ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ತೆಲಂಗಾಣ ಬಂದ್‌ಗೆ ಕರೆ

ಆಂಧ್ರಕ್ಕೆ ತೆಲಂಗಾಣದ ಹಳ್ಳಿಗಳು: ಸುಗ್ರೀವಾಜ್ಞೆ ಸಾಧ್ಯತೆ
Last Updated 28 ಮೇ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಪೋಲಾವರಂ ನೀರಾವರಿ ಯೋಜನೆ­ಯನ್ನು ಪೂರ್ಣಗೊಳಿಸಲು ತೆಲಂಗಾಣದ ಕೆಲ ಹಳ್ಳಿಗಳನ್ನು ಆಂಧ್ರಪ್ರದೇಶಕ್ಕೆ ಸೇರಿಸುವ ಪ್ರಸ್ತಾಪವನ್ನು ವಿರೋಧಿಸಿ, ತೆಲಂಗಾಣ ರಾಷ್ಟ್ರೀಯ ಸಮಿತಿ ಮತ್ತು ಹಲವು ಸಂಘಟನೆಗಳು ಗುರುವಾರ ತೆಲಂಗಾಣ ಬಂದ್‌ಗೆ ಕರೆ ನೀಡಿವೆ.

ಕೇಂದ್ರದ ಹೊಸ ಸರ್ಕಾರವು ಪೋಲಾವರಂ ಯೋಜನೆಯನ್ನು ಪೂರ್ಣಗೊಳಿಸಲು ತೆಲಂಗಾಣದ ಖಮ್ಮಂ ಜಿಲ್ಲೆಯ 136 ಹಳ್ಳಿಗಳು, 211 ಸಣ್ಣ ಹಳ್ಳಿಗಳು ಹಾಗೂ 7 ಮಂಡಳಗಳನ್ನು ಆಂಧ್ರಪ್ರದೇಶಕ್ಕೆ ಸೇರಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಬಂದ್‌ಗೆ ಕರೆ ನೀಡಲಾಗಿದೆ.

ಇದೇ ವಿಷಯವಾಗಿ ಹಿಂದಿನ ಯುಪಿಎ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಮಾರ್ಚ್‌ನಲ್ಲಿ ಹಿಂತಿರುಗಿಸಿದ್ದರು.
ನರೇಂದ್ರ ಮೋದಿ ಅವರ ಸರ್ಕಾರವೂ ಇಂತಹ ಸುಗ್ರೀವಾಜ್ಞೆ ಹೊರಡಿಸಲಿರುವ ಸಾಧ್ಯತೆ ಕುರಿತು ನವದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ತೆಲಂಗಾಣದ ನಿಯೋಜಿತ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ (ಕೆಸಿಆರ್‌), ‘ಇಂತಹ ಯಾವುದೇ ನಿರ್ಧಾರವನ್ನು ನಮ್ಮ ಸರ್ಕಾರ ವಿರೋಧಿ­ಸುತ್ತದೆ.  ಲೋಕಸಭೆಯ ಮುಂಗಾರು  ಅಧಿವೇಶನ ಕೆಲವೇ ದಿನಗಳಲ್ಲಿ ಆರಂಭವಾಗುತ್ತಿರು­ವುದರಿಂದ,  ಈಗ ಸುಗ್ರೀವಾಜ್ಞೆ ಹೊರಡಿಸುವುದು  ಅಸಾಂವಿ­ಧಾನಿಕವಾಗುತ್ತದೆ.  ಪ್ರಧಾನಿ ನರೇಂದ್ರ ಮೋದಿ ಅವರು ಆತುರದಲ್ಲಿ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಬಾರದು’ ಎಂದು ಮನವಿ ಮಾಡಿದರು.

‘ಪೋಲಾವರಂ ಯೋಜನೆಗೆ  ನಮ್ಮ ವಿರೋಧವಿಲ್ಲ.  ಆಂಧ್ರಪ್ರದೇಶ ಪುನರ್‌ರಚನಾ ಕಾಯ್ದೆಯನ್ವಯ ಗುರುತಿಸಲಾದ ಗಡಿಯನ್ನು ಸುಗ್ರೀವಾಜ್ಞೆ ಮೂಲಕ ಬದಲಿಸಲು ಸಾಧ್ಯವಿಲ್ಲ. ಅಲ್ಲದೇ, ಈಗಿರುವ ಮಾದರಿಯಂತೆ ನೀರಾವರಿ ಯೋಜನೆಯನ್ನು ಜಾರಿಗೊಳಿಸಿದಲ್ಲಿ ನೂರಾರು ಅಪರೂಪದ ಬುಡಕಟ್ಟು ಹಳ್ಳಿಗಳು ಮತ್ತು ಅವರ ಅನನ್ಯ ಜೀವನ ವಿಧಾನ ನಾಶವಾಗಲಿದೆ’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ಹೈದರಾಬಾದ್‌ನಲ್ಲಿ ಈ ಕುರಿತು ಮಾತನಾಡಿದ  ಟಿಆರ್‌ಎಸ್‌ ಶಾಸಕ ಟಿ.ಹರೀಶ್‌ ರಾವ್‌, ‘ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಸಚಿವ  ಎಂ.ವೆಂಕಯ್ಯ ನಾಯ್ಡು ಅವರ ಒತ್ತಡಕ್ಕೆ ಮಣಿದು ಕೇಂದ್ರ ಸುಗ್ರೀವಾಜ್ಞೆ ಹೊರಡಿಸಲು ಚಿಂತಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ರಾಷ್ಟ್ರಪತಿ ಆಡಳಿತ ತೆರವು
ನವದೆಹಲಿ (ಪಿಟಿಐ):
ಜೂನ್‌ 2ರಂದು ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾಗಿ ಕೆ.ಚಂದ್ರ­ಶೇಖರ ರಾವ್‌ ಅವರು ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ರಾಷ್ಟ್ರಪತಿ ಆಡಳಿತ ತೆರವುಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಆದರೆ ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಅವರು ಒಂದು ವಾರ ಕಾಲ ತಡವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಕಾರಣ ಆಂಧ್ರಪ್ರದೇಶದಲ್ಲಿ ಜೂನ್‌ 8 ಅಥವಾ 9ರವರೆಗೆ ರಾಷ್ಟ್ರಪತಿ ಆಳ್ವಿಕೆ ಮುಂದುವರಿಯಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT