ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಯದುವೀರ–ತ್ರಿಷಿಕಾ ಮದುವೆ

ಅರಮನೆಯಲ್ಲಿ ಬೆಳಿಗ್ಗೆ ಮಾಂಗಲ್ಯಧಾರಣೆ, ಸಂಜೆ ಉಯ್ಯಾಲೆ ಉರುಟ
Last Updated 26 ಜೂನ್ 2016, 22:30 IST
ಅಕ್ಷರ ಗಾತ್ರ

ಮೈಸೂರು: ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ರಾಜಸ್ತಾನದ ಡುಂಗರಪುರದ ರಾಜಮನೆತನದ ತ್ರಿಷಿಕಾ ಕುಮಾರಿ ಮದುವೆ ಮುಹೂರ್ತಕ್ಕೆ ಕ್ಷಣಗಣನೆ ಶುರುವಾಗಿದೆ. ಸೋಮವಾರ ಬೆಳಿಗ್ಗೆ 9.05 ರಿಂದ 9.35ರೊಳಗೆ ಸಲ್ಲುವ ಕರ್ಕಾಟಕ ಲಗ್ನದ ಸಾವಿತ್ರ ಮುಹೂರ್ತದಲ್ಲಿ ಈ ಯುವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.

ಅರಮನೆಯ ಕಲ್ಯಾಣ ಮಂಟಪದಲ್ಲಿ ವಿಶೇಷವಾಗಿ ಸಿದ್ಧಪಡಿಸಿರುವ ವೇದಿಕೆಯಲ್ಲಿ ಮಾಂಗಲ್ಯ ಧಾರಣೆ ನಡೆಯಲಿದೆ. ಇಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಬಂಧುಗಳಿಗೆ, ಆಪ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಕೇವಲ 500 ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅರಮನೆ ಆವರಣದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಅತಿಥಿಗಳು ಹಾಗೂ ಗಣ್ಯರಿಗೆ ಈ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. 

ಯದುವೀರ ಅವರ ಸಾಕುತಾಯಿ ಪ್ರಮೋದಾದೇವಿ ಒಡೆಯರ್‌ ಮಾರ್ಗದರ್ಶನದಲ್ಲಿ, ರಾಜಪುರೋಹಿತರು ಹಾಗೂ ಕುಲಪುರೋಹಿತರು ಮುಹೂರ್ತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಯದುವೀರ ಅವರು ‘ಅಂಗರಕ’ ವಿನ್ಯಾಸದ ಪೋಷಾಕು ಧರಿಸಿ ಕಂಗೊಳಿಸಲಿದ್ದಾರೆ. ಬೆಳಿಗ್ಗೆ 6.30ಕ್ಕೆ ದಿಬ್ಬಣ ಹೊರಡುವುದು. ಯದುವೀರ 7 ಗಂಟೆಗೆ ಹಸೆಮಣೆಯಲ್ಲಿ ಆಸೀನರಾಗುವರು

ವಧು–ವರರನ್ನು ಎದುರುಬದುರು ನಿಲ್ಲಿಸಿ ‘ಕನ್ಯಾ ನಿರೀಕ್ಷಣೆ’ ಶಾಸ್ತ್ರ ನೆರವೇರಿಸಲಾಗುವುದು. ನಂತರ ಕನ್ಯಾದಾನ, ಕಂಕಣ ಧಾರಣೆ ಹಾಗೂ ಮಾಂಗಲ್ಯ ಧಾರಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಭೋಜನ ಶುರುವಾಗಲಿದೆ. ರಾತ್ರಿ 7.30ರಿಂದ 8.30ರ ವರೆಗೆ ದರ್ಬಾರ್‌ ಸಭಾಂಗಣದ ಸಜ್ಜೆಯಲ್ಲಿ ‘ಉಯ್ಯಾಲೆ ಮೇಲೆ ಉರುಟನೆ’ (ಉಯ್ಯಾಲೆಯಲ್ಲಿ ನವದಂಪತಿ ಕೂರಿಸಿ ತೂಗುವುದು) ಜರುಗಲಿದೆ. 

ಮುಂದುವರಿದ ಶಾಸ್ತ್ರಗಳು: ವಿವಾಹ ಮಹೋತ್ಸವದ ಮೂರನೇ ದಿನವಾದ ಭಾನುವಾರ ಕೂಡ ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು, ಧಾರ್ಮಿಕ ಚಟುವಟಿಕೆಗಳು ಸಾಂಗವಾಗಿ ನೆರವೇರಿದವು. ಬೆಳಿಗ್ಗೆ 10 ಗಂಟೆಗೆ ಕನ್ನಡಿ ತೊಟ್ಟಿಯಲ್ಲಿ ಗಣಪತಿ ಪೂಜೆ ನಡೆಯಿತು. ಬಳಿಕ ವ್ರತ ಸಮಾವರ್ತನೆ ಹೋಮ ನೆರವೇರಿತು.

ಇದಾದ ನಂತರ ವಧುವಿನ ಕುಟುಂಬದವರು ವರನಿಗೆ ಕಾಶಿಯಾತ್ರೆ ಪರಿಕರಗಳನ್ನು (ಕಾಶಿಯಾತ್ರೆ ಖಿಲ್ಲತ್‌) ಒಪ್ಪಿಸಿದರು. ಈ ಸಂದರ್ಭದಲ್ಲಿ ಫಲಪೂಜೆ ಮಾಡಿ ಆರತಿ ಬೆಳಗಿದರು. ಸಂಜೆ 6.15ಕ್ಕೆ ಮಂಗಳ ವಾದ್ಯಘೋಷ ಸಮೇತ ಮದನವಿಲಾಸ ಬಾಗಿಲ ಮಾರ್ಗದಿಂದ ಅರಮನೆಯ ಸುತ್ತ ಕಾಶಿಯಾತ್ರೆ ಮೆರವಣಿಗೆ ನಡೆಯಿತು.

ವರನ ಪಾದಪೂಜೆ: ಅರಮನೆಯ ಟ್ರೋಫಿ ಕೊಠಡಿಯಲ್ಲಿ ಸಂಜೆ, ತ್ರಿಷಿಕಾ ಪೋಷಕರಾದ ಹರ್ಷವರ್ಧನ್‌ ಸಿಂಗ್‌ ಮತ್ತು ಮಹೇಶ್ರೀಕುಮಾರಿ ಅವರು ಯದುವೀರ ಅವರ ಪಾದಪೂಜೆ ಮಾಡಿದರು. ಈಡು ಶಾಸ್ತ್ರದಂತೆ ತ್ರಿಷಿಕಾ ಅವರನ್ನು ಅರಮನೆಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ರಾಜವಂಶಸ್ಥರು ವಧುವಿಗೆ ಆಭರಣ, ಸೀರೆ ಹಾಗೂ ಬಳೆ ಒಪ್ಪಿಸಿದರು.

ಅರಮನೆ ಪ್ರವೇಶಿಸಿರುವ ತ್ರಿಷಿಕಾ ಹಾಗೂ ಅವರ ಕುಟುಂಬದವರು ವಿವಿಧ ಶಾಸ್ತ್ರಗಳಲ್ಲಿ ಪಾಲ್ಗೊಂಡರು. ಕುಟುಂಬದವರಿಗೆ ಅರಮನೆಯಲ್ಲೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗಿದೆ. ಜೂನ್‌ 28ರಂದು ರಾತ್ರಿ 7.30ರಿಂದ 8.30ರ ವರೆಗೆ ದರ್ಬಾರ್‌ ಸಭಾಂಗಣದಲ್ಲಿ ಆರತಕ್ಷತೆ, ಸಂಗೀತ ಕಾರ್ಯಕ್ರಮ ಹಾಗೂ 29ಕ್ಕೆ ನವದಂಪತಿ ಮೆರವಣಿಗೆ ನಡೆಯಲಿದೆ.

ಇಂದು ಉರುಟನೆ ಉಯ್ಯಾಲೆ: ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಯದುವೀರ ಹಾಗೂ ತ್ರಿಷಿಕಾ ಅವರು ದರ್ಬಾರ್‌ ಸಭಾಂಗಣದಲ್ಲಿ ವಿಶೇಷವಾಗಿ ಅಲಂಕರಿಸಿರುವ ಉಯ್ಯಾಲೆಯಲ್ಲಿ ಕುಳಿತು ಹೂವಿನ ಚೆಂಡಿನ ಆಟವಾಡಲಿದ್ದಾರೆ.

ಮಂಟಪ ಸಜ್ಜು
ಹಲವು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿರುವ ಅರಮನೆಯ ಕಲ್ಯಾಣ ಮಂಟಪದಲ್ಲಿಯೇ ಯದುವೀರ ಹಾಗೂ ತ್ರಿಷಿಕಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅದಕ್ಕಾಗಿ ಮಂಟಪವನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ.

ಯದುವಂಶಕ್ಕೆ ಯದುವೀರ್‌ ಅವರನ್ನು ದತ್ತು ಪಡೆದಿದ್ದು ಹಾಗೂ ಪಟ್ಟಾಭಿಷೇಕ ನಡೆದಿದ್ದು ಇಲ್ಲಿಯೇ. ಅಷ್ಟೇ ಅಲ್ಲ; ರಾಜವಂಶಸ್ಥರ 15ಕ್ಕೂ ಹೆಚ್ಚು ಮದುವೆಗಳು ಹಾಗೂ ಇನ್ನಿತರ ಕಾರ್ಯಕ್ರಮಗಳು ಇಲ್ಲಿ ನಡೆದಿವೆ.

1976ರಲ್ಲಿ ಶ್ರೀಕಂಠದತ್ತ ನರಸಿಹರಾಜ ಒಡೆಯರ್‌ ಹಾಗೂ ಪ್ರಮೋದಾದೇವಿ ಅವರ ವಿವಾಹ ಇಲ್ಲಿಯೇ ಜರುಗಿತ್ತು. ಯದುವೀರ ಅವರ ಮೂಲ ಪೋಷಕರಾದ ತ್ರಿಪುರಸುಂದರಿದೇವಿ ಹಾಗೂ ಸ್ವರೂಪ್ ಆನಂದ ಗೋಪಾಲರಾಜೇಅರಸ್ ವಿವಾಹವೂ 1992ರಲ್ಲಿ ಇದೇ ಕಲ್ಯಾಣ ಮಂಟಪದಲ್ಲಿ ನಡೆದಿತ್ತು.

ಯದುವೀರ, ತ್ರಿಷಿಕಾ ಪರಿಚಯ
ಯದುವೀರ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ಗಾಯತ್ರಿದೇವಿ ಮೊಮ್ಮಗ.  ತ್ರಿಪುರಸುಂದರಿದೇವಿ ಹಾಗೂ ಸ್ವರೂಪ್ ಆನಂದ ಗೋಪಾಲರಾಜೇಅರಸ್ ಅವರೇ ಯದುವೀರ ತಾಯಿ, ತಂದೆ. 24 ವರ್ಷ ವಯಸ್ಸಿನ ಅವರು ಬಾಲ್ಯದ ದಿನಗಳನ್ನು ಕಳೆದಿದ್ದು ಬೆಂಗಳೂರಿನಲ್ಲಿ.

ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ 10ನೇ ತರಗತಿವರೆಗೆ ಹಾಗೂ ಕೆನಡಿಯನ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ 12ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ. ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ಬಿ.ಎ ಪದವಿ ಪಡೆದಿದ್ದಾರೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದಿಂದ ಯದುವಂಶದ ಉತ್ತರಾಧಿಕಾರಿಯಾಗುವ ಅವಕಾಶ ಯದುವೀರ ಅವರಿಗೆ ಲಭಿಸಿತು. 2015ರ ಫೆಬ್ರುವರಿ 23ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಮೋದಾದೇವಿ ದತ್ತು ಸ್ವೀಕರಿಸಿದರು. ಅದೇ ವರ್ಷ ಮೇ 25ರಂದು ಯದುವಂಶದ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ನಡೆದಿತ್ತು.

ತ್ರಿಷಿಕಾ ಪರಿಚಯ: 22 ವರ್ಷ ವಯಸ್ಸಿನ ತ್ರಿಷಿಕಾ ರಾಜಸ್ತಾನದ ಡುಂಗರಪುರ ರಾಜಮನೆತನದವರು. ಹರ್ಷವರ್ಧನ್‌ ಸಿಂಗ್‌ ಮತ್ತು ಮಹೇಶ್ರೀ ಕುಮಾರಿ ಅವರ ದ್ವಿತೀಯ ಪುತ್ರಿ. ಬೆಂಗಳೂರಿನ ಬಾಲ್ಡ್‌ವಿನ್‌ ಪ್ರೌಢಶಾಲೆ ಹಾಗೂ ಜ್ಯೋತಿ ನಿವಾಸ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಅಮೆರಿಕದ ಬಾಸ್ಟನ್‌ ವಿ.ವಿ.ಯಲ್ಲಿ ಪದವಿ ಪೂರೈಸಿದ್ದಾರೆ.

‘ಕಾಲೇಜು ದಿನಗಳಲ್ಲಿ ಯದುವೀರ ಜೊತೆ ಪ್ರೀತಿಯ ಅಂಕುರವಾಗಿತ್ತು. ಯದುವಂಶದ ಉತ್ತರಾಧಿಕಾರಿ ಆಗುವ ಮುನ್ನವೇ ಯದುವೀರ ಮತ್ತು ತ್ರಿಷಿಕಾ ನಿಶ್ಚಿತಾರ್ಥ ಮುಗಿದಿತ್ತು’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅರಮನೆ ಭೇಟಿ ನೀಡಲಿರುವ ಮುಖ್ಯಮಂತ್ರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಅರಮನೆಗೆ ಭೇಟಿ ನೀಡಿ ನೂತನ ವಧುವರರನ್ನು ಆಶೀರ್ವದಿಸಲಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಕೂಡ ಆಗಮಿಸುವ ನಿರೀಕ್ಷೆ ಇದೆ.

ವಿವಾಹ ಸಮಾರಂಭಕ್ಕೆ ಮೇವಾಡ, ಜೈಪುರ, ಜೋಧಪುರ, ಉದಯಪುರ, ಕಿಷನ್‌ನಗರ, ಭರತ್‌ಪುರ, ಗ್ವಾಲಿಯರ್‌, ಭರತ್‌ ಪುರದ ರಾಜಮನೆತದವರು ಬಂದಿದ್ದಾರೆ. ವಿವಾಹ ಮಹೋತ್ಸವ ನಿಮಿತ್ತ ವಿಶ್ವವಿಖ್ಯಾತ ಅರಮನೆಯು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಶನಿವಾರ ಹಾಗೂ ಭಾನುವಾರು ರಾತ್ರಿ ಸುಮಾರು ಒಂದು ಗಂಟೆ ಬೆಳಗಿಸಲಾಯಿತು.

ಅರಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಮೂಲಗಳ ಪ್ರಕಾರ ಬೆಂಗಳೂರಿನಿಂದ ಸುಮಾರು 25 ಖಾಸಗಿ ಭದ್ರತಾ ಸಿಬ್ಬಂದಿಯನ್ನು ಕರೆಸಲಾಗಿದೆ. ಜೂನ್‌ 29ರ ವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧಿಸಲಾಗಿದೆ.

ಮಧ್ಯಾಹ್ನ 12.30ಕ್ಕೆ ಭೋಜನ
ಸೋಮವಾರ ಬೆಳಿಗ್ಗೆ 9.35ಕ್ಕೆ ಮುಹೂರ್ತ ಮುಗಿಯಲಿದ್ದು, ಮಧ್ಯಾಹ್ನ 12.30ರಿಂದ ಭೋಜನ ಶುರುವಾಗಲಿದೆ. ಭಕ್ಷ್ಯ ಪಟ್ಟಿಯಲ್ಲಿ ದಕ್ಷಿಣ ಭಾರತ ಶೈಲಿಯ ತಿನಿಸುಗಳಿಗೆ ಆದ್ಯತೆ ನೀಡಲಾಗಿದೆ.

ಸುಮಾರು 800 ಮಂದಿಗೆ ಭೋಜನ ಸಿದ್ಧಪಡಿಸಲಾಗುತ್ತಿದೆ. ಹೆಸರುಬೇಳೆ, ಕಡಲೆಬೇಳೆ ಕೋಸುಂಬರಿ, ಶಾವಿಗೆ, ಒಣ ಹಣ್ಣಿನ ಗೊಜ್ಜು, ಮಾವಿನಕಾಯಿ ಚಟ್ನಿ, ಆಲೂಗಡ್ಡೆ ಪಲ್ಯ, ಬೀನ್ಸ್ ಪಲ್ಯ, ಅಂಬೊಡೆ, ಬಾದಾಮಿ ಪಾಯಸ, ಬಿಸಿಬೇಳೆಬಾತ್‌, ಅಕ್ಕಿ ರೊಟ್ಟಿ, ಚನಾ ಮಸಾಲ, ಅನ್ನ, ಮಜ್ಜಿಗೆ ಬಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬೆಳಿಗ್ಗೆ ಸುಮಾರು 400 ಮಂದಿಗೆ ಉಪಾಹಾರ ಸಿದ್ಧಪಡಿಸಲಾಗುತ್ತಿದೆ. ಕಾಶಿ ಹಲ್ವಾ, ಉಪ್ಪಿಟ್ಟು, ಚಟ್ನಿ, ತಟ್ಲೆ ಇಡ್ಲಿ, ಈರುಳ್ಳಿ ದೋಸೆ ಬಡಿಸಲಾಗುತ್ತದೆ.

ಭಾನುವಾರ ನಡೆದ ಕಾರ್ಯಕ್ರಮ
ಬೆಳಿಗ್ಗೆ 10:
ಗಣಪತಿ ಪೂಜೆ, ವ್ರತ ಸಮಾವರ್ತನೆ ಹೋಮ, ಕಾಶಿಯಾತ್ರೆ ಖಿಲ್ಲತ್‌, ಫಲಪೂಜೆ, ಆರತಿ
ಸಂಜೆ 6.15: ಕಾಶಿಯಾತ್ರೆ ಮೆರವಣಿಗೆ, ವರನ ಪಾದಪೂಜೆ

ಸೋಮವಾರದ ವಿಶೇಷ
* ಬೆಳಿಗ್ಗೆ 9.05ರಿಂದ 9.35ರ ವರೆಗೆ ಮುಹೂರ್ತ
* ಸಂಜೆ 7.30ರಿಂದ ಉಯ್ಯಾಲೆಯಲ್ಲಿ ನವದಂಪತಿಯಿಂದ ಹೂವಿನಾಟ
* ಆರುಂಧತಿ ನಕ್ಷತ್ರ, ಧ್ರುವ ನಕ್ಷತ್ರ ದರ್ಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT