ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಬಿಕ್ಕಟ್ಟು ಅಂತ್ಯ ಸಾಧ್ಯತೆ

ಬಿಹಾರ: ಹೊಸ ನಾಯಕನ ಆಯ್ಕೆ ಒಲ್ಲದ ಶಾಸಕರು
Last Updated 18 ಮೇ 2014, 19:30 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ):  ಬಿಹಾರ ಮುಖ್ಯ­ಮಂತ್ರಿ ನಿತೀಶ್‌ ಕುಮಾರ್ ರಾಜೀ­ನಾಮೆ ಹಿನ್ನೆಲೆಯಲ್ಲಿ ಭಾನುವಾರ ನಡೆದ ಜೆಡಿಯು ಶಾಸಕಾಂಗ ಪಕ್ಷದ ತುರ್ತು ಸಭೆಯಲ್ಲಿ ನಿತೀಶ್‌ ಅವರ ನಾಯಕತ್ವದಲ್ಲೇ ಅಚಲ ವಿಶ್ವಾಸ ವ್ಯಕ್ತವಾಗಿ, ಪುನಃ ಅವರೇ ಮುಖ್ಯ­­­ಮಂತ್ರಿಯಾಗಿ ಮುಂದುವರಿ­ಯುವಂತೆ ಒತ್ತಾಯಿಸಲಾಯಿತು.

ಆದರೆ, ರಾಜೀನಾಮೆ ವಾಪಸ್‌ ಪಡೆಯಲು ಒಪ್ಪದ ನಿತೀಶ್‌, ಯಾವುದೇ ನಿರ್ಧಾರ ತೆಗೆದುಕೊಳ್ಳಲು ಕಾಲಾವ­ಕಾಶ ಕೇಳಿರು­ವುದರಿಂದ ರಾಜ­ಕೀಯ ಅನಿಶ್ಚಿತತೆ ಮುಂದು­ವರಿದಿದೆ.

ಹೀಗಾಗಿ, ಪುನಃ ಸೋಮವಾರ ಶಾಸ­ಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾ­ನಿ­ಸಲಾಗಿದೆ. ಆದರೆ ಸಭೆಯ ಸಮಯ­ವನ್ನು ಇನ್ನೂ ನಿಗದಿ ಮಾಡಿಲ್ಲ. ಶಾಸಕರೆಲ್ಲರಿಗೂ ನಗರದಲ್ಲೇ ಇರು­ವಂತೆ ಸೂಚಿಸಲಾಗಿದೆ. ಜೆಡಿಯು ರಾಜ್ಯದ 40 ಕ್ಷೇತ್ರಗಳ ಪೈಕಿ ಕೇವಲ ಎರಡು ಕ್ಷೇತ್ರಗಳಲ್ಲಿ ಗೆದ್ದು ಲೋಕಸಭಾ ಚುನಾವಣೆಯಲ್ಲಿ ದಯ­ನೀ­ಯ­ವಾಗಿ ಸೋಲುಕಂಡಿ­ದ್ದರಿಂದ ನಿತೀಶ್‌ ಅವರು ತಮ್ಮ ಹಾಗೂ ಸಂಪುಟ ಸಹೋದ್ಯೋಗಿಗಳ ರಾಜೀ­ನಾಮೆ ಸಲ್ಲಿ­ಸಿದ್ದರು.

ರಾಜ್ಯಪಾಲ ಡಿ.ವೈ.ಪಾಟೀಲ್‌ ಅವರು ರಾಜೀನಾಮೆ ಅಂಗೀಕರಿಸಿ, ಸದ್ಯಕ್ಕೆ ಉಸ್ತುವಾರಿ ಮುಖ್ಯ­ಮಂತ್ರಿ­ಯಾಗಿ ಮುಂದುವರಿಯಲು ಸೂಚಿ­ಸಿದ್ದರು. ಹೊಸ ನಾಯಕನನ್ನು ಆಯ್ಕೆ  ಮಾಡಲು ಬಯಸದ  ಶಾಸಕಾಂಗ ಪಕ್ಷದ ಸಭೆಯು, ನಿತೀಶ್‌ ನಾಯಕತ್ವ­ದಲ್ಲೇ ಅಚಲ ವಿಶ್ವಾಸ ವ್ಯಕ್ತಪಡಿಸಿ ನಿರ್ಣಯ ಅಂಗೀಕರಿಸಿತು.

‘ಇಡೀ ಬಿಹಾರದ ಹಿತಾಸಕ್ತಿಯನ್ನು ದೃಷ್ಟಿಯಲ್ಲಿರಿಸಿ­ಕೊಂಡು ನಿತೀಶ್‌ ಅವರೇ ಮುಖ್ಯಮಂತ್ರಿಯಾಗಿ ಮುಂದು­ವ­ರಿ­­ಯಬೇಕು’ ಎಂದು ಶಾಸಕರು ಆಗ್ರಹಿ­ಸಿದರು. 

ತದ್ವಿರುದ್ಧ ನಿಲುವು ತಳೆದ ನರೇಂದ್ರ ಸಿಂಗ್: ವಿಶೇಷವೆಂದರೆ, ಭಿನ್ನ ಶಾಸಕರ ಬಣದಲ್ಲಿ ಪ್ರಮುಖರಾಗಿ ಗುರುತಿಸಿ­ಕೊಂಡಿದ್ದ ಹಾಗೂ ಹೊಸ ನಾಯಕ­ನಾಗಿ ಆಯ್ಕೆಯಾಗಬ-­ಹುದೆಂದು ಊಹಿ­­ಸ­­ಲಾಗಿದ್ದ ಕೃಷಿ ಸಚಿವ ನರೇಂದ್ರ ಸಿಂಗ್‌ ಅವರೇ ನಿತೀಶ್‌ ಪರವಾಗಿ ನಿರ್ಣಯ  ಮಂಡಿಸಿದರು. ಶಾಸಕರ ಬೆಂಬಲ ನಿತೀಶ್‌ ಪರವಾಗಿ ಇರುವು­ದನ್ನು ಗಮನಿಸಿದ ನರೇಂದ್ರ ಅವರು, ತದ್ವಿರುದ್ಧ ನಿಲುವು ತಳೆದು ನಿತೀಶ್‌ ನಾಯಕತ್ವ­ದಲ್ಲಿ ಅಚಲ ವಿಶ್ವಾಸ ಪ್ರದರ್ಶಿಸಿದರು. ನಿತೀಶ್‌ ರಾಜೀನಾಮೆ ಹಿಂಪಡೆಯ­ದಿದ್ದರೆ ಧರಣಿ ಕೂರುವುದಾಗಿಯೂ ಹಲವು ಶಾಸಕರು ಬೆದರಿಕೆ ಹಾಕಿದರು.

ಶರದ್‌ ಯಾದವ್‌ ವಿರುದ್ಧ ಆಕ್ರೋಶ: ಭಾನುವಾರದ ಬಿರುಸಿನ ರಾಜಕೀಯ ಬೆಳವಣಿಗೆಗಳ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್‌ ಯಾದವ್‌ ಅವರು ಶಾಸಕರ ಮತ್ತು ಕಾರ್ಯಕರ್ತರ ತೀವ್ರ ಆಕ್ರೋಶವನ್ನು ಎದುರಿಸಬೇಕಾಯಿತು. ಶಾಸಕರು ಮತ್ತು ಕಾರ್ಯಕರ್ತರು ಶರದ್‌ ಯಾದವ್‌ ಅವರಿಗೆ ಘೇರಾವ್‌ ಹಾಕುವ ಜತೆಗೆ ರಾಜ್ಯದಿಂದ ಹೊರಹಾ­ಕುವ ಘೋಷಣೆಗಳನ್ನು ಹಾಕಿದರು.

‘ಶರದ್‌ ಹೊರಗಿನವರು. ಅವರನ್ನು ಮಧ್ಯಪ್ರದೇಶದ ಜಬಲ್‌ಪುರಕ್ಕೆ ಗಂಟು­ಮೂಟೆಯೊಂದಿಗೆ ವಾಪಸ್‌ ಕಳಿ­ಸೋಣ. ನಿತೀಶ್‌ ಸರ್ಕಾರವನ್ನು ಉರು­ಳಿಸುವ ಹುನ್ನಾರದಲ್ಲಿ ಮುಖ್ಯ ಪಾತ್ರ ವಹಿಸಿರುವುದು ಇವರೇ’ ಎಂದು ಘೋಷಣೆಗಳನ್ನು ಕೂಗಿದರು.
ನಿತೀಶ್‌ ಅವರ ಅಧಿಕೃತ ನಿವಾಸಕ್ಕೆ ತೆರಳುವ ಹಂತದಲ್ಲಿ ಪ್ರತಿಭಟನಾ­ಕಾರರು ಮುತ್ತಿಕೊಂಡು ಹೀಗೆ ಘೋಷಣೆ ಕೂಗಿದರು. ಆಗ ಅಲ್ಲಿದ್ದ ಪೊಲೀಸ್‌ ಸಿಬ್ಬಂದಿ ಶರದ್‌ ಯಾದವ್‌ ಅವರಿಗೆ ಬೆಂಗಾವಲು ಒದಗಿಸಿ, ಒಳಗೆ ಕರೆದುಕೊಂಡು ಹೋದರು. ಹೊರಗೆ ಕಾರ್ಯಕರ್ತರ ಘೋಷಣೆಗಳು ಮುಂದುವರಿದಿದ್ದವು.

ಮತ್ತೊಬ್ಬ ಬಂಡಾಯಗಾರ ಸಚಿವ ರಾಮೈ ರಾಮ್‌ ಅವರನ್ನು ಪಕ್ಷದ ಕಾರ್ಯಕರ್ತರು ಅಟ್ಟಿಸಿಕೊಂಡು ಹೋದರು.

ಬಿಜೆಪಿ ನಿಯೋಗ ಒತ್ತಾಯ
ಇತ್ತ ಜೆಡಿಯು ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿರುವಾಗಲೇ ಅತ್ತ ಬಿಜೆಪಿ ನಿಯೋಗ ರಾಜ್ಯಪಾಲ ಡಿ.ವೈ.ಪಾಟೀಲ್‌ ಅವರನ್ನು ಭೇಟಿ ಮಾಡಿತು. ನಿತೀಶ್‌ ಕುಮಾರ್‌ ಅವರು ಪುನಃ ಸರ್ಕಾರ ರಚಿಸುವ ಹಕ್ಕು ಮಂಡಿಸಿದರೆ, ಪ್ರತಿಯೊಬ್ಬ ಶಾಸಕರಿಗೂ ಪರೇಡ್‌ ನಡೆಸಲು ಸೂಚಿಸಬೇಕು. ನಿತೀಶ್‌ ಅವರಿಗೆ ಬೆಂಬಲ ಸೂಚಿಸುವ ಎಲ್ಲಾ ಪಕ್ಷಗಳಿಗೂ ಲಿಖಿತವಾಗಿ ತಮ್ಮ ನಿಲುವು ದಾಖಲಿಸಲು ನಿರ್ದೇಶಿಸಬೇಕು ಎಂದು ರಾಜ್ಯಪಾಲರನ್ನು ನಿಯೋಗ ಒತ್ತಾಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT