ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ರೈತರ ಅನಿರ್ದಿಷ್ಟಾವಧಿ ಧರಣಿ

Last Updated 26 ನವೆಂಬರ್ 2014, 6:51 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಿ ರೈತಸಂಘ, ಹಸಿರು ಸೇನೆ ಹಾಗೂ ಸರ್ವ ಪಕ್ಷ, ಸಂಘಟನೆಗಳ ವತಿಯಿಂದ ಬಾಳಗಡಿಯ ತಾಲ್ಲೂಕು ಕಚೇರಿ ಎದುರು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

ಜಯಪುರದ ದುರ್ಗಾಪರಮೇಶ್ವರಿ ಸಭಾಭವನ­ದಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ರೈತ ಸಂಘಟನೆಗಳ ಮುಖಂಡರು ಭಾನುವಾರ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ತೆಗೆದು­ಕೊಳ್ಳಲಾಯಿತು.

ಇದೇ ತಿಂಗಳ 28ರಂದು ತಾಲ್ಲೂಕಿನ ಲೋಕನಾಥ­ಪುರದ ಕರಿಮನೆ ಭೂ ಅಭಿವೃದ್ಧಿ ಬ್ಯಾಂಕಿನವರು ನಡೆಸಲು ಉದ್ದೇಶಿಸಿರುವ ರೈತರ ಜಮೀನು ಹರಾಜು ಪ್ರಕ್ರಿಯೆಯನ್ನು ಕೈಬಿಡಬೇಕು. ಜೀವನೋಪಾಯ­ಕ್ಕಾಗಿ ಕೃಷಿ ಕಾರ್ಯ ನಡೆಸಲು ರೈತರು ಮಾಡಿರುವ ಸಣ್ಣಪುಟ್ಟ ಒತ್ತುವರಿ ತೆರವು ಪ್ರಕ್ರಿಯೆಯನ್ನು ಸರ್ಕಾರ ಕೈಬಿಟ್ಟು, ಅವರಿಗೆ ಹಕ್ಕುಪತ್ರ ನೀಡಬೇಕು.  ಅಡಿಕೆ ಹಳದಿ ಎಲೆ ರೋಗದಿಂದ ಸಂತ್ರಸ್ಥರಾಗಿರುವ ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ಅಗತ್ಯ ಪರಿ­ಹಾರ ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಗೋರಖ್‌ಸಿಂಗ್ ವರದಿಯನ್ನು ಯಥಾ­ವತ್ ಜಾರಿ ಮಾಡಬೇಕು ಎಂದು  ಒತ್ತಾಯಿಸ­ಲಾಯಿತು.

ರಾಷ್ಟ್ರೀಯ ಉದ್ಯಾನವನ, ಹುಲಿಯೋಜನೆ ಇನ್ನಿತರ ಜನವಿರೋಧಿ ಯೋಜನೆಗಳ ನೆಪದಲ್ಲಿ ಗಿರಿಜನರು ಹಾಗೂ ರೈತರನ್ನು ಬಲವಂತದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಕೂಡಲೇ ಕೈಬಿಡ­ಬೇಕು. ಈಗಾಗಲೇ ಜಮೀನು ತೊರೆದು ಹೋಗಿರುವ ರೈತರೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಗೊಳಿಸಿ ಅವರ ಕೃಷಿ ಜಮೀನು ಬಿಟ್ಟುಕೊಡ­ಬೇಕು. ಪ್ರತೀ ವರ್ಷದಂತೆ ಅಡಿಕೆ ಕೊಯ್ಲು ಸಮಯ­ದಲ್ಲಿ ಉಂಟಾಗಿರುವ ಕೃತಕ ಮಾರುಕಟ್ಟೆ ದರ ಕುಸಿತ ತಡೆಗೆ ಅಗತ್ಯ ಕ್ರಮ ಕೈಗೊಂಡು ಅಡಿಕೆಗೆ ಸೂಕ್ತ ಮಾರುಕಟ್ಟೆ ದರ ಒದಗಿಸಬೇಕು. ಮುಂತಾದ ಬೇಡಿಕೆ­ಗಳನ್ನು ಮುಂದಿಟ್ಟುಕೊಂಡು ಕೊಪ್ಪ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನವಾಯಿತು.

ಎಲ್ಲಾ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಸತ್ಯಾಗ್ರಹದಲ್ಲಿ ಪಾಲ್ಗೊಂಡು, ಸರ್ಕಾರ­ದಿಂದ ಸ್ಪಷ್ಟ ಭರವಸೆ ದೊರೆಯುವ ತನಕ ಹೋರಾಟ ಮುಂದುವರೆಸಲು ನಿರ್ಧರಿಸಲಾಯಿತು.

ರೈತ ಸಂಘದ ಕ್ಷೇತ್ರಾಧ್ಯಕ್ಷ ಕೆ.ಸಿ. ಸತೀಶ್ ಅಧ್ಯಕ್ಷತೆ­ಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ, ಜಿ.ಪಂ.ಸದಸ್ಯ ಕೆ.ಎಸ್. ರವೀಂದ್ರ ಕುಕ್ಕುಡಿಗೆ, ಮಾಜಿ ಅಧ್ಯಕ್ಷ ಎಚ್.ಎಂ. ಸತೀಶ್, ಕಿಸಾನ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸಚಿನ್ ಮೀಗ, ತಾ.ಪಂ. ಸದಸ್ಯ ಬಿ.ಆರ್. ನಾರಾ­ಯಣ್, ತಾಲ್ಲೂಕು  ರೈತ ಸಂಘದ ಅಧ್ಯಕ್ಷ ಶಿವಪುರ ಹರೀಶ್, ಕಾರ್ಯಾಧ್ಯಕ್ಷ ನವೀನ್ ಕರುವಾನೆ, ಸಂಚಾಲಕ ಸುಧೀರ್ ಕುಮಾರ್ ಮುರೊಳ್ಳಿ, ಹಸಿರು­ಸೇನೆ ಅಧ್ಯಕ್ಷ ಚಿಂತನ್ ಬೆಳಗೊಳ, ಮುಖಂಡರಾದ ತಲವಾನೆ ಪ್ರಕಾಶ್‌, ಮಳಿಗೆ ಚಂದ್ರಶೇಖರ್, ಡಿ.ಬಿ.ರಾಜೇಂದ್ರ, ಮಳಿಗೆ ಚಂದ್ರಶೇಖರ್, ನೆಲ್ಲಿಹಡ್ಲು ನಾಗಭೂಷಣ, ಪ್ರದೀಪ್ ಹೆಬ್ಬಾರ್, ಗುರು­ಮೂರ್ತಿ, ಕಮಾಲಿಯಾ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT