ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿಗೆ ಸಲ್ಲದ ಪ್ರಯೋಗ

ರಂಗಭೂಮಿ
Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ರಂಗದ ಮೇಲೆ ಅರಳುವ ಸನ್ನಿವೇಶಗಳ ಆವರಣದಲ್ಲಿ ಪಾತ್ರಗಳು ನೇರವಾಗಿ ಪ್ರೇಕ್ಷಕರೊಡನೆ ಸಂವಾದಿಸಬೇಕು. ಅವರ ಹೃದಯದಲ್ಲೊಂದು ಅನುಭವ ಚಿತ್ರಣ ಬಿತ್ತುವ ಈ ಮುಕ್ತ ಸಂವಹನದ ಕ್ರಿಯೆಯಲ್ಲಿ ಯಾರ ಮಧ್ಯಪ್ರವೇಶವೂ ಇರಕೂಡದು. ಪೂರ್ವಗ್ರಹಗಳಿಲ್ಲದೆ ಮುಕ್ತ ಮನಸ್ಸಿನಿಂದ ನಾಟಕಪ್ರಯೋಗಗಳನ್ನು ವೀಕ್ಷಿಸುವುದು ವಿಹಿತ. ಕೆ.ಎಚ್. ಕಲಾಸೌಧದಲ್ಲಿ ‘ಥಿಯೇಟರ್ ತತ್ಕಾಲ್’ ಅರ್ಪಿಸಿದ ಪಿ.ಲಂಕೇಶರ ‘ನನ್ನ ತಂಗಿಗೊಂದು ಗಂಡು ಕೊಡಿ’ ನಾಟಕಕ್ಕೆ  ಈ ಮಾತುಗಳನ್ನು ಅನ್ವಯಿಸುವುದು ಅಗತ್ಯವೆನಿಸಿತು. ನಾಟಕದ ನಿರ್ದೇಶಕ ಅಚ್ಯುತ್‌ಕುಮಾರ್.

ಸುಮಾರು ಆರು ದಶಕಗಳ ಹಿಂದೆ ರಚಿತವಾದ ಈ ನಾಟಕ ಇಂದಿಗೆ ಎಷ್ಟು ಪ್ರಸ್ತುತ ಎನ್ನುವುದು ಪ್ರಶ್ನೆ. ನೆಪಮಾತ್ರಕ್ಕೆ  ಕಥೆಯೊಂದನ್ನು ಇಟ್ಟುಕೊಂಡು ನಾಟಕಕಾರರು ಇಲ್ಲಿ ಅನೇಕ ವಿಚಾರಗಳನ್ನು ಜಗನ್ನಾಥನ ಪಾತ್ರದ ಮೂಲಕ ಚರ್ಚಿಸುವ ಪ್ರಯತ್ನ ಮಾಡಿದ್ದಾರೆ. ನಗರದಲ್ಲಿ ಐಷಾರಾಮದ ಬದುಕು ಸಾಗಿಸುತ್ತ, ಊರಿನಲ್ಲಿದ್ದ ಹೆಂಡತಿ, ಮಗ-ಮಗಳ ಬಗ್ಗೆ ಕಾಳಜಿಯಿಲ್ಲದೆ ಇದ್ದ ರಾಜ್ಯದ ವ್ಯವಸಾಯ ಮಂತ್ರಿಮಹಾಶಯನ ಸಂಸಾರದೊಳಗಿನ ಗೊಂದಲ, ಭುಗಿಲೆದ್ದ ಅತೃಪ್ತಿಯ ಚಿತ್ರಣವನ್ನು ಬಿಚ್ಚಿಡುವ ಈ ನಾಟಕದಲ್ಲಿ ಕುಟುಂಬದೊಳಗಿನ ರಾಜಕಾರಣ, ಪಕ್ಷ-ಪಂಗಡ, ಭಿನ್ನಾಭಿಪ್ರಾಯಗಳು ಸ್ಫುರಿಸುತ್ತವೆ. ಗಂಡ ಮತ್ತು ತಂದೆಯಾಗಿ ಮಾಡಬೇಕಾದ ಕರ್ತವ್ಯದಿಂದ ವಿಮುಖನಾದ ಆತನ ಬಗ್ಗೆ ಮನೆಯವರಿಗೆಲ್ಲ ತುಂಬ ಅಸಮಾಧಾನ, ಕೋಪ. ಬಿಸಿರಕ್ತದ ತರುಣ ಜಗನ್ನಾಥ, ತುಂಬ ಓದಿಕೊಂಡ ಬುದ್ಧಿಜೀವಿಯೆಂಬಂತೆ ವರ್ತಿಸುವ, ತಲೆಯಲ್ಲಿ ತನ್ನದೇ ಆದ ಹಸಿಬಿಸಿ ಭಾವನೆ, ವಿಚಾರಗಳನ್ನು ತುಂಬಿಕೊಂಡವನು. ತಂದೆಯ ಬಗ್ಗೆ ಅದಮ್ಯ ದ್ವೇಷ ಅವನಿಗೆ.

ಕುಟುಂಬದ ಯೋಗಕ್ಷೇಮ ವಿಚಾರಿಸಲು ಆಗಾಗ ಮನೆಗೆ ಬರುವ ರಾಜಕೀಯ ಪುಢಾರಿ ರಾಮಣ್ಣ ಹಾಗೂ ತನ್ನ ತಾಯಿಯ ನಡುವೆ ಅನೈತಿಕ ಸಂಬಂಧವಿದೆಯೆಂಬ ಅನುಮಾನದ ಹುತ್ತ ಕಟ್ಟಿಕೊಂಡ ಹುಂಬ. ತಂಗಿ ಕಮಲಳ ತಲೆಯಲ್ಲೂ ತನ್ನ ವಿಚಾರಗಳನ್ನೇ ತುಂಬಿ ಅವಳ ಮನಸ್ಸು-ಬುದ್ಧಿಯನ್ನು ನಿಯಂತ್ರಿಸಲು ಸದಾ ಪ್ರಯತ್ನಿಸುವವನು. ರಾಮಣ್ಣ, ಅವಳಿಗೆ ನೋಡಿದ ಹುಡುಗರಿಗೆಲ್ಲ ಕೆಟ್ಟ ಪತ್ರಗಳನ್ನು ಬರೆದು ಮದುವೆ ಯತ್ನಗಳನ್ನು ಮುರಿದು ತನ್ನ ಗೆಳೆಯ ರಂಗಣ್ಣನಿಗೆ ಅವಳನ್ನು ಕೊಡುವ ಇರಾದೆಯುಳ್ಳವನು.

ತಂದೆಯ ಮೇಲೆ ಸೇಡು ತೀರಿಸಿಕೊಳ್ಳುವುದು ಇದರ ಉದ್ದೇಶ. ರಂಗಣ್ಣ ಸರ್ಕಾರಿ ಗುಮಾಸ್ತನಾಗಿದ್ದವನು. ಲಂಚ ತೆಗೆದುಕೊಂಡ ಆರೋಪದ ಮೇಲೆ ಇದೇ ಮಂತ್ರಿಗಳಿಂದ ಕೆಲಸದಿಂದ ವಜಾ ಆದವನು. ಅವನನ್ನೇ ಮಂತ್ರಿಗಳ ಅಳಿಯನನ್ನಾಗಿ ಮಾಡಿ ಅವರ ತೇಜೋಭಂಗ ಮಾಡುವ ಹುನ್ನಾರ ಜಗನ್ನಾಥನದು. ಮಾತುಮಾತಿಗೂ ತಾಯಿಯನ್ನು ನಿಂದಿಸುವ ಅವನಿಗೆ ಬೇರಾವ ಕೆಲಸವೂ ಇಲ್ಲ.  ಕೆಲಸದಾಳಿನೊಂದಿಗೆ ಇಸ್ಪೀಟ್ ಆಡುವ ಅಭ್ಯಾಸ.

ಮೊದಮೊದಲು ಅಣ್ಣನ ಕೈಗೊಂಬೆಯಾಗಿದ್ದ ಸೂಕ್ಷ್ಮಮತಿ ಕಮಲಾ, ತನಗೆ ಮದುವೆ ಮಾಡಬಯಸುವ ಈ ಗಂಡಸರ ಸ್ವಾರ್ಥದ ಉದ್ದೇಶ ಅರಿತು ಪ್ರತಿಭಟಿಸುತ್ತಾಳೆ. ರಾಮಣ್ಣ ತನ್ನ ಪ್ರತಿಷ್ಠೆಗಾಗಿ, ಅಣ್ಣ ತನ್ನ ಸೇಡಿನ ಸಾಧನೆಗಾಗಿ, ರಂಗಣ್ಣ, ಮಂತ್ರಿ ಪುತ್ರಿಯ ಸ್ಥಾನ-ಮಾನ, ಸಿರಿವಂತಿಕೆಗಾಗಿ ಹೂಡಿರುವ ಬೇಟೆಗೆ ಬಲಿಯಾಗದೆ ಎಲ್ಲರನ್ನೂ ಧಿಕ್ಕರಿಸುವ ಸ್ವತಂತ್ರ ಮನೋವೃತ್ತಿ ತೋರುವಳು. ಪ್ರೀತಿ-ಕನಸುಗಳಿಂದ ವಂಚಿತಳಾದ, ನೋವು-ಶೋಷಣೆಗಳ ಮೂರ್ತಿಯಾದ ತಾಯಿಯ ನೊಂದ ಬದುಕಿನಿಂದ ಪಾಠ ಕಲಿತ ಅವಳು, ತಾಯಿಗೆ ಆಸರೆಯಾಗಿ ದಿಟ್ಟತನ ತೋರುವ ಸ್ತ್ರೀವಾದೀ ಚಿಂತಕಳಾಗಿ ಗೋಚರಿಸುತ್ತಾಳೆ. ಕಡೆಯಲ್ಲಿ ಮಂತ್ರಿಗಳು ಅಪಘಾತದಲ್ಲಿ ಮಡಿದು, ಪರಭಾರೆ ಮಾಡಿದ್ದ ಮನೆ ರಾಮಣ್ಣನ ಪಾಲಾಗಿ ಜಗನ್ನಾಥನ ಉಡಾಫೆಗಳೆಲ್ಲ ಕಳಚಿಕೊಳ್ಳುತ್ತವೆ.

‘ನನ್ನ ತಂಗಿಗೊಂದು ಗಂಡು ಕೊಡಿ’ ಎಂದು ಜಗನ್ನಾಥ ಯಾರನ್ನೂ ಬೇಡುವ ಘಟನೆಗಳಿಲ್ಲದ ಈ ನಾಟಕದ ಶೀರ್ಷಿಕೆ ಎಷ್ಟು ಹೊಂದಿಕೆಯಾಗುತ್ತದೋ ಗೊತ್ತಿಲ್ಲ. ಉಡಾಳನಂತೆ ಕಾಲಹರಣ ಮಾಡುತ್ತ ತಲೆಹರಟೆ ಮಾಡುವ ಅವನ ಬುದ್ಧಿವಂತಿಕೆ ಸಿನಿಕತನವೆನಿಸುತ್ತದೆ. ವಿನಾಕಾರಣ ತಾಯಿಯನ್ನು ಶಂಕಿಸುವ, ತಂಗಿಯ ಮನಸ್ಸಿಗೆ ವಿಷವೆರೆವ, ಸಹಾಯ ಮಾಡಲು ಮನೆಗೆ ಬರುವ ರಾಮಣ್ಣನನ್ನು ಛೇಡಿಸುವ ವ್ಯಕ್ತಿತ್ವದ ಘನಂದಾರಿಕೆ ಅರ್ಥವಾಗುವುದಿಲ್ಲ. ನಾಟಕದ ಆಶಯವನ್ನು ಧ್ವನಿಸಲು  ಜಗನ್ನಾಥನ ಪಾತ್ರ ಚಿತ್ರಿತವಾಗಿರುವುದು ಆಘಾತಕಾರಿ. ಮೊದಮೊದಲು ತನ್ನಣ್ಣನಂತೆ ವಿಚಿತ್ರವಾಗಿ ಮಾತನಾಡುವ ಕಮಲಾ, ಕಡೆಯಲ್ಲಾದರೂ ತಾಯಿಯ ಭಗ್ನಗೊಂಡ ಆಸೆ-ಕನಸುಗಳ ತೀವ್ರತೆಯನ್ನು ಮನಗಂಡು, ತಾಯಿಗೆ ಆಸರೆಯಾಗುವ ಸ್ಪಂದನಾಶೀಲೆಯಾಗಿ, ಸ್ವಾಭಿಮಾನದ, ಸ್ವಂತಬುದ್ಧಿಯ ವಿವೇಕಿಯಂತೆ ವರ್ತಿಸುವುದು ಮೆಚ್ಚುಗೆಯೆನಿಸುತ್ತದೆ.

ಸಮಯ ಸಾಧಕನಾದರೂ ರಾಮಣ್ಣ ಅಷ್ಟೇನೂ ಅಪಾಯಕಾರಿಯಂತೆ ಭಾಸವಾಗದಿದ್ದರೂ ಜಗನ್ನಾಥ ಅವನ ಮೇಲೆ ಅನಗತ್ಯವಾಗಿ ಹರಿಹಾಯುವುದು ಅವನ ಪಾತ್ರಚಿತ್ರಣವನ್ನು ತೆಳ್ಳಗೆ ಮಾಡಿದೆ. ಮಂತ್ರಿಯೊಬ್ಬನ ಖಾಸಗೀ ಜೀವನ ಅವನಿಗಷ್ಟೇ ಸೀಮಿತವೆನಿಸಿ ಯಾವ ಸಾರ್ವತ್ರಿಕ ಮೌಲ್ಯವನ್ನಾಗಲೀ, ಸಾರ್ವಕಾಲಿಕ ಅಂಶವನ್ನಾಗಲೀ ಬಿಂಬಿಸದೆ, ಪ್ರಸ್ತುತ ಕಾಲಘಟ್ಟದ ಸಂದರ್ಭಕ್ಕೆ ಅನುಗುಣವೆನಿಸದು. ಕಡೆಗಾದರೂ ಕಮಲಾ ಎಚ್ಚೆತ್ತುಕೊಂಡು ತನ್ನತನ ಪ್ರಕಟಪಡಿಸಿದ್ದು, ಜ್ವರದ ತಾಪದಿಂದ ಬೇಯುತ್ತಿದ್ದ ತಾಯಿಯನ್ನು, ಅಣ್ಣನಷ್ಟು ನಿಷ್ಕುರುಣೆಯಿಂದ ಖಂಡಿಸದೆ ಮೃದುತ್ವ ಧೋರಣೆ ಮತ್ತು ಸ್ತ್ರೀಸಂವೇದಿ ಚಿಂತನೆಯನ್ನು ಧೈರ್ಯವಾಗಿ ಹೊರಗೆಡಹಿದ್ದು ಸ್ವಾಗತಾರ್ಹ ಅಂಶ. ವೈಚಾರಿಕ ಗಹನತೆ, ವಿಶಿಷ್ಟ ಗುಣಗಳ ಹೇರಿಕೆ, ವಿಮರ್ಶಾತ್ಮಕ ಸ್ತುತ್ಯಂಶಗಳು ಇಲ್ಲ.

ಜಗನ್ನಾಥನಾಗಿ ನಂ.ಯತೀಶ ಕೊಳ್ಳೇಗಾಲ, ಕಂಚಿನ ಕಂಠ, ಸ್ಪಷ್ಟ ಮಾತು, ಪಕ್ವ ಅಭಿನಯದಿಂದ ಇಷ್ಟವಾಗುತ್ತಾರೆ. ಆಳಿನ ಪಾತ್ರದಲ್ಲಿ ಶಿವಪ್ರಸಾದ್ ಭಾಸ್ಕರ ತಮ್ಮ ಸಹಜಾಭಿನಯದಿಂದ ಉತ್ತಮ ನಟನೆ ನೀಡಿದರು. ಕಮಲಳಾಗಿ ಸ್ಪಂದನಾ ಪ್ರಸಾದ್ ಚುರುಕಾಗಿ ಅಭಿನಯಿಸಿದರೆ, ತಾಯಿಯಾಗಿ ನಂದಿನಿ ಪಟವರ್ಧನ್ ಹದವಾಗಿ, ರಾಮಣ್ಣನಾಗಿ ಗಣಪತಿ ಗೌಡ ಪೂರಕವಾಗಿ ನಟಿಸಿದರು. ನಾಟಕದ ಅಸಹಜವೆನಿಸುವ ಅಂಶವೆಂದರೆ, ಭ್ರಷ್ಟಾಚಾರ ಎಂದಿಗೂ ಇದ್ದ ಕಾಲದಲ್ಲಿ ಮಂತ್ರಿಯಾಗಿದ್ದವನು ಕೊಂಚವೂ ಹಣ ಮಾಡದೆ, ಸಾಲಗಾರನಾಗಿ ರಾಮಣ್ಣನಿಗೆ ಮನೆ ಮಾರುವುದು, ಅದೂ ಪಿತ್ರಾರ್ಜಿತವಾಗಿ ಬಂದ ಮನೆಯನ್ನು ಮಗನಿಗೇ ಗೊತ್ತಿಲ್ಲದಂತೆ! ಕಾನೂನುರೀತ್ಯ ಇದು ಸಾಧ್ಯವಿತ್ತೇ ಎಂಬ ಅನುಮಾನ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT