ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಥವರದ್ದೇ ಜಮಾನಾ ಇದು...

Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ಅದೇ ಬೆಳಗು... ಕೀಲಿ ಕೊಟ್ಟ ಗೊಂಬಿ ಹಂಗ, ಮುಂಜೇನಿ ನ್ಯಾರಿ (ನಾಷ್ಟಾ, ತಿಂಡಿ) ಮಾಡೂದು. ಡಬ್ಬೀಗೆ ಬ್ಯಾರೆ ಅಡಗಿ ಮಾಡೂದು... ಗಂಡನ ಡಬ್ಬೀನೆ ಬ್ಯಾರೆ, ಮಕ್ಕಳ ಡಬ್ಬೀನೇ ಬ್ಯಾರೆ. ಒಮ್ಮೆ ಇವರೆಲ್ಲ ಸಾಲೀಗೆ, ಕಚೇರಿಗೆ ಹೋದ ಮ್ಯಾಲೆ ಉಶ್ಶಂತ ಒಂದರ್ಧ ಕಪ್‌ ಛಾ ಹೀರೂದು... ಆಮ್ಯಾಲೆ ಉಸರಾಡಾಕ ಟೈಮ್‌ ಇರಲಾರದ್ಹಂಗ ನಮ್ಮ ಕಚೇರಿಗೆ ದೌಡು...’

ಮುಂದಿಂದು ಎರಡನೇ ಹಂತ. ಕಚೇರಿಗೆ ಬರೂದು. ಇದೊಂಥರ ಮುಳ್ಳಿನ ಮ್ಯಾಲೆ ಸೆರಗು ಹರಡಕೊಂತ ಹೋದಂಗ. ನಮಗಿಂತ ದೊಡ್ಡೋರಿಗೆ ವಿಧೇಯರಾಗಿರಬೇಕು. ಸಣ್ಣೋರಿಗೆ ಶಿಸ್ತಿನಿಂದಿರಬೇಕು. ಎರಡೂ ಕಡೆ ಹೆಚ್ಚೂ ಕಡಿಮಿ ಆಗೂಹಂಗಿಲ್ಲ. ಇಷ್ಟಾದರೂ ಹುಬ್ಬೇರಿಸಿ ನೋಡೋರು, ಕಣ್ಕಿರಿದು ಮಾಡಿ ಮಾತಾಡೋರು, ಬೆನ್ನ ಹಿಂದೆ ನಗೋರು ಇದ್ದೇ ಇರ್ತಾರ. ಅವರಿಗೆಲ್ಲ ಉದಾಸೀನ ತೋರಿ ಕೆಲಸದೊಳಗ ಶ್ರದ್ಧೆ ತೋರಸ್ಕೊಂಡು, ನಮ್ಮನ್ನ ನಾವು ಸಾಬೀತು ಪಡಿಸ್ಕೊಂತ ಹೋಗಬೇಕು.  ಇವೆಲ್ಲ ಮಾಡೂದ್ರೊಳಗ ಮನದೊಳಗಿನ ಮನೆಯ ಭೂತ ಅವಾಗವಾಗ ಕುಣೀತಿರ್ತದ.

ಸಾಲಿಯಿಂದ ಮಕ್ಕಳು ಮನೀಗೆ ಬಂದಿರಬಹುದು. ಮಧ್ಯಾಹ್ನ ಔಷಧ ತೊಗೊಳ್ಳಾಕ ನೆನಪು ಮಾಡಬೇಕು. ಸಂಜೀಕ ಹೋಗೂಮುಂದ ಮರುದಿನಕ್ಕ ತರಕಾರಿ ತೊಗೊಂಡು ಹೋಗಬೇಕು. ಇಂಥವೇ ಲೆಕ್ಕಾಚಾರಗಳು. ಎಲ್ಲಾರಿಗೆ ಹೃದಯದೊಳಗ ಎರಡೆರಡು ಕವಾಟಗಳಿದ್ದರೆ, ಹೆಣ್ಮಕ್ಕಳಿಗೆ ಜೇನುಗೂಡು ಇದ್ದಂಗ. ನೂರಾ ಎಂಟು ಕವಾಟುಗಳು. ಎಲ್ಲವೂ ಒಂದಾದ ಮ್ಯಾಲೆ ಒಂದು ಗುಂಯ್‌ ಗುಡತಿರ್ತಾವ. ಕೆಲಸದ ಮ್ಯಾಲೆ ಪ್ರೀತಿ ಇದ್ರ, ಈ ಗುಂಯ್‌ಗುಡುವ ನೊಣಗಳನ್ನೆಲ್ಲ ಬಗ್ಗುಬಡಿದು, ಕೆಲಸದೊಳಗ ಮನಸು ಶಾಂತ ಆಗ್ತದ. ಆಮ್ಯಾಲೆ ಕಚೇರಿ ಟೈಮ್‌ ಮುಗಿಯೂವರೆಗೂ ಗಪ್ಪಗಾರ ಈ ಕವಾಟ.

ಕಚೇರಿಯೊಳಗ ಕಾಲಿಡೂ ಮುಂದೆ ಉಳಿದೆಲ್ಲ ಪಾತ್ರಗಳನ್ನು ಹೊರಗಿಟ್ಟು ಬಂದಿರ್ತೀವಿ. ಅಮ್ಮ, ಮಗಳು, ಹೆಂಡತಿ ಹಂಗಿದ್ದಾಗ ಮಾತ್ರ ಕಚೇರಿಯ ಪಾತ್ರ ನಿರ್ವಹಿಸುವುದು ಸಾಧ್ಯ ಆಗ್ತದ.

ಚೇರಿಯಿಂದ ಹೊರಗ ಹೋಗೂ ಮುಂದ, ಇಲ್ಲಿಯ ಪಾತ್ರದ ವೇಷ ಕಳಚಿ ದೌಡಾಯಿಸ್ತೀವಿ. ಅಮ್ಮ ಇಣಕ್ತಾಳ. ಮಕ್ಕಳ ಹೋಮ್‌ವರ್ಕು, ಪರೀಕ್ಷೆ, ಊಟ, ಔಷಧಿ... ಅದನ್ನು ತಣಿಸೂದ್ರೊಳಗ ಮಗಳು ಎಚ್ಚರಾಗ್ತಾಳ. ಅಮ್ಮ ಅಪ್ಪಗೊಂದು ಫೋನು... ಹೆಂಗದಾರ? ಅವರ ಬಿ.ಪಿ, ಮಧುಮೇಹ, ಊಟ, ಜೀರ್ಣ ಕ್ರಿಯೆ ಎಲ್ಲಾ ಒಂದೇ ಉಸುರನಾಗ ವಿಚಾರಸೂದು. ಆಮ್ಯಾಲೆ ಮಕ್ಕಳ ಮ್ಯಾಲಿನ ದೂರು, ಗಂಡನ ಮ್ಯಾಲಿನ ಮುನಿಸು, ಕಚೇರಿಯೊಳಗಿನ ಆಗುಹೋಗು ಮಾತಾಡಿದ್ರ ಮನಸು ಒಂದೀಟು ಹಗುರ. ಅಷ್ಟರೊಳಗ ಮನಿ ಬಂದಿರ್ತದ. ಮತ್ತ ರಾತ್ರಿ ಊಟ, ಮಾತು, ಮರುದಿನದ ತಯಾರಿ... ಮತ್ತದೇ ಸಂಜೆ, ಮತ್ತದೇ ರಾತ್ರಿ. ಮತ್ತದೇ ಬೆಳಗು...

ಮೂವತ್ತೈದು ವರ್ಷ ವಯಸ್ಸಾದ್ರ ನಲ್ವತ್ತೈದರ ತನಾನೂ ಈ ದಿನಚರಿ ತಪ್ಪಲಿಕ್ಕಿಲ್ಲ. ಕೀಲುಕುದರೀದೆ... ಜೀವನ. ದುಡುದುಡು ಓಡೂದು. ಕೀಲು ತಿರುಗಿಸೂದು ಮತ್ತ ದುಡುದುಡು ಓಡೂದು. ಮೊದಲೊಂದಿಷ್ಟು ದಿನ ಬ್ಯಾಸರ ಆಗ್ತದ.

ಇಷ್ಟೇನಾ ಬದುಕು...? ಹಿಂಗೇ ಮುಗೀತದಾ ನನ್ನ ಜೀವನಾ..? ಇಷ್ಟಕ್ಕೇ ಇಷ್ಟೆಲ್ಲ ಒದ್ದಾಡಬೇಕಾ? ಅಷ್ಟರೊಳಗ ಸಂಗಾತಿಯ ಮೆಚ್ಚುಗೆಯ ಮಾತು ಕಡಿಮಿ ಆಗಿರ್ತಾವ. ಮೆಚ್ಗಿ ಏನು ಬಂತು, ಮಾತೇ ಕಡಿಮಿ ಆಗಿರ್ತಾವ. ನಾವು ಮಾತಾಡೂದು, ಹಗೂರಕ್ಕ ಗೊಣಗಾಟ ಆಗಿ ಬದಲಿ ಆಗಿರ್ತದ. ಅಥವಾ ಅವರಿಗೆಲ್ಲ ಹಂಗನ್ನಸ್ತದ. ಇಂಥಾ ಸಂದರ್ಭದೊಳಗ ನಾ ಯಾಕ ಇಷ್ಟು ‘ಥ್ಯಾಂಕ್‌ಲೆಸ್‌ ಜಾಬ್‌’ ಮಾಡಬೇಕು ಅನ್ನಸ್ತದ. ಆದ್ರ  ಅಷ್ಟರೊಳಗ, ನಾವು ನಮ್ಮವರೆಲ್ಲರ ಬದುಕಿಗೆ ಅನಿವಾರ್ಯ ಆಗಿರ್ತೀವಿ. ನಮಗೂ ಅವರೆಲ್ಲಾರೂ, ಅವರೆಲ್ಲರ ಅಗತ್ಯಗಳನ್ನು ಪೂರೈಸೂದು ನಮ್ಮ ಜೀವನ ಆಗೇಬಿಡ್ತದ.

ಇಂಥ ರೊಬೊಟಿಕ್‌ ಜೀವನದೊಳಗ ಬದಲಾವಣೆಯ ಗಾಳಿ ಬೀಸೂದು ನಲ್ವತ್ತರ ಅಂಚಿನೊಳಗ. ಮಕ್ಕಳು ದೊಡ್ಡೋರು ಆಗಿರ್ತಾರ. ಅವರಿಗೀಗ ಅಮ್ಮನ ಸಹಾಯ ಬೇಕಾಗಿಲ್ಲ. ಅದೆಲ್ಲ ಅಮ್ಮ ಅನಾವಶ್ಯಕ ತಮ್ಮ ವ್ಯವಹಾರದೊಳಗ ಮೂಗು ತೂರಸ್ತಾಳ ಅನ್ನಸ್ತಿರ್ತದ. ಯಾಕಂದ್ರ ಕಾಲ ಚಕ್ರ ಉರುಳಿ ಅವರಿಗೆ ವೇಗ ಕೊಟ್ಟಿರ್ತದ. ನಮ್ಮ ವೇಗಕ್ಕ ತಡಿ ಒಡ್ಡತಿರ್ತದ.

ಇದೇ ವ್ಯಾಳೇಕ್ಕ ಅಗ್ದಿ ಕಾಯ್ದು ಕುಂತೋರ ಹಂಗ ನಮ್ಮ ಗ್ರಂಥಿಗಳೂ ಬದಲಾವಣೆ ತರ್ತಾವ. ಋತುಚಕ್ರ ನಿಲ್ಲೂ ಸಮಯ. ಅದ್ಯಾಕೋ, ನಾವಿನ್ನ ಉಪಯೋಗಕ್ಕಿಲ್ಲ ಅನ್ನೂ ಭಾವ ಮನಸಿನೊಳಗ ದಟ್ಟಾಗಿ ಕವೀತೈತಿ.

ನಮ್ಮನ್ನೇ ಅವಲಂಬಿಸಿದ್ದ ಮಕ್ಕಳು ಸ್ವತಂತ್ರ ವಲಯ ನಿರ್ಮಿಸಿಕೊಳ್ಳೂದು ಮೊದಲ ಆಘಾತ. ಅಲ್ಲಿಂದ ಪ್ರತಿಯೊಂದಕ್ಕೂ ‘ನಿಂಗೊತ್ತಿಲ್ಲಮ್ಮ, ನಿಂಗೇನಮ್ಮ ಗೊತ್ತು? ನಿಂಗೇನಮ್ಮ ಗೊತ್ತಾಗ್ತದ...’ ಇಂಥಾ ಮಾತು... ಇವೆರಡರ ನಡೂ ಒದ್ದಾಡೂದು ಗಂಡನಿಗೆ ಕಾಣಸೂದೆ ಇಲ್ಲ.

‘ಸುಮ್ನೆ ತ್ರಾಸ್‌ ತೊಗೋತಿ... ಅವರು ದೊಡ್ಡೋರು ಆಗ್ಯಾರ. ನೀನೂ ಇನ್ನ ರೆಸ್ಟ್‌ ತೊಗೊ’ ಅನ್ನೂ ಮಾತು ಧಾರಾಳವಾಗಿ ಬಂದೇ ಬಿಡ್ತಾವ. ನಮ್ಮ ಮಾತು ಬಿಕ್ಕಳಕಿಯಾಗಿ, ಗಂಟಲದಾಗೇ ಸಿಕ್ಕೊಂತದ. ಯಾಕೋ ‘ರೆಸ್ಟ್‌ ತೊಗೊ’ ಅನ್ನೂದು ಕಾಳಜೀ ಬದಲಿಗೆ ಚುಚ್ಚಿ ಮಾತಾಡಿದ್ರೇನೋ ಅನ್ನಸ್ತದ.

ಮತ್ತದೇ ತೊಳಲಾಟ. ಎಲ್ಲಾರಿಗೆ ಬೇಕಾಗಿದ್ದಾಗ ಯಾಕ ದುಡೀಬೇಕು ಅನ್ನುವ ಪ್ರಶ್ನೆ, ಈಗ ಎಲ್ಲಾರೂ ಎಲ್ಲಾ ನಿಭಾಯಿಸ್ತೀವಿ, ಅಂದಾಗ, ‘ನಾ ಇವರಿಗ್ಯಾಕ ಬ್ಯಾಡ’ ಅನ್ನೂ ಚಿಂತಿ... ಹೆಣ್ಮಕ್ಕಳ ಮನಸು ಒಂಥರಾ ಗರಗಸ ಇದ್ಹಂಗ. ಹೋಗುಮುಂದೂ ಕೊರೀತದ. ಬರುಮುಂದೂ ಇರೀತದ.

ಇಂಥದ್ದೊಂದು ಕಾಲ ಉದ್ಯೋಗಸ್ಥ ಮಹಿಳೆಯರಿಗೆ ಇತ್ತು. ಇಡೀ ಜೀವನ ಉದ್ಯೋಗ, ಮನೀ, ಮಕ್ಕಳು ಅನ್ನುವ ಮೂರು ಬಿಂದು ನಡುವೆ ಸುತ್ತುವ ವರ್ತುಲ ಆಗಿತ್ತು.

ಆದ್ರ ಈಗ...
ಕಾಲ ಬದಲಾಗೇದ. ಅಮ್ಮಾ ನಿಂಗೇನು ಗೊತ್ತು ಅಂತ ಪ್ರಶ್ನಿಸು ಹಂಗೇ ಇಲ್ಲ. ಎಲ್ಲಾದಕ್ಕೂ ಅಪ್‌ಡೇಟ್‌ ಆಗಿರ್ತಾರ. ಬೇಕಾದ್ರ ಮಕ್ಕಳ ಹತ್ರೇ ಕೇಳ್ಕೋತಾರ. ಕಚೇರಿಯ ಕುಹಕಿಗಳ ಕಲರವಕ್ಕ, ‘ಕೆಟ್ಟದನ್ನು ಕೇಳದಂತೆ ಕಿವುಡನ ಮಾಡಯ್ಯ ತಂದೆ..’ ಅಂತ ವಚನದ ಸಾಲನ್ನು ತಮ್ಮೊಳಗೇ ಹೇಳ್ಕೋತಿರ್ತಾರ. ಮಾತಾಡಿದೋರು, ಮಾತಾಡ್ಕೊಂತ ವ್ಯಾಳಿ ವ್ಯಯ ಮಾಡಿದ್ರ, ಇವರು ತಮ್ಮ ಪ್ರೊಡಕ್ಟಿವಿಟಿ, ಕಾರ್ಯ ಕ್ಷಮತೆ, ವೈಖರಿ ಹೆಚ್ಚಿಸುವುದರತ್ತ ಗಮನ ನೆಟ್ಟಿರ್ತಾರ. ಎಲ್ಲಾದಕ್ಕೂ ಮುಖ್ಯ ಅಂದ್ರ ತಮ್ಮತನ ಕಳೆದು ಹೋಗದ್ಹಂಗ ಒಂದೀಟು ಸಮಯ ತಮಗಾಗೇ ಮೀಸಲು ಇಡ್ತಾರ.

ತಿಂಗಳಿಗೊಮ್ಮೆ ಪಾರ್ಲರ್‌ಗೆ ಹೋಗಿ ಮುಖ, ಕೈ ಕಾಲು ಒಡ್ಡಿ ಕುಂದ್ರೂದ್ರೊಳಗ... ತಮಗ, ಮನೀಗೆ ಬೇಕಾಗಿದ್ದು ಶಾಪಿಂಗ್‌ ಮಾಡೂದ್ರೊಳಗ, ನಡೂರಾತ್ರಿ ಎದ್ದು ಪುಸ್ತಕ ಓದೂದ್ರೊಳಗ... ಯಾವುದೋ ಒಂದು ಹೊತ್ತನಾಗ ಧಡಕ್ಕನೆ ಎದ್ದು ಫೋನ್‌ನಾಗ ಗೇಮ್‌ ಆಡ್ಕೊಂತ... ತಮ್ಮನ್ನ ತಾವು ಆರೈಕೆ ಮಾಡ್ಕೊಂತಾರ. ಇಂಥವರಿಂದ ಈ ‘ಸೂಪರ್‌ ಮೋಮ್‌ ಸಿಂಡ್ರೋಮ್‌’ ದೂರ ಓಡ್ತದ. ಪರಿಸ್ಥಿತಿಯನ್ನ ಸ್ವೀಕರಿಸುವ ಕೌಶಲ ಇವರಿಗೆ ಗೊತ್ತು. ನಿಭಾಯಿಸುವ ಛಾತಿ ಇವರಿಗೆ ಅದ. ಇಂಥವರದ್ದೇ ಜಮಾನಾ ಇದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT