ್ಲಿ ವೀಣಾ ಟೀವಿ ನಿರೂಪಕಿಯಾಗಿ ಪಾಕಿಸ್ತಾನದ ವಾಹಿನಿಯಲ್ಲಿ ತಮ್ಮ ಮಿಮಿಕ್ರಿ ಪ್ರತಿಭೆಯಿಂದ ಮೊದಲು ರಾರಾಜಿಸಿದ್ದು. ದೇಹಭಾಷೆ, ಕಂಠ ಪಳಗಿದ ಮೇಲೆ ಅವರು ಹಾಸ್ಯ ಚಟಾಕಿಗಳನ್ನು ಹಾರಿಸತೊಡಗಿದರು. ದೊಡ್ಡ ಪ್ರಶಸ್ತಿ ಸಮಾರಂಭಗಳ ನಿರೂಪಣೆಯ ಅವಕಾಶ ಹುಡುಕಿಕೊಂಡು ಬಂದದ್ದು ಅವರ ಈ ಪ್ರತಿಭೆಯಿಂದಲೇ. ಆಮೇಲೆ ಲಾಲಿವುಡ್‌ ಅರ್ಥಾತ್‌ ಪಾಕಿಸ್ತಾನದ ಚಿತ್ರರಂಗಕ್ಕೆ ವೀಣಾ ಕಾಲಿಟ್ಟರು. ಆಗ ಅವರು ಸುದ್ದಿಯೇನೂ ಆಗಲಿಲ್ಲ.

2010ರಲ್ಲಿ ಬಿಗ್‌ಬಾಸ್ ರಿಯಾಲಿಟಿ ಷೋನಲ್ಲಿ ಸ್ಪರ್ಧಿಸಿದಾಗ ಟೀವಿ ಜಗತ್ತು ಹಾಗೂ ಬಾಲಿವುಡ್‌ ಅವರನ್ನು ಬೆರಗುಗಣ್ಣಿನಿಂದ ನೋಡಿತು. ಬಿಗ್‌ಬಾಸ್‌ ಸ್ಪರ್ಧೆಯಲ್ಲಿ ಅಂತಿಮ ಹಂತ ಪ್ರವೇಶಿಸಿದ ಮೇಲೆ ಅವರನ್ನು ಚಿತ್ರರಂಗ ಹೈಜಾಕ್‌ ಮಾಡಿದ್ದು. ಮೈಚಳಿ ಬಿಟ್ಟ ಕಾರಣಕ್ಕೆ ಗುರುತಾದ ಅವರೀಗ ಸಂಸಾರಿ. 2013ರಲ್ಲಿ ವ್ಯಾಪಾರಿ ಅಸಾದ್‌ ಬಷೀರ್‌ ಅವರ ಜೊತೆ ದಾಂಪತ್ಯಗೀತೆ ಹಾಡತೊಡಗಿದ ಅವರಿಗೆ ಮುದ್ದಾದ ಗಂಡುಮಗುವೂ ಇದೆ.

ತನ್ನ ಒಂದು ಹುಟ್ಟುಹಬ್ಬದ ದಿನ ಅಭಿಮಾನಿಗಳಿಂದ ಒಂದೇ ನಿಮಿಷದಲ್ಲಿ ಅತಿ ಹೆಚ್ಚು ಮುತ್ತು ಪಡೆದ (ಅಕ್ಷರಶಃ ಅಲ್ಲ!) ನಟಿ ಎನ್ನುವ ಗಿನ್ನೆಸ್ ದಾಖಲೆ ಇವರ ಹೆಸರಿನಲ್ಲಿ ಇದೆ. ‘ಎಫ್‌ಎಚ್‌ಎಂ ಇಂಡಿಯಾ’ ನಿಯತಕಾಲಿಕ ಪಟ್ಟಿ ಮಾಡಿದ ವಿಶ್ವದ 100 ಸೆಕ್ಸಿ ನಟಿಯರ ಯಾದಿಯಲ್ಲಿ 26ನೇ ಸ್ಥಾನ ಇವರದ್ದೆನ್ನುವುದು ಅಗ್ಗಳಿಕೆ.

ಕಳೆದ ವರ್ಷ ನವೆಂಬರ್‌ನಲ್ಲಿ ಧರ್ಮ ನಿಂದನಾ ಕಾರ್ಯಕ್ರಮದ ಭಾಗವಾದದ್ದಕ್ಕೆ ಭಯೋತ್ಪಾದನಾ ವಿರೋಧಿ ಕೋರ್ಟ್‌ ಅಸಾದ್–ವೀಣಾ ದಂಪತಿಗೆ 26 ವರ್ಷಗಳ ಜೈಲುಶಿಕ್ಷೆ ವಿಧಿಸಿತು. ಅಸಾದ್–ವೀಣಾ ಅಣಕು ಮದುವೆ ಪ್ರಸಾರದ ಸಂದರ್ಭದಲ್ಲಿ ಟೀವಿ ವಾಹಿನಿಯಲ್ಲಿ ಧಾರ್ಮಿಕ ಗೀತೆ ಪ್ರಸಾರ ಮಾಡಿದ್ದೇ ಶಿಕ್ಷೆ ವಿಧಿಸಲು ಕಾರಣ.

ಕಂಠೀರವ ಸ್ಟುಡಿಯೊದ ಆವರಣಕ್ಕೆ ಈಗಲೂ ಐಟಂ ಗೀತೆಗೆಂದು ಯಾವುದಾದರೂ ಹೊಸ ನಟಿಯ ಕಾರು ಬಂದು ನಿಂತರೆ, ದೊಡ್ಡ ಕೊಡೆ ಅದೇ ಹದದಲ್ಲಿ ಬಿಚ್ಚಿಕೊಳ್ಳುತ್ತದೆ. ಮೂವತ್ತರ ಹರೆಯದ ವೀಣಾ ಜೈಲುಶಿಕ್ಷೆಯ ಶಾಕ್‌ನಲ್ಲಿ ಇರುವುದು ಅವರ ಮಾದಕತೆ ಕಂಡ ಎಷ್ಟೋ ಜನರಿಗೆ ತಿಳಿದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT