ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕಾಂಗ್ರೆಸ್‌ ಕಾರ್ಯಕಾರಿಣಿ

Last Updated 18 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚುನಾವಣೆ­ಯಲ್ಲಿ ತೋರಿದ ಅತ್ಯಂತ ಕಳಪೆ ಸಾಧನೆಯಿಂದ ಆಘಾತ­ಕ್ಕೊಳಗಾ­ಗಿರುವ ಕಾಂಗ್ರೆಸ್‌ ಪಕ್ಷದ ಕಾರ್ಯ­ಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಸಭೆ ಸೋಮವಾರ ಇಲ್ಲಿ ನಡೆಯಲಿದೆ.
ಪಕ್ಷವನ್ನು ಪುನರುಜ್ಜೀವನ­ಗೊಳಿಸು­ವುದಕ್ಕೆ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಕೂಗು ಸಭೆಯಲ್ಲಿ ಕೇಳಿಬರುವ ಸಾಧ್ಯತೆ ಎಂಬ ವದಂತಿ ಇದೆ.

ಸೋಲಿಗೆ ರಾಹುಲ್‌ ಗಾಂಧಿ ಅವರತ್ತ ಯಾರೊ­ಬ್ಬರೂ ಬೆಟ್ಟು ಮಾಡದಿದ್ದರೂ, ಅವರ ಸಲಹೆಗಾರ­ರಾಗಿದ್ದ ಜೈರಾಂ ರಮೇಶ್‌, ಮೋಹನ್‌ ಗೋಪಾಲ್‌, ಮಧು­ಸೂದನ್‌ ಮಿಸ್ತ್ರಿ ಮತ್ತು ಮೋಹನ್‌ ಪ್ರಕಾಶ್ ಅವರ ಪಾತ್ರವನ್ನು ಪ್ರಶ್ನಿಸುವ ಸಾಧ್ಯತೆ ಹೆಚ್ಚಾಗಿದೆ.
ಸೋಲಿಗೆ ಕಾರಣಗಳ ಶೋಧನೆಯಲ್ಲಿ ಕಾಂಗ್ರೆಸ್‌ ತೊಡಗಿರು­ವಂತೆಯೇ ಪಕ್ಷದ ಹಿರಿಯ ಮುಖಂಡ ಕಮಲ್‌ನಾಥ್‌, ‘ಪೋಷಕ ರಾಜಕಾರಣ’ದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಇನ್ನಷ್ಟು ನಿರ್ದಾಕ್ಷಿಣ್ಯರಾಗಿರ­ಬಹುದಿತ್ತು ಎಂದಿರುವ ಕಮಲ್‌ನಾಥ್‌, ಪಕ್ಷದಲ್ಲಿ ಸಂವಹನದ ಕೊರತೆ ಇತ್ತು ಎಂದು ಹೇಳಿದ್ದಾರೆ.  ಕಾರ್ಯಕರ್ತ­ರೊಂದಿ­ಗಿನ ಸಂವಹನ ಕೊರತೆ ಬಗ್ಗೆ ಸಿಂಗ್‌ ಸಂಪುಟದ ಹಲವು ಸಚಿವರು ಸಭೆಯಲ್ಲಿ ತೀಕ್ಷ್ಣ ಪ್ರಶ್ನೆಗಳನ್ನು  ಎದುರಿಸುವ ಸಂಭವವಿದೆ.

ಚುನಾವಣೆಯಲ್ಲಿ ಹಲವು ಸಚಿವರು ಹೀನಾಯವಾಗಿ ಸೋತಿರುವುದಕ್ಕೆ, ಆ ಸಚಿವರ ‘ಅಹಂಕಾರ’ ಮತ್ತು ಕಾರ್ಯ­ಕರ್ತರೊಂದಿಗೆ ಸೂಕ್ತ ಸಂಪರ್ಕ ಹೊಂದಿರದಿದ್ದುದೇ ಕಾರಣ ಎಂದು ಹಿರಿಯ ಮುಖಂಡ­ರೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ರಾಜೀನಾಮೆ ನೀಡುವ ಸಾಧ್ಯತೆಯನ್ನು ಪಕ್ಷದ ಮೂಲಗಳು ಈಗಾಗಲೇ ತಳ್ಳಿಹಾಕಿದ್ದರೂ, ಪಕ್ಷದ ಚುನಾ­ವಣಾ ಪ್ರಚಾರ ಮತ್ತು ಮೈತ್ರಿ ತಂತ್ರಗಾರಿಕೆ ಬಗ್ಗೆ  ಸಭೆಯಲ್ಲಿ ತೀಕ್ಷ್ಣ ಟೀಕೆಗಳು ವ್ಯಕ್ತವಾಗುವ ನಿರೀಕ್ಷೆ ಇದೆ.

ರಾಹುಲ್‌ ಕಾರ್ಯ ವೈಖರಿ ಬಗ್ಗೆ ಪ್ರಶ್ನೆಗಳು ಕೇಳಿ­ಬಂದಿದೆ­ಯಾದರೂ, ಸೋನಿಯಾ ಗಾಂಧಿ ಅಧ್ಯಕ್ಷತೆ­ಯಲ್ಲಿ ನಡೆಯುವ ಈ ಸಭೆ­ಯಲ್ಲಿ  ಒಬ್ಬರಾದರೂ ಆ ಪ್ರಶ್ನೆಗಳನ್ನು ಕೇಳುವ ಬಗ್ಗೆ ಸಂಶಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT