ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನ ಕರ್ನಾಟಕ ಬಂದ್‌ಕರೆಗೆ ವ್ಯಾಪಕ ಬೆಂಬಲ

ಮೇಕೆದಾಟು ಅಣೆಕಟ್ಟೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ಒಕ್ಕೊರಲ ಆಗ್ರಹ
Last Updated 17 ಏಪ್ರಿಲ್ 2015, 20:08 IST
ಅಕ್ಷರ ಗಾತ್ರ

ಬೆಂಗಳೂರು: ತಿಂಗಳ ಒಳಗಾಗಿ ಮೇಕೆ ದಾಟು ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಬೇಕೆಂದು ಆಗ್ರಹಿಸಿ ಕನ್ನಡ ಒಕ್ಕೂಟ  ಕರೆ ನೀಡಿರುವ ಶನಿವಾರದ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

‘ಬಂದ್‌ಗೆ ಭಾರಿ ಬೆಂಬಲ ವ್ಯಕ್ತವಾಗಿ­ರು­ವುದರಿಂದ ಸಂಪೂರ್ಣ ಯಶಸ್ವಿ­ಯಾ­ಗುವ ವಿಶ್ವಾಸ ಇದೆ’ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ತಿಳಿಸಿದರು. ‘ವಿವಿಧ ಸಂಘಟನೆಗಳ ಜೊತೆಗೆ ಶಾಸಕ ಕೆ.ಎಸ್‌. ಪುಟ್ಟಣಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ರೈತ ಮುಖಂಡ ಜಿ. ಮಾದೇ­ಗೌಡ, ಸಾಹಿತಿ ಚಂದ್ರಶೇಖರ ಪಾಟೀಲ ಸೇರಿ­ದಂತೆ ಹಲವರು ಬೆಂಬಲ ­ಸೂಚಿ­ಸಿ­ದ್ದಾರೆ’ ಎಂದರು.

‘ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ­ಗಳಿಗೆ ಕಾವೇರಿ ಕುಡಿಯುವ ನೀರು ಪೂರೈಸುವುದು, ಉತ್ತರ ಕರ್ನಾಟಕದ ಬೇಡಿಕೆಗಳನ್ನು ಈಡೇರಿಸುವುದು ಪ್ರಮುಖ ಅಂಶಗಳು’ ಎಂದು ವಾಟಾಳ್‌ ನಾಗರಾಜ್‌ ಹೇಳಿದರು. ಬಂದ್‌ಗೆ ಸಹಕರಿಸಲು ಪ್ರಚಾರ
ಶನಿವಾರದ ಬಂದ್‌ಗೆ ಬೆಂಬಲ ಸೂಚಿ­ಸುವಂತೆ ಕೋರಿ ಕನ್ನಡ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರಚಾರ ಕಾರ್ಯ ನಡೆಸಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಮೀಪದ ಕೆಂಪೇ­ಗೌಡ ಪ್ರತಿಮೆಯಿಂದ ಪ್ರಚಾರ ಆರಂಭಗೊಂಡಿತು.  ಬಳಿಕ ಗಾಂಧಿ­­ನಗರ, ಜಯನಗರ, ಕೋರ­ಮಂಗಲ, ಆಡುಗೋಡಿ, ಮಹಾತ್ಮ ಗಾಂಧಿ ರಸ್ತೆ ಸೇರಿ­ದಂತೆ ನಗರದ ಪ್ರಮುಖ  ಬಡಾವ­ಣೆ­ಗಳಲ್ಲಿ ಬಂದ್‌ಗೆ ಬೆಂಬ­ಲಿಸುವಂತೆ ಕೋರಿ ಪ್ರಚಾರ ನಡೆಸಲಾಯಿತು.

ಪ್ರಚಾರದಲ್ಲಿ ಡಾ. ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಕನ್ನಡ ಸೇನೆಯ ಟಿ.ಆರ್‌. ಕುಮಾರ್‌, ಕರ್ನಾಟಕ ರಕ್ಷಣಾ ವೇದಿ­ಕೆಯ ಪ್ರವೀಣ್‌ ಕುಮಾರ್‌ ಶೆಟ್ಟಿ, ಶಿವರಾಮೇಗೌಡ ಮುಂತಾದವರು ಪಾಲ್ಗೊಂಡಿದ್ದರು.
‘ಶಾಂತ ರೀತಿಯಲ್ಲಿ ನಡೆಸಲು ಉದ್ದೇ­ಶಿ­ಸಿರುವ ಬಂದ್‌ಗೆ ಬೆಂಬಲಿಸು­ವಂತೆ ಕೋರಿ ಶುಕ್ರವಾರ ಬೆಂಗಳೂರಿನಲ್ಲಿ  ಸುಮಾರು 120 ಕಿ.ಮೀ  ಪ್ರಚಾರ ನಡೆಸಿ­ದ್ದೇವೆ. ಎಲ್ಲೆಡೆ ಭಾರಿ ಬೆಂಬಲ ವ್ಯಕ್ತ­ವಾಗಿದೆ’ ಎಂದು ವಾಟಾಳ್‌ ಅವರು ತಿಳಿಸಿದರು.

ವಿವಿಧ ಸಂಘಟನೆಗಳ ಬೆಂಬಲ
ಕನ್ನಡ ಒಕ್ಕೂಟ ಕರೆ ನೀಡಿರುವ ಬಂದ್‌ಗೆ ವಕೀಲರ ಸಂಘ ಬೆಂಗಳೂರು, ರಾಜ್ಯ ಸರ್ಕಾರ ಹಾಗೂ ಸ್ವಾಮ್ಯ ಸಂಘ ಸಂಸ್ಥೆಗಳ ವಾಹನ ಚಾಲಕರ ಒಕ್ಕೂಟ, ಫೆಡರೇಶನ್‌ ಆಫ್‌ ಗೂಡ್ಸ್‌ ಟ್ರಕ್‌ ಅಸೋಸಿಯೇಷನ್‌, ಎಪಿಎಂಸಿ ಯಾರ್ಡ್‌ ವರ್ತಕರ ಸಂಘ, ಅಂಬೇಡ್ಕರ್‌ ಜನತಾ ಪಕ್ಷ, ಕರ್ನಾಟಕ ಗಡಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಜನ ರಕ್ಷಣಾ ಸೇನಾ ಸಮಿತಿ, ರಾಜ್ಯ ಒಕ್ಕಲಿಗರ ಒಕ್ಕೂಟ, ಜಯ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ, ಅಖಿಲ ಕರ್ನಾಟಕ ಕೆಥೋಲಿಕ್‌ ಕ್ರೈಸ್ತರ ಕನ್ನಡ ಸಂಘ ಹಾಗೂ ರಾಜ್ಯ ಒಕ್ಕಲಿಗರ ಸಂಘ ಬೆಂಬಲ ಸೂಚಿಸಿವೆ.

ಶನಿವಾರದ ಬಂದ್‌ಗೆ ಬೆಂಬಲಿ­ಸು­ವುದಾಗಿ ಗೋಪಾಲನ್‌ ಮಾಲ್‌ ಸಮೂಹ ತಿಳಿಸಿದೆ. ‘ರಾಜ್ಯದ ಹಿತದೃಷ್ಟಿ­ಯಿಂದ ಕರೆ ನೀಡಿರುವ ಬಂದ್‌ಗೆ ಪ್ರತಿ­ಯೊಬ್ಬರು ಬೆಂಬಲಿಸುವ ಅಗತ್ಯ­ವಿದೆ. ಆದಕಾರಣ ಶನಿವಾರ ಸಂಜೆ 6ರ ವರೆಗೆ ಸಮೂಹಕ್ಕೆ ಸೇರಿದ ಎಲ್ಲ ಮಾಲ್‌­ಗಳನ್ನು ಬಂದ್‌ ಇಡಲು ನಿರ್ಧರಿಸ­ಲಾಗಿದೆ’ ಎಂದು ಸಮೂಹದ ಪ್ರಕಟಣೆ ತಿಳಿಸಿದೆ.

ನಗರದಲ್ಲಿ ಬಿಗಿ ಬಂದೋಬಸ್ತ್‌
ಕನ್ನಡ ಪರ ಸಂಘಟ­ನೆಗಳು ಶನಿವಾರ ಬಂದ್‌ಗೆ ಕರೆ ನೀಡಿರು­ವು­­­ದ­ರಿಂದ ನಗರದಲ್ಲಿ ಮುಂಜಾ­ಗ್ರತಾ ಕ್ರಮ­ವಾಗಿ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

‘ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ನ 60 ತುಕಡಿಗಳು, ಕ್ಷಿಪ್ರ ಕಾರ್ಯ ಪಡೆಯ ಎರಡು ಕಂಪೆನಿಗಳು, ಗೃಹ ರಕ್ಷಕ ದಳದ 500 ಸಿಬ್ಬಂದಿ, ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ನಗರದ ಎಲ್ಲ ಠಾಣೆಗಳ ಪೊಲೀಸರು ಭದ್ರತೆ ಒದಗಿಸಲಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

‘ನಗರದ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಜಾಥಾ ನಡೆಸುವುದಾಗಿ ಸಂಘಟನೆಗಳು ಹೇಳಿವೆ. ಇದಕ್ಕೆ ಅನುಮತಿ ನೀಡಲಾ­ಗಿದೆ. ಇಡೀ ಜಾಥಾವನ್ನು ಸಿಬ್ಬಂದಿ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳ­ಲಿದ್ದು, ಶಾಂತಿ ಕದಡುವ ವ್ಯಕ್ತಿಗಳನ್ನು ಸ್ಥಳದಲ್ಲೇ ಬಂಧಿಸಲಾಗುವುದು. ಸಂಘ­ಟನೆಗಳ ಮುಖಂಡರ ಜತೆ ಮತ್ತೊಂದು ಸಭೆ ಕರೆದು ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮಾಡಲಾಗುವುದು’ ಎಂದರು.

‘ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರಿಗೆ ತೊಂದರೆ ಕೊಡುವ­ವರ ವಿರುದ್ಧ ಕಠಿಣ ಕ್ರಮ ಜರುಗಿಸ­ಲಾ­ಗುವುದು. ಬಂದ್ ಅಥವಾ ಪ್ರತಿಭಟ­ನೆ­ಗಳ ವೇಳೆ ವಿನಾ ಕಾರಣ ಗಲಾಟೆ ಮಾಡುವ ಪ್ರವೃತ್ತಿವುಳ್ಳ ಹಾಗೂ ಅಪರಾಧ ಹಿನ್ನೆಲೆವುಳ್ಳ ವ್ಯಕ್ತಿಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ’ ಎಂದು ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT