ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಶಾಲೆಗೆ ಅನುಮತಿ ನೀಡಿ

ಹೈಕೋರ್ಟ್‌ನ ಮಹತ್ವದ ಮಧ್ಯಾಂತರ ಆದೇಶ
Last Updated 27 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಹಂತದ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಅನುಮತಿ ಕೋರಿರುವ ಅರ್ಜಿಗಳನ್ನು ಕೂಡಲೇ ಪರಿಗಣಿಸು­ವಂತೆ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠವು ಈ ಕುರಿತಂತೆ ಮಧ್ಯಾಂತರ ಆದೇಶ ಪ್ರಕಟಿಸಿದ್ದು ಮಾರ್ಚ್‌ 31ರೊಳಗೆ ಈ ಅರ್ಜಿಗಳನ್ನು ಇತ್ಯರ್ಥಪಡಿಸಿ ಎಂದು ನಿರ್ದೇಶಿಸಿದೆ.

ಒಂದರಿಂದ ಐದನೇ ತರಗತಿವರೆಗೆ ಆಂಗ್ಲಮಾಧ್ಯಮ ಶಿಕ್ಷಣ ನೀಡಲು ಹೊಸ ಶಾಲೆಗಳಿಗೆ ಅನುಮತಿ ನೀಡುವಂತೆ ಕೋರಿ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ (ಕ್ಯಾಮ್ಸ್‌) ಸಲ್ಲಿಸಿದ್ದ ಅರ್ಜಿಯ ವಿಚಾ­ರಣೆ ನಡೆಸಿದ ಪೀಠವು, ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿತು.

‘ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ತೀರ್ಪನ್ನು ಯಾಕೆ ಅನುಸರಿಸುತ್ತಿಲ್ಲ ?  ಇದು ಕನ್ನಡ ವಿರೋಧಿ ಅಥವಾ ಇಂಗ್ಲಿಷ್ ಪರವಾದ ಧೋರಣೆ ಅಲ್ಲ. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಪಾಲಿಸುವ ವಿಷಯ. ರಾಜ್ಯ ಸರ್ಕಾರದ ಇಂತಹ ನಡೆ ತಕ್ಕುದಲ್ಲ’ ಎಂದು ಪೀಠವು ಅಭಿಪ್ರಾಯಪಟ್ಟಿತು.

‘ಇವತ್ತು ವಿದ್ಯಾಭ್ಯಾಸ ಎಂಬುದು ಕೇವಲ ರಾಜ್ಯವೊಂದರ ಪ್ರಾದೇಶಿಕ ಚೌಕಟ್ಟಿನಲ್ಲಿ ನೋಡುವ ವಿಷಯವಾಗಿ ಉಳಿದಿಲ್ಲ. ಅದು ಜಾಗತಿಕ ಮಟ್ಟದ ವ್ಯಾಪ್ತಿಗೆ ಪಸರಿಸಿದೆ. ಮಕ್ಕಳು ಉಜ್ವಲ ಭವಿಷ್ಯಕ್ಕಾಗಿ ಉತ್ತಮ ವಿದ್ಯಾಭ್ಯಾಸ ಹೊಂದುವ ಅವಕಾಶಗಳನ್ನು ಅರಸು­ತ್ತಾರೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆ­ಗಳಿಗೆ ಅನುಮತಿ ನೀಡಲು ಯಾಕೆ ನಿರಾ­ಕರಿ­ಸುತ್ತಿದೆ ಎಂಬುದು ಅರ್ಥ­ವಾಗು­ತ್ತಿಲ್ಲ’ ಎಂದು ಪೀಠವು ಬೇಸರ ವ್ಯಕ್ತ­ಪಡಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌, ‘ಈ ವಿಷಯಕ್ಕೆ ಸಂಬಂಧಿಸಿದಂತೆ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಪರಿಹಾರಾತ್ಮಕ ಅರ್ಜಿ (ಕ್ಯುರೇಟಿವ್‌ ಅರ್ಜಿ) ವಿಚಾರ­ಣೆಗೆ ಬಾಕಿ ಇದೆ. ಹೀಗಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ವಿಳಂಬವಾಗಿದೆ’ ಎಂಬ ಸಮಜಾಯಿಷಿಯನ್ನು ಪುನರುಚ್ಚ­ರಿಸಿದರು.

‘ಮಾತೃಭಾಷೆ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಸಂವಿಧಾನಕ್ಕೆ ತಿದ್ದು­ಪಡಿ ತರುವುದಕ್ಕೂ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ. ಈ ದಿಸೆ­ಯಲ್ಲಿ ಚರ್ಚೆ ಸಾಗಿವೆ’ ಎಂದೂ ಅವರು ವಿವರಿಸಿದರು. ‘ಈ ಮಧ್ಯಾಂತರ ಆದೇಶವು ಪರಿ­ಹಾರಾತ್ಮಕ ಅರ್ಜಿಯ ತೀರ್ಪಿಗೆ ಬದ್ಧವಾಗಿ­ರುವಂತೆ ಜಾರಿಯಲ್ಲಿ­ರು­ತ್ತದೆ’ ಎಂದು ಪೀಠವು ತಿಳಿಸಿದೆ.

ನಿರಾಳ ಅನುಭವ–ಕ್ಯಾಮ್ಸ್‌ ಪ್ರತಿಕ್ರಿಯೆ
‘ಹೈಕೋರ್ಟ್‌ನ ಈ ಮಹತ್ವದ ಮಧ್ಯಾಂತರ ಆದೇಶದಿಂದ ಕ್ಯಾಮ್ಸ್‌ನ 1300ಕ್ಕೂ ಹೆಚ್ಚು ಸದಸ್ಯ ಶಾಲೆಗಳು ಸಲ್ಲಿಸಿರುವ ಅರ್ಜಿಗಳನ್ನು ಸರ್ಕಾರ  ಕೂಡಲೇ ಪರಿಗಣಿಸಬೇಕಿದೆ ಮತ್ತು ನಮ್ಮ ಕಾನೂನು ಹೋರಾಟಕ್ಕೆ ತಾತ್ಕಾಲಿಕ ನಿರಾಳತೆ ಲಭಿಸಿದೆ’ ಎಂದು ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ‘ಪ್ರಜಾವಾಣಿ’ಗೆ  ಪ್ರತಿಕ್ರಿಯಿಸಿದ್ದಾರೆ.

‘ರಾಜ್ಯದಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಮಾದರಿಯ ಕೇಂದ್ರೀಯ ಪಠ್ಯಕ್ರಮ­ಗಳನ್ನು ಹೊರತುಪಡಿಸಿದಂತೆ ಸುಮಾರು 16 ಸಾವಿರ ಶಾಲೆಗಳು ರಾಜ್ಯಪಠ್ಯ­ಕ್ರಮದ ಬೋಧನೆಯನ್ನೇ ಅನುಸರಿಸು­ತ್ತಿವೆ. ಆದರೆ, ಈಗ ನ್ಯಾಯಾಲಯದ ಮಧ್ಯಾಂತರ ಆದೇಶದಿಂದ ಬಹು­ಸಂಖ್ಯಾತ ಬಡವರ ಕನಸಿನ ಶಿಕ್ಷಣಕ್ಕೆ ದಾರಿ ಸುಗಮವಾಗಿದೆ’ ಎಂದು ಶಶಿಕುಮಾರ್‌ ಹೇಳಿದ್ದಾರೆ.

‘ಸರ್ಕಾರಿ ಶಾಲೆಗಳನ್ನು ಹೊರತು­ಪಡಿಸಿ ಖಾಸಗಿ ಅನುದಾನರಹಿತ ರಾಜ್ಯ ಸರ್ಕಾರದ ಪಠ್ಯಕ್ರಮ ಅನುಸರಿ­ಸುತ್ತಿರುವ ಶಾಲೆಗಳ ಮೇಲೆ ರಾಜ್ಯ ಸರ್ಕಾರವು ತನ್ನ ಭಾಷಾ ಮಾಧ್ಯಮ ನೀತಿಯನ್ನು ಹೇರಲು  ಮುಂದಾಗಿತ್ತು. ಇದರಿಂದ ಈ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಮಧ್ಯಮ ವರ್ಗ, ದಲಿತ, ಅಲ್ಪ ಸಂಖ್ಯಾತ, ಕೂಲಿ ಕಾರ್ಮಿಕ ಹಾಗೂ ಕಡುಬಡವ ಸಮುದಾಯದ ಮಕ್ಕಳು ತಾವು ಬಯಸಿದ ಮಾಧ್ಯಮ­ದಲ್ಲಿ ಶಿಕ್ಷಣ ಪಡೆಯಲು ಅಡಚಣೆ­ಯಾಗಿತ್ತು. ಅದೀಗ ತಾತ್ಕಾಲಿಕವಾಗಿ ದೂರವಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT