ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ವಿವಾಹ ಕೈಂಕರ್ಯ ಶುರು

ರಾಜವಂಶಸ್ಥ ಯದುವೀರ ಮದುವೆಗೆ ಅರಮನೆ ಸಜ್ಜು
Last Updated 25 ಜೂನ್ 2016, 7:00 IST
ಅಕ್ಷರ ಗಾತ್ರ

ಮೈಸೂರು: ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮದುವೆ ಸಿದ್ಧತೆಗಳು ಪೂರ್ಣಗೊಂಡಿದ್ದು, ವಿಶ್ವವಿಖ್ಯಾತ ಅರಮನೆಯಲ್ಲಿ ಶನಿವಾರದಿಂದ ಬುಧವಾರದವರೆಗೆ ವಿವಾಹ ಕಾರ್ಯಕ್ರಮಗಳು ನೆರವೇರಲಿವೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮತ್ತು ಪ್ರಮೋದಾದೇವಿ ದತ್ತುಪುತ್ರ ಯದುವೀರ್‌ ಅವರು ರಾಜಸ್ತಾನದ ಡುಂಗುರಪುರದ ಹರ್ಷವರ್ಧನ್‌ ಸಿಂಗ್‌ ಮತ್ತು ಮಹೇಶ್ರೀ ಕುಮಾರಿ ಪುತ್ರಿ ತ್ರಿಷಿಕಾ ಕುಮಾರಿ ಅವರನ್ನು ವರಿಸಲಿದ್ದಾರೆ.

ಅರಮನೆಯ ಮುಂಭಾಗದಲ್ಲಿ ವೇದಿಕೆ, ಚಪ್ಪರ ನಿರ್ಮಿಸಿ, ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಅರಮನೆ ಆವರಣ, ಕಲ್ಯಾಣಮಂಟಪ, ದರ್ಬಾರ್‌ ಸಭಾಂಗಣಗಳಲ್ಲಿ ಆಸನ, ಮಂಟಪಗಳನ್ನು ಸಜ್ಜುಗೊಳಿಸಲಾಗಿದೆ.

ಕಲ್ಯಾಣ ಮಂಟಪದಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ 550 ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ದರ್ಬಾರ್‌ ಸಭಾಂಗಣ ಮತ್ತು ಅರಮನೆ ಅಂಗಳದಲ್ಲಿ ಸುಮಾರು 2,500 ಆಸನ ವ್ಯವಸ್ಥೆ ಮಾಡಲಾಗಿದೆ. ವಿವಾಹ ಕಾರ್ಯಕ್ರಮ ವೀಕ್ಷಣೆಗೆ ಐದು ಕಡೆ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಲಾಗಿದೆ.

ಆಹ್ವಾನಿತರು ಸರದಿಯಲ್ಲಿ ಸಾಗಲು ಬ್ಯಾರಿಕೇಡ್‌ಗಳನ್ನು ಹಾಕಿ ಮಾರ್ಗ ನಿರ್ಮಿಸಲಾಗಿದೆ. ರಾಜವಂಶಸ್ಥರ ಖಾಸಗಿ ನಿವಾಸದ ಮುಂಭಾಗದಲ್ಲಿ ಪೆಂಡಾಲ್‌ ಹಾಕಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ.

ವಧುವಿನ ಕಡೆಯವರು ಸೇರಿದಂತೆ ವಿವಿಧ ರಾಜಮನೆತನದವರು, ಗಣ್ಯರು, ನೆಂಟರಿಷ್ಟರು ಶುಕ್ರವಾರ ಸಂಜೆಯೇ ನಗರಕ್ಕೆ ಬಂದಿದ್ದು, ವಿವಿಧ ಹೋಟೆಲುಗಳಲ್ಲಿ ಬೀಡುಬಿಟ್ಟಿದ್ದಾರೆ.

ಶನಿವಾರ ನಸಕಿನ 4 ಗಂಟೆಗೆ ವರನ ಎಣ್ಣೆ ಸ್ನಾನದೊಂದಿಗೆ ಶಾಸ್ತ್ರಗಳು ಆರಂಭವಾಗುತ್ತವೆ. ಬುಧವಾರ ರಾತ್ರಿ ನವದಂಪತಿ ಮೆರವಣಿಗೆವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

26ರಂದು ವರಪೂಜೆ ನಡೆಯಲಿದೆ. 27ರಂದು ಬೆಳಿಗ್ಗೆ 9.05ರಿಂದ 9.35ರವರೆಗೆ ಮುಹೂರ್ತ ನೆರವೇರಲಿದೆ. 28ರಂದು ರಾತ್ರಿ 7.30ರಿಂದ 8.30ರ ವರೆಗೆ ದರ್ಬಾರ್‌ ಸಭಾಂಗಣದಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.

ಆಹ್ವಾನಿತರಿಗೆ ಮಾತ್ರ ಪ್ರವೇಶ: ವಿವಾಹ ಕಾರ್ಯಕ್ರಮಗಳಿಗೆ ಪಾಸ್ ಇದ್ದವರಿಗೆ ಮಾತ್ರ ಪವೇಶ ಕಲ್ಪಿಸಲಾಗಿದೆ. ಅರಮನೆ ಪ್ರವೇಶ ನಿರ್ಬಂಧ: ಮದುವೆ ಅಂಗವಾಗಿ ಜೂನ್‌ 24ರಿಂದ 29ರ ವರೆಗೆ ಸಾರ್ವಜನಿಕರಿಗೆ ಅರಮನೆಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಅರಮನೆ ಪ್ರವೇಶ ನಿರ್ಬಂಧಿಸಿರುವ ಮಾಹಿತಿ ಗೊತ್ತಿಲ್ಲದ ಕೆಲ ಪ್ರವಾಸಿಗರು ಶುಕ್ರವಾರ ಅರಮನೆವರೆಗೆ ಬಂದು ನಿರಾಸೆಯಿಂದ ವಾಪಸ್ ತೆರಳಿದರು.

ಅರಮನೆ ಪ್ರವೇಶ ನಿರ್ಬಂಧ: ಪ್ರವಾಸಿಗರಿಗೆ ನಿರಾಸೆ
ಮೈಸೂರು: 
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮದುವೆ ನಿಮಿತ್ತ ಜೂನ್‌ 24ರಿಂದ ಆರು ದಿನ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧ ವಿಧಿಸಿದ್ದು, ಅರಮನೆ ವೀಕ್ಷಣೆಗೆ ಶುಕ್ರವಾರ ಬಂದಿದ್ದ ಬಹಳಷ್ಟು ಪ್ರವಾಸಿಗರು ನಿರಾಸೆಯಿಂದ ವಾಪಸಾದರು.

ಪ್ರವಾಸಿಗರಿಂದ ಸದಾ ಗಿಜಿಗುಡು ತ್ತಿದ್ದ ಅರಮನೆ ಆವರಣದಲ್ಲಿ ಶುಕ್ರವಾರ ಜನಜಂಗುಳಿ ಇರಲಿಲ್ಲ. ವಿಶ್ವವಿಖ್ಯಾತ ಅರಮನೆಯನ್ನು ಕಣ್ತುಂಬಿಕೊಳ್ಳಲು ದೇಶವಿದೇಶ ಗಳಿಂದ ಬಂದಿದ್ದ ಜನರು, ಪ್ರವೇಶದ್ವಾರದಲ್ಲಿ ಅಳವಡಿಸಿದ್ದ ಪ್ರವೇಶ ನಿರ್ಬಂಧ ಫಲಕವನ್ನು ನೋಡಿ ಬೇಸರದಿಂದ ಮರಳಿದರು.

‘ಒಂದು ತಿಂಗಳ ಪ್ರವಾಸ ಹಾಕಿಕೊಂಡು ಭಾರತಕ್ಕೆ ಬಂದಿದ್ದೇನೆ. ಅರಮನೆ ವೀಕ್ಷಣೆಗೆ ಅವಕಾಶ ಸಿಗದಿರುವುದು ಬೇಸರ ಮೂಡಿಸಿದೆ. ಅರಮನೆ ಪ್ರವೇಶ ನಿರ್ಬಂಧಿಸಿರುವುದು ನನಗೆ ತಿಳಿದಿರಲಿಲ್ಲ.

ಅರಮನೆ ಮಂಡಳಿಯ ವೆಬ್‌ಸೈಟ್‌ನಲ್ಲಿ ಗುರುವಾರ ಈ ಬಗ್ಗೆ ಮಾಹಿತಿ ಇರಲಿಲ್ಲ. ಇದು ಗೊತ್ತಿದ್ದರೆ ಕರ್ನಾಟಕದ ಇತರ ಸ್ಥಳಗಳನ್ನು ಸಂದರ್ಶಿಸಿ ಈ ಮದುವೆ ಮುಗಿದ ಬಳಿಕವೇ ಮೈಸೂರಿಗೆ ಬರುತ್ತಿದ್ದೆ’ ಎಂದು ಜರ್ಮನಿಯ ಮಹಿಳೆ ಮಾರ್ಟಿನ್‌ ವಸ್ಲೆ ಹೇಳಿದರು.

‘ ಅರಮನೆಯನ್ನು ನೋಡುವುದಕ್ಕಾಗಿಯೇ ಮೈಸೂರಿಗೆ ಬಂದಿದ್ದೆವು. ಆದರೆ, ಅದಕ್ಕೆ ಅವಕಾಶ ಸಿಗದಿರುವುದರಿಂದ ಬೇಜಾರಾಗಿದೆ. ಪ್ರವೇಶ ನಿರ್ಬಂಧಿಸಿರುವುದರಿಂದ ನನ್ನಂಥ ಬಹಳಷ್ಟು ಪ್ರವಾಸಿಗರು ನಿರಾಶರಾಗಿದ್ದಾರೆ’ ಎಂದು ಕೇರಳದ ತುಳಸಿ ಹರೀಶ್‌ ಹೇಳಿದರು.

ಮದುವೆ  ಅಂಗವಾಗಿ ಬಿಗಿ ಪೊಲೀಸ್‌ ಭದ್ರತೆ ಹಾಕಲಾಗಿದೆ. ಅಲ್ಲದೇ, ಸಂಜೆ ವೇಳೆ ಅರಮನೆಯ ದೀಪಗಳನ್ನು ಬೆಳಗಿಸಲು ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT