ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪಣಜಿ: ಗೋವಾ ರಾಜಧಾನಿ ಪಣಜಿ ೪೫ನೆಯ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋ­ತ್ಸವದ ಆತಿಥ್ಯಕ್ಕೆ ಸನ್ನದ್ಧ­ವಾಗಿದ್ದು, ಇದೇ ೨೦ ರಿಂದ ೩೦ರವರೆಗೆ ಪಣಜಿಯಲ್ಲಿ ಅಕ್ಷರಶಃ ಸಿನಿಮಾ ಸುಗ್ಗಿ. ಹತ್ತು ದಿನಗಳ ಕಾಲ ಪಣಜಿ ಉತ್ಸವ ಸಿನಿಮಾ ಜಗತ್ತಿನ ಗಮನ ಸೆಳೆಯಲಿದೆ.

ಪಣಜಿ ಹೊರವಲಯದ ಗೋವಾ ವಿಶ್ವ ವಿದ್ಯಾ­ನಿಲಯದ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ನಿರ್ಮಾಣ­ಗೊಂಡಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೋತ್ಸ­ವದ ಉದ್ಘಾಟನಾ ಸಮಾರಂಭ ನಡೆಯಲಿದೆ. ನ. ೨೦ರಂದು (ಗುರುವಾರ) ಸಂಜೆ ಬಾಲಿವುಡ್‌ನ ಹಿರಿಯ ನಟ ಅಮಿತಾಭ್‌ ಬಚ್ಚನ್ ದೀಪ ಬೆಳಗಿಸುವ ಮೂಲಕ ಚಿತ್ರೋತ್ಸವವನ್ನು ಉದ್ಘಾಟಿಸುವರು. ಈ ಪ್ರಕ್ರಿಯೆಯಲ್ಲಿ ಅಮಿ­ತಾಭ್‌ ಅವರಿಗೆ ಕನ್ನಡದ ನಟಿ ರಾಗಿಣಿ ದ್ವಿವೇದಿ ನೆರವಾಗುವರು.

ತಮಿಳು ಚಿತ್ರರಂಗದ ಹಿರಿಯ ನಟ ರಜನಿಕಾಂತ್ ಅವರು ಸಮಾರಂಭದ ಮುಖ್ಯ ಅತಿಥಿ. ಇದೇ ಸಂದರ್ಭದಲ್ಲಿ ಅವರಿಗೆ ಅವರ ಜೀವಮಾನದ ಸಿನಿಮಾ ಸಾಧನೆಗಾಗಿ ಭಾರತೀಯ ಸಿನಿಮಾ ಶತಮಾನೋತ್ಸವ ಪ್ರಶಸ್ತಿ ನೀಡಿ ಗೌರವಿ­ಸುವ ಕಾರ್ಯಕ್ರಮವಿದೆ. ಕೇಂದ್ರ ವಾರ್ತಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್, ಗೋವಾ ನೂತನ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಸಮಾರಂಭದಲ್ಲಿ ಉಪಸ್ಥಿತರಿ­ರುವರು.

ಮೊಹಸಿನ್ ಮಖ್‌ಮಲ್‌ ­ಬಫ್ ನಿರ್ದೇಶನದ ಇರಾನ್ ಚಿತ್ರ ‘ದಿ ಪ್ರೆಸಿಡೆಂಟ್’ ಉದ್ಘಾಟನಾ ಚಿತ್ರವಾಗಿ ಪ್ರದರ್ಶನ­ಗೊಳ್ಳಲಿದೆ. ಭಾರತವೂ ಸೇರಿದಂತೆ ವಿಶ್ವದ ೭೫ ದೇಶಗಳ ೧೭೯ ಸಿನಿಮಾ­ಗಳು ಹತ್ತು ದಿನಗಳ ಅವಧಿ­ಯಲ್ಲಿ ಪ್ರದರ್ಶನ­ಗೊಳ್ಳ-­ಲಿವೆ. ಭಾರತೀಯ ಪನೋರಮಾ ವಿಭಾಗ­ದಲ್ಲಿ ೨೬ ಕಥಾಚಿತ್ರಗಳೂ ಸೇರಿದಂತೆ ೪೧ ಸಿನಿಮಾಗಳು ಆಯ್ಕೆಯಾಗಿವೆ. ಮಲ­ಯಾಳ, ಮತ್ತು ಮರಾಠಿ ಭಾಷೆ­ಗಳ ತಲಾ ೭, ಬೆಂಗಾಳಿಯ ೫, ೨ ಹಿಂದಿ ಹಾಗೂ ಕನ್ನಡ, ಒರಿಯಾ, ತಮಿಳು, ಅಸ್ಸಾಮಿ ಹಾಗೂ ಖಾಸಿ ಭಾಷೆಯ ತಲಾ ಒಂದೊಂದು ಸಿನಿಮಾ­ಗಳು ಪ್ರದರ್ಶನಗೊಳ್ಳಲಿವೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ನಿಧನ­ರಾದ ರಿಚರ್ಡ್ ಅಟೆನ್ ಬರೊ, ಕಾಲಿನ್ ವಿಲಿ­ಯಮ್ಸ್, ಜೋಹ್ರಾ ಸೈಗಲ್, ಸುಚಿತ್ರಾ ಸೆನ್, ಅಕ್ಕಿನೇನಿ ನಾಗೇಶ್ವರ­ರಾವ್ ಮತ್ತು ಫಾರೂಖ್ ಶೇಖ್ ಗೌರವಾರ್ಥ ಅವರ ಚಿತ್ರಗಳು ಪ್ರದರ್ಶನ­ಗೊಳ್ಳಲಿವೆ. ೪೫ನೇ ಚಿತ್ರೋತ್ಸವದಲ್ಲಿ ಚೀನಾ ದೇಶದ ೧೨ ಚಿತ್ರಗಳು ಪ್ರದರ್ಶನ­ಗೊಳ್ಳಲಿವೆ. ಆ ದೇಶದ ೪೫ ಮಂದಿ ಕಲಾವಿದರು ಮತ್ತು ತಂತ್ರಜ್ಞರು ಚಿತ್ರೋ­ತ್ಸವ­ದಲ್ಲಿ ಭಾಗವಹಿಸುವುದು ವಿಶೇಷ. ಈಶಾನ್ಯ ಭಾರತ ರಾಜ್ಯಗಳ ಸಿನಿಮಾಗಳಿಗೂ ವಿಶೇಷ ಆದ್ಯತೆ ನೀಡಲಾಗಿದೆ.

ಪಣಜಿಯ ಐನಾಕ್ಸ್ ಚಿತ್ರಮಂದಿರ, ಕಲಾ ಅಕಾಡೆಮಿಗಳಲ್ಲಿ ಚಿತ್ರೋತ್ಸವದ ಪ್ರತಿನಿಧಿಗಳಿಗೆ ಮತ್ತು ಗೋವಾ ನಾಗರಿಕರು ಮಡಗಾಂವ್‌ನ ರವೀಂದ್ರ ಭವನ ಹಾಗೂ ರಾಜ್ಯದ ವಿವಿಧ ಪಟ್ಟಣಗಳ ಸ್ಥಳೀಯ ಚಿತ್ರ ಮಂದಿರ­ಗಳಲ್ಲಿ ಸಿನಿಮಾಗಳನ್ನು ವೀಕ್ಷಿಸಬಹುದು.
ಪಣಜಿಯಲ್ಲಿ ಅಂತರರಾಷ್ಟ್ರೀಯ ಚಲನ­ಚಿತ್ರೋತ್ಸವ ನಡೆಸುವುದು ಗೋವಾ ಸರ್ಕಾರಕ್ಕೆ ಪ್ರತಿಷ್ಠೆ ವಿಷಯ. ಪಣಜಿಯನ್ನು ಚಿತ್ರೋತ್ಸವದ ಕಾಯಂ ನೆಲೆಯನ್ನಾಗಿ ಪರಿಗಣಿಸುವ ವಿಷಯ­ದಲ್ಲಿ ೨೦೦೫ರಿಂದ ಇದ್ದ ಅನಿಶ್ಚಿತತೆ ಈಗ ಕೊನೆ­ಗೊಂಡಿದೆ.

ಕೇಂದ್ರ ಸರ್ಕಾರ ಪಣಜಿಗೆ ಚಿತ್ರೋ­ತ್ಸವದ ಕಾಯಂ ನೆಲೆಯ ಮಾನ್ಯತೆ ನೀಡಿದೆ. ಚಿತ್ರೋತ್ಸವವನ್ನು ಅದ್ಧೂರಿಯಾಗಿ ನಡೆ­ಸಲು ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಚಿತ್ರೋತ್ಸವಕ್ಕೆ ಬರುವ ದೇಶದ ಹಾಗೂ ವಿದೇಶಗಳ ಸಿನಿಮಾಸಕ್ತರಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT